varthabharthiಸಂಪಾದಕೀಯ

ಸಂವಿಧಾನವೇ ದೇಶಕ್ಕೆ ಮಾರ್ಗದರ್ಶಕ

ವಾರ್ತಾ ಭಾರತಿ : 11 Sep, 2019

‘‘ಬ್ರಾಹ್ಮಣರು ಹುಟ್ಟಿನಿಂದಲೇ ಶ್ರೇಷ್ಠರು’’ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಹೇಳಿಕೆ ಕೆಲವರ ಟೀಕೆಗಳಿಗೆ ಕಾರಣವಾಗಿದೆ. ಅಖಿಲ ಭಾರತೀಯ ಬ್ರಾಹ್ಮಣ ಸಭಾವೊಂದರಲ್ಲಿ ಅವರು ಈ ಹೇಳಿಕೆಯನ್ನು ನೀಡಿದ್ದರು. ‘‘ಇತರ ಸಮುದಾಯಕ್ಕೆ ಮಾರ್ಗದರ್ಶನ ನೀಡುವ ಕಾರಣಕ್ಕಾಗಿ ಅವರು ಹುಟ್ಟಿನಿಂದಲೇ ಶ್ರೇಷ್ಠರು’’ ಎಂದು ಓಂ ಬಿರ್ಲಾ ಅಭಿಪ್ರಾಯ ಪಟ್ಟಿದ್ದಾರೆ. ಸಾಧಾರಣವಾಗಿ ಜಾತಿ ಸಮಾವೇಶಗಳು ನಡೆಯುವುದೇ ಚದುರಿಹೋಗಿರುವ ತಮ್ಮ ಜಾತಿಯ ಜನರನ್ನು ಮರು ಸಂಘಟಿಸುವುದಕ್ಕೆ ಮತ್ತು ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುವುದಕ್ಕೆ. ಇಂತಹ ಸಮಾವೇಶದಲ್ಲಿ ತಮ್ಮ ತಮ್ಮ ಜಾತಿಗಳ ಹೆಗ್ಗಳಿಕೆಗಳನ್ನು ಸಾರಿಕೊಳ್ಳುವುದು ಸಹಜವೇ ಆಗಿದೆ. ಇಷ್ಟಕ್ಕೂ ಬಿರ್ಲಾ ಹೇಳಿದ ಮಾತುಗಳಲ್ಲಿ ಅತಿಶಯೋಕ್ತಿಯೇನೂ ಇಲ್ಲ. ಬ್ರಾಹ್ಮಣ ಸಮುದಾಯ ಉಳಿದ ಜಾತಿಗೆ ಹೋಲಿಸಿದರೆ ಅತ್ಯಂತ ಸಣ್ಣ ಸಂಖ್ಯೆಯನ್ನು ಇವರು ಹೊಂದಿದ್ದರೂ ಅವರು ಎಲ್ಲ ಕ್ಷೇತ್ರಗಳಲ್ಲೂ ವಿಜೃಂಭಿಸುತ್ತಿದ್ದಾರೆ.

ಐಎಎಸ್ ಅಧಿಕಾರಿಗಳು, ನ್ಯಾಯಾಧೀಶರು, ಶಿಕ್ಷಕರು, ಪ್ರೊಫೆಸರ್‌ಗಳು, ಪತ್ರಕರ್ತರು ಎಲ್ಲ ಹೀಗೆ ಎಲ್ಲ ಪ್ರಮುಖ ಕ್ಷೇತ್ರಗಳಲ್ಲೂ ಶೇ. 75ಕ್ಕೂ ಅಧಿಕ ಜನರು ಬ್ರಾಹ್ಮಣರೇ ಆಗಿದ್ದಾರೆ. ಕೇಂದ್ರ ಸರಕಾರದ ಸಂಪುಟ ಸಚಿವರ ಜಾತಿಯನ್ನೊಮ್ಮೆ ಪರಿಶೀಲಿಸಿದರೆ ಓಂ ಬಿರ್ಲಾ ಅವರ ಮಾತುಗಳಿಗೆ ಇನ್ನಷ್ಟು ಪುಷ್ಟಿ ಸಿಗುತ್ತದೆ. ಅಷ್ಟೇ ಏಕೆ, ಜಾತಿಯನ್ನೇ ನಿರಾಕರಿಸುವ ಭಾರತದ ಎಡಪಂಥೀಯ ಚಳವಳಿಯ ನೇತೃತ್ವವನ್ನು ವಹಿಸಿದ ನಾಯಕರ ಜಾತಿಯನ್ನು ಪರಿಶೀಲಿಸಿದರೂ ಅಲ್ಲೂ ಬ್ರಾಹ್ಮಣರ ಪಾರಮ್ಯವೇ ಎದ್ದು ಕಾಣುತ್ತದೆ. ಈ ದೇಶದ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮತ್ತು ಪತ್ರಿಕಾಂಗಗಳ ನಾಯಕತ್ವವನ್ನು ವಹಿಸಿಕೊಳ್ಳುವ ಮೂಲಕ ಯಾವ ಪಕ್ಷವೇ ಆಡಳಿತಕ್ಕೆ ಬರಲಿ, ಭಾರತ ಬ್ರಾಹ್ಮಣ ಸಮುದಾಯದ ಮಾರ್ಗದರ್ಶನದಿಂದಲೇ ಮುನ್ನಡೆಯಬೇಕಾದಂತಹ ಸ್ಥಿತಿಯಲ್ಲಿದೆ. ದೇವಸ್ಥಾನಗಳಲ್ಲಂತೂ ಬ್ರಾಹ್ಮಣರನ್ನು ಹೊರತು ಪಡಿಸಿ ಇನ್ನಾರೂ ಪೂಜೆಯ ನೇತೃತ್ವ ವಹಿಸುವಂತಿಲ್ಲ.

ಈ ಹಿನ್ನೆಲೆಯಲ್ಲಿ ಓಂ ಬಿರ್ಲಾ ಅವರು ಬ್ರಾಹ್ಮಣರ ಶ್ರೇಷ್ಠತ್ವವನ್ನು ಪ್ರತಿಪಾದಿಸಿರಬಹುದು. ಈ ಎಲ್ಲ ಅರ್ಹತೆಗಳಿರುವುದರಿಂದ ಬ್ರಾಹ್ಮಣರು ‘ಹುಟ್ಟಿನಿಂದಲೇ ಶ್ರೇಷ್ಠರು’ ಎಂದು ಓಂ ಬಿರ್ಲಾ ಘೋಷಿಸಿದ್ದಾರೆ. ಓಂ ಬಿರ್ಲಾ ಒಬ್ಬ ಬ್ರಾಹ್ಮಣ ಸಮುದಾಯದ ನಾಯಕನೋ ಅಥವಾ ಆರೆಸ್ಸೆಸ್‌ನ ಯಾವುದೋ ಘಟಕವೊಂದರ ಮುಖ್ಯಸ್ಥನೋ ಆಗಿದ್ದರೆ ಈ ಹೇಳಿಕೆ ಟೀಕೆಗಳಿಗೆ ಕಾರಣವಾಗುತ್ತಿರಲಿಲ್ಲವೇನೋ. ಯಾಕೆಂದರೆ, ಬ್ರಾಹ್ಮಣರ ಹಿತಾಸಕ್ತಿ ಮತ್ತು ವರ್ಣಾಶ್ರಮದ ಪುನರ್ ಸ್ಥಾಪನೆಗಾಗಿಯೇಆರೆಸ್ಸೆಸ್ ರಚನೆಯಾಗಿದೆ. ವರ್ಣಾಶ್ರಮದ ಪುನರ್‌ಸ್ಥಾಪನೆಯೆಂದರೆ ಬ್ರಾಹ್ಮಣರ ಶ್ರೇಷ್ಠತ್ವದ ಪುನರ್ ಸ್ಥಾಪನೆಯಾಗಿದೆ. ಆದರೆ ಓಂ ಬಿರ್ಲಾ ಲೋಕಸಭಾ ಸ್ಪೀಕರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಸತ್‌ನ ಹೊರಗೆ ನಿಂತು ಬಿರ್ಲಾ ಈ ಹೇಳಿಕೆಯನ್ನು ನೀಡಿದ್ದರೂ, ಸಂಸತ್ ಕಲಾಪದ ಮೇಲೆ ಬಿರ್ಲಾ ಚಿಂತನೆ ತನ್ನ ಪ್ರಭಾವವನ್ನು ಬೀರಬಾರದೆಂದೇನೂ ಇಲ್ಲ. ಈ ದೇಶದ ಸಂಸತ್ ಮತ್ತು ಸಂವಿಧಾನ ಬಿರ್ಲಾ ಅವರ ಮಾತುಗಳನ್ನು ಒಪ್ಪುವುದಿಲ್ಲ ಮಾತ್ರವಲ್ಲ, ಸಂವಿಧಾನವು ಈ ದೇಶದ ಎಲ್ಲ ಜಾತಿ, ಧರ್ಮದ ಪ್ರಜೆಗಳನ್ನು ಸಮಾನವಾಗಿ ಬಗೆಯುತ್ತದೆ. ಅಷ್ಟೇ ಅಲ್ಲ, ಈ ದೇಶದಲ್ಲಿ ಮೀಸಲಾತಿ ಜಾರಿಗೊಳ್ಳುವುದಕ್ಕೆ ಕಾರಣ ದಲಿತರು ಮತ್ತು ಶೂದ್ರರು ಪ್ರತಿಭಾವಂತರಲ್ಲ ಎನ್ನುವ ಕಾರಣಕ್ಕಾಗಿಯಲ್ಲ. ಬದಲಿಗೆ, ಅವರ ಕೈಯಿಂದ ಶಿಕ್ಷಣ ಮತ್ತು ಆರ್ಥಿಕ ಅವಕಾಶಗಳನ್ನು ಕಸಿದುಕೊಳ್ಳಲಾಗಿದೆ ಎನ್ನುವ ಕಾರಣದಿಂದ.

 ಅತಿ ಸಣ್ಣ ಜಾತಿಯಾಗಿರುವ ಬ್ರಾಹ್ಮಣರು ಈ ದೇಶದ ಎಲ್ಲ ಅವಕಾಶಗಳನ್ನು ಹೇಗೆ ತನ್ನದಾಗಿಸಿಕೊಂಡರು ಎನ್ನುವ ಇತಿಹಾಸದ ಕಟು ಸತ್ಯವನ್ನೂ ಓಂ ಮನಗಾಣಬೇಕಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಬ್ರಾಹ್ಮಣರು ಮಾರ್ಗದರ್ಶಕರಾಗಿರುವುದರಿಂದ ಬ್ರಾಹ್ಮಣರು ಹುಟ್ಟಿನಿಂದಲೇ ಶ್ರೇಷ್ಠರು ಎನ್ನುವ ಓಂ ಬಿರ್ಲಾ ವಾದ, ಎಲ್ಲ ಕ್ಷೇತ್ರಗಳಲ್ಲೂ ಕಳಪೆ ಸಾಧನೆ ಮಾಡಿರುವ ದಲಿತರು ಮತ್ತು ಕೆಳಶೂದ್ರರು ಹುಟ್ಟಿನಿಂದ ಕೀಳು ಎನ್ನುವ ಧ್ವನಿಯನ್ನು ನೀಡುತ್ತದೆ ಎಂಬ ಎಚ್ಚರಿಕೆ ಅವರಿಗಿರಬೇಕು. ಬ್ರಾಹ್ಮಣರು ಹುಟ್ಟಿನಿಂದ ಶ್ರೇಷ್ಠರಾದ ಕಾರಣಕ್ಕಾಗಿ ಸಮಾಜಕ್ಕೆ ಮಾರ್ಗದರ್ಶಕರಾಗಿರುವುದಲ್ಲ ಎನ್ನುವ ಅಂಶವನ್ನು ಸ್ಪೀಕರ್ ಸ್ಥಾನದಲ್ಲಿರುವ ಬಿರ್ಲಾ ಅರ್ಥ ಮಾಡಿಕೊಳ್ಳಬೇಕಾಗಿದೆ. ಕ್ಷತ್ರಿಯರ ಸಹಕಾರದಿಂದ ಈ ದೇಶದಲ್ಲಿ ಬ್ರಾಹ್ಮಣರು ಹಲವು ಸಾವಿರ ವರ್ಷಗಳ ಕಾಲ ಶೂದ್ರರು ಮತ್ತು ದಲಿತರನ್ನು ಶಿಕ್ಷಣ ವಂಚಿತರನ್ನಾಗಿಸಿದರು. ವಿದ್ಯಾವಂತ, ವಿಚಾರವಂತ ಬ್ರಾಹ್ಮಣ ಸಮುದಾಯದ ನಾಯಕರಲ್ಲಿ ಈ ಪಾಪಪ್ರಜ್ಞೆ ಸದಾ ಜಾಗೃತವಾಗಿರಬೇಕಾಗಿದೆ. ಶತಮಾನಗಳಿಂದ ಶಿಕ್ಷಣ, ಧರ್ಮ, ಸಂಪತ್ತು ಎಲ್ಲ ಅವಕಾಶಗಳಿಂದ ದಲಿತ, ಶೂದ್ರ ಸಮುದಾಯಗಳನ್ನು ವಂಚಿಸಿದ ಕಾರಣಕ್ಕಾಗಿಯೇ ಸಂವಿಧಾನ ಈ ದುರ್ಬಲ ಸಮುದಾಯಕ್ಕೆ ಮೀಸಲಾತಿಯನ್ನು ನೀಡಿ ಅವರನ್ನು ಮೇಲೆತ್ತುವುದಕ್ಕೆ ಪ್ರಯತ್ನಿಸುತ್ತಿದೆ. ಅವಕಾಶವನ್ನು ತನ್ನದಾಗಿಸಿಕೊಂಡ ಅಂಬೇಡ್ಕರ್, ಈ ದೇಶದ ಪ್ರಜಾಸತ್ತೆಯ ಅಡಿಗಲ್ಲಾಗಿರುವ ಸಂವಿಧಾನವನ್ನೇ ಬರೆದರು ಎನ್ನುವ ಪ್ರಜ್ಞೆ ಸಂಸತ್ತಿನ ನೇತೃತ್ವ ವಹಿಸಿಕೊಂಡಿರುವ ಓಂ ಬಿರ್ಲಾ ಅವರಿಗಿರಬೇಕು. ಎಲ್ಲ ಕ್ಷೇತ್ರಗಳಲ್ಲಿ ಬ್ರಾಹ್ಮಣರು ವಿಜೃಂಭಿಸಿರುವುದು, ಅವರು ದುರ್ಬಲ ವರ್ಗದ ಅವಕಾಶಗಳನ್ನು ಕಿತ್ತುಕೊಂಡ ಕಾರಣದಿಂದ. ಸಂವಿಧಾನ ಈ ಕಾರಣಕ್ಕಾಗಿಯೇ ಮೀಸಲಾತಿಯನ್ನು ಜಾರಿಗೊಳಿಸಿ ಅವರ ಅವಕಾಶಗಳನ್ನು ಅವರಿಗೆ ಮರಳಿ ನೀಡುವ ಪ್ರಯತ್ನವನ್ನು ಮಾಡುತ್ತಿದೆ.

ಈ ದೇಶದಲ್ಲಿ ಮೀಸಲಾತಿ ಇನ್ನೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವ ಅಗತ್ಯವನ್ನು ಓಂ ಬಿರ್ಲಾ ಅವರ ಮಾತುಗಳೇ ಹೇಳುತ್ತಿವೆ. ಇಂದು ಬ್ರಾಹ್ಮಣರನ್ನು ಸಮಾಜ ‘ಮಾರ್ಗದರ್ಶಕರು’ ಎಂದು ಕರೆಯುತ್ತಿಲ್ಲ. ಬದಲಿಗೆ ಧರ್ಮ, ಶಾಸ್ತ್ರಗಳ ಹೆಸರಲ್ಲಿ ಶೋಷಿತ ಸಮುದಾಯವನ್ನು ಶೋಷಣೆ ಮಾಡಿಕೊಂಡು ಬಂದವರು ಎನ್ನುವ ಆರೋಪ ಅವರ ಮೇಲಿದೆ. ಆ ಆರೋಪಗಳನ್ನು ಸಮರ್ಥಿಸುವಂತೆ ಓಂ ಬಿರ್ಲಾ ಮಾತನ್ನಾಡಿದ್ದಾರೆ. ಈ ದೇಶದ ಪ್ರಜಾಸತ್ತೆ ನಡೆಯುತ್ತಿರುವುದು ಬ್ರಾಹ್ಮಣರ ಮಾರ್ಗದರ್ಶನದಿಂದಲ್ಲ, ಬದಲಿಗೆ ಓರ್ವ ಸಮರ್ಥ ದಲಿತ ನಾಯಕನ ಮಾರ್ಗದರ್ಶನದಿಂದ. ಆತ ಬರೆದಿರುವ ಸಂವಿಧಾನದ ಮಾರ್ಗದರ್ಶನದಿಂದ. ದುರದೃಷ್ಟವಶಾತ್ ಆ ಸಂವಿಧಾನ ಪ್ರತಿಪಾದಿಸುವ ಸಾಮಾಜಿಕ ನ್ಯಾಯವನ್ನು ಜಾರಿಗೊಳಿಸುವ ಹೊಣೆಗಾರಿಕೆಯನ್ನು ಓಂ ಬಿರ್ಲಾ ಹೇಳುವಂತೆ ‘ಬ್ರಾಹ್ಮಣ’ರೇ ಹೊತ್ತುಕೊಂಡಿದ್ದಾರೆ. ತಾವು ಶ್ರೇಷ್ಠರು, ತಾವೇ ಮಾರ್ಗದರ್ಶಕರು ಎನ್ನುವ ಮೇಲರಿಮೆಯನ್ನು ಬದಿಗಿಟ್ಟು ಅಂಬೇಡ್ಕರ್ ಅವರ ಮಾರ್ಗದರ್ಶನದಂತೆ ದೇಶವನ್ನು ಮುನ್ನಡೆಸುವುದು ಬ್ರಾಹ್ಮಣರೂ ಸೇರಿದಂತೆ ದೇಶದ ಸರ್ವ ನಾಗರಿಕರ ಕರ್ತವ್ಯವಾಗಿದೆ. ಎಲ್ಲ ಕ್ಷೇತ್ರಗಳಲ್ಲಿ ಮಾರ್ಗದರ್ಶಕರಾಗಿ ಬ್ರಾಹ್ಮಣರು ವಿಜೃಂಭಿಸುವುದು ಪ್ರಜಾಸತ್ತೆಯ ವೈಫಲ್ಯವನ್ನು ಹೇಳುತ್ತದೆ. ಈ ದೇಶದ ಬಹುಸಂಖ್ಯಾತರಾಗಿರುವ ದುರ್ಬಲ ಸಮುದಾಯಗಳಿಗೆ ಆ ಸ್ಥಾನಗಳನ್ನು ಹಂಚುವ ಕೆಲಸವಾಗಬೇಕು. ಸಂಸತ್ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ನಮ್ಮ ಸಂವಿಧಾನ ನಿರ್ದೇಶಿಸುತ್ತದೆ. ಹುಟ್ಟಿನಿಂದಲ್ಲ, ಕರ್ಮದಿಂದಷ್ಟೇ ಒಬ್ಬ ಶ್ರೇಷ್ಠ ಬ್ರಾಹ್ಮಣನಾಗಲು ಸಾಧ್ಯ ಎಂದು ಸ್ವತಃ ಬ್ರಾಹ್ಮಣರೇ ನಂಬಿರುವಾಗ, ಬಿಜೆಪಿ ನಾಯಕ ಓಂ ಬಿರ್ಲಾ ಅವರ ಬೇಜವಾಬ್ದಾರಿಯ ಹೇಳಿಕೆ ಈ ದೇಶದ ಸಕಲ ಬ್ರಾಹ್ಮಣರನ್ನು ಮುಜುಗರಕ್ಕೀಡು ಮಾಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)