varthabharthi

ಕರಾವಳಿ

ಸಂಸದ ನಳಿನ್ ಬಿಜೆಪಿ ಹಾಸ್ಯ ಕಲಾವಿದ: ರಮಾನಾಥ ರೈ

ವಾರ್ತಾ ಭಾರತಿ : 12 Sep, 2019

ಮಂಗಳೂರು, ಸೆ.12: ಕೇಂದ್ರ ತನಿಖಾ ಸಂಸ್ಥೆಗಳು ಯಾರ ಸುಪರ್ದಿಯಲ್ಲಿ ಬರುತ್ತವೆ ಎಂಬ ಕನಿಷ್ಠ ತಿಳಿವಳಿಕೆ ಕೂಡ ಒಬ್ಬ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ಅವರಿಗೆ ಇಲ್ಲ. ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಬಿಜೆಪಿಯ ಹಾಸ್ಯ ಕಲಾವಿದ ಎಂದು ಮಾಜಿ ಸಚಿವ ರಮಾನಾಥ ರೈ ವ್ಯಂಗ್ಯ ನುಡಿದಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ದ.ಕ. ಜಿಲ್ಲಾ ಕಾಂಗ್ರೆಸ್ ಘಟಕ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷವು ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಸರಕಾರದ ಕಾರ್ಯವೈಖರಿ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದೆ. ಬಿಜೆಪಿ ಸರಕಾರ ಜನರ ಕಷ್ಟಗಳಿಗೆ ಸ್ಪಂದನೆ ನೀಡುವ ಕೆಲಸ ಮಾಡುತ್ತಿಲ್ಲ. ಪ್ರವಾಹದಿಂದ ಸಂತ್ರಸ್ತರಾವರಿಗೆ ಇನ್ನೂ ಪರಿಹಾರ ಧನ ನೀಡಿಲ್ಲ ಎಂದು ಹೇಳಿದರು.

ಕೇಂದ್ರ ಸರಕಾರದಿಂದ ಯಾವುದೇ ಅನುದಾನ ಕೂಡ ಪರಿಹಾರ ಕಾರ್ಯಕ್ಕೆ ಬಂದಿಲ್ಲ. ನೆರೆ ಸಂತ್ರಸ್ತರ ಜತೆಗೆ ಸರಕಾರ ಆಟ ಆಡುತ್ತಿದೆ. ತಕ್ಷಣವೇ ಪರಿಹಾರ ನೀಡದೇ ಇದ್ದಲ್ಲಿ ಸರಕಾರದ ವಿರುದ್ಧ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಎಲ್ಲವೂ ತಲೆಕೆಳಗಾಗಿದೆ. ರಸ್ತೆಗಳು ಸಂಪೂರ್ಣ ಹಾಳಾಗಿವೆ. ಅಭಿವೃದ್ಧಿ ಕಡೆಗೆ ಸರಕಾರ ಕಿಂಚಿತ್ತೂ ಗಮನ ನೀಡುತ್ತಿಲ್ಲ. ರಾಜ್ಯದಲ್ಲಿ ಇರುವ ಸರಕಾರಕ್ಕೆ ಯಾವುದೇ ಅಸ್ತಿತ್ವವಿಲ್ಲ, ಅದು ಸತ್ತು ಹೋಗಿದೆ ಎಂದು ರಮಾನಾಥ ರೈ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಮುಖಂಡ ಜೆ. ಆರ್. ಲೋಬೊ, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಹರೀಶ್‌ಕುಮಾರ್, ಎಐಸಿಸಿ ಸದಸ್ಯೆ ಕವಿತಾ ಸನಿಲ್, ಶಶಿಧರ ಹೆಗ್ಡೆ, ಸುಧೀರ್ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)