varthabharthi

ವೈವಿಧ್ಯ

ಇಂದು ನಾರಾಯಣ ಗುರುಗಳ ಜಯಂತಿ

ಶೋಷಿತ ಸಮುದಾಯಗಳಲ್ಲಿ ಅರಿವು ಮೂಡಿಸಿದ ನಾರಾಯಣ ಗುರು

ವಾರ್ತಾ ಭಾರತಿ : 13 Sep, 2019
ಡಾ. ಕೆ. ಪಿ. ಮಹಾಲಿಂಗು ಕಲ್ಕುಂದ

‘‘ಶೋಷಿತರು ವಿದ್ಯೆಯೆಂಬ ಸಂಪತ್ತನ್ನು ಸಾಧಿಸಿದಾಗ ಜೀವನ ಸುಧಾರಿಸುತ್ತದೆ’’ ಎಂದ ನಾರಾಯಣ ಗುರುಗಳು ‘‘ಮನುಷ್ಯ ಯಾವ ಧರ್ಮ, ಯಾವ ಜಾತಿಯಾದರೇನು? ಶುದ್ಧ ಜೀವನ ನಡೆಸಲು ಆತ್ಮಾಭಿಮಾನ ಪ್ರಮುಖವಾದ ಅಂಶ’’ ಎನ್ನುತ್ತಾರೆ. ಕರುಣೆಯಿಂದ ದುಷ್ಟರು ಕೂಡಾ ಬದಲಾಗುತ್ತಾರೆ. ಮನುಷ್ಯನಾದವನು ಮನುಷ್ಯಕುಲಕ್ಕೆ ಆದರ್ಶವಾಗಿರಬೇಕು ಎನ್ನುವ ಅವರು ಜಾತಿ, ಮತ, ದೇವರ ವಿಚಾರದಲ್ಲಿ ಭೇದ-ಭಾವ ತೊಡೆದುಹಾಕಲು ‘‘ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು’’ ಎಂಬ ತತ್ವವನ್ನು ಸಾರುತ್ತಾರೆ. ‘‘ಜಾತಿಯ ಬಗ್ಗೆ ಕೇಳಬೇಡ, ಜಾತಿಯನ್ನು ಹೇಳಬೇಡ, ಜಾತಿಯ ಬಗ್ಗೆ ಚಿಂತಿಸಬೇಡ’’ ಎಂಬ ಧ್ಯೆಯ ವಾಕ್ಯವನ್ನು ಜನರಲ್ಲಿ ಬಿತ್ತುತ್ತಾರೆ.

ಸ್ವಾತಂತ್ರ್ಯಪೂರ್ವದಿಂದಲೂ ಅನೇಕ ಸಂತರು, ದಾರ್ಶನಿಕರು ಭಕ್ತಿಪಂಥ ಚಳವಳಿಯ ಮೂಲಕ ಜಾತಿ ಮತ್ತು ಅಸ್ಪಶ್ಯತೆಯಂತಹ ಅಸಮಾನತೆಯ ವಿರುದ್ಧ್ದ ಹೋರಾಡುತ್ತಾ ಬಂದಿದ್ದಾರೆ. ಇಂತಹವರಲ್ಲಿ ಬುದ್ದ, ರಾಜಾರಾಮ್ ಮೋಹನ್ ರಾಯ್, ಕ್ರಾಂತಿಕಾರಿ ಬಸವಣ್ಣ, ಜ್ಯೋತಿ ಬಾ ಫುಲೆ, ಪೆರಿಯಾರ್ ರಾಮಸ್ವಾಮಿ, ಡಾ. ಅಂಬೇಡ್ಕರ್, ಮಹಾತ್ಮಾ ಗಾಂಧಿ ಮುಂತಾದವರನ್ನು ಕಾಣಬಹುದು. 18ನೇ ಶತಮಾನದಲ್ಲಿ ಕೇರಳ, ತಮಿಳುನಾಡು, ಕರ್ನಾಟಕದ ಪ್ರದೇಶಗಳಲ್ಲಿ ಅಸ್ಪಶ್ಯತೆ ಎಂಬುದು ಎಲ್ಲೆಮೀರಿ ವರ್ತಿಸುತ್ತಿತ್ತು. ಶೋಷಿತರು ಕೆರೆ, ಬಾವಿ, ನೀರನ್ನು ಕುಡಿಯುವುದಿರಲಿ, ಮುಟ್ಟುವಂತಿರಲಿಲ್ಲ. ದೇವಸ್ಥಾನ ಮುಂತಾದ ಸಾರ್ವಜನಿಕ ಸ್ಥಳಗಳಿಗೆ ದಲಿತರಿಗೆ ಪ್ರವೇಶಗಳಿರಲಿಲ್ಲ. ಅನೇಕ ಶೋಷಿತ ವರ್ಗದ ಜನರು ತಲೆಗಂದಾಯ ನೀಡಿ ಬದುಕಬೇಕಿತ್ತು. ಸ್ತ್ರೀಯರು ಕುಪ್ಪಸ ತೊಡುವಂತಿರಲಿಲ್ಲ. ಸೆರಗಿನಿಂದ ಮೈ ಮುಚ್ಚಿಕೊಳ್ಳುವಂತಿರಲಿಲ್ಲ. ಹೊಸಬಟ್ಟೆ, ಜರಿಸೀರೆ ವಸ್ತ್ರಗಳನ್ನು ಮತ್ತು ಚಿನ್ನ, ಬೆಳ್ಳಿ ಆಭರಣಗಳನ್ನು ಧರಿಸುವಂತಿರಲಿಲ್ಲ. ಚಪ್ಪಲಿ ಧರಿಸುವಂತಿರಲಿಲ್ಲ. ಮಳೆ/ಬಿಸಿಲಿನಿಂದ ರಕ್ಷಣೆ ಪಡೆಯಲು ಕೊಡೆ ಬಳಸುವಂತಿರಲಿಲ್ಲ. ಇಂತಹ ಹೀನ ಸಂಸ್ಕೃತಿ ಹೆಂಗಸರು/ಗಂಡಸರು ಇಬ್ಬರಿಗೂ ಇತ್ತು. ಗಂಡಸರು/ಹೆಂಗಸರು ಇಬ್ಬರೂ ಪಂಚೆ/ಸೀರೆಯನ್ನು ಮೊಣಕಾಲಿನವರೆಗೂ ಬಿಡುವಂತಿರಲಿಲ್ಲ. ಹೀಗೆ, ಘೋಷಿತ ವಸ್ತ್ರಸಂಹಿತೆ ಕೇರಳದಲ್ಲಿ ಜಾರಿಯಲ್ಲಿತ್ತು. ಮೇಲ್ವರ್ಗದ ನಂಬೂದರಿಗಳನ್ನು ಕಂಡರೆ, ಕ್ಷತ್ರಿಯರು 2-3 ಅಡಿ, ನಾಯರ್‌ಗಳು 16 ಅಡಿ, ಈಳವರು 32 ಅಡಿ, ಪಲಯ, ಪರೆಯರು 64 ಅಡಿ ದೂರ ನಿಲ್ಲಬೇಕಿತ್ತು. ನಾಯಾಡಿಗಳಂತೂ ಮೇಲ್ವರ್ಗದವರ ಕಣ್ಣಿಗೆ ಬೀಳಲೇ ಬಾರದು. ಒಂದು ವೇಳೆ ಬಿದ್ದರೆ, ಉಗ್ರವಾದ ಶಿಕ್ಷೆ ಇರುತ್ತಿತ್ತು. ನಂಬೂದರಿ ಜನರು ಬರುತ್ತಿದ್ದರೆ, ಓಹೋ ಎಂದು ಕೂಗಿ ಅವರಿಗೆ ಸೂಚನೆ ನೀಡಿ, ಅವರಿಂದ ದೂರ ನಿಲ್ಲಬೇಕಿತ್ತು. ಮನೆಯಿಂದ ಹೊರ ಹೋಗಬೇಕಾದರೆ, ಉಗುಳು ಉಗಿಯಲು ಕೊರಳಿಗೆ ಮಡಿಕೆ, ತಾವು ನಡೆದ ಹೆಜ್ಜೆಯನ್ನು ಅಳಿಸಿ ಮುನ್ನಡೆಯಲು ಸೊಂಟಕ್ಕೆ ಪೊರಕೆ ಕಟ್ಟಿಕೊಂಡಿರಬೇಕಿತ್ತು. ನಾಯಾಡಿಗಳನ್ನು ನಂಬೂದರಿಗಳು ಅಪಶಕುನವೆಂದು ಕರೆಯುತ್ತಿದ್ದರು. ಮುಂದುವರೆದು, ದೇವದಾಸಿ ಪದ್ಧತಿ, ಮುಂಡುಕೋಡು, ಪಾಂಡವಾಚಾರಿ ಪದ್ಧತಿಗಳು ನಂಬೂದರಿ ಬ್ರಾಹ್ಮಣರಿಂದ ಜಾರಿಯಲ್ಲಿದ್ದವು.

ಹೀಗೆ, ನಂಬೂದರಿ ಬ್ರಾಹ್ಮಣರು ಜಾತಿಯಲ್ಲಿ ಮೇಲಿದ್ದರೆ, ಈಳವ, ಪರಯ, ಪುಳಯ, ಕುರುಚಿ, ನಾಯಾಡಿ ಮುಂತಾದವರು ಕೆಳಸ್ಥರದ ಶೂದ್ರ ವರ್ಗ ಕೇರಳದಲ್ಲಿ ಅತ್ಯಂತ ಹೀನಾಯವಾಗಿ ಬದುಕುತ್ತಿದ್ದರು. ಇಂತಹ ಸಂದರ್ಭದಲ್ಲಿ ಆಗಸ್ಟ್ 1856ರಂದು ಮಾಡನ್ ಅಸನ್ ಮತ್ತು ಕುಟ್ಟಿಯಮ್ಮಾಳ್ ದಂಪತಿಯ ಮಗನಾಗಿ ಕೇರಳದ ತಿರುವನಂತಪುರ ಜಿಲ್ಲೆಯ ಚೆಂಬಳಾಂತಿ ಗ್ರಾಮದಲ್ಲಿ ‘ನಾಣು’ವಾಗಿ ನಾರಾಯಣ ಗುರುಗಳು ಹುಟ್ಟುತ್ತಾರೆ. ಬಾಲ್ಯದಿಂದಲೇ ಅಸ್ಪಶ್ಯತೆಯ ನೋವನ್ನು ಅನುಭವಿಸುತ್ತಾರೆ. ಶೋಷಿತರ ಇಂತಹ ಹೀನ ಸ್ಥಿತಿ ಬದಲಿಸಲು, ಅವರಲ್ಲಿ ಸಮಾನತೆ ಸ್ಥಾಪಿಸಲು ಆಧ್ಯಾತ್ಮಿಕ ಹಾದಿಯಲ್ಲಿ ಸಾಗುತ್ತಾರೆ. ಸಾಮಾಜಿಕ ಸುಧಾರಣೆ ಮಾಡಲು ನಾರಾಯಣ ಗುರುಗಳು ಅನೇಕ ದೇವಸ್ಥಾನಗಳನ್ನು ನಿರ್ಮಿಸುತ್ತಾರೆ. ಅವರ ನಿರ್ಮಾಣದ ದೇವಸ್ಥಾನಗಳಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಹೀಗೆ, ಎಲ್ಲ ಧರ್ಮದವರಿಗೆ ಮುಕ್ತ ಅವಕಾಶ ನೀಡುವುದಲ್ಲದೇ ಶೋಷಿತರಾದ ಅಸ್ಪಶ್ಯರಿಗೆ ‘‘ನೀವು ವ್ಯೆದಿಕರ ನಿರ್ಮಾಣದ ದೇವಸ್ಥಾನಗಳಿಗೆ ಹೋಗಬೇಡಿ. ದೇವಸ್ಥಾನಗಳಲ್ಲಿ ದುಂದುವೆಚ್ಚದ ಪೂಜೆ ನಿಮ್ಮ ಆರ್ಥಿಕತೆಗೆ ದಕ್ಕೆ ತರುತ್ತದೆ. ನಿಮ್ಮ ನಿಮ್ಮ ಕೇರಿಗಳಲ್ಲೇ ದೇವಸ್ಥಾನ ನಿರ್ಮಿಸಿ ಒಂದು ಕಲ್ಲನ್ನು ಶಿವನೆಂದು ಪೂಜಿಸಿ, ದೇವರ ಆರಾಧಿಸಲು ಒಂದು ಕಲ್ಲು, ಒಂದು ಕನ್ನಡಿ, ಒಂದು ಹೂವು ಸಾಕು. ದೇವರು ಸರ್ವರಲ್ಲೂ ಇರುತ್ತಾನೆ. ಒಳ್ಳೆಯ ರೀತಿ ಜನರ ಕೆಲಸ ಮಾಡುವವನೇ ನಿಜವಾದ ದೇವರು. ಸರಳ ಪೂಜೆ ಮಾಡಿ ದೇವರನ್ನು ಆರಾಧಿಸಿ’’ ಎಂದು ಬೋಧಿಸುತ್ತಾರೆ. ಜಾತಿ ತಾರತಮ್ಯ, ಮೂಢನಂಬಿಕೆ, ಬಲಿ ಪೂಜೆ ಮುಂತಾದ ಕಂದಾಚಾರಗಳ ವಿರುದ್ಧ್ಧ ಜನ ಜಾಗೃತಿ ಮೂಡಿಸುತ್ತಾರೆ. ನಿಮ್ಮ ಮಕ್ಕಳಿಗೆ ಶಿಕ್ಷಣ ನೀಡಿ ಎಂದು ದೇವಸ್ಥಾನಗಳಲ್ಲಿ ರಾತ್ರಿ ಶಾಲೆಗಳನ್ನು ಪ್ರಾರಂಭಿಸುತ್ತಾರೆ. ಅಲ್ಲಿ ಇಂಗ್ಲಿಷ್, ಸಂಸ್ಕೃತ, ಮುಂತಾದವುಗಳನ್ನು ಕಲಿಸುತ್ತಾರೆ. ಹೀಗೆ, ವ್ಯೆದಿಕ ಸಂಸ್ಕೃತಿಯ ವಿರುದ್ಧ್ಧ ನಾರಾಯಣ ಗುರುಗಳು ಸಿಡಿದೇಳುತ್ತಾರೆ. ನಾರಾಯಣ ಗುರುಗಳು ತಮ್ಮ ಜೀವಿತದ ಅವಧಿಯಲ್ಲಿ ಶೋಷಿತ ಸಮುದಾಯಗಳಿಗಾಗಿ ಸುಮಾರು 70 ದೇವಸ್ಥಾನಗಳನ್ನು ಕಟ್ಟಿಸುತ್ತಾರೆ. ಸಾಮಾಜಿಕ ಸುಧಾರಣೆಗಾಗಿ 1903ರಲ್ಲಿ ಅವರು ಎಸ್.ಎನ್.ಡಿ.ಪಿ. (ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ) ಎಂಬ ಸಂಸ್ಥೆ ಸ್ಥಾಪಿಸಿ ಸಮಾಜ ಸುಧಾರಣೆ ಮಾಡುತ್ತಾರೆ. ಅಸ್ಪಶ್ಯತೆ ಆಚರಣೆ ವಿರುದ್ಧ್ದ ವೈಕಂ ಚಳವಳಿ ನಡೆಸುತ್ತಾರೆ. ಅದು ಆ ಕಾಲದ ಈ ಮಹಾ ಹೋರಾಟವಾಗಿತ್ತು. ವೈಕಂ ಚಳವಳಿಗೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಮತ್ತು ಅವರ ಕಾಂಗ್ರೆಸ್ ಪಕ್ಷದಿಂದ ನೈತಿಕ ಬೆಂಬಲ ಸಿಗುತ್ತದೆೆ. ದ್ರಾವಿಡರ ಚಳವಳಿಯ ಅಗ್ರಗಣ್ಯ ನಾಯಕ ರಾಮಸ್ವಾಮಿ ಪೆರಿಯಾರ್ ಚಳವಳಿಯ ಒಂದು ಭಾಗವಾಗಿ ನಿಲ್ಲುತ್ತಾರೆ. ನೂರಾರು ಜನ ಜೈಲು ಶಿಕ್ಷೆ ಅನುಭವಿಸುತ್ತಾರೆ. ಕೆಲವರು ಸಾವಿಗೀಡಾಗುತ್ತಾರೆ. ‘‘ಶೋಷಿತರು ವಿದ್ಯೆಯೆಂಬ ಸಂಪತ್ತನ್ನು ಸಾಧಿಸಿದಾಗ ಜೀವನ ಸುಧಾರಿಸುತ್ತದೆ’’ ಎಂದ ಅವರು ‘‘ಮನುಷ್ಯ ಯಾವ ಧರ್ಮ, ಯಾವ ಜಾತಿಯಾದರೇನು? ಶುದ್ಧ ಜೀವನ ನಡೆಸಲು ಆತ್ಮಾಭಿಮಾನ ಪ್ರಮುಖವಾದ ಅಂಶ’’ ಎನ್ನುತ್ತಾರೆ. ಕರುಣೆಯಿಂದ ದುಷ್ಟರು ಕೂಡಾ ಬದಲಾಗುತ್ತಾರೆ. ಮನುಷ್ಯನಾದವನು ಮನುಷ್ಯಕುಲಕ್ಕೆ ಆದರ್ಶವಾಗಿರಬೇಕು ಎನ್ನುವ ಅವರು ಜಾತಿ, ಮತ, ದೇವರ ವಿಚಾರದಲ್ಲಿ ಭೇದ-ಭಾವ ತೊಡೆದುಹಾಕಲು ‘‘ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು’’ ಎಂಬ ತತ್ವವನ್ನು ಸಾರುತ್ತಾರೆ. ‘‘ಜಾತಿಯ ಬಗ್ಗೆ ಕೇಳಬೇಡ, ಜಾತಿಯನ್ನು ಹೇಳಬೇಡ, ಜಾತಿಯ ಬಗ್ಗೆ ಚಿಂತಿಸಬೇಡ’’ ಎಂಬ ಧ್ಯೆಯ ವಾಕ್ಯವನ್ನು ಜನರಲ್ಲಿ ಬಿತ್ತುತ್ತಾರೆ. ಹೀಗಾಗಿ, ನಾರಾಯಣ ಗುರುಗಳ ತತ್ವ, ಸಿದ್ಧಾಂತ ಮತ್ತು ಅದರ್ಶಗಳು ಸರ್ವಕಾಲಕ್ಕೂ ಬೆಳಕು ಚೆಲ್ಲುವ ನಡೆಗಳು. ಜನರು ಅವರ ತತ್ವಗಳನ್ನು ಸರಿಯಾಗಿ ಪಾಲಿಸಿಕೊಂಡು ಮುಂದುವರಿಯಬೇಕು. ಶ್ರೀ ನಾರಾಯಣ ಗುರುಗಳು ಆಧ್ಯಾತ್ಮಿಕ ಚಿಂತಕರು ಮಾತ್ರವಲ್ಲ, ಸಮಾಜದಲ್ಲಿ ಬೇರೂರಿದ್ದ ಮೇಲು ಕೀಲು, ಜಾತಿ ತಾರತಮ್ಯಗಳಂತಹ ಪಿಡುಗುಗಳ ವಿರುದ್ಧ್ದ ಜನ ಜಾಗೃತಿ ಮೂಡಿಸಿದ ಶ್ರೇಷ್ಠ ಸಮಾಜ ಸುಧಾರಕರಾಗಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)