varthabharthi


ರಾಷ್ಟ್ರೀಯ

ಉನ್ನಾವೊ ಅತ್ಯಾಚಾರ ಪ್ರಕರಣ

ಸಂತ್ರಸ್ತೆಯ ಹೇಳಿಕೆ ದಾಖಲಿಸಿಸಲು ಏಮ್ಸ್‌ನಲ್ಲಿ ವಿಶೇಷ ನ್ಯಾಯಾಲಯದಿಂದ ಕಲಾಪ

ವಾರ್ತಾ ಭಾರತಿ : 11 Sep, 2019

ಹೊಸದಿಲ್ಲಿ,ಸೆ.11: ದಿಲ್ಲಿಯ ಏಮ್ಸ್‌ನಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯವು ಬುಧವಾರ ಉನ್ನಾವೊ ಅತ್ಯಾಚಾರ ಪ್ರಕರಣದಲ್ಲಿ ಸಾರ್ವಜನಿಕರು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶವಿಲ್ಲದ ಇನ್-ಕ್ಯಾಮೆರಾ ಕಲಾಪಗಳನ್ನು ನಡೆಸಿದ್ದು,ಜಿಲ್ಲಾ ನ್ಯಾಯಾಧೀಶ ಧರ್ಮೇಶ ಶರ್ಮಾ ಅವರು ಅತ್ಯಾಚಾರ ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಂಡರು.

 ಬಂಧನದಲ್ಲಿರುವ ಅತ್ಯಾಚಾರ ಆರೋಪಿಯಾಗಿರುವ ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ ಸಿಂಗ್ ಸೆಂಗಾರ್ ಮತ್ತು ಸಹ ಆರೋಪಿ ಶಶಿ ಸಿಂಗ್ ಅವರನ್ನೂ ತಾತ್ಕಾಲಿಕ ನ್ಯಾಯಾಲಯಕ್ಕೆ ಕರೆತರಲಾಗಿತ್ತು.

ಜುಲೈನಲ್ಲಿ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಸಂತ್ರಸ್ತೆಗೆ ಏಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲು ದಿಲ್ಲಿ ಉಚ್ಚ ನ್ಯಾಯಾಲಯವು ಸೆ.6ರಂದು ಒಪ್ಪಿಗೆ ನೀಡಿತ್ತು ಮತ್ತು ಅದೇ ದಿನ ಸರ್ವೋಚ್ಚ ನ್ಯಾಯಾಲಯವು ಕಾರು ಅಪಘಾತ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಲು ಸಿಬಿಐಗೆ ಎರಡು ವಾರಗಳ ಹೆಚ್ಚಿನ ಕಾಲಾವಕಾಶವನ್ನು ನೀಡಿತ್ತು.

ಜು.28ರಂದು ಉತ್ತರ ಪ್ರದೇಶದ ರಾಯಬರೇಲಿ ಜಿಲ್ಲೆಯಲ್ಲಿ ಸಂತ್ರಸ್ತೆ ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿಯೊಂದು ಢಿಕ್ಕಿ ಹೊಡೆದಿತ್ತು. ಸಂತ್ರಸ್ತೆಯ ಸಂಬಂಧಿಗಳಾದ ಇಬ್ಬರು ಮಹಿಳೆಯರು ಅಪಘಾತದಲ್ಲಿ ಮೃತಪಟ್ಟಿದ್ದು,ಈ ಪೈಕಿ ಓರ್ವ ಮಹಿಳೆ ಅತ್ಯಾಚಾರ ಪ್ರಕರಣದಲ್ಲಿ ಮುಖ್ಯ ಸಾಕ್ಷಿಯಾಗಿದ್ದರು. ಸಂತ್ರಸ್ತೆ ಮತ್ತು ಆಕೆಯ ವಕೀಲ ಗಂಭೀರವಾಗಿ  ಗಾಯಗೊಂಡಿದ್ದರು.

 ಆ.1ರಂದು ಸರ್ವೋಚ್ಚ ನ್ಯಾಯಾಲಯವು ಸಂತ್ರಸ್ತೆಯ ದೂರಿಗೆ ಸಂಬಂಧಿಸಿದ ಐದು ಪ್ರಕರಣಗಳ ವಿಚಾರಣೆಯನ್ನು ದಿಲ್ಲಿಗೆ ವರ್ಗಾಯಿಸಿತ್ತು ಮತ್ತು 45 ದಿನಗಳಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸುವಂತೆ ಆದೇಶಿಸಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)