varthabharthi

ಕ್ರೀಡೆ

ಶ್ರೀಲಂಕಾ

ಆಟಗಾರರ ಪಾಕ್ ಪ್ರವಾಸ ಬಹಿಷ್ಕಾರದ ಹಿಂದೆ ಭಾರತದ ಕೈವಾಡವಿಲ್ಲ

ವಾರ್ತಾ ಭಾರತಿ : 11 Sep, 2019

ಹೊಸದಿಲ್ಲಿ, ಸೆ.11: ಮುಂಬರುವ ಪಾಕ್ ವಿರುದ್ಧ ಸರಣಿಯನ್ನು ಬಹಿಷ್ಕರಿಸುವಂತೆ ಶ್ರೀಲಂಕಾ ಆಟಗಾರರಿಗೆ ಭಾರತ ಬಲವಂತಪಡಿಸಿದೆ ಎಂಬ ಪಾಕ್ ಸಚಿವ ಫವಾದ್ ಹುಸೇನ್ ಚೌಧರಿ ಆರೋಪವನ್ನು ಶ್ರೀಲಂಕಾದ ಕ್ರೀಡಾ ಸಚಿವ ಹಾರಿನ್ ಫೆರ್ನಾಂಡೊ ತಿರಸ್ಕರಿಸಿದ್ದಾರೆ. ‘‘2009ರ ಅಹಿತಕರ ಘಟನೆಯನ್ನು ಆಧರಿಸಿ 10 ಆಟಗಾರರು ಪಾಕ್ ಕ್ರಿಕೆಟ್ ಪ್ರವಾಸವನ್ನು ಬಹಿಷ್ಕರಿಸಿದ್ದಾರೆ. ಪಾಕಿಸ್ತಾನದಲ್ಲಿ ಲಂಕಾ ಆಟಗಾರರು ಆಡದೇ ಇರುವ ನಿರ್ಧಾರದ ಹಿಂದೆ ಭಾರತ ಪ್ರಭಾವ ಬೀರಿದೆ ಎಂಬ ವರದಿಯಲ್ಲಿ ಸತ್ಯಾಂಶವಿಲ್ಲ. ಪಾಕ್‌ಗೆ ತೆರಳಲು ಹಿಂದೇಟು ಹಾಕಿರುವ ಆಟಗಾರರ ನಿರ್ಧಾರವನ್ನು ಗೌರವಿಸಿ, ಪಾಕ್‌ಗೆ ತೆರಳುವ ಆಟಗಾರರನ್ನು ಆಯ್ಕೆ ಮಾಡಿದ್ದೇವೆ. ನಮ್ಮದು ಸಂಪೂರ್ಣ ಶಕ್ತಿಶಾಲಿ ತಂಡ. ಪಾಕಿಸ್ತಾನದಲ್ಲಿ ಪಾಕ್‌ನ್ನು ಮಣಿಸುವ ವಿಶ್ವಾಸ ನಮಗಿದೆ’’ ಎಂದು ಫೆರ್ನಾಂಡೊ ಹೇಳಿದ್ದಾರೆ.

 2009ರಲ್ಲಿ ಶ್ರೀಲಂಕಾ ತಂಡದ ಆಟಗಾರರು ತಂಡ ತಂಗಿದ್ದ ಹೊಟೇಲ್‌ನಿಂದ ಸ್ಟೇಡಿಯಂನತ್ತ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ಬಸ್ ಮೇಲೆ ದಾಳಿ ನಡೆಸಿದ್ದ ಉಗ್ರರು 8 ಜನರನ್ನು ಬಲಿ ಪಡೆದಿದ್ದರು. ಹಲವು ಮಂದಿ ಗಾಯಗೊಂಡಿದ್ದರು. ಘಟನೆಯಲ್ಲಿ ಲಂಕಾ ಆಟಗಾರರು ಸಣ್ಣಪುಟ್ಟ ಗಾಯದಿಂದ ಅಪಾಯದಿಂದ ಪಾರಾಗಿದ್ದರು.

ಉಗ್ರರ ದಾಳಿಯ ಬಳಿಕ ಶ್ರೀಲಂಕಾ ಆಟಗಾರರು ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿಲ್ಲ. ಇದೀಗ 10 ವರ್ಷಗಳ ಬಳಿಕ ಮೊದಲ ಬಾರಿ ಲಂಕಾ-ಪಾಕ್ ಮಧ್ಯೆ ಸರಣಿ ಆಯೋಜಿಸಲಾಗಿದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿ ಬಳಿ ಪಾಕ್‌ನಲ್ಲಿ ಭದ್ರತೆಯ ಆತಂಕವನ್ನು ವ್ಯಕ್ತಪಡಿಸಿ ಸೆ.27 ರಂದು ಪಾಕಿಸ್ತಾನದಲ್ಲಿ ಆರಂಭವಾಗಲಿರುವ ಸೀಮಿತ ಓವರ್ ಕ್ರಿಕೆಟ್ ಸರಣಿಯಿಂದ ಹೊರಗುಳಿಯಲು ಶ್ರೀಲಂಕಾದ ಪ್ರಮುಖ ಆಟಗಾರರಾದ ಲಸಿತ್ ಮಾಲಿಂಗ, ಆ್ಯಂಜೆಲೊ ಮ್ಯಾಥ್ಯೂಸ್, ದಿನೇಶ್ ಚಾಂಡಿಮಾಲ್, ಸುರಂಗ ಲಕ್ಮಲ್, ಡಿಮುತ್ ಕರುಣರತ್ನೆ, ತಿಸರ ಪೆರೇರ, ಅಕಿಲ ಧನಂಜಯ, ಧನಂಜಯ ಡಿಸಿಲ್ವಾ, ಕುಸಾಲ್ ಪೆರೇರ ಹಾಗೂ ನಿರೊಶನ್ ಡಿಕ್ವೆಲ್ಲಾ ನಿರ್ಧರಿಸಿದ್ದರು.

ಶ್ರೀಲಂಕಾ ತಂಡ ಪಾಕ್ ಪ್ರವಾಸದ ವೇಳೆ ಸೆ.27, 29 ಹಾಗೂ ಅಕ್ಟೋಬರ್ 3 ರಂದು ಕರಾಚಿಯಲ್ಲಿ 3 ಪಂದ್ಯಗಳ ಏಕದಿನ ಸರಣಿ ಆಡಲಿದೆ. ಅ.5, 7 ಹಾಗೂ 9ರಂದು ಲಾಹೋರ್‌ನಲ್ಲಿ 3 ಪಂದ್ಯಗಳ ಟಿ-20 ಸರಣಿಯನ್ನು ಆಡಲಿದೆ. ಡಿಸೆಂಬರ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿರುವ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲು ಪಾಕ್‌ಗೆ ಮತ್ತೊಮ್ಮೆ ಪ್ರವಾಸ ಕೈಗೊಳ್ಳಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)