varthabharthi


ರಾಷ್ಟ್ರೀಯ

ಪದ್ಮ ಪ್ರಶಸ್ತಿ ರೇಸ್‌ನಲ್ಲಿ 9 ಮಂದಿ ಕ್ರೀಡಾ ತಾರೆಯರು

ವಾರ್ತಾ ಭಾರತಿ : 12 Sep, 2019

ಹೊಸದಿಲ್ಲಿ, ಸೆ.12: ಭಾರತದ ಕ್ರೀಡಾ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ, ಮಹಿಳಾ ಅಥ್ಲೀಟ್ ಒಬ್ಬರನ್ನು ಅಂದರೆ ಆರು ಬಾರಿಯ ಬಾಕ್ಸಿಂಗ್ ವಿಶ್ವ ಚಾಂಪಿಯನ್ ಎಂ.ಸಿ.ಮೇರಿ ಕೋಮ್ ಅವರ ಹೆಸರನ್ನು ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ಪ್ರಶಸ್ತಿಗೆ ಕ್ರೀಡಾ ಸಚಿವಾಲಯ ಶಿಫಾರಸು ಮಾದಿದೆ. ಮೇರಿ ಕೋಮ್ ಅವರಿಗೆ 2013ರಲ್ಲಿ ಪದ್ಮಭೂಷಣ ಹಾಗೂ 2006ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು.

ಇನ್ನೂ ಆಸಕ್ತಿದಾಯಕ ವಿಚಾರವೆಂದರೆ, ವಿವಿಧ ಕ್ರೀಡೆಗಳ ಒಂಬತ್ತು ಆಟಗಾರ್ತಿಯರ ಹೆಸರನ್ನು ಪದ್ಮ ಪ್ರಶಸ್ತಿಗಳಿಗಾಗಿ ಸಚಿವಾಲಯ ಶಿಫಾರಸು ಮಾಡಿದೆ.
ಸದ್ಯ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಪಿ.ವಿ.ಸಿಂಧೂ ಅವರ ಹೆಸರನ್ನು ಈಗಾಗಲೇ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಗೆ ಸಚಿವಾಲಯ ಶಿಫಾರಸು ಮಾಡಿದೆ. 2017ರನ್ನೂ ಸಿಂಧೂ ಹೆಸರು ಶಿಫಾರಸು ಮಾಡಲಾಗಿತ್ತು. ಆದರೆ ಪ್ರಶಸ್ತಿ ಪುರಸ್ಕೃತರ ಅಂತಿಮ ಪಟ್ಟಿಯಲ್ಲಿ ಅವರ ಹೆಸರು ಇರಲಿಲ್ಲ. 2015ರಲ್ಲಿ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.

ಈ ಹಿಂದೆ ಪದ್ಮವಿಭೂಷಣ ಪ್ರಶಸ್ತಿಗೆ ಚೆಸ್ ಪಟು ವಿಶ್ವನಾಥನ್ ಆನಂದ್ (2007), ಕ್ರಿಕೆಟ್ ದಂತಕಥೆ ಎನಿಸಿದ ಸಚಿನ್ ತೆಂಡೂಲ್ಕರ್ (2008) ಮತ್ತು ಮರಣೋತ್ತರವಾಗಿ ಪರ್ವತಾರೋಹಿ ಸರ್ ಎಡ್ಮಂಡ್ ಹಿಲರಿ (2008) ಹೀಗೆ ಮೂವರು ಪುರುಷ ಕ್ರೀಡಾಪಟುಗಳು ಆಯ್ಕೆಯಾಗಿದ್ದರು. ಮೇರಿ ಕೋಮ್ ಹಾಗೂ ಸಿಂಧೂ ಹೊರತುಪಡಿಸಿ, ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡಿರುವ ಹೆಸರುಗಳೆಂದರೆ ಕುಸ್ತಿಪಟು ವಿನೇಶ್ ಪೊಗಾತ್, ಟಿಟಿ ತಾರೆ ಮಾಣಿಕಾ ಬಾತ್ರಾ, ಟಿ20 ಕ್ರಿಕೆಟ್ ತಂಡದ ನಾಯಕಿ ಹರಮ್‌ಪ್ರೀತ್ ಕೌರ್, ಹಾಕಿ ನಾಯಕಿ ರಾಣಿ ರಾಮಪಾಲ್, ಮಾಜಿ ಶೂಟರ್ ಸುಮಾ ಶಿರೂರ್ ಮತ್ತು ಪರ್ವತಾರೋಹಿ ಅವಳಿ ಸಹೋದರಿಯರಾದ ತಾಶಿ- ನುಂಗ್ಸಿ ಮಲಿಕ್.

ಗೃಹಸಚಿವಾಲಯ ಪದ್ಮಪ್ರಶಸ್ತಿ ಸಮಿತಿಗೆ ಶಿಫಾರಸ್ಸು ಮಾಡಲಾಗಿದೆ. ಆಯ್ಕೆಯಾದ ಹೆಸರುಗಳನ್ನು 2020ರ ಜನವರಿ 25ರಂದು ಅಂದರೆ ಗಣರಾಜ್ಯೋತ್ಸವದ ಮುನ್ನಾ ದಿನ ಪ್ರಕಟಿಸಲಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)