varthabharthi

ಕರ್ನಾಟಕ

ಬೆಳಗಾವಿಯಲ್ಲಿ 570 ಕೋಟಿ ರೂ. ಹೂಡಿಕೆಗೆ ಉದ್ಯಮಿಗಳ ಆಸಕ್ತಿ: ಸಚಿವ ಜಗದೀಶ್ ಶೆಟ್ಟರ್

ವಾರ್ತಾ ಭಾರತಿ : 11 Sep, 2019

ಬೆಳಗಾವಿ, ಸೆ. 11: ಮಹಾರಾಷ್ಟ್ರದ ಕೊಲ್ಹಾಪುರ ಭಾಗದ ಕೈಗಾರಿಕೋದ್ಯಮಿಗಳು ಬೆಳಗಾವಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಮಾಡುವ ಸಂಬಂಧ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅಧ್ಯಕ್ಷತೆಯಲ್ಲಿ ನಗರದ ಖಾಸಗಿ ಹೊಟೇಲ್‌ನಲ್ಲಿ ಸಂವಾದ ನಡೆಸಿದರು.

ಬುಧವಾರ ಕೈಗಾರಿಕೋದ್ಯಮಿಗಳ ಜತೆಗಿನ ಸಂವಾದದಲ್ಲಿ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್, ಕರ್ನಾಟಕದ ಕೈಗಾರಿಕೋದ್ಯಮಕ್ಕೆ ಉತ್ತಮ ಸೌಕರ್ಯ, ಪ್ರೋತ್ಸಾಹದಾಯಕ ರಿಯಾಯಿತಿ ಇತರೆ ಸೌಲಭ್ಯಗಳನ್ನೊಳಗೊಂಡ ಹೊಸ ಕೈಗಾರಿಕಾ ನೀತಿಯನ್ನು ಜಾರಿಗೊಳಿಸಲಿದ್ದು, ಕರ್ನಾಟಕವನ್ನು ‘ಜಾಗತಿಕ ಉತ್ಪಾದನಾ ಕೇಂದ್ರ’ವನ್ನಾಗಿ ಪರಿವರ್ತಿಸುವ ಧ್ಯೇಯ ಹೊಂದಲಾಗಿದೆ ಎಂದರು.

ರಾಜ್ಯದ ನೂತನ ಕೈಗಾರಿಕಾ ನೀತಿಯನ್ನು ಶೀಘ್ರವೇ ಜಾರಿಗೆ ತರಲಾಗುತ್ತಿದೆ ಎಂದ ಅವರು, ಕೈಗಾರಿಕಾ ಸಂಸ್ಥೆಗಳಿಗೆ ಭೂಮಿ ದರ ನಿಗದಿ ಸಂಬಂಧ ನೂತನ ನೀತಿಯಲ್ಲಿ ಮಾನದಂಡವನ್ನು ಅಳವಡಿಸಲಾಗುತ್ತಿದೆ. ಕೈಗಾರಿಕೆ ಬೆಳವಣಿಗೆಯಲ್ಲಿ ಪರಿಣಾಮಕಾರಿಯಾದ ಏಕಗವಾಕ್ಷಿ ಪದ್ಧತಿ ತರುವತ್ತ ಪ್ರಾಮುಖ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ, ಇಂಡೊ ಕೌಂಟ್ ಇಂಡಸ್ಟ್ರೀಸ್ ಲಿ.ಮುಂಬೈ, ಗೋದಾವರಿ ಬಯೋರೀಫೈನರೀಸ್ ಲಿ.ಮುಂಬೈ, ಜೀನ ಸ್ಪೆಷಲ್ ಸ್ಟೀಲ್ ವರ್ಕ್ಸ್ ಪ್ರೈ.ಲಿ.ಬೆಳಗಾವಿ, ಕ್ವಾಲಿಟಿ ಅನಿಮಲ್ ಫೀಡ್ಸ್ ಪ್ರೈ.ಲಿ. ಬೆಳಗಾವಿ, ವಿಜಯ್ ಶಂತ್ರಿ ಅಗ್ರೋ ಟೆಕ್ ಎಕ್ಸ್‌ಪೋರ್ಟ್ಸ್ ಬೆಳಗಾವಿ, ಅಶೋಕ್ ಐರನ್ ವರ್ಕ್ಸ್ ಪ್ರೈ.ಲಿ.ಬೆಳಗಾವಿ, ಆನಂದ್ ಲೈಫ್ ಸೈನ್ಸಸ್ ಲಿ.ಬೆಳಗಾವಿ ಇವರುಗಳೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿ, 570 ಕೋಟಿ ರೂ.ಗಳ ಹೂಡಿಕೆಗೆ ಒಪ್ಪಂದ ಮಾಡಿಕೊಳ್ಳಲಾಯಿತು.

ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತ ಸಭೆಯಲ್ಲಿ ಉಪಸ್ಥಿತರಿದ್ದ ಕೈಗಾರಿಕೋದ್ಯಮಿ ಹಾಗೂ ಬಂಡವಾಳ ಹೂಡಿಕೆದಾರರನ್ನು ಸ್ವಾಗತಿಸಿ, ರಾಜ್ಯದಲ್ಲಿ ಕೈಗಾರಿಕೋದ್ಯಮಕ್ಕೆ ಇರುವ ವಿಫುಲ ಅವಕಾಶಗಳು ಹಾಗೂ ಹೂಡಿಕೆಗೆ ನೆಚ್ಚಿನ ತಾಣವಾಗಿದೆ ಎಂದು ವಿವರಿಸಿದರು.

ಆಟೋ ಕಾಂಪೋನೆಂಟ್ಸ್ ಹಾಗೂ ಎಲೆಕ್ಟ್ರಿಕ್ ವೆಹಿಕಲ್, ಪ್ರೆಸಿಷನ್ ಇಂಜಿನಿಯರಿಂಗ್, ಮಷೀನ್ ಟೂಲ್ಸ್, ಟೆಕ್ಸ್‌ಟೈಲ್ಸ್ ಇತರೆ ವಲಯಗಳಲ್ಲಿ ರಾಜ್ಯದ ಸಾಧನೆ ಹಾಗೂ ಸಾಮರ್ಥ್ಯವನ್ನು ವಿವರಿಸಿದರು. ಬೆಳಗಾವಿ ಜಿಲ್ಲೆ ಇತರೆ ವಲಯಗಳಲ್ಲಿ ಇರುವ ವಿಫುಲ ಅವಕಾಶಗಳನ್ನು ತಿಳಿಸಿದರು.

‘ಈಡಿ ಅಗತ್ಯ ದಾಖಲೆಗಳನ್ನು ಇಟ್ಟುಕೊಂಡು ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿದೆ. ಇದನ್ನು ವಿರೋಧಿಸಿ ಪ್ರತಿಭಟನೆ, ಪ್ರಕರಣ ರಾಜಕೀಕರಣಗೊಳಿಸುತ್ತಿರುವುದು ಸಲ್ಲ. ತಪ್ಪು ಮಾಡಿಲ್ಲ ಎಂದರೆ ಹೆದರುವ ಅಗತ್ಯವಿಲ್ಲ. ಕಾನೂನು ಹೋರಾಟ ನಡೆಸಲಿ’

-ಜಗದೀಶ್ ಶೆಟ್ಟರ್, ಬೃಹತ್ ಕೈಗಾರಿಕಾ ಸಚಿವ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)