varthabharthi

ಕರ್ನಾಟಕ

"ಜನರ ದಿಕ್ಕುತಪ್ಪಿಸುವ ಹೇಳಿಕೆ ನೀಡುವುದನ್ನು ಕೈ ಬಿಡಲಿ"

ಕಸ್ತೂರಿ ರಂಗನ್ ವರದಿ ಜಾರಿಗೆ ಸಂಸದೆ ಶೋಭಾ ಕಾರಣ: ಕೌಳಿ ರಾಮು ಆರೋಪ

ವಾರ್ತಾ ಭಾರತಿ : 11 Sep, 2019

ಸಂಸದೆ ಶೋಭಾ

ಚಿಕ್ಕಮಗಳೂರು, ಸೆ.11: ಕಸ್ತೂರಿ ರಂಗನ್ ವರದಿ, ಡೀಮ್ಡ್ ಫಾರೆಸ್ಟ್, 4(1) ಅರಣ್ಯ ಕಾಯ್ದೆ ಸೇರಿದಂತೆ ಮತ್ತಿತರ ಅರಣ್ಯ ಯೋಜನೆಗಳಿಂದಾಗಿ ಮಲೆನಾಡಿನ ಜನರು ಒಕ್ಕಲೇಳುವ ಭೀತಿಯಿಂದ ಅತಂತ್ರದಲ್ಲಿ ಬದುಕುವಂತಾಗಿದೆ. ನಾಗರಿಕರು, ಸಂಘ ಸಂಸ್ಥೆಗಳ ತೀವ್ರ ಹೋರಾಟ ಕೇಳಿ ಬಂದ ಹಿನ್ನೆಲೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರು, ಈ ಯೋಜನೆಗಳ ಬಗ್ಗೆ ಮಲೆನಾಡಿನ ಜನತೆ ಆತಂಕ ಪಡುವ ಅಗತ್ಯವಿಲ್ಲ. ಜನರು ನೆಮ್ಮದಿಯಾಗಿರಿ, ಎಲ್ಲ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಇತ್ತೀಚೆಗೆ ಕೊಪ್ಪ ತಾಲೂಕಿನಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿ ಸಮೀಕ್ಷೆ ಸಂದರ್ಭದಲ್ಲಿ ಹೇಳಿಕೆ ನೀಡಿರುವುದು ಜನರನ್ನು ದಿಕ್ಕು ತಪ್ಪಿಸುವ ಹೇಳಿಕೆಯಾಗಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ಸಮಿತಿ ಹಾಗೂ ಮಲೆನಾಡು ಉಳಿಸಿ ಹೋರಾಟ ವೇದಿಕೆ ಮುಖಂಡ ಕೌಳಿ ರಾಮು ಆರೋಪಿಸಿದ್ದಾರೆ. 

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂಸದೆ ಮಲೆನಾಡಿನಲ್ಲಿ ಕಸ್ತೂರಿರಂಗನ್ ವರದಿಯಂತಹ ಯೋಜನೆಗಳು ಜಾರಿಯಾಗಲು ಜಿಲ್ಲೆಯ ಸಂಸದರೂ ಸೇರಿದಂತೆ ಜನಪ್ರತಿನಿಧಿಗಳು ಕಾರಣಕರ್ತರಾಗಿದ್ದು, ಮಲೆನಾಡಿನಲ್ಲಿ ಕಸ್ತೂರಿರಂಗನ್ ವರದಿ ಯೋಜನೆ ಜಾರಿಯಾಗುವ ಸಂದರ್ಭ ಸಂಸತ್‍ನಲ್ಲಿ ಈ ಸಂಬಂಧ ನಡೆದ ಚರ್ಚೆ ನಡೆದಿದೆ. ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಈ ಸಭೆಗೆ ಅಭಿಪ್ರಾಯ ತಿಳಿಸಲು ಆಹ್ವಾನಿಸಲಾಗಿತ್ತು. ಸಂಸದೆ ಶೋಭಾ ಕರಂದ್ಲಾಜೆ ಅವರು ಈ ಸಭೆಯಲ್ಲಿ ಭಾಗವಹಿಸಿ ಯೋಜನೆ ಜಾರಿಗೆ ವಿರೋಧ ವ್ಯಕ್ತಪಡಿಸಬೇಕಿತ್ತು. ಆದರೆ ಅವರು ಸಭೆಯಲ್ಲಿ ಭಾಗವಹಿಸದೇ ಯೋಜನೆ ಜಾರಿಗೆ ಪರೋಕ್ಷ ಬೆಂಬಲ ವ್ಯಕ್ತಪಡಿಸಿದ್ದು, ಈಗ ಯೋಜನೆ ಜಾರಿಯಾಗುವುದನ್ನು ತಡೆಯುತ್ತೇವೆ ಎಂದು ಸುಳ್ಳು ಹೇಳಿಕೆ ನೋಡುತ್ತಾ ಜನರ ಪ್ರತಿರೋಧದಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ದಿಕ್ಕುತಪ್ಪಿಸುತ್ತಿದ್ದಾರೆಂದು ಅವರು ಕಿಡಿಕಾರಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಸುಳ್ಳು ಭರವಸೆಗಳನ್ನು ನೀಡುವ ಬೊಗಳೆ ರಾಜಕಾರಣಿಗಳಾಗಿದಾರೆಂದು ಟೀಕಿಸಿರುವ ಅವರು, ಜಿಲ್ಲೆಯ ಎಲ್ಲ ತಾಲೂಕುಗಳ ವ್ಯಾಪ್ತಿ ಪ್ರತೀ ಗ್ರಾಮ ಪಂಚಾಯತ್‍ಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ನಿವೇಶನ ರಹಿತರು ಬಾಡಿಗೆ ಮನೆಗಳಲ್ಲಿ, ತೋಟಗಳ ಲೈನ್‍ಗಳಲ್ಲಿ ವಾಸಿಸುತ್ತಿದ್ದು, ಇಂತವರಿಗೆ ನಿವೇಶನಗಳನ್ನು ನೀಡಲು ಈ ರಾಜಕಾರಣಿಗಳಲ್ಲಿ ಇದುವರೆಗೂ ಸಾಧ್ಯವಾಗಿಲ್ಲ. ನಿವೇಶನ ನೀಡುತ್ತೇವೆ ಎಂದು ಹೇಳಿಕೆ ನೀಡುವ ಈ ರಾಜಕಾರಣಿಗಳ ಮಾತು ನಂಬಿಕೊಂಡು ಪ್ರತೀ ಗ್ರಾಪಂಗಳಿಗೆ ಸಾವಿರಾರು ಮಂದಿ ನಿವೇಶನ ರಹಿತರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕುಗಳ ಗ್ರಾಮ ಪಂಚಾಯತ್‍ಗಳಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈ ಅರ್ಜಿಗಳು ಕಸದಬುಟ್ಟಿ ಸೇರುತ್ತಿವೆಯೇ ಹೊರತು ಇದುವರೆಗೂ ನಿವೇಶನ ರಹಿತರಿಗೆ ತಲೆಯ ಮೇಲೊಂದು ಸೂರು ನಿರ್ಮಿಸಿಕೊಳ್ಳಲು ತುಂಡು ಭೂಮಿಯನ್ನೂ ನೀಡಲು ಸಾಧ್ಯವಾಗಿಲ್ಲ ಎಂದು ಕೌಳಿ ರಾಮು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಲೆನಾಡಿನಲ್ಲಿರುವ ಸರಕಾರಿ ಜಾಗವನ್ನು ಡೀಮ್ಡ್ ಫಾರೆಸ್ಟ್ ಎಂದು ಡಿನೋಟಿಪಿಕೇಶನ್ ಮಾಡಲಾಗಿದ್ದು, ಈ ಸಮಸ್ಯೆಯಿಂದಾಗಿ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಭೂಮಿ ಸಿಗದಂತಾಗಿದೆ. ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಬಗೆಹರಿಸುವುದಾಗಿ ಸಂಸದರೂ ಸೇರಿದಂತೆ ಎಲ್ಲ ರಾಜಕಾರಣಿಗಳು ಕಳೆದ 15 ವರ್ಷಗಳಿಂದ ಹೇಳಿಕೆ ನೀಡುತ್ತಿದ್ದಾರೆಯೇ ಹೊರತು ಇದುವರೆಗೂ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ ಒಂದೇ ಒಂದು ಉದಾಹರಣೆ ಇಲ್ಲ. ಸಂಸದೆ ಶೋಭಾ ಕರಂದ್ಲಾಜೆಗೆ ನಿಜವಾಗಿಯೂ ಮಲೆನಾಡಿನ ಜನರ ಬಗ್ಗೆ ಕಿಂಚಿತ್ ಕಾಳಜಿ ಇರುವುದು ನಿಜವಾಗಿದ್ದಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಅವರದೇ ಸರಕಾರ ಇರುವುದರಿಂದ ಈ ಕೂಡಲೇ ನಿವೇಶನ ರಹಿತರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳ ಪ್ರತೀ ಗ್ರಾಪಂಗಳಿಗೆ ತಲಾ 10 ಎಕರೆ ಭೂಮಿಯನ್ನು ಮಂಜೂರು ಮಾಡಿಸುವ ಬದ್ಧತೆಯನ್ನು ಪ್ರದರ್ಶಿಸಬೇಕು. ಇಲ್ಲದಿದ್ದಲ್ಲಿ ಸಂಸದರು ಇಂತಹ ಹೇಳಿಕೆ ನೀಡುವ ನಾಟಕ ಆಡುವುದನ್ನು ಕೈಬಿಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಕಳೆದ 10-20 ವರ್ಷಗಳಿಂದ ಜಿಲ್ಲಾದ್ಯಂತ ಕೃಷಿಕರು ಸಾಗುವಳಿ ಮಾಡಿದ ಜಮೀನುಗಳಿಗೆ ಹಕ್ಕುಪತ್ರ ಪಡೆಯಲು ಸಲುವಾಗಿ ಫಾರಂ ನಂ.50, 53, 57 ನಮೂನೆಗಳಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ದಲಿತರ ಅರ್ಜಿಗಳು ಬಹಪಾಲಿವೆ. ಆದರೆ ಇದುವರೆಗೂ ಈ ಅರ್ಜಿಗಳ ವಿಲೇವಾರಿಯಾಗಿಲ್ಲ. ಅಕ್ರಮ ಸಕ್ರಮ ಸಮಿತಿಗಳನ್ನೂ ರಚಿಸದೇ ನಿರ್ಲಕ್ಷ್ಯ ವಹಿಸಲಾಗಿದೆ. ರೈತರು ಕೃಷಿ ಮಾಡಿದ ಜಮೀನುಗಳ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯವರು ಟ್ರೆಂಚ್ ನಿರ್ಮಿಸಿ ಜಾಗವನ್ನು ಅರಣ್ಯಕ್ಕೆ ಸೇರಿಸುವ ಹುನ್ನಾರ ನಡೆಸಿದ್ದರೂ ಸಂಸದರು ಕ್ಯಾರೆ ಎನ್ನುತ್ತಿಲ್ಲ ಎಂದು ಆರೋಪಿಸಿದ ಅವರು, ಸಂಸದರಿಗೆ ನಿಜವಾಗಿಯೂ ಜಿಲ್ಲೆಯ ಬಡಜನರ ಮೇಲೆ ಕಾಳಜಿ ಇದ್ದಲ್ಲಿ ಹಾಗೂ ತಮ್ಮನ್ನು ಸತತವಾಗಿ ಸಂಸದೆಯನ್ನಾಗಿ ಆಯ್ಕೆ ಮಾಡುತ್ತಿರುವ ಮತದಾರರ ಋಣ ತೀರುಸುವ ನಿಟ್ಟಿನಿಂದಾದರೂ ಈ ಅರ್ಜಿಗಳ ವಿಲೇವಾರಿಗೆ ಕೂಡಲೇ ಕ್ರಮಕೈಗೊಂಡು, ಅರಣ್ಯ ಇಲಾಖೆಯವರ ಕಿರುಕುಳದ ವಿರುದ್ಧ ಕಾನೂನುಕ ಕ್ರಮಕೈಗೊಳ್ಳಲಿ ಎಂದು ಕೌಳಿ ರಾಮು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)