ಏಕದಿನ, ಟ್ವೆಂಟಿ-20 ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಆಟಗಾರ್ತಿ ಮೆಗಾನ್
ಆ್ಯಂಟಿಗುವಾ,ಸೆ.12: ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಮಹಿಳಾ ಆಟಗಾರ್ತಿ ಎನಿಸಿಕೊಳ್ಳುವ ಮೂಲಕ ಆಸ್ಟ್ರೇಲಿಯದ ವೇಗದ ಬೌಲರ್ ಮೆಗಾನ್ ಶುಟ್ ಇತಿಹಾಸ ನಿರ್ಮಿಸಿದ್ದಾರೆ.
ಮೆಗಾನ್ ವೆಸ್ಟ್ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 24 ರನ್ಗೆ 3 ವಿಕೆಟ್ಗಳನ್ನು ಪಡೆಯುವ ಮೂಲಕ ಈ ಸಾಧನೆ ಮಾಡಿದರು. ಏಕದಿನ ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ಸಾಧಿಸಿದ ಮೊದಲ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾದರು. ಮೆಗಾನ್ ಸಾಹಸದ ನೆರವಿನಿಂದ ಆಸ್ಟ್ರೇಲಿಯ ತಂಡ ಎದುರಾಳಿ ವಿಂಡೀಸ್ನ್ನು 180 ರನ್ಗೆ ಆಲೌಟ್ ಮಾಡಿತು.
ಗೆಲ್ಲಲು 181 ರನ್ ಗುರಿ ಪಡೆದ ಆಸೀಸ್ ತಂಡ ಆರಂಭಿಕ ಆಟಗಾರ್ತಿ ಅಲಿಸ್ಸಾ ಹೀಲಿ(61) ಹಾಗೂ ನಾಯಕಿ ಮೆಗ್ ಲ್ಯಾನಿಂಗ್(58)ಅರ್ಧಶತಕದ ಕೊಡುಗೆ ನೆರವಿನಿಂದ 8 ವಿಕೆಟ್ಗಳಿಂದ ಜಯ ಸಾಧಿಸಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿತು.
9.3 ಓವರ್ ತನಕ ವಿಕೆಟ್ ಪಡೆಯದೇ ಮಿತವ್ಯಯಿ ಸ್ಪೆಲ್ ಎಸೆದಿದ್ದ ಮೆಗಾನ್ವಿಂಡೀಸ್ ಇನಿಂಗ್ಸ್ ನ ಕೊನೆಯ ಮೂರು ಎಸೆತಗಳಲ್ಲಿ ಹೆನ್ರಿ, ಕರಿಶ್ಮಾ ಹಾಗೂ ಫ್ಲೆಚರ್ ವಿಕೆಟ್ ಪಡೆದು ಆತಿಥೇಯರನ್ನು 180 ರನ್ಗೆ ಆಲೌಟ್ ಮಾಡಿದರು.
26ರ ಹರೆಯದ ಮೆಗಾನ್ ಕಳೆದ ವರ್ಷದ ಮಾರ್ಚ್ನಲ್ಲಿ ಭಾರತ ವಿರುದ್ಧ ಟ್ವೆಂಟಿ-20 ಪಂದ್ಯದಲ್ಲಿ ಮೊತ್ತ ಮೊದಲ ಬಾರಿ ಹ್ಯಾಟ್ರಿಕ್ ಪಡೆದಿದ್ದರು. ಮುಂಬೈನಲ್ಲಿ ನಡೆದಿದ್ದ ಪಂದ್ಯದಲ್ಲಿ ಸತತ 3 ಎಸೆತಗಳಲ್ಲಿ ಸ್ಮತಿ ಮಂಧಾನ, ನಾಯಕಿ ಮಿಥಾಲಿ ರಾಜ್ ಹಾಗೂ ದೀಪ್ತಿ ಶರ್ಮಾ ವಿಕೆಟ್ಗಳನ್ನು ಉರುಳಿಸಿದ್ದರು.