varthabharthi

ರಾಷ್ಟ್ರೀಯ

ಆಟೋಮೊಬೈಲ್ ಉದ್ಯಮ ಕುಸಿತ: ಕೇಂದ್ರ ವಿತ್ತ ಸಚಿವೆ ಹೇಳಿಕೆಗೆ ಮಾರುತಿ ಸುಝುಕಿ ವಿರೋಧ

ವಾರ್ತಾ ಭಾರತಿ : 12 Sep, 2019

ಗುವಾಹಟಿ, ಸೆ.12: ಆಟೋಮೊಬೈಲ್ ಉದ್ಯಮದಲ್ಲಿನ ಕುಸಿತಕ್ಕೆ ಓಲಾ-ಉಬರ್ ಕಾರಣ ಎಂಬ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಗೆ ದೇಶದ ಅತ್ಯಂತ ದೊಡ್ಡ ಕಾರು ಉತ್ಪಾದಕ ಕಂಪನಿ ಮಾರುತಿ ಸುಝುಕಿ ಇಂಡಿಯಾ ವಿರೋಧ ವ್ಯಕ್ತಪಡಿಸಿದೆ.

"ನಾವು ಯಾವುದೇ ತೀರ್ಮಾನಕ್ಕೆ ಬರುವ ಮೊದಲು ವಿಸ್ತ್ರತವಾದ ಅಧ್ಯಯನ ಮಾಡುವ ಅವಶ್ಯಕತೆಯಿದೆ. ಭಾರತದ ಮಾಲಿಕತ್ವದ ಮಾದರಿ ಇನ್ನೂ ಬದಲಾಗಿಲ್ಲ. ಜನರು ‘ಮಹತ್ವಾಕಾಂಕ್ಷೆಯ ಅಂಶ’ದೊಂದಿಗೆ ಕಾರುಗಳನ್ನು ಖರೀದಿಸುತ್ತಾರೆ'' ಎಂದು ಮಾರುತಿ ಸುಝಕಿ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ(ಮಾರ್ಕೆಟಿಂಗ್ ಹಾಗೂ ಸೇಲ್ಸ್)ಶಶಾಂಕ್ ಶ್ರೀವಾಸ್ತವ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇಂದಿನ ಜನರ ಮನಸ್ಥಿತಿ ಬದಲಾಗಿದ್ದು,ಇಎಂಐ ಗೊಂದಲಕ್ಕೆ ಸಿಲುಕಿ ಹಾಕಿಕೊಳ್ಳುವ ಬದಲಿಗೆ ಆ್ಯಪ್ ಆಧಾರಿತ ಓಲಾ-ಉಬರ್ ಟ್ಯಾಕ್ಸಿಗಳನ್ನೇ ಓಡಾಟಕ್ಕೆ ಬಳಸಿಕೊಳ್ಳುತ್ತಿರುವುದರಿಂದ ಕಾರುಗಳನ್ನು ಯಾರೂ ಖರೀದಿಸುತ್ತಿಲ್ಲ. ಹೀಗಾಗಿ ಆಟೋಮೊಬೈಲ್ ಉದ್ಯಮ ನೆಲ ಕಚ್ಚಿದೆ ಎಂದು ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ವಿತ್ತ ಸಚಿವೆಯ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗಿದ್ದು, ನಿರ್ಮಲಾ ಅವರ ಆರ್ಥಿಕ ಜ್ಞಾನದ ಬಗ್ಗೆ ನೆಟ್ಟಿಗರು ಪ್ರಶ್ನಿಸಿದ್ದರು.

‘‘ಓಲಾ ಹಾಗೂ ಉಬರ್ ಈಗಿನ ಆರ್ಥಿಕ ಹಿಂಜರಿತಕ್ಕೆ ದೊಡ್ಡ ಕೊಡುಗೆ ನೀಡಿಲ್ಲ. ನಿಯಂತ್ರಕ ಸಮಸ್ಯೆಯಿಂದ ಉತ್ಪನ್ನಗಳ ಬೆಲೆ ಹೆಚ್ಚಳ, ಗರಿಷ್ಠ ತೆರಿಗೆ ಹಾಗೂ ವಿಮೆ ದರಗಳಲ್ಲಿ ಹೆಚ್ಚಳ ಸಹಿತ ಹಲವು ಕಾರಣಗಳು ಆಟೋ ಉದ್ಯಮದ ಕುಸಿತಕ್ಕೆ ಕಾರಣವಾಗಿದೆ. ಯಾವುದೇ ತೀರ್ಮಾನಕ್ಕೆ ಬರುವ ಮೊದಲು ನಾವು ಪರಿಶೀಲಿಸಿ, ಅಧ್ಯಯನ ನಡೆಸುವ ಅಗತ್ಯವಿದೆ’’ ಎಂದು ಶ್ರೀವಾಸ್ತವ ಹೇಳಿದರು.

ಓಲಾ ಹಾಗೂ ಉಬರ್ ಕಳೆದ 6-7 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿವೆ. ಈ ಅವಧಿಯಲ್ಲಿ ಆಟೋ ಉದ್ಯಮವು ಉತ್ತಮ ಸಮಯ ಕಂಡಿದೆ. ಕಳೆದ ಕೆಲವು ತಿಂಗಳುಗಳಿಂದ ಕುಸಿತ ತೀವ್ರವಾಗಿ ಪರಿಣಮಿಸಿದೆ. ಓಲಾ ಹಾಗೂ ಉಬರ್‌ನಿಂದ ಹೀಗಾಗಿದೆ ಎಂದು ನನಗನಿಸುತ್ತಿಲ್ಲ.

ಭಾರತದಲ್ಲಿ 46 ಶೇ. ಕಾರು ಖರೀದಿದಾರರು ಮೊದಲ ಬಾರಿ ಬಳಸುವವರಾಗಿದ್ದಾರೆ. ಇದೊಂದು ಸ್ಫೂರ್ತಿದಾಯಕ ನಡವಳಿಕೆ. ಜನರು ವಾರದ ದಿನಗಳಲ್ಲಿ ಕಚೇರಿಗೆ ತೆರಳಲು ಓಲಾ ಹಾಗೂ ಉಬರ್‌ನ್ನು ಬಳಸುತ್ತಾರೆ. ಆದರೆ ಕುಟುಂಬದ ಜೊತೆ ಹೊರಗೆ ಹೋಗುವ ಉದ್ದೇಶಕ್ಕಾಗಿ ಸ್ವಂತ ವಾಹನವನ್ನು ಖರೀದಿಸುತ್ತಾರೆ. ಅಮೆರಿಕದ ಮಾರುಕಟ್ಟೆಯಲ್ಲಿ ಉಬರ್ ಮಹತ್ವದ ಪಾತ್ರವಹಿಸುತ್ತಿದ್ದು, ಅಲ್ಲಿ ಕಾರುಗಳ ಮಾರಾಟದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚಳವಾಗಿದೆ’’ಎಂದು ಶ್ರೀವಾಸ್ತವ ಅಭಿಪ್ರಾಯಪಟ್ಟರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)