varthabharthi

ಕರ್ನಾಟಕ

ತಲಕಾವೇರಿಯಲ್ಲಿ ವಿವಾದಿತ ರೆಸಾರ್ಟ್ ಯೋಜನೆ: ಜಿಲ್ಲಾಡಳಿತದಿಂದ ತನಿಖಾ ತಂಡ ರಚನೆ

ವಾರ್ತಾ ಭಾರತಿ : 12 Sep, 2019

ಮಡಿಕೇರಿ, ಸೆ.11: ಪವಿತ್ರ ಕ್ಷೇತ್ರ ತಲಕಾವೇರಿಯಿಂದ ಕೇವಲ 700 ಮೀಟರ್ ಕೆಳ ಭಾಗದ ಅತಿಸೂಕ್ಷ್ಮ ಅರಣ್ಯ ಪ್ರದೇಶವನ್ನು ನಾಶ ಮಾಡಿ ರೆಸಾರ್ಟ್ ನಿರ್ಮಿಸಲು ಮುಂದಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ನಾಲ್ವರು ಅಧಿಕಾರಿಗಳನ್ನೊಳಗೊಂಡ ತನಿಖಾ ತಂಡ ರಚಿಸಿದ್ದಾರೆ. 

 ಉಪವಿಭಾಗಾಧಿಕಾರಿ ಜವರೇಗೌಡ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮಿಪ್ರಿಯ,  ಮಡಿಕೇರಿ ಎಸಿಎಫ್ ನೆಹರೂ ಮತ್ತು ಗಣಿ ಮತ್ತು ಭೂ ವಿಜ್ಞಾನಿಗಳು ಈ ಸಮಿತಿಯಲ್ಲಿದ್ದು, ತನಿಖೆ ಪ್ರಗತಿಯಲ್ಲಿದೆ. ರೆಸಾರ್ಟ್ ನಿರ್ಮಾಣಕ್ಕೆ ಪ್ರಯತ್ನಿಸಿದ ಮಡಿಕೇರಿ ಕಂದಾಯ ಇಲಾಖೆಯ ಅಧಿಕಾರಿ ವಿರುದ್ದ ಅರಣ್ಯ ಇಲಾಖೆ ಎಫ್‍ಐಆರ್ ದಾಖಲಿಸಿದೆ. ಈ ಪ್ರಕರಣದ ಕುರಿತು ತಲಕಾವೇರಿ ಮೂಲ ಸ್ವರೂಪ ರಕ್ಷಣಾ ವೇದಿಕೆ ಅರಣ್ಯ ಇಲಾಖೆಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಅಧಿಕಾರಿ ಮತ್ತು ಆತನ ಪುತ್ರನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. 

ಬೆಟ್ಟ ವಿರೂಪಗೊಳಿಸಿ ಕಾಟೇಜ್ ನಿರ್ಮಾಣ, ರಸ್ತೆ, ಕೆರೆ ಹಾಗೂ ಇನ್ನಿತರ ಕಾಮಗಾರಿಗಳನ್ನು ನಡೆಸಿದ್ದ ಮಡಿಕೇರಿ ಕಂದಾಯ ಇಲಾಖೆ ಉಪನೀರೀಕ್ಷಕ ಹಾಗೂ ಅವರ ಪುತ್ರನ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ, ಕರ್ನಾಟಕ ಜೀವ ವೈವಿಧ್ಯತಾ ಅಧಿನಿಯಮ ಮತ್ತು ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ಅರಣ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬೆಟ್ಟ ವಿರೂಪ ಗೊಳಿಸಿರುವ ಜಾಗ, ಭಾಗಮಂಡಲ ಗ್ರಾಮದ ಸರ್ವೆ ನಂಬರ್ 85/15 ಕ್ಕೆ ಸೇರಿದ್ದು, ಇದು ಅರಣ್ಯ ಪೈಸಾರಿ ಎಂದು ಗೊತ್ತಾಗಿದೆ. ಆದರೆ ಆರೋಪಿ ಸತೀಶ್, ಇದು ಚೇರಂಗಾಲ ಗ್ರಾಮದ ಸರ್ವೆ ನಂಬರ್ 37/5 ಕ್ಕೆ ಸೇರಿದೆ ಎಂದು ವಾದಿಸಿಸುತ್ತಿರುವ ಹಿನ್ನೆಲೆಯಲ್ಲಿ ಸರ್ವೆ ನಡೆಸಿ ನಕಾಶೆ ಒದಗಿಸಿಕೊಡುವಂತೆ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರ್ ಅವರು, ಭೂ ಮಾಪನ ಇಲಾಖೆಗೆ ಪತ್ರ ಬರೆದಿದ್ದಾರೆ. 

ಸಂಬಂಧಿಸಿದ ಕಂದಾಯ ಅಧಿಕಾರಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಹಿತಾಚಿ ಯಂತ್ರದ ಸಹಾಯದಿಂದ ವಿವಿಧ ಜಾತಿಯ ಕಾಡು ಮರಗಳನ್ನು ಕಡಿದು ಬೀಳಿಸಿರುವುದೂ ಅಲ್ಲದೆ, ಔಷಧೀಯ ಸಸ್ಯ ಸಂಕುಲವನ್ನು ಮಣ್ಣನಡಿ ಮುಚ್ಚಿ ಹಾಕಿರುವುದು ಅರಣ್ಯ ಇಲಾಖೆಯ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ಆರೋಪ ಎದುರಿಸುತ್ತಿರುವ ಕಂದಾಯ ಉಪನಿರೀಕ್ಷಕ ಅಧಿಕಾರದಲ್ಲಿದ್ದುಕೊಂಡೇ ಅಕ್ರಮ ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಅಕ್ರಮ ಸಕ್ರಮ ವಿಭಾಗದಲ್ಲಿ ಕಂದಾಯ ಅಧಿಕಾರಿಯಾಗಿದ್ದಾಗಲೇ ತನ್ನ ಮತ್ತು ತನ್ನ ಕುಟುಂಬಸ್ಥರ ಹೆಸರಿಗೆ ಅಕ್ರಮ ಸಕ್ರಮ ಯೋಜನೆಯಡಿ ಜಾಗ ಮಂಜೂರು ಮಾಡಿಸಿಕೊಂಡಿದ್ದಾರೆ ಎನ್ನುವ ಆರೋಪ ಭಾಗಮಂಡಲ ಗ್ರಾಮಸ್ಥರಿಂದ ಕೇಳಿ ಬಂದಿದೆ. ಅಕ್ರ್ರಮ-ಸಕ್ರಮ ಎಂದು ಹೇಳಲಾಗುತ್ತಿರುವ ಜಾಗದೊಂದಿಗೆ 10 ಎಕರೆಗೂ ಅಧಿಕ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಆರೋಪವಿದೆ.  

ಗ್ರಾಮಕ್ಕೆ ಅಪಾಯ ತಂದೊಡ್ಡಲಿರುವ ಪ್ರಕರಣದ ಬಗ್ಗೆ ವಿಳಂಬ ಮಾಡದೆ ಶೀಘ್ರ ತನಿಖೆ ನಡೆಸಿ ಸತ್ಯಾಂಶ ಬಯಲುಗೊಳಿಸಬೇಕು ಮತ್ತು ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿ ಪಡಿಸಬೇಕೆಂದು ತಲಕಾವೇರಿ ಮೂಲ ಸ್ವರೂಪ ರಕ್ಷಣಾ ವೇದಿಕೆ ಮತ್ತು ಭಾಗಮಂಡಲ ಗ್ರಾಮಸ್ಥರು ಒತ್ತಾಯಿಸಿದ್ದಾರೆ. 

ಗ್ರಾಮಸ್ಥರಲ್ಲಿ ಆತಂಕ
ನಿರಂತರ ಮಳೆಯಿಂದ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಅಪಾಯಕಾರಿ ಬಿರುಕು ಕಣಿಸಿಕೊಳ್ಳುತ್ತಿರುವುದರಿಂದ ವಿವಾದಿತ ಪ್ರದೇಶದ ಗ್ರಾಮಸ್ಥರಲ್ಲೂ ಆತಂಕ ಸೃಷ್ಟಿಯಾಗಿದೆ. ಸೂಕ್ಷ್ಮ ಗುಣವನ್ನು ಹೊಂದಿರುವ ಅರಣ್ಯ ಪ್ರದೇಶದಲ್ಲಿ ರೆಸಾರ್ಟ್ ನಿರ್ಮಾಣಕ್ಕೆ  ಅವಕಾಶ ನೀಡಲಾಗಿದೆ, ಅಲ್ಲದೆ ಕರೆಯೊಂದನ್ನು ಕೂಡ ನಿರ್ಮಿಸಲಾಗಿದೆ. ಈ ಕೆರೆಯಿಂದಲೇ ಮುಂದೊಂದು ದಿನ ಅಪಾಯ ಕಾದಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಜಂಟಿ ಸರ್ವೆ
ಅಕ್ರಮವಾಗಿ ರೆಸಾರ್ಟ್ ನಿರ್ಮಿಸುತ್ತಿರುವ ಪ್ರಕರಣದ ಬಗ್ಗೆ ಈಗಾಗಲೇ ಅರಣ್ಯ ಇಲಾಖೆ 3 ಕಾಯಿದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ. ಭೂಮಿ ಸಮತಟ್ಟು ಮಾಡಿರುವ ಜಾಗ ಯಾವ ಇಲಾಖೆಗೆ ಸೇರಿದೆ ಎಂಬ ಬಗ್ಗೆ ಇನ್ನಷ್ಟೇ ಸ್ಪಷ್ಟವಾಗಬೇಕಿದ್ದು, ಜಂಟಿ ಸರ್ವೆ ನಡೆಸಲು ಪತ್ರ ಬರೆಯಲಾಗಿದೆ. ಸರ್ವೆ ಕಾರ್ಯ ಪೂರ್ಣಗೊಂಡ ಬಳಿಕ ಜಾಗದ ಹಕ್ಕುದಾರಿಕೆ ಬಗ್ಗೆ ಸ್ಪಷ್ಟವಾಗಲಿದ್ದು, ನಂತರ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದೆಂದು ಮಡಿಕೇರಿ ಡಿಎಫ್‍ಒ ಪ್ರಭಾಕರ್ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)