varthabharthi

ಕರ್ನಾಟಕ

ಜಿಲ್ಲಾಡಳಿತ ಕಟ್ಟಡದಲ್ಲಿ ಸಂಸದರ ಕಚೇರಿ ಉದ್ಘಾಟನೆ

ಜನರ ಸಮಸ್ಯೆ ಆಲಿಕೆಗೆ ಪ್ರತೀ ವಾರ ಸಭೆ: ಸಂಸದೆ ಸುಮಲತಾ

ವಾರ್ತಾ ಭಾರತಿ : 12 Sep, 2019

ಮಂಡ್ಯ, ಸೆ.11: ಜಿಲ್ಲೆಯಲ್ಲಿರುವ ಜನಸಾಮಾನ್ಯರ ಸಮಸ್ಯೆಗಳು ಹಾಗು ತಾಲೂಕುವಾರು ಯಾವ ಯಾವ ಕೆಲಸಗಳು ನಡೆಯುತ್ತಿದೆ ಎಂದು ತಿಳಿದುಕೊಳ್ಳಲು ಪ್ರತಿವಾರ ತನ್ನ ಕಚೇರಿಯಲ್ಲೇ ಸಭೆ ನಡೆಸಲಾಗುತ್ತದೆ ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ.

ನಗರದ ಜಿಲ್ಲಾಡಳಿತ ಕಛೇರಿಯಲ್ಲಿ ಬುಧವಾರ ತನ್ನ ನೂತನ ಕಚೇರಿಯನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ನಾನು ಒಂದೇ ಕಡೆ ಇದ್ದರೆ ಎಲ್ಲರೂ ಇಲ್ಲಿಗೆ ಬರುತ್ತಾರೆ. ಹೀಗಾಗಿ ವಾರದಲ್ಲಿ ಒಂದು ಅಥವಾ ಎರಡು ದಿನ ಮಂಡ್ಯ ಕಛೇರಿಯಲ್ಲಿ ಇದ್ದು ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಗಮನಹರಿಸಲಾಗುವುದು ಎಂದರು.

ತನ್ನ ಪತಿ ಮಾಜಿ ಸಂಸದ ದಿವಂತತ ಅಂಬರೀಷ್ ಅವರು ಕಾರ್ಯನಿರ್ವಹಿಸುತ್ತಿದ್ದ ಕಚೇರಿಯಲ್ಲೇ, ನನಗೂ ಕೂಡ ಕಾರ್ಯನಿರ್ವಹಿಸಲು ಅವಕಾಶ ಸಿಕ್ಕದೆ. ಇದು ನಿಜವಾಗಿಯೂ ನನ್ನ ಭಾಗ್ಯ ಎಂದು ಅವರು ಸ್ಮರಿಸಿದರು.

ಕೆರೆಗಳಿಗೆ ನೀರು ತುಂಬಿಸಲು ಕ್ರಮ: ಕೆಆರ್‍ಎಸ್ ಡ್ಯಾಂಗೆ ತೊಂದರೆಯಾಗಬಾರದು ಎಂಬುದೇ ನಮ್ಮ ಉದ್ದೇಶವಾಗಿರುವುದರಿಂದ ಡ್ಯಾಂ ವ್ಯಾಪ್ತಿಯ ಕಲ್ಲುಗಣಿಗಾರಿಕೆ ನಿಷೇಧಿಸಿ ಸುರಕ್ಷತೆಗೆ ಗಮನಹರಿಸಿದ್ದೇವೆ. ಡ್ಯಾಂನಲ್ಲಿ ಸಾಕಷ್ಟು ನೀರು ಇರುವುದರಿಂದ ಜಿಲ್ಲೆಯ ಕೆರೆಕಟ್ಟೆಗಳನ್ನು ಒಂದಾದ ನಂತರ ಇನ್ನೊಂದು ತುಂಬಿಸಲಾಗುವುದು ಎಂದು ಅವರು ತಿಳಿಸಿದರು.

ವಾಹನಚಾಲಕರು ಟ್ರಾಫಿಕ್ ನಿಯಾಮವಳಿಯನ್ನು ಪಾಲಿಸಲಿ ಮತ್ತು ಅವರ ಜೀವಕ್ಕೆ ಕುತ್ತುಬರಬಾರದೆಂದು ಪೊಲೀಸರು ಹೆಚ್ಚು ದಂಡವನ್ನು ವಿಧಿಸುತ್ತಿದ್ದಾರೆ ವಿನಃ ಜನಸಾಮಾನ್ಯರಿಂದ ಹೆಚ್ಚು ಹಣವನ್ನು ಪಡೆಯಬೇಕು ಎಂದಲ್ಲ ಎಂದು ಅವರು ದಂಡ ಶುಲ್ಕ ಕ್ರಮವನ್ನು ಬೆಂಬಲಿಸಿದರು.
ಇದೇ ವೇಳೆ ನೂತನ ಕಚೇರಿಯಲ್ಲಿ ಸಾರ್ವಜನಿಕರಿಂದ ಸುಮಲತಾ ಅಹವಾಲು ಸ್ವೀಕರಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಯಾಲಕ್ಕಿಗೌಡ ಹಾಗು ಇತರರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)