varthabharthi

ಸಂಪಾದಕೀಯ

ಅಯೋಧ್ಯೆ ವಿಚಾರಣೆ: ನ್ಯಾಯಾಲಯಕ್ಕೆ ಬೆದರಿಕೆ

ವಾರ್ತಾ ಭಾರತಿ : 13 Sep, 2019

ಬಾಬರಿ ಮಸೀದಿ ಧ್ವಂಸ ಪ್ರಕರಣವನ್ನು ‘ಹಿಂದೂ-ಮುಸ್ಲಿಮ್’ ನಡುವಿನ ವಿವಾದವನ್ನಾಗಿ ಬಿಂಬಿಸುವಲ್ಲಿ ಸಂಘಪರಿವಾರ ಯಶಸ್ವಿಯಾಗಿರುವುದೇ ಆ ಕುರಿತ ವಿಚಾರಣೆಗೆ ಬಹುತೊಡಕಾಗಿ ಪರಿಣಮಿಸಿದೆ. ನಿಜಕ್ಕೂ ಅದು ಒಂದು ಮಸೀದಿಯ ಮೇಲೆ ನಡೆದ ದಾಳಿ ಅದಾಗಿರಲಿಲ್ಲ. ಈ ದೇಶದ ಸಂವಿಧಾನದ ಮೇಲೆ ನಡೆದ ದಾಳಿಯಾಗಿತ್ತು. ನ್ಯಾಯ ವ್ಯವಸ್ಥೆಗೆ ಸಂಘಪರಿವಾರ ಮತ್ತು ಬಿಜೆಪಿ ಜೊತೆ ಸೇರಿ ಮಾಡಿದ ಮಹಾ ವಂಚನೆಯಾಗಿತ್ತು. ಬಾಬರಿ ಮಸೀದಿಯ ಧ್ವಂಸ ಪ್ರಕರಣದ ಆರೋಪಿಗಳಿಗೆ ಶಿಕ್ಷೆಯಾಗುವ ಮೂಲಕ, ಈ ದೇಶದ ಸಂವಿಧಾನಕ್ಕೆ ನ್ಯಾಯ ನೀಡಬೇಕಾಗಿದೆ. ನ್ಯಾಯವ್ಯವಸ್ಥೆ ತನಗಾದ ಅನ್ಯಾಯಕ್ಕೆ ತಾನೇ ತೀರ್ಪು ನೀಡಬೇಕಾದಂತಹ ಸ್ಥಿತಿ ಇದು. ಬಾಬರಿ ಮಸೀದಿ ಧ್ವಂಸವಾಗಿ 27 ವರ್ಷಗಳು ಸಂದಿವೆಯಾದರೂ, ಇನ್ನೂ ಧ್ವಂಸಗೈದ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ. ಬಾಬರಿ ಮಸೀದಿ ಪ್ರಕರಣಗಳಿಗೆ ಎರಡು ಆಯಾಮಗಳಿವೆ.

ಒಂದು, ಧ್ವಂಸ ಪ್ರಕರಣದಲ್ಲಿ ನೇರ ಮತ್ತು ಪರೋಕ್ಷವಾಗಿ ಭಾಗಿಯಾದವರಿಗೆ ಶಿಕ್ಷೆ ನೀಡುವುದು. ಇನ್ನೊಂದು, ಅಯೋಧ್ಯೆಯಲ್ಲಿರುವ ವಿವಾದಾತ್ಮಕ ಸ್ಥಳ ಬಾಬರಿ ಮಸೀದಿಗೆ ಸಂಬಂಧಪಟ್ಟುದೋ ಅಥವಾ ದೇವಾಲಯಕ್ಕೆ ಸಂಬಂಧ ಪಟ್ಟುದೋ ಎನ್ನುವುದನ್ನು ನಿರ್ಧರಿಸುವುದು. ಒಂದೇ ವೇಳೆ ಅಯೋಧ್ಯೆಯಲ್ಲಿರುವುದು ಬಾಬರಿ ಮಸೀದಿಗೆ ಸಂಬಂಧಪಟ್ಟ ಸ್ಥಳವಲ್ಲ, ದೇವಸ್ಥಾನಕ್ಕೆ ಸಂಬಂಧ ಪಟ್ಟ ಸ್ಥಳವೆಂದಾದರೂ ‘ಬಾಬರಿ ಮಸೀದಿ ಧ್ವಂಸ’ ಪ್ರಕರಣ ಸಮರ್ಥನೀಯವಾಗುವುದಿಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಮುಖ್ಯವಾಗಿ ಬಾಬರಿ ಮಸೀದಿ ಕಟ್ಟಡವನ್ನು ‘ಮಸೀದಿ’ ಎಂದು ಕರೆಯುವುದಕ್ಕಿಂತ ಒಂದು ಐತಿಹಾಸಿಕ ಸ್ಮಾರಕವೆನ್ನುವುದೇ ಹೆಚ್ಚು ಸರಿ. ಈ ದೇಶದ ಇತಿಹಾಸದ ಕುರುಹಾಗಿರುವ ಬಾಬರಿ ಮಸೀದಿಯನ್ನು ನ್ಯಾಯಾಲಯದ ಅನುಮತಿಯನ್ನು ಮೀರಿ ಸಹಸ್ರಾರು ಜನರು ಒಟ್ಟಾಗಿ ಹಾಡ ಹಗಲೇ ಕೆಡವಿ ಹಾಕಿರುವುದಕ್ಕೆ ಸಂಬಂಧಿಸಿ, ಅದಕ್ಕೆ ಕಾರಣರಾಗಿರುವ ಒಬ್ಬನೇ ಒಬ್ಬ ಮುಖಂಡನನ್ನು ಗುರುತಿಸಿ ಜೈಲಿಗೆ ತಳ್ಳಲು ಸಾಧ್ಯವಾಗದೇ ಇರುವುದು ಈ ದೇಶದ ಸಂವಿಧಾನಕ್ಕಾಗಿರುವ ಅತಿ ದೊಡ್ಡ ಅವಮಾನವಾಗಿದೆ. ಬಹುಶಃ ಈ ಅವಮಾನದಲ್ಲಿ ಬಿಜೆಪಿ ಮಾತ್ರವಲ್ಲ, ಎಲ್ಲ ಪಕ್ಷಗಳೂ ಸಮಾನ ಪಾತ್ರವಹಿಸಿದೆ. ಯಾಕೆಂದರೆ ಬಾಬರಿ ಮಸೀದಿ ಧ್ವಂಸವಾಗುವಾಗ ಕೇಂದ್ರದಲ್ಲಿದ್ದುದು ಕಾಂಗ್ರೆಸ್ ಸರಕಾರ. ‘ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಭಾಗೀದಾರಿಕೆಯಲ್ಲೇ ಆ ಕಟ್ಟಡವನ್ನು ಧ್ವಂಸಗೊಳಿಸಲಾಯಿತು’ ಎನ್ನುವ ಕಟು ಸತ್ಯವನ್ನು ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‌ನೊಳಗಿರುವ ನಾಯಕರೇ ಒಪ್ಪಿಕೊಳ್ಳುತ್ತಿದ್ದಾರೆ.

ಇದೀಗ ‘ವಿವಾದಿತ ಪ್ರದೇಶ’ ಯಾರಿಗೆ ಸೇರಬೇಕು? ಎನ್ನುವ ಕುರಿತಂತೆ ಸುಪ್ರೀಂಕೋರ್ಟ್‌ನಲ್ಲಿ ಬಿರುಸಿನ ವಿಚಾರಣೆ ನಡೆಯುತ್ತಿದೆ. ಇಂತಹ ಹೊತ್ತಿನಲ್ಲಿ, ಉತ್ತರ ಪ್ರದೇಶದ ಸಚಿವರೊಬ್ಬರು ‘‘ವಿವಾದಿತ ಬಾಬರಿ ಮಸೀದಿ ಜಮೀನಿನಲ್ಲಿ ರಾಮಮಂದಿರ ನಿರ್ಮಿಸುವುದು ಶತಸ್ಸಿದ್ಧ. ಯಾಕೆಂದರೆ ಸುಪ್ರೀಂಕೋರ್ಟ್ ನಮ್ಮ ಕೈಯಲ್ಲಿದೆ’’ ಎಂದು ಸಾರ್ವಜನಿಕವಾಗಿ ಆಡಿದ್ದಾರೆ. ‘ಸುಪ್ರೀಂಕೋರ್ಟ್ ನಮ್ಮ ಕೈಯಲ್ಲಿದೆ’ ಎನ್ನುವ ಸಚಿವನ ಹೇಳಿಕೆ ಇನ್ನೊಂದು ಬಾಬರಿ ಮಸೀದಿ ಧ್ವಂಸಕ್ಕೆ ಸಮವಾಗಿದೆ. ಸುಪ್ರೀಂಕೋರ್ಟ್ ಯಾವುದೇ ಸರಕಾರದ ಅಡಿಯಾಳು ಅಲ್ಲ. ಒಂದು ಸರಕಾರ ಅಸ್ತಿತ್ವಕ್ಕೆ ಬಂದಾಕ್ಷಣ ಆ ಸರಕಾರದ ಸೂಚನೆಯಂತೆ ಸುಪ್ರೀಂಕೋರ್ಟ್ ತೀರ್ಪು ನೀಡುವುದಕ್ಕೆ ಸಾಧ್ಯವಿಲ್ಲ. ಒಂದು ವೇಳೆ ಅದು ಸಾಧ್ಯ ಎಂದಾದರೆ, ಈಗ ನಡೆಯುತ್ತಿರುವ ವಿಚಾರಣೆಗಳಿಗಾದರೂ ಏನು ಅರ್ಥವಿದೆ? ವಿಚಾರಣೆ ನಡೆಸದೆಯೇ ನೇರವಾಗಿ ಸುಪ್ರೀಂಕೋರ್ಟ್ ತೀರ್ಪನ್ನು ಹೇಳಿ ಬಿಡಬಹುದಲ್ಲ? ಈ ಹೇಳಿಕೆಯನ್ನು ಸಂಘಪರಿವಾರದ ಯಾವನೋ ಒಬ್ಬ ಕಾರ್ಯಕರ್ತನೋ, ಮುಖಂಡನೋ ಹೇಳಿದ್ದಿದ್ದರೆ ಅದನ್ನು ಲಘುವಾಗಿ ತೆಗೆದುಕೊಳ್ಳಬಹುದಿತ್ತು. ಆದರೆ ಉತ್ತರ ಪ್ರದೇಶ ಸರಕಾರದ ಸಚಿವನೊಬ್ಬ ಈ ಹೇಳಿಕೆ ನೀಡಿರುವುದು ‘ಸುಪ್ರೀಂಕೋರ್ಟ್‌ನ ವಿಶ್ವಾಸಾರ್ಹತೆ’ಗೆ ಧಕ್ಕೆ ತಂದಿದೆ. ಇದು ಪರೋಕ್ಷವಾಗಿ ನ್ಯಾಯಾಲಯದ ತೀರ್ಪಿನ ಮೇಲೆ ಒತ್ತಡ ಹೇರುವ ಪ್ರಯತ್ನವೂ ಆಗಿದೆ.

ಆದುದರಿಂದ ನ್ಯಾಯಾಲಯವೇ ನೇರವಾಗಿ ಈ ಸಚಿವನ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ. ಇದೇ ಸಂದರ್ಭದಲ್ಲಿ ‘ನ್ಯಾಯಾಲಯದ ವಿಚಾರಣೆ’ಯನ್ನು ಹಳಿ ತಪ್ಪಿಸುವ ಬೇರೆ ಬೇರೆ ಪ್ರಯತ್ನಗಳಲ್ಲಿ ಸಂಘಪರಿವಾರ ತೊಡಗಿದೆ. ಇತ್ತೀಚೆಗಷ್ಟೇ ಬಾಬರಿ ಮಸೀದಿ ವಿವಾದ ಪ್ರಕರಣದ ಮುಖ್ಯ ಕಕ್ಷಿದಾರ ಇಕ್ಬಾಲ್ ಅನ್ಸಾರಿ ಅವರ ಮೇಲೆ ಇಬ್ಬರು ಹಲ್ಲೆ ನಡೆಸಿದ್ದರು. ‘‘ಪ್ರಕರಣವನ್ನು ಹಿಂದೆಗೆದುಕೊಳ್ಳದೇ ಇದ್ದರೆ ಹತ್ಯೆಗೈಯುವುದಾಗಿ’’ ಬೆದರಿಕೆಯನ್ನು ಒಡ್ಡಿದ್ದರು. ಈ ಹಲ್ಲೆ ನಡೆಸಿದವರ ಮೇಲೆ ಸರಕಾರ ಯಾವ ಕ್ರಮ ತೆಗೆದುಕೊಂಡಿದೆ ಎನ್ನುವುದರ ವಿವರ ಮಾತ್ರ ಈವರೆಗೆ ಹೊರ ಬಿದ್ದಿಲ್ಲ. ಇದೀಗ, ಕಕ್ಷಿದಾರರ ಪರವಾಗಿ ವಕಾಲತು ನಡೆಸುತ್ತಿರುವ ನ್ಯಾಯವಾದಿ ರಾಜೀವ್ ಧವನ್ ಅವರನ್ನು ಬೆದರಿಸಲಾಗಿದೆ. ಈ ಕುರಿತಂತೆ ಬೆದರಿಕೆ ಕರೆ ಬಂದಿರುವುದನ್ನು ಧವನ್ ಅವರು ನ್ಯಾಯಾಧೀಶರಿಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲ, ನ್ಯಾಯಾಲಯದ ಆವರಣದಲ್ಲೇ ನ್ಯಾಯವಾದಿಯ ಸಹಾಯಕನ ಮೇಲೆ ಹಲ್ಲೆ ನಡೆಸಲಾಗಿದೆ. ಇದು ದುಷ್ಕರ್ಮಿಗಳ ಹತಾಶ ಪ್ರಯತ್ನವಾಗಿದೆ. ಒಂದೆಡೆ ‘ಭಾವನೆ’ಗಳ ಹೆಸರಲ್ಲಿ ನ್ಯಾಯಾಲಯಕ್ಕೆ ಒತ್ತಡಗಳನ್ನು ಹೇರಲಾಗುತ್ತಿದ್ದರೆ, ಮಗದೊಂದೆಡೆ ‘ಜೀವ ಬೆದರಿಕೆ’ಯ ಮೂಲಕ ಪ್ರಕರಣವನ್ನು ಹಿಂದೆಗೆಯಲು ಕಕ್ಷಿದಾರರಿಗೆ ಒತ್ತಡವನ್ನು ಹೇರಲಾಗುತ್ತಿದೆ. ದುಷ್ಕರ್ಮಿಗಳ ಈ ಪ್ರಯತ್ನವೇ ‘ಅಯೋಧ್ಯೆಯ ವಿವಾದಿತ ಪ್ರದೇಶ’ದ ಹಿಂದಿರುವ ಸತ್ಯ ಏನು ಎನ್ನುವುದನ್ನು ಹೇಳುತ್ತದೆ.

ತಮ್ಮ ಜೊತೆಗೆ ‘ಸತ್ಯ’ ಇದೆ ಎಂದಾದರೆ ಇಂತಹ ಅಕ್ರಮ ದಾರಿಯ ಮೂಲಕ ವಿವಾದಿತ ಪ್ರದೇಶವನ್ನು ತಮ್ಮದಾಗಿಸುವ ಅಗತ್ಯವಿದೆಯೇ? ಅಸತ್ಯ, ಅಕ್ರಮಗಳ ಮೂಲಕ ಪಡೆಯುವ ಜಮೀನಿನಲ್ಲಿ ರಾಮಮಂದಿರವನ್ನು ಕಟ್ಟಿದರೂ ಅಲ್ಲಿ ‘ಸತ್ಯ ಸಂಧ’ ರಾಮ ನೆಲೆಸುವುದಕ್ಕೆ ಸಾಧ್ಯವಿದೆಯೇ? ಹಾಗೆ ನಿರ್ಮಿಸಿದ ಮಂದಿರ ಸಂಘಪರಿವಾರದ ‘ರಾಜಕೀಯ ಕಟ್ಟಡ’ವಾಗಬಹುದೇ ಹೊರತು ‘ದೇವಾಲಯ’ವಾಗಲಾರದು. ಬಾಬರಿಮಸೀದಿಗೆ ಸಂಬಂಧ ಪಟ್ಟ ಎಲ್ಲ ಪ್ರಕರಣಗಳೂ ನ್ಯಾಯಾಲಯದಲ್ಲಿ ಪಾರದರ್ಶಕವಾಗಿ ವಿಚಾರಣೆ ನಡೆಯಲು ಅವಕಾಶ ನೀಡಬೇಕಾಗಿದೆ. ಈ ವಿಚಾರಣೆಯ ಸಂದರ್ಭದಲ್ಲಿ ನಡೆಸುವ ಒತ್ತಡ, ಬೆದರಿಕೆ ಎಲ್ಲವೂ ಸಂವಿಧಾನದ ಮೇಲೆ ನಡೆಯುವ ನೇರ ದಾಳಿಯಾಗಿದೆ. ಬಾಬರಿ ಮಸೀದಿ ವಿಚಾರಣೆ ಯಶಸ್ವಿಯಾಗಿ ನಡೆಯುವಂತೆ ನೋಡಿಕೊಳ್ಳುವ ಮೂಲಕ ಸಂವಿಧಾನವನ್ನು ನಾವು ಉಳಿಸಬೇಕಾಗಿದೆ. ಉಭಯ ಗುಂಪು ಸುಪ್ರೀಂಕೋರ್ಟ್‌ನ ತೀರ್ಪಿಗೆ ತಲೆಬಾಗಬೇಕು. ನಮ್ಮ ಸಂವಿಧಾನವನ್ನು ದಫನಮಾಡಿ ಅದರ ಮೇಲೆ ಕಟ್ಟುವ ಮಂದಿರ ಅಥವಾ ಮಸೀದಿ ಈ ದೇಶಕ್ಕೆ ಒಳ್ಳೆಯ ಭವಿಷ್ಯವನ್ನು ನೀಡಲಾರದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)