varthabharthi


ರಾಷ್ಟ್ರೀಯ

‘ಹಸು’ ಎಂಬ ಪದ ಕೇಳಿದಾಗ ಕೆಲವರಿಗೆ ಕಿರಿಕಿರಿ ಆಗುತ್ತದೆ: ಪ್ರಧಾನಿ ಮೋದಿ

ವಾರ್ತಾ ಭಾರತಿ : 11 Sep, 2019

ಲಕ್ನೊ, ಸೆ.11: ಕೆಲವು ಜನರಿಗೆ ‘ಹಸು’ ಎಂಬ ಪದ ಕೇಳಿದೊಡನೆ ಕಿರಿಕಿರಿಯಾಗುತ್ತದೆ. ಇನ್ನು ಕೆಲವರಿಗೆ ‘ಓಂ’ ಎಂಬ ಪದ ಕೇಳಿದೊಡನೆ ಕಿರಿಕಿರಿಯಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಂತಹ ಜನರು ತಾವಿನ್ನೂ 16ನೇ ಶತಮಾನದಲ್ಲೇ ಇದ್ದೇವೆ ಎಂದುಕೊಂಡಿದ್ದಾರೆ. ಜಾನುವಾರು ಸಾಕಣೆ ಎಂದರೇನು, ಇದರಿಂದ ರೈತರಿಗೆ ಮತ್ತು ದೇಶದ ಆರ್ಥಿಕತೆಗೆ ಯಾವ ರೀತಿಯ ನೆರವಾಗುತ್ತದೆ ಎಂಬುದು ಇವರಿಗೆ ತಿಳಿದಿಲ್ಲ ಎಂದು ಮೋದಿ ಹೇಳಿದರು. ಜಾನುವಾರುಗಳ ಕಾಲು ಬಾಯಿ ರೋಗ ನಿವಾರಣೆಯ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ರಾಷ್ಟ್ರೀಯ ಪಶುರೋಗ ನಿಯಂತ್ರಣ ಕಾರ್ಯಕ್ರಮಕ್ಕೆ ಉತ್ತರಪ್ರದೇಶದ ಮಥುರಾದಲ್ಲಿ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಉತ್ತರಪ್ರದೇಶದಲ್ಲಿ 2017ರಲ್ಲಿ ಮೆದುಳಿನ ಉರಿಯೂತದಿಂದ 70ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟ ಪ್ರಕರಣವನ್ನು ಪ್ರಸ್ತಾವಿಸಿದ ಮೋದಿ, ಈ ಪ್ರಕರಣವನ್ನು ಮುಖ್ಯಮಂತ್ರಿ ಆದಿತ್ಯನಾಥ್ ಶ್ಲಾಘನೀಯವಾಗಿ ನಿರ್ವಹಿಸಿದ್ದರೂ ಹಲವು ಸ್ಥಾಪಿತ ಹಿತಾಸಕ್ತಿಗಳು ಸರಕಾರವನ್ನು ದೂಷಿಸಿದ್ದಾರೆ. ಆದರೆ ಇದಕ್ಕೆಲ್ಲಾ ಎದೆಗುಂದದೆ ಅವರು ಕಾರ್ಯ ಮುಂದುವರಿಸಿದ್ದಾರೆ ಎಂದರು.

ಇದೇ ಸಂದರ್ಭ ಅವರು ಸ್ವಚ್ಛತೆಯೇ ಸೇವೆ ಹಾಗೂ ಜಾನುವಾರುಗಳಿಗೆ ರಾಷ್ಟೀಯ ಕೃತಕ ಗರ್ಭಧಾರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಾನುವಾರು, ಪ್ರವಾಸೋದ್ಯಮ ಮತ್ತು ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ 16 ಯೋಜನೆಗಳಿಗೂ ಪ್ರಧಾನಿ ಮೋದಿ ಚಾಲನೆ ನೀಡಿದರು. ಬಳಿಕ ಮಥುರಾದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸುವವರು, ರೈತರು ಮತ್ತು ಹೈನುಗಾರರನ್ನು ಭೇಟಿಯಾಗಿ ಅವರೊಂದಿಗೆ ಸಂವಾದ ನಡೆಸಿದರು. ನಗರದಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕವನ್ನು ವೀಕ್ಷಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)