varthabharthi


ರಾಷ್ಟ್ರೀಯ

ಆರ್ಥಿಕ ತಜ್ಞರಿಂದ ತೀವ್ರ ಟೀಕೆ: ವಿದೇಶಿ ಸಾಲದ ಯೋಜನೆಯನ್ನು ತಡೆಹಿಡಿದ ಮೋದಿ ಸರಕಾರ

ವಾರ್ತಾ ಭಾರತಿ : 11 Sep, 2019
ರಮ್ಯಾ ನಾಯರ್, theprint.in

 ಹೊಸದಿಲ್ಲಿ,ಸೆ.11: ಎರಡು ತಿಂಗಳ ಕಾಲ ಆರ್ಥಿಕ ತಜ್ಞರಿಂದ ತೀವ್ರ ಟೀಕೆಗಳನ್ನು ಎದುರಿಸಿದ ಬಳಿಕ ನರೇಂದ್ರ ಮೋದಿ ಸರಕಾರವು ವಿದೇಶಗಳಿಂದ ಇತರ ಕರೆನ್ಸಿಗಳಲ್ಲಿ ಸವರಿನ್ ಅಥವಾ ಸಾರ್ವಭೌಮ ಸಾಲ ಪಡೆಯುವ ತನ್ನ ಯೋಜನೆಯನ್ನು ಸದ್ಯಕ್ಕೆ ತಡೆಹಿಡಿದಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸವರಿನ್ ಬಾಂಡ್‌ಗಳ ವಿತರಣೆಯ ಮೂಲಕ ಸಾಲವನ್ನೆತ್ತುವ ತನ್ನ ಉದ್ದೇಶವನ್ನು ಸರಕಾರವು ಜು.5ರಂದು ಮಂಡಿಸಿದ್ದ ಕೇಂದ್ರ ಮುಂಗಡಪತ್ರದಲ್ಲಿ ಪ್ರಕಟಿಸಿತ್ತು. ಬಾಂಡ್ ಗಳ ವಿತರಣೆಯ ಮೂಲಕ 10 ಶತಕೋಟಿ ಡಾ.ಸಾಲವನ್ನು ಪಡೆಯಲಾಗುವುದು ಎಂದು ಬಳಿಕ ಅದು ಹೇಳಿತ್ತು.

ಆದರೆ,ಆರ್‌ಬಿಐನ ಮಾಜಿ ಗವರ್ನರ್‌ಗಳು ಮತ್ತು ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ( ಪಿಎಂಇಎಸಿ)ಯ ಇಬ್ಬರು ಸದಸ್ಯರ ತೀವ್ರ ವಿರೋಧದ ಬಳಿಕ ಮೋದಿ ಸರಕಾರವು ವಿದೇಶಿ ಸಾಲದ ಪ್ರಸ್ತಾವವನ್ನು ಪುನರ್‌ ಪರಿಶೀಲಿಸುವ ಅನಿವಾರ್ಯಕ್ಕೆ ಸಿಲುಕಿತ್ತು.

ಪ್ರಸ್ತಾವಕ್ಕೆ ತೀವ್ರ ತಿರಸ್ಕಾರ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟದ ನೇಮಕಾತಿಗಳ ಸಮಿತಿಯು ಈ ಪ್ರಸ್ತಾವದ ಮುಂದಾಳತ್ವ ವಹಿಸಿದ್ದ ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್ಚಂದ್ರ ಗರ್ಗ್ ಅವರನ್ನು ವಿದ್ಯುತ್ ಸಚಿವಾಲಯಕ್ಕೆ ವರ್ಗಾವಣೆಗೊಳಿಸಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಅವರು ಸೇವೆಯಿಂದ ಸ್ವಯಂ ನಿವೃತ್ತಿಯನ್ನು ಆಯ್ದುಕೊಂಡಿದ್ದರು.

ವಿದೇಶಿ ಕರೆನ್ಸಿಗಳಲ್ಲಿ ಸವರಿನ್ ಬಾಂಡ್‌ಗಳ ವಿತರಣೆಯು ಅಂತರರಾಷ್ಟ್ರೀಯ ಹಣಕಾಸು ಮಾರುಕಟ್ಟೆಗಳ ಏರಿಳಿತಗಳು ಮತ್ತು ಅನಿಶ್ಚಿತತೆಗೆ ಭಾರತವು ಸುಲಭಭೇದ್ಯವಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಈ ಹಿಂದೆಯೂ ಭಾರತವು ಸವರಿನ್ ಬಾಂಡ್‌ಗಳನ್ನು ವಿತರಿಸುವ ಬಗ್ಗೆ ಮಾತುಗಳು ಕೇಳಿಬಂದಿದ್ದವಾದರೂ ಇಂತಹ ಪ್ರಸ್ತಾವಗಳನ್ನು ಆರ್‌ ಬಿಐ ಖಂಡತುಂಡವಾಗಿ ವಿರೋಧಿಸಿತ್ತು.

  ‘ ಸವರಿನ್ ಬಾಂಡ್‌ಗಳ ವಿತರಣೆಯ ಇಂತಹ ಪ್ರಸ್ತಾವವು,ಅದೂ ಯಾವುದೇ ಚರ್ಚೆಗಳಿಲ್ಲದೆ ಮುಂಗಡಪತ್ರ ದಾಖಲೆಗಳಲ್ಲಿ ಹೇಗೆ ಸೇರಿಕೊಂಡಿತ್ತು ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ಜಾಗತಿಕ ಏರಿಳಿತಗಳಿಗೆ ನಾವು ಪಕ್ಕಾಗದಂತಿರಲು ಕಳೆದ 20-25 ವರ್ಷಗಳಿಂದಲೂ ಇಂತಹ ಪ್ರಸ್ತಾವವನ್ನು ನಾವು ನಿವಾರಿಸುತ್ತಲೇ ಬಂದಿದ್ದೇವೆ ’ ಎಂದು ‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಆ್ಯಂಡ್ ಪಾಲಿಸಿ’ಯಲ್ಲಿ ಪ್ರೊಫೆಸರ್ ಆಗಿರುವ ಎನ್.ಆರ್.ಭಾನುಮೂರ್ತಿ ಅವರು ಹೇಳಿದರು.

ಸವರಿನ್ ಬಾಂಡ್ ವಿದೇಶಿ ಉಳಿತಾಯದಾರರನ್ನು ಉತ್ತೇಜಿಸುತ್ತದೆಯೇ ಹೊರತು ದೇಶಿಯ ಉಳಿತಾಯದಾರರನ್ನಲ್ಲ, ಹೀಗಾಗಿ ಅದು ಒಳ್ಳೆಯ ವಿಚಾರವಲ್ಲ ಎಂದ ಅವರು,ವಿತ್ತ ಸಚಿವಾಲಯದ ನಾಯಕತ್ವದಲ್ಲಿ ಬದಲಾವಣೆ ಮತ್ತು ಸಾವರಿನ್ ಬಾಂಡ್‌ಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಸ್ಪಷ್ಟತೆಯ ಕೊರತೆಯಿಂದಾಗಿ ಈ ಪ್ರಸ್ತಾವವು ಮುಂಗಡಪತ್ರ ಭಾಷಣದಲ್ಲಿ ಸೇರಿಕೊಂಡಿರುವ ಸಾಧ್ಯತೆಯಿದೆ ಎಂದರು.

ನೂತನ ವಿತ್ತಸಚಿವರಿಗೆ ಸರಕಾರ ರಚನೆ ಮತ್ತು ಮುಂಗಡಪತ್ರ ಮಂಡನೆಯ ನಡುವೆ ಹೆಚ್ಚಿನ ಸಮಯಾವಕಾಶ ಸಿಕ್ಕಿರಲಿಲ್ಲ ಎಂದ ಭಾನುಮೂರ್ತಿ,ಬಿಮಲ್ ಜಲಾನ್ ಅವರನ್ನು ಹೊರತು ಪಡಿಸಿ ಆರ್‌ ಬಿಐನ ಹಲವಾರು ಮಾಜಿ ಗವರ್ನರ್‌ಗಳು ಈ ಕ್ರಮವನ್ನು ವಿರೋಧಿಸಿದ್ದರು ಎಂದು ಬೆಟ್ಟು ಮಾಡಿದರು.

ಸವರಿನ್ ಬಾಂಡ್‌ ಗಳ ವಿತರಣೆ ಕುರಿತು ಮುಂಗಡಪತ್ರದಲ್ಲಿಯ ಏಕಪಕ್ಷೀಯ ಪ್ರಕಟಣೆಯು ಹಲವರನ್ನು ಅಚ್ಚರಿಯಲ್ಲಿ ಕೆಡವಿತ್ತು ಮತ್ತು ಎಲ್ಲ ಮೂಲೆಗಳಿಂದ ವಿರೋಧಗಳು ವ್ಯಕ್ತವಾಗಿದ್ದವು.

ಸವರಿನ್ ಬಾಂಡ್‌ ಗಳ ಮೂಲಕ ವಿದೇಶಿ ಸಾಲ ಎತ್ತುವಳಿಯು ಶಾಶ್ವತ ಬಾಧ್ಯತೆಯಾಗುತ್ತದೆ ಮತ್ತು ದೇಶವೊಂದು ಇಂತಹ ಕ್ರಮಕ್ಕೆ ಮುಂದಾದಾಗ ಅದು ತನ್ನ ನ್ಯಾಯಿಕ ಸಾರ್ವಭೌಮತೆಯನ್ನು ಕಳೆದುಕೊಳ್ಳುತ್ತದೆ ಮತ್ತು ಪ್ರತಿಕೂಲ ಸಾಲಗಾರ-ಕಾನೂನು ಕ್ರಮಗಳಿಗೆ ಗುರಿಯಾಗಬಹುದು ಎಂದು ಮಾಜಿ ಆರ್‌ ಬಿಐ ಗವರ್ನರ್ ವೈ.ವಿ.ರೆಡ್ಡಿ ಅವರು ಬೆಟ್ಟು ಮಾಡಿದರು.

ಹೆಚ್ಚಿನ ದೇಶಗಳು ತಮ್ಮ ಕರೆನ್ಸಿಗಳಲ್ಲಿ ಬಾಂಡ್ ವಿತರಿಸಲು ಸಾಧ್ಯವಾಗದಿದ್ದಾಗ ವಿದೇಶಿ ಕರೆನ್ಸಿಗಳಲ್ಲಿ ಅದನ್ನು ವಿತರಿಸುತ್ತವೆ. ಆದರೆ ಭಾರತದ ಮಟ್ಟಿಗೆ ಇಂತಹ ಸ್ಥಿತಿಯಿಲ್ಲ ಎಂದು ಹೇಳಿದ ಮಾಜಿ ಆರ್‌ ಬಿಐ ಗವರ್ನರ್ ರಘುರಾಮ ರಾಜನ್ ಅವರು,ಸವರಿನ್ ಬಾಂಡ್ ‌ಗಳ ವಿತರಣೆಯ ಬದಲು ಸರಕಾರಿ ಬಾಂಡ್ ‌ಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರು ಮಾಡುವ ಹೂಡಿಕೆಗಳ ಮೇಲಿನ ನಿರ್ಬಂಧಗಳನ್ನು ಸಡಿಲಿಸುವುದನ್ನು ಸರಕಾರವು ಪರಿಶೀಲಿಸಬೇಕು ಎಂದು ಪ್ರತಿಪಾದಿಸಿದರು.

ಸವರಿನ್ ಬಾಂಡ್ ಗಳನ್ನು ‘ವಿನಾಶಕಾರಿ ಚಟ ’ಎಂದು ಬಣ್ಣಿಸಿದ ಪಿಎಂಇಎಸಿ ಸದಸ್ಯ ರಥಿನ್ ರಾಯ್ ಅವರು,ಲ್ಯಾಟಿನ್ ಅಮೆರಿಕನ್ ದೇಶಗಳು ಇಂತಹ ಸಾಲ ಎತ್ತುವಳಿಯ ಬಳಿಕ ಅನುಭವಿಸಿದ್ದ ವಿಪತ್ಕಾರಕ ಪರಿಣಾಮಗಳನ್ನು ಪಟ್ಟಿ ಮಾಡಿದರು. ರಾಯ್ ಅವರ ಮಾತಿಗೆ ಧ್ವನಿಗೂಡಿಸಿದ ಇನ್ನೋರ್ವ ಸದಸ್ಯೆ ಶಮಿಕಾ ರವಿ ಅವರು,ಇಂತಹ ವಿತರಣೆಗಳ ಮೂಲಕ ಸರಕಾರವೇಕೆ ವಿನಿಮಯ ದರ ಅಪಾಯಗಳನ್ನು ಮೈಮೇಲೆಳೆದುಕೊಳ್ಳಬೇಕು ಎಂದು ಪ್ರಶ್ನಿಸಿದರು.

ಇಂಡಿಯಾ ರೇಟಿಂಗ್ಸ್ ಕೂಡ ಕಳೆದ ತಿಂಗಳು ವಿದೇಶಿ ಸಾಲಗಳಿಗಾಗಿ ಸವರಿನ್ ಬಾಂಡ್‌ ಗಳ ವಿತರಣೆಯಲ್ಲಿಯ ಅಪಾಯಗಳನ್ನು ಬೆಟ್ಟುಮಾಡಿತ್ತು. ಅಂದ ಹಾಗೆ ತನ್ನ ಮೀಸಲು ನಿಧಿಯ ಪೈಕಿ 1.76 ಲ.ಕೋ.ರೂ.ಗಳನ್ನು ಆರ್‌ ಬಿಐ ಸರಕಾರಕ್ಕೆ ವರ್ಗಾಯಿಸುತ್ತಿರುವುದರಿಂದ ಮೋದಿ ಸರಕಾರದ ಮೇಲಿನ ಹಣಕಾಸು ಒತ್ತಡಗಳು ತಗ್ಗುವ ನಿರೀಕ್ಷೆಯಿದೆ ಮತ್ತು ಇದು ಮಾರುಕಟ್ಟೆಗಳಿಂದ ಇನ್ನಷ್ಟ್ಟು ಸಾಲವನ್ನು ಪಡೆಯುವ ಅಗತ್ಯವನ್ನು ಕಡಿಮೆ ಮಾಡಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)