varthabharthi


ಕರಾವಳಿ

‘ರಾಜಕೀಯ ಪಯಣದ ನೆನಪುಗಳು’ ಸಂವಾದ

ದೇಶದಲ್ಲಿ ರಾಜೀನಾಮೆ ಪರ್ವ: ಮಾರ್ಗರೆಟ್ ಆಳ್ವ

ವಾರ್ತಾ ಭಾರತಿ : 11 Sep, 2019

ಮಂಗಳೂರು, ಸೆ.11: ದೇಶದಲ್ಲಿ ಐಎಎಸ್ ಅಧಿಕಾರಿಗಳು, ನ್ಯಾಯಾಧೀಶರು ಸರಣಿಯಾಗಿ ರಾಜೀನಾಮೆ ಕೊಡುತ್ತಿರುವ ಆತಂಕಕಾರಿ ಘಟನೆಗಳು ಸಂಭವಿಸುತ್ತಿವೆ. ಕೇಂದ್ರ ಸರಕಾರ ಎಲ್ಲೆಡೆ ಅನಗತ್ಯ ಹಸ್ತಕ್ಷೇಪ ನಡೆಸುತ್ತಿದ್ದು, ದೇಶದಲ್ಲಿ ರಾಜೀನಾಮೆಗಳ ಪರ್ವ ಹೆಚ್ಚುತ್ತಲೇ ಸಾಗಿದೆ ಎಂದು ವಿಶ್ರಾಂತ ರಾಜ್ಯಪಾಲೆ ಮಾರ್ಗರೆಟ್ ಆಳ್ವ ಆತಂಕ ವ್ಯಕ್ತಪಡಿಸಿದ್ದಾರೆ.

ಮಂಗಳೂರು ನಗರದ ಸಂತ ಅಲೋಶಿಯಸ್ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ಬುಧವಾರ ನಡೆದ ‘ರಾಜಕೀಯ ಪಯಣದ ನೆನಪುಗಳು’ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ದೇಶದಲ್ಲಿ ಜಾರಿ ನಿರ್ದೇನಾಲಯ, ಆದಾಯ ತೆರಿಗೆ ಇಲಾಖೆ, ಸಿಬಿಐ ಸಂಸ್ಥೆಗಳ ಆಡಳಿತವಿದೆ. ಇದು ದೇಶದ ಸೋಲು. ಪ್ರಜೆಗಳ ಸೋಲು ಕೂಡ ಆಗಿದೆ ಎಂದು ಹೇಳಿದರು.

ಬಿಲ್ಕಿಸ್‌ಬಾನು ಪ್ರಕರಣದಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದ ಚೆನ್ನೈ ಮುಖ್ಯ ನ್ಯಾಯಮೂರ್ತಿ ರಾಜೀನಾಮೆ ನೀಡಿದ್ದಾರೆ. ಸತತ ನಾಲ್ಕನೇ ಐಎಎಸ್ ಅಧಿಕಾರಿ ರಾಜೀನಾಮೆ ಸಲ್ಲಿಸಿದ್ದಾರೆ. ಇಂತಹ ಗಂಭೀರ ಪ್ರಕರಣಗಳು ದೇಶದೆಲ್ಲೆಡೆ ನಡೆಯುತ್ತಿದ್ದರೂ ಯುವಜನಾಂಗ ಬಾಯಿ ಬಿಡುತ್ತಿಲ್ಲ. ನಾಗರಿಕ ಸಮಾಜದ ಮುಖಂಡರು, ನಾಯಕರು ಎನಿಸಿಕೊಂಡವರು ಎಲ್ಲಿ ಅಡಗಿ ಕುಳಿತಿದ್ದಾರೆ. ಎಲ್ಲರೂ ಮೌನ ವಹಿಸಿರುವುದು ಅಪಾಯದ ಸಂಕೇತ ಎಂದು ಅವರು ಎಚ್ಚರಿಸಿದರು.

ಕೇಂದ್ರ ಸರಕಾರವು ಕಾರ್ಯಾಂಗದಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಐಎಎಸ್, ಐಎಫ್‌ಎಸ್ ಅಧಿಕಾರಿಗಳು, ಸಿಬಿಐ, ಆರ್‌ಬಿಐಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ದೇಶದಲ್ಲಿ ಪ್ರಶ್ನಿಸುವ ಮನೋಭಾವನೆಯೇ ಸತ್ತು ಹೋಗಿದೆಯೊ ಅಥವಾ ಅದನ್ನು ಹತ್ತಿಕ್ಕಲಾಗುತ್ತಿದೆಯೋ ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದಲ್ಲಿ ಆಡಳಿತ ನಡೆಸುತ್ತಿರುವ ಕೇಂದ್ರ ಸರಕಾರದಲ್ಲಿ ವಿರೋಧ ಪಕ್ಷವೇ ಅಸ್ತಿತ್ವದಲ್ಲಿಲ್ಲ. ಸಂಸತ್‌ನಲ್ಲಿ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ. ಕೇಂದ್ರ ಸರಕಾರ ಎಲ್ಲೆಡೆಯೂ ಹಸ್ತಕ್ಷೇಪ ನಡೆಸುತ್ತಾ ಹಲವು ಪ್ರಮಾದಗಳನ್ನು ಎಸಗುತ್ತಿದೆ. ಇದನ್ನು ಪ್ರಶ್ನಿಸುವ ಕಿಂಚಿತ್ತು ಮನೋಭಾವವೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ವಿರೋಧಪಕ್ಷವಿಲ್ಲದೆ ಪ್ರಜಾಪ್ರಭುತ್ವಕ್ಕೆ ಖಂಡಿತ ಉಳಿವು ಅಸಾಧ್ಯ ಎಂದು ಅವರು ಹೇಳಿದರು.

ದೇಶದಲ್ಲಿ ಆರ್ಥಿಕ ಹಿಂಜರಿತವಾಗುತ್ತಿದೆ. ಇದರ ಕರಾಳ ಛಾಯೆ ದೇಶದ ಪ್ರಜೆಗಳ ಮೇಲೆ ಬೀಳಲಿದೆ. ಇಲೆಕ್ಟ್ರಾನಿಕ್ ಮಷಿನ್‌ಗಳು ಚುನಾವಣೆಗಳನ್ನು ನಿರ್ಧರಿಸುತ್ತಿವೆ. ಇದರ ಮೇಲೆ ನನಗೆ ನಂಬಿಕೆಯಿಲ್ಲ. ಮಿಲಿಯನ್ ಜನರಿಗೂ ಇದರ ಮೇಲೆ ನಂಬಿಕೆ ಇಲ್ಲ. ಬಿಜೆಪಿ ವಾಷಿಂಗ್ ಮಷಿನ್ ಇದ್ದಂತೆ. ಯಾವುದೇ ಗುರುತರ ಅಪರಾಧಗಳನ್ನು ಮಾಡಿದ್ದರೂ ಬಿಜೆಪಿಗೆ ಸೇರ್ಪಡೆಗೊಂಡ ನಂತರ ನೀವು ಕ್ಲೀನ್‌ಚಿಟ್ ಪಡೆಯಬಹುದು. ಎಲ್ಲ ಕೇಸುಗಳು ರದ್ದಾಗುತ್ತವೆ ಎಂದು ಹೇಳಿದರು.

ಪ್ರಜಾಪ್ರಭುತ್ವದ ಅಂಗಸಂಸ್ಥೆಯಾದ ಸುಪ್ರೀಂಕೋರ್ಟ್ ಕೈಕಟ್ಟಿ ಕುಳಿತಿದೆ. ನ್ಯಾಯಕ್ಕಾಗಿ ವಿಶ್ವವಿದ್ಯಾನಿಲಯದಲ್ಲಿ ಪ್ರತಿಭಟಿಸಿದ್ದ ಡಾ.ಕನ್ಹಯ್ಯ ಕುಮಾರ್ ಮೇಲೆ ಕೇಸುಗಳನ್ನು ಹಾಕಲಾಗಿದೆ. ಆತ ಚುನಾವಣೆಯಲ್ಲಿ ಗೆಲುವು ಸಾಧಿಸದಂತೆ ಮಸಲತ್ತು ಮಾಡಲಾಗಿತ್ತು. ಪ್ರಜಾಪ್ರಭುತ್ವದ ಮೇಲಿನ ಗದಾಪ್ರಹಾರದ ಬಗ್ಗೆ ಮಾತನಾಡಿದರೆ ‘ದೇಶದ್ರೋಹಿ’ ಬಿರುದು ಕೊಡಲಾಗುತ್ತಿದೆ ಎಂದು ಕೇಂದ್ರ ಸರಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದರು.

ಕಾರ್ಯಕ್ರಮದಲ್ಲಿ ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ರೆ.ಡಾ.ಪ್ರವೀಣ್ ಮಾರ್ಟಿಸ್ ಎಸ್.ಜೆ., ಸಂವಾದ ಸಂಚಾಲಕಿ ಡಾ.ರೋಸ್ ವೀರಾ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)