varthabharthi

ನಿಮ್ಮ ಅಂಕಣ

ಸಂಪ್ರದಾಯವಾದದ ಸಮಯದಲ್ಲಿ ‘ರ‍್ಯಾಡಿಕಲ್’ ರಾಜಕೀಯ

ವಾರ್ತಾ ಭಾರತಿ : 11 Sep, 2019
ಗೋಪಾಲ್ ಗುರು

ಭಾರತದ ಸಮಕಾಲೀನ ರಾಜಕೀಯ ಸಂದರ್ಭದಲ್ಲಿ ರ‍್ಯಾಡಿಕಲ್ ಶಕ್ತಿಗಳ ರಾಜಕೀಯವು ತನ್ನ ಸಮರ್ಥನೆಯನ್ನು ತನ್ನೊಳಗಿನ ಪರಿವರ್ತನಾವಾದಿ ಸತ್ವಕ್ಕಿಂತ ಹೆಚ್ಚು ಮತಶಕ್ತಿಯನ್ನು ನೈತಿಕ ಶಕ್ತಿಯ ಜೊತೆಗೆ ಬೆಸೆಯಲಾಗದ ಜನರ ವೈಫಲ್ಯದಲ್ಲಿ ಕಂಡುಕೊಳ್ಳುತ್ತಿದೆ. ಉದಾಹರಣೆಗೆ ಹಿಂಸಾಚಾರಗಳು ನಿರ್ದಿಷ್ಟವಾಗಿ ಕಾನೂನು ಪಾಲನೆಗೆ ಮುಜುಗರವನ್ನು ಹಾಗೂ ಸಾರ್ವತ್ರಿಕವಾಗಿ ಮಾನವ ಕುಲಕ್ಕೆ ಅಪಮಾನವನ್ನು ಮಾಡುತ್ತದಾದ್ದರಿಂದ ಎಲ್ಲಾ ಬಗೆಯ ಹಿಂಸೆಯನ್ನು ನಿರಾಕರಿಸುವುದರಲ್ಲಿ ಮತದಾರರ ನೈತಿಕ ಶಕ್ತಿ ಅಡಗಿದೆ. ಈ ರೀತಿ ಹಿಂಸೆಯನ್ನು ನಿರಾಕರಿಸುವ ಮೂಲಕವೇ ನೈತಿಕ ಶಕ್ತಿಯ ಜೊತೆ ಬೆಸೆದುಕೊಂಡಿರುವ ‘ಸರಿತನ’ವು ಸಾಬೀತುಗೊಳ್ಳಲು ಸಾಧ್ಯ. ಗುಂಪುದಾಳಿಗಳು (ಲಿಂಚಿಂಗ್) ಅಂತಹ ಎರಡೂ ವರ್ಗೀಕರಣದ ಅರ್ಹತೆಯನ್ನು ಪಡೆದುಕೊಳ್ಳುತ್ತದೆಂದು ಹೇಳಬಹುದು.

ಯಾವುದೋ ಒಂದು ರಾಜ್ಯದ, ಒಂದು ಪ್ರದೇಶದಲ್ಲಿ ಒಬ್ಬ ವ್ಯಕ್ತಿ ಅಥವಾ ಸಂಘಸಂಸ್ಥೆಯು ಮಾಡುವ ಹಿಂಸೆಯು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೇರೆಬೇರೆ ರಾಜ್ಯದ ಜನರನ್ನು ಪ್ರಭಾವಿಸುತ್ತದೆ. ಒಂದು ಸಂದರ್ಭದಲ್ಲಿ ನಡೆಯುವ ಹಿಂಸೆ ಅಥವಾ ಅಭಿವ್ಯಕ್ತಿಯ ದಮನಗಳು ಮತ್ತೊಂದು ಪ್ರದೇಶದ ಜನರಲ್ಲೂ ನೈತಿಕ ಆತಂಕವನ್ನು ಹುಟ್ಟಿಸುವ ಮೂಲಕ ಇತರ ಪ್ರದೇಶಗಳ ಜನರನ್ನೂ ಪ್ರಭಾವಿಸುತ್ತದೆ. ಇದು ಬೇರೆ ಪ್ರದೇಶಗಳ ಜನರಲ್ಲಿ ಹುಟ್ಟುವ ಆತಂಕ ಮತ್ತು ಅನುಮಾನಗಳಲ್ಲಿ ಸ್ಪಷ್ಟವಾಗಿ ಅಭಿವ್ಯಕ್ತಗೊಳ್ಳುತ್ತದೆ. ಇದರಿಂದಾಗಿ ಹಾಲಿ ಸರಕಾರ ಮತ್ತು ಸಂಪ್ರದಾಯಶೀಲ ಶಕ್ತಿಗಳು ಸ್ವಾತಂತ್ರ್ಯದ ಸಾಮಾಜಿಕ ಅವಕಾಶಗಳನ್ನು ಕಿರಿದುಗೊಳಿಸಲು ಇನ್ನೂ ಏನೇನು ಕ್ರಮಗಳನ್ನು ತೆಗೆದುಕೊಳ್ಳುತ್ತಾರೋ ಎಂದು ಜನರು ಆತಂಕ ಹಾಗೂ ಅನುಮಾನಗಳಿಂದ ನರಳುತ್ತಾರೆ.

ಇಂತಹ ನೈತಿಕ ಆತಂಕಗಳ ಪರಿಸ್ಥಿತಿಯನ್ನು ಹೋಗಲಾಡಿಸಲು ಸರಕಾರಿ ಸಂಸ್ಥೆಗಳು ವಿಫಲವಾಗುತ್ತಿರುವುದು ಮತದಾನಕ್ಕಿರುವ ಸೀಮಿತ ಶಕ್ತಿಯನ್ನು ಬಯಲು ಮಾಡುತ್ತದೆ. ಮತಶಕ್ತಿಯು ತನ್ನಂತೆ ತಾನೇ ಆ ಶಕ್ತಿಯ ಸರಿತನವನ್ನೇನೂ ಸಾಬೀತುಮಾಡುವುದಿಲ್ಲ. ಮತಶಕ್ತಿಯು ಸಾಲುವುದಿಲ್ಲ: ಒಮ್ಮಿಮ್ಮೆ ಮತಶಕ್ತಿಯು ಸಾಂಪ್ರದಾಯಿಕ ಶಕ್ತಿಗಳ ಬೆಂಬಲಕ್ಕೆ ಪೂರಕವಾಗಿಬಿಡಬಹುದು. ಗಣರಾಜ್ಯ ವ್ಯವಸ್ಥೆಯ ಮಾದರಿಗಳಲ್ಲಿ ಜನಶಕ್ತಿಯನ್ನು ನೈತಿಕ ಅಧಿಕಾರದ ಶಕ್ತಿಗಳು ನಿಯಂತ್ರಿಸುತ್ತವೆ ಅಥವಾ ಸೀಮಿತಗೊಳಿಸುತ್ತವೆ. ಹೀಗಾಗಿ ಹಿಂಸೆಯನ್ನು ನಿರಾಕರಿಸುವ ಸಾಮರ್ಥ್ಯವನ್ನು ಬೆಳೆಸುವಷ್ಟು ಮಟ್ಟಿಗೆ ಮತದಾರರ ನೈತಿಕ ಶಕ್ತಿಯು ಬೆಳೆಯುವುದು ಅಗತ್ಯ. ನೈತಿಕ ಅಧಿಕಾರವೇ ಸರಿತನದ ಚೌಕಟ್ಟಿಗೆ ಮತದಾನದ ಅಧಿಕಾರವನ್ನು ಒಳಪಡಿಸುತ್ತದೆ. ಮೂಲಭೂತ ಸ್ವಾತಂತ್ರ್ಯ ಮತ್ತು ಅಹಿಂಸೆಗಳು ಈ ಚೌಕಟ್ಟಿನ ಪ್ರಧಾನ ಮಾನದಂಡಗಳು.

ಕೇಳಬೇಕಿರುವ ಪ್ರಶ್ನೆಯೇನೆಂದರೆ: ಜನರ ಮತನಿರ್ಣಯಗಳ ಮೇಲೆ ಈ ನೈತಿಕ ಶಕ್ತಿಯು ಎಷ್ಟರಮಟ್ಟಿಗಿನ ನಿರ್ಣಾಯಕ ಪ್ರಭಾವವನ್ನು ಹೊಂದಿದೆ? ದುರದೃಷ್ಟವಶಾತ್ ಜನರ ಮುಂದೆ ನಡೆಯುವ ಹಿಂಸೆಗಳು ಮತ್ತು ಅದನ್ನು ಮೂಕಪ್ರೇಕ್ಷಕರಾಗಿ ನೋಡುವಂತೆ ಅವರ ಮೆದುಳಿನ ಮೇಲೆ ಆಗಿರುವ ಪ್ರಭಾವಗಳನ್ನು ನೋಡಿದರೆ ಈ ಪ್ರಶ್ನೆಗೆ ಸಕಾರಾತ್ಮಕ ಉತ್ತರವೇನೂ ಸಿಗುವುದಿಲ್ಲ. ಜನರು ತಮ್ಮ ನೈತಿಕ ಅಧಿಕಾರವನ್ನು ಚಲಾಯಿಸಲು ವಿಫಲರಾಗಿರುವ ಸನ್ನಿವೇಶದಲ್ಲಿ, ಸಮಾಜದ ಯಾವುದಾದರೂ ಜನವರ್ಗ ಅಥವಾ ಪ್ರಭುತ್ವ ತಮ್ಮ ನೈತಿಕ ಹಾಗೂ ಸಾಂವಿಧಾನಿಕ ಮಿತಿಯನ್ನು ದಾಟಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಹಿಂಸೆಯಲ್ಲಿ ತೊಡಗಿಕೊಂಡಾಗ ಅದನ್ನು ತಡೆಗಟ್ಟಲು ಮಧ್ಯಪ್ರವೇಶ ಮಾಡುವ ಅಧಿಕಾರವನ್ನು ಯಾರಾದರೊಬ್ಬರಿಗೆ ನೀಡಲೇ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸತ್ಯಾಂಶವನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ರ‍್ಯಾಡಿಕಲ್ ಶಕ್ತಿಗಳು ತೊಡಗಿಕೊಳ್ಳುವ ಸತ್ಯಶೋಧನಾ ಕಾರ್ಯಚಟುವಟಿಕೆಗಳು ಅರ್ಥವಾಗುವಂತಹದ್ದೇ ಆಗಿದೆ.

ಕುತೂಹಲದಾಯಕ ವಿಚಾರವೆಂದರೆ ರ‍್ಯಾಡಿಕಲ್ ಶಕ್ತಿಗಳು ಇಂತಹ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಿದರೂ ಜನರನ್ನು ತಲುಪುವುದಕ್ಕಿಂತ ಜಾಸ್ತಿ ಪ್ರಭುತ್ವದೊಡನೆ ಕದನಕ್ಕಿಳಿಯುತ್ತಾರೆ. ಅವರಲ್ಲಿ ಕೆಲವರು ಜನರ ಜೊತೆಗೂ ಸಂವಾದ ನಡೆಸುತ್ತಾರೆ. ಆದರೆ ಹಿಂಸೆಯನ್ನು ನಿರಾಕರಿಸಲು ಸಮಾಜದ ಕೆಲಶಕ್ತಿಗಳು ತಮ್ಮ ನೈತಿಕ ಶಕ್ತಿಯನ್ನು ಬಳಸಲು ವಿಫಲರಾಗುತ್ತಾರಾದ್ದರಿಂದ ಈ ರ‍್ಯಾಡಿಕಲ್ ಶಕ್ತಿಗಳು ನಿರಂತರವಾಗಿ ಮಧ್ಯಪ್ರವೇಶ ಮಾಡುತ್ತಲೇ ಇರಬೇಕಾಗುತ್ತದೆ. ಅವರು ಈ ವಿಷಯಗಳನ್ನು ಸತತವಾಗಿ ಪ್ರಭುತ್ವದ ಗಮನಕ್ಕೆ ತರುತ್ತಲೇ ಇರುತ್ತಾರೆ ಮತ್ತು ಪ್ರಭುತ್ವವು ಮಾತ್ರ ನಿರಂತರವಾಗಿ ಅವರನ್ನು ನಿರ್ಲಕ್ಷಿಸುತ್ತಲೇ ಹೋಗುತ್ತದೆ. ಹೀಗಾಗಿ ಒಟ್ಟು ವಿದ್ಯಮಾನವೇ ತೀವ್ರಗಾಮಿಗಳು ಮತ್ತು ಸಂಪ್ರದಾಯಶಕ್ತಿಗಳ ನಡುವೆ ನಡೆಯುವ ‘ಏರಿಳಿ’ ಆಟದಂತೆ ಭಾಸವಾಗಲು ಶುರುವಾಗುತ್ತದೆ ಹಾಗೂ ಸದಾ ಪ್ರತಿಕ್ರಿಯಾತ್ಮಕವಾಗಿರುವ ರ‍್ಯಾಡಿಕಲ್ ಚಟುವಟಿಕೆಗಳ ಮಾದರಿಗಳಿಂದಾಗಿ ಅವರು ಸಂಪ್ರದಾಯವಾದಿಗಳೇ ರಚಿಸಿರುವ ಹುನ್ನಾರದಲ್ಲಿ ಸಿಲುಕಿಕೊಳ್ಳುತ್ತಾರೆ. ಆಗ ಸಂಪ್ರದಾಯವಾದಿಗಳು ಬಹಳ ಬೇಗ ಅವರನ್ನು ಅದರ ವಿರೋಧಿ, ಇದರ ವಿರೋಧಿ ಎಂದು ಪಟ್ಟ ಕಟ್ಟತೊಡಗುತ್ತಾರೆ.

 ಈಗ ಮುಖ್ಯವಾಗಿರುವುದು ಸಮೂಹ ಹಿಂಸಾಚಾರವನ್ನು ಪ್ರಜ್ಞಾಪೂರ್ವಕವಾಗಿ ನಿರಾಕರಿಸುವ ನೈತಿಕ ಶಕ್ತಿಯ ಸರಿತನದ ಪ್ರಾಮುಖ್ಯತೆಯನ್ನು ಗುರುತಿಸುವ ಒಪ್ಪಂದ. ಆದರೆ ರ‍್ಯಾಡಿಕಲ್‌ಗಳು ಮತ್ತು ವಿವಿಧ ರೀತಿಯ ಸಂಪ್ರದಾಯವಾದಿಗಳು ಪರಸ್ಪರ ಮುಖವನ್ನು ನೋಡಲಾಗದಷ್ಟು ದೂರವಾಗಿದ್ದಾರೆ. ಸಮಾಜದ ದುರ್ಬಲ ವರ್ಗಗಳ ಮೇಲೆ ಹಿಂಸಾಚಾರ ನಡೆಸಬಾರದೆಂಬ ಅಥವಾ ಗುಂಪುದಾಳಿಗಳ ಬಗ್ಗೆ ಸಾರ್ವತ್ರಿಕ ನಿರಾಕರಣೆಯನ್ನು ಹುಟ್ಟುಹಾಕಬೇಕೆಂಬ ಗುರಿಗಳ ಬದಲಿಗೆ ಪರಸ್ಪರರ ದೂರೀಕರಣಗಳು ವ್ಯವಸ್ಥಿತವಾಗಿ ನಡೆಯುತ್ತಲಿವೆ ಎಂಬುದಂತೂ ಸ್ಪಷ್ಟ. ಹಿಂಸೆಯ ನಿರಾಕರಣೆಯೆಂಬುದು ತುರ್ತಾಗಿ ಮತ್ತು ದಿನನಿತ್ಯ ನಡೆಯಬೇಕಿರುವ ಸಂಗತಿಯಾಗಿದ್ದು ಮತದಾನದ ತನಕ ಮುಂದಕ್ಕೆ ಹಾಕಲಾಗುವುದಿಲ್ಲ. ಅದನ್ನು ತುಂಬಾ ಮುಂದೂಡಿದರೆ ಆ ಜಾಗವನ್ನು ಸಂಪ್ರದಾಯವಾದಿಗಳು ಭರ್ತಿ ಮಾಡಲು ಸಾಕಷ್ಟು ಅವಕಾಶವನ್ನು ಕಲ್ಪಿಸಿಕೊಟ್ಟಂತಾಗುತ್ತದೆ.

ಹೀಗೆ ಅನುಮಾನ ಮತ್ತು ಅನಿಶ್ಚಿತತೆಗಳಿಗೆ ಸಾಕಷ್ಟು ಅವಕಾಶವಿರುವ ಈ ಸಂದರ್ಭದಲ್ಲಿ ಸತ್ಯವನ್ನು ಮುಚ್ಚಿ ಹಾಕುವ ಸಲುವಾಗಿ ತೀವ್ರವಾದ ಟ್ರೋಲಿಂಗ್ ಮಾಡುವ ಮೂಲಕ ‘‘ಚಿಂತನೆಯನ್ನು ಹತ್ತಿಕ್ಕುವ ಪೊಲೀಸರು’’ ಸತ್ಯದ ಕಥನವನ್ನು ದಮನ ಮಾಡುತ್ತಾರೆ. ಹೀಗಾಗಿ ಬಹುಪಕ್ಷೀಯ ಒಪ್ಪಂದವೊಂದಕ್ಕೆ ಬರಬೇಕೆಂದರೆ ನೈಜತೆಯ ಸಹಜಸದೃಶ ವಿವರಣೆಯನ್ನು ನೀಡಬೇಕಾಗುತ್ತದೆ. ಅಂತಹ ಒಂದು ಕಥನವನ್ನು ಒಂದು ನಿರ್ದಿಷ್ಟ ಹಿಂಸಾತ್ಮಕ ಪ್ರಕರಣದ ಪರಿಣಾಮವಾಗಿ ಹೇಗೆ ಅಹಿಂಸೆಯೆಂಬ ಒಂದು ಸಾರ್ವತ್ರಿಕ ಒಳಿತಿಗಾಗಿನ ಚಟುವಟಿಕೆಗಳನ್ನು ಹುಟ್ಟುಹಾಕುತ್ತದೆಂಬ ವಿವರಣೆಯಿಂದ ಪ್ರಾರಂಭಿಸಬಹುದು. ನಿರಂತರ ಹಿಂಸೆಯಿಂದಲೇ ಆಡಳಿತವನ್ನು ನಡೆಸಬೇಕೆಂದು ಬಯಸುವ ರಾಜಕೀಯ ಶಕ್ತಿಗಳಿಂದ ಜಗತ್ತಿನ ಯಾವ ಸಮಾಜವು ಸಾಮಾಜಿಕ ಪ್ರಗತಿಯನ್ನು ಕಾಣಲು ಸಾಧ್ಯವಾಗಿಲ್ಲ.

ಕೃಪೆ: Economic and Political Weekly

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)