varthabharthi

ವೈವಿಧ್ಯ

ಆರೋಗ್ಯ

ಪ್ರಕೃತಿಯ ನೈಸರ್ಗಿಕ ಪ್ರತಿಜೀವಕಗಳು

ವಾರ್ತಾ ಭಾರತಿ : 13 Sep, 2019

ಅಬೂಬಕರ್ ಕಾರ್ಕಳ

ಪ್ರತಿಜೀವಕಗಳು (antibiotics) ನಿಸ್ಸಂದೇಹವಾಗಿ ಮಾನವೀಯತೆಯ ಶ್ರೇಷ್ಠ ಆವಿಷ್ಕಾರಗಳಲ್ಲಿ ಒಂದಾಗಿದೆ. ವಿವಿಧ ಸೋಂಕುಗಳಿಂದ ಸಾವನ್ನಪ್ಪುವ ಜನರ ಪ್ರಾಣವನ್ನು ಉಳಿಸಲು ಅವು ಸಹಾಯ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಔಷಧೀಯ(ಫಾರ್ಮಸಿಟಿಕಲ್) ಪ್ರತಿಜೀವಕಗಳ ಸಮಸ್ಯೆಗಳೆಂದರೆ ವೈರಸ್‌ಗಳು ಅಥವಾ ಶಿಲೀಂಧ್ರಗಳಿಂದ ಉಂಟಾಗುವ ಸೋಂಕುಗಳಿಗೆ ಅವುಗಳಿಂದ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಇದರರ್ಥ ಶೀತ, ಜ್ವರ, ಅನೇಕ ರೀತಿಯ ಕೆಮ್ಮು ಮತ್ತು ನೋಯುತ್ತಿರುವ ಗಂಟಲಿನ ಸೋಂಕುಗಳು ಪ್ರತಿಜೀವಕಗಳ ಚಿಕಿತ್ಸೆಯಿಂದ ಪ್ರತಿರಕ್ಷಿತ(immune)ವಾಗಿರುತ್ತವೆ. ಪ್ರತಿಜೀವಕಗಳ ಮತ್ತೊಂದು ಸಮಸ್ಯೆ ಈ ದಿನಗಳಲ್ಲಿ ಅವುಗಳು ಕೆಲವೊಮ್ಮೆ ಹೆಚ್ಚು ಶಿಫಾರಸು ಮಾಡಲ್ಪಡುತ್ತವೆ. ಇದು ಅಪಾಯಕಾರಿ. ಏಕೆಂದರೆ ಪ್ರತಿಜೀವಕಗಳ ದುರುಪಯೋಗ ಮತ್ತು ಅತಿಯಾದ ಬಳಕೆಯು ಪ್ರತಿಜೀವಕ ನಿರೋಧಕತೆಗೆ ಕಾರಣವಾಗಬಹುದು. ಪ್ರತಿಜೀವಕವು ಬ್ಯಾಕ್ಟೀರಿಯಾವನ್ನು ನಿಯಂತ್ರಿಸುವ ಅಥವಾ ಕೊಲ್ಲುವ ಸಾಮರ್ಥ್ಯವನ್ನು ಕಳೆದುಕೊಂಡಾಗ ಇದು ಸಂಭವಿಸುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಬ್ಯಾಕ್ಟೀರಿಯಾಗಳು ತಮ್ಮ ಶಕ್ತಿಯನ್ನು ವರ್ಧಿಸುತ್ತದೆ ಮತ್ತು ಅವು ಹೆಚ್ಚುತ್ತಲೇ ಇರುತ್ತವೆ. ಪ್ರತಿಜೀವಕದ ಉಪಸ್ಥಿತಿಯ ಹೊರತಾಗಿಯೂ, ಸೋಂಕು ಉಲ್ಬಣಗೊಳ್ಳುತ್ತದೆ. ಇದಕ್ಕಾಗಿ, ಇತರ ಬಲವಾದ ಔಷಧಿಗಳನ್ನು ಪ್ರಯತ್ನಿಸಬೇಕು ಮತ್ತು ಆಕ್ರಮಣಕಾರಿ ಬ್ಯಾಕ್ಟೀರಿಯಾವನ್ನು ಕೊಲ್ಲಬೇಕು. ಕೆಲವು ಬಾರಿ ಇದು ಸಾಧ್ಯವಿಲ್ಲ, ಇದು ಇನ್ನಿತರ ತೀವ್ರ ಪರಿಣಾಮಗಳಿಗೆ ಕಾರಣವಾಗುತ್ತದೆ.

ಒಳ್ಳೆಯ ಸುದ್ದಿ ಏನೆಂದರೆ ಪ್ರಕೃತಿಯು ನಮಗೆ ಅನೇಕ ನೈಸರ್ಗಿಕ ಪ್ರತಿಜೀವಕಗಳನ್ನು (ಆ್ಯಂಟಿಬಯೋಟಿಕ್ಸ್)ಹೊಂದಿರುವ ಅಹಾರ ವಸ್ತುಗಳನ್ನು ನೀಡಿದೆ. ಅವುಗಳನ್ನು ನಾವು ಪ್ರತಿನಿತ್ಯ ಆಹಾರ ವಸ್ತುವಾಗಿ ಬಳಕೆ ಮಾಡುತ್ತೇವೆ. ಆದರೆ ನಾವು ಇವುಗಳಲ್ಲಿ ಅಡಕವಾಗಿರುವ ಅನೇಕ ಘಟಕಾಂಶಗಳ ಬಗ್ಗೆ ಅರಿಯುವ ಗೋಜಿಗೆ ಹೋಗಿಲ್ಲ. ಇವುಗಳು ಅನೇಕ ಸೋಂಕುಗಳ ವಿರುದ್ಧ ಹೋರಾಡಲು ಸಹ ಸಹಾಯ ಮಾಡುತ್ತವೆ. ತೀವ್ರವಾದ ಸೋಂಕುಗಳಿಗೆ ಚಿಕಿತ್ಸೆ ನೀಡಲು ಅವು ಸಾಕಾಗುವುದಿಲ್ಲ. ಆದರೆ, ಅವು ಕೆಲವೊಮ್ಮೆ ನಿಮ್ಮ ವೈದ್ಯರು ಸೂಚಿಸಿರುವ ಜೊತೆಗೆ ಸಹಾಯಕ ಚಿಕಿತ್ಸೆಯಾಗಿ ಉಪಯುಕ್ತವಾಗಬಹುದು. ಇವುಗಳಲ್ಲಿ ಕೆಲವೊಂದರ ಬಗ್ಗೆ ತಿಳಿಯೋಣ.

►ಬೆಳ್ಳುಳ್ಳಿ(garlic)

ಅನೇಕ ಆಹಾರ ಪ್ರಿಯರಿಗೆ ಪ್ರಿಯವಾದ ಈ ಪುಟ್ಟ ಬಲ್ಬ್ ವಿಜ್ಞಾನದ ಪ್ರಕಾರ, ನೈಸರ್ಗಿಕ ಪ್ರತಿಜೀವಕವಾಗಿದ್ದು, ಆಂಟಿವೈರಲ್ ಮತ್ತು ಆ್ಯಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದೆ. 1999ರಲ್ಲಿ ನಡೆಸಿದ ಅಧ್ಯಯನವು ಬೆಳ್ಳುಳ್ಳಿಯಲ್ಲಿ ಆಲಿಸಿನ್ ಎಂಬ ಸಲ್ಫರ್ ಸಂಯುಕ್ತಗಳನ್ನು ಹೊಂದಿದೆ ಎಂದು ಕಂಡುಹಿಡಿದಿದೆ. ಇವು ನೈಸರ್ಗಿಕ ಪ್ರತಿಜೀವಕಗಳಾಗಿ ಕಾರ್ಯನಿರ್ವಹಿಸುತ್ತವೆ. 2011ರಲ್ಲಿ ನಡೆಸಿದ ಅಧ್ಯಯನವು ಬೆಳ್ಳುಳ್ಳಿಯನ್ನು ಸಾರ ರೂಪದಲ್ಲಿ ಪ್ರಯೋಗಕ್ಕೊಳಪಡಿಸಿದಾಗ ಹಿಂದಿನ ಅಧ್ಯಯನದ ಸಂಶೋಧನೆಗಳನ್ನು ದೃಢ ಪಡಿಸಿತು. ಅವು ಸೂಕ್ಷ್ಮಜೀವಿಗಳನ್ನು ಕೊಲ್ಲುವ ಸಾಮರ್ಥ್ಯ ಹೊಂದಿದೆ. ದೇಹಕ್ಕೆ ಪ್ರಯೋಜನಕಾರಿಯಾದ ವೈವಿಧ್ಯಮಯ ಜೀವಸತ್ವಗಳು, ಖನಿಜಗಳು ಮತ್ತು ಪೋಷಕಾಂಶಗಳಿವೆ.

 ಬೆಳ್ಳುಳ್ಳಿಯಲ್ಲಿ ಕ್ಯಾಲೊರಿ ಕಡಿಮೆ ಇದೆ, ಆದರೆ ಇವುಗಳಲ್ಲಿ ಮ್ಯಾಂಗನೀಸ್, ವಿಟಮಿನ್ ಬಿ 6 ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಇದರಲ್ಲಿ ಗಮನಾರ್ಹ ಪ್ರಮಾಣದ ಕಬ್ಬಿಣ, ವಿಟಮಿನ್ ಬಿ 1, ರಂಜಕ, ಪೊಟ್ಯಾಸಿಯಮ್ ಮತ್ತು ತಾಮ್ರವೂ ಇದೆ.

ಕರುಳಿನ ಪರಾವಲಂಬಿಯನ್ನು ಕೊಲ್ಲಲು ಬೆಳ್ಳುಳ್ಳಿ ಸಹಾಯ ಮಾಡುತ್ತದೆ. ಇದನ್ನು ಪ್ರತಿದಿನ 2 ಅಥವಾ 3 ಹಸಿ ಬೆಳ್ಳುಳ್ಳಿ ಎಸಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬಹುದು ಹಾಗೂ ಅಡುಗೆಯಲ್ಲಿ ಬೆಳ್ಳುಳ್ಳಿಯನ್ನು ಸೇರಿಸಬಹುದು. ವಿವಿಧ ರೋಗಗಳು ಮತ್ತು ರೋಗಕಾರಕಗಳಿಂದ ರಕ್ಷಿಸಿಕೊಳ್ಳಲು ಬೆಳ್ಳುಳ್ಳಿ ಪೂರಕಗಳನ್ನು ಸಹ ತೆಗೆದುಕೊಳ್ಳಬಹುದು. ಆದರೆ ಯಾವುದೇ ಪೂರಕಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಬೆಳ್ಳುಳ್ಳಿ ಸೇವಿಸುವುದು ಸುರಕ್ಷಿತವಾಗಿದೆ, ಆದರೆ ಇದರ ದೊಡ್ಡ ಪ್ರಮಾಣದ ಸೇವನೆ ಆಂತರಿಕ ರಕ್ತಸ್ರಾವವಾಗುವ ಸಾಮರ್ಥ್ಯವಿದೆ. ಬೆಳ್ಳುಳ್ಳಿ ಪೂರಕ ಅಥವಾ ಸಾರವನ್ನು ಪರಿಗಣಿಸುವಾಗ ಇದು ಮುಖ್ಯವಾಗುತ್ತದೆ. ಶಿಫಾರಸು ಮಾಡಿದ ಪ್ರಮಾಣವನ್ನು ಮೀರಬಾರದು. ರಕ್ತ ತೆಳುವಾಗುತ್ತಿರುವ ಔಷಧಿಗಳನ್ನು ತೆಗೆದುಕೊಳ್ಳುವ ಜನರು ಪ್ರತಿಜೀವಕ ಉದ್ದೇಶಗಳಿಗಾಗಿ ಬೆಳ್ಳುಳ್ಳಿಯನ್ನು ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು. ಬೆಳ್ಳುಳ್ಳಿ ಈ ರೀತಿಯ ಔಷಧದ ಪರಿಣಾಮಗಳನ್ನು ವರ್ಧಿಸುತ್ತದೆ ಎಂಬುದನ್ನು ನೆನಪಿಡಿ.

►ಅರಿಶಿನ (turmeric)

  ಅರಿಶಿನ ಎಂಬ ಪದವು ‘ಕೇಸರಿ’ ಎಂಬ ಪರ್ಷಿಯನ್ ಪದದಿಂದ ಬಂದಿದೆ. ಇದನ್ನು ‘ಸೂಪರ್‌ಫುಡ್’ ಗುಣಲಕ್ಷಣಗಳಿಗಾಗಿ ಶತಮಾನಗಳಿಂದ ಚೀನೀ ಮತ್ತು ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತಿದೆ. ಆಹಾರ ಪದಾರ್ಥಗಳಿಗೆ ಹಳದಿ ಬಣ್ಣವನ್ನು ನೀಡುವಲ್ಲಿ ಹೆಸರುವಾಸಿಯಾದ ಅರಿಶಿನವು ರುಚಿಯಾದ ಮಸಾಲೆ ನೀಡುವುದು ಮಾತ್ರವಲ್ಲದೇ ಅರಿಶಿನವು ಪ್ರತಿಜೀವಕ ಲಕ್ಷಣಗಳನ್ನು ಹೊಂದಿದೆ, ಜೊತೆಗೆ ಉರಿಯೂತ ನಿವಾರಿಸುತ್ತದೆ ಇದು ಕ್ಯಾನ್ಸರ್ ನಿರೋಧಕ ಸಾಮರ್ಥ್ಯವನ್ನೂ ಹೊಂದಿದೆ.

2009ರ ಅಧ್ಯಯನದ ಪ್ರಕಾರ, ಅರಿಶಿನದಲ್ಲಿ ಸಕ್ರಿಯ ಘಟಕಾಂಶವಾದ ಕರ್ಕ್ಯುಮಿನ್ ಇದ್ದು ಅದು ಹೆಲಿಕೋಬ್ಯಾಕ್ಟರ್ ಪೈಲೊರಿ ವಿರುದ್ಧ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಇದು ಸಾಮಾನ್ಯ ಬ್ಯಾಕ್ಟೀರಿಯಾ ಆಗಿದ್ದು ಹೊಟ್ಟೆಯ ಹುಣ್ಣುಗಳಿಗೆ ಕಾರಣವಾಗುತ್ತದೆ.

 ಕರ್ಕ್ಯುಮಿನ್ ಪ್ರಬಲವಾದ ಉರಿಯೂತ ವಿರುದ್ಧ ಪರಿಣಾಮಗಳನ್ನು ಹೊಂದಿದೆ ಮತ್ತು ಇದು ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದೆ. ತೊಂದರೆ ಎಂದರೆ ಅರಿಶಿನವು ತೂಕದಿಂದ ಕೇವಲ ಶೇ. 3 ಕರ್ಕ್ಯುಮಿನ್ ಅನ್ನು ಹೊಂದಿರುತ್ತದೆ. ಅರಿಶಿನ ಕುರಿತು ಹೆಚ್ಚಿನ ಅಧ್ಯಯನಗಳು ನಡೆಸಿದ ಪ್ರಕಾರ ಕರ್ಕ್ಯುಮಿನ್ ಅನ್ನು ಹೊಂದಿರುವ ಅರಿಶಿನ ಸಾರಗಳನ್ನು ಹೆಚ್ಚಿನ ಪ್ರಮಾಣದ ಬಳಕೆ ಅಗತ್ಯ. ಕರ್ಕ್ಯುಮಿನ್ ಪೂರಕಗಳು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಕರ್ಕ್ಯುಮಿನನ್ನು ರಕ್ತ ನಾಳಗಳು ಸರಿಯಾಗಿ ಹೀರುವುದಿಲ್ಲ. ಉತ್ತಮ ಹೀರಿಕೊಳ್ಳುವಿಕೆಗಾಗಿ, ಕರಿಮೆಣಸನ್ನು ಅದರೊಂದಿಗೆ ಸೇವಿಸುತ್ತಾರೆ. ಉದಾಹರಣೆಗೆ, ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಲು ದೈನಂದಿನ ಕರ್ಕ್ಯುಮಿನ್ ಪೂರಕದೊಂದಿಗೆ ಒಂದೆರಡು ಪೂರ್ಣ ಕರಿಮೆಣಸನ್ನು ನುಂಗಬಹುದು. ಅರಿಶಿನದ ಲಾಭವನ್ನು ಪಡೆಯುವ ಇನ್ನೊಂದು ವಿಧಾನವೆಂದರೆ ಒಂದು ಚಮಚ ಅರಿಶಿನ ಪುಡಿಯನ್ನು ಆರು ಚಮಚ ಕಚ್ಚಾ, ಸಾವಯವ ಜೇನುತುಪ್ಪದೊಂದಿಗೆ ಬೆರೆಸುವುದು. ಇದನ್ನು ಜಾಡಿಯಲ್ಲಿ ಸಂಗ್ರಹಿಸಿ, ಈ ಮಿಶ್ರಣದ ಅರ್ಧ ಟೀಚಮಚೆಯಷ್ಟನ್ನು ದಿನಕ್ಕೆ ಎರಡು ಬಾರಿ ಸೇವಿಸಬಹುದು. (ಪ್ರತಿದಿನ 400 ರಿಂದ 600 ಮಿಗ್ರಾಂ ಅರಿಶಿನ ಪೂರಕಗಳನ್ನು ತೆಗೆದು ಕೊಳ್ಳುವಂತೆ) ಹಾಗೆಯೇ, ಮೊದಲ ಬಾರಿಗೆ ಪೂರಕವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ವೈದ್ಯರ ಸಲಹೆ ಪಡೆದುಕೊಳ್ಳಬೇಕು.

►ಜೇನುತುಪ್ಪ (honey)

ಶತಮಾನಗಳಿಂದ, ಜೇನುತುಪ್ಪವು ಅದರ ಆಂಟಿಮೈಕ್ರೊಬಿಯಲ್ ಗುಣದಿಂದ ಮತ್ತು ಗಾಯವನ್ನು ಮಾಗಿಸುವ ಗುಣದಿಂದಾಗಿ ಔಷಧಿಯಾಗಿ ಪ್ರಚಲಿತದಲ್ಲಿದೆ. ಚಿಕಿತ್ಸೆಗಳಿಗೆ ನೈಸರ್ಗಿಕತೆಯನ್ನು ಆದ್ಯತೆ ನೀಡುವ ಗಿಡಮೂಲಿಕೆ ತಜ್ಞರು ಇದನ್ನು ಪ್ರಕೃತಿಯ ಅತ್ಯುತ್ತಮ ನೈಸರ್ಗಿಕ ಪ್ರತಿಜೀವಕಗಳಲ್ಲಿ ಒಂದಾಗಿ ನೋಡುತ್ತಾರೆ. ಇದು ಉರಿಯೂತ ಮತ್ತು ನಂಜುನಿರೋಧಕವಾಗಿಯೂ ಕಾರ್ಯನಿರ್ವಹಿಸುತ್ತದೆ. 2014 ರಲ್ಲಿ, ಅಮೆರಿಕನ್ ಕೆಮಿಕಲ್ ಸೊಸೈಟಿ ಪ್ರಸ್ತುತಪಡಿಸಿದ ಅಧ್ಯಯನವು ಜೇನು ಅನೇಕ ಹಂತಗಳಲ್ಲಿ ಸೋಂಕಿನ ವಿರುದ್ಧ ಹೋರಾಡುತ್ತದೆ ಎಂದು ಕಂಡುಹಿಡಿದಿದೆ. ಜೇನುತುಪ್ಪದಲ್ಲಿ ಸಕ್ಕರೆ ಅಧಿಕವಾಗಿದೆ, ಆದರೆ ಹೈಡ್ರೋಜನ್ ಪೆರಾಕ್ಸೈಡ್, ಪಾಲಿಫಿನಾಲ್‌ಗಳನ್ನು ಸಹ ಹೊಂದಿರುತ್ತದೆ ಮತ್ತು ಆಮ್ಲೀಯತೆ ಮತ್ತು ಆಸ್ಮೋಟಿಕ್ ಪರಿಣಾಮವನ್ನು ಹೊಂದಿರುತ್ತದೆ. ಹೈಡ್ರೋಜನ್ ಪೆರಾಕ್ಸೈಡ್‌ನ ಕಿಣ್ವ ಉತ್ಪಾದನೆಯು ಜೇನುತುಪ್ಪವನ್ನು ಆ್ಯಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ನೀಡುತ್ತದೆ. ಆದರೆ, ಕೆಲವು ವಿಧದ ಜೇನುತುಪ್ಪಗಳು ಪೆರಾಕ್ಸೈಡ್ ಅಲ್ಲದವುಗಳಾಗಿವೆ, ಉದಾಹರಣೆಗೆ ಮನುಕಾ ಜೇನುತುಪ್ಪ. ಈ ಪೆರಾಕ್ಸೈಡ್ ಅಲ್ಲದ ಜೇನುತುಪ್ಪವು ಗಮನಾರ್ಹವಾದ ಬ್ಯಾಕ್ಟೀರಿಯಾ ವಿರೋಧಿ ಪರಿಣಾಮಗಳನ್ನು ಸಹ ತೋರಿಸುತ್ತದೆ ಎಂದು ಅಧ್ಯಯನಗಳು ಕಂಡುಹಿಡಿದಿದೆ. ಇದಕ್ಕೆ ಕಾರಣ ಜೇನುತುಪ್ಪದ ಕಡಿಮೆ ಪಿಎಚ್ ಮಟ್ಟ ಮತ್ತು ಹೆಚ್ಚಿನ ಸಕ್ಕರೆ ಅಂಶ, ಇವೆರಡೂ ಸೂಕ್ಷ್ಮಜೀವಿಯ ಬೆಳವಣಿಗೆಗೆ ಅಡ್ಡಿಯಾಗುವ ಸಾಧ್ಯತೆಯಿದೆ. ಪ್ರಯೋಗಾಲಯ ಪರೀಕ್ಷೆಯ ಪ್ರಕಾರ, ವೈದ್ಯಕೀಯ ದರ್ಜೆಯ ಜೇನುತುಪ್ಪವು ಪ್ರತಿಜೀವಕ-ನಿರೋಧಕ ಬ್ಯಾಕ್ಟೀರಿಯಾಗಳ ವಿರುದ್ಧ ಪ್ರಬಲವಾದ ಬ್ಯಾಕ್ಟೀರಿಯಾನಾಶಕ ಚಟುವಟಿಕೆಯನ್ನು ಹೊಂದಿದೆ. ಆದರೆ, ಎಲ್ಲಾ ಜೇನುತುಪ್ಪಗಳು ಸಮಾನವಾಗಿರುವುದಿಲ್ಲ.

ರೋಗ ನಿರೋಧಕ ಶಕ್ತಿಯನ್ನು ಆರೋಗ್ಯವಾಗಿಡಲು, ಸಮಾನ ಪ್ರಮಾಣದಲ್ಲಿ ಜೇನುತುಪ್ಪಮತ್ತು ಪುಡಿ ಮಾಡಿದ ದಾಲ್ಚಿನ್ನಿ ಮಿಶ್ರಣ ಮಾಡಿ ಮತ್ತು ಪ್ರತಿದಿನ ಒಮ್ಮೆ ಸೇವಿಸಬಹುದು. ಅಲ್ಲದೆ ಇದನ್ನು ಚಹಾ, ಜ್ಯೂಸ್ ಇತ್ಯಾದಿಗಳಿಗೆ ಸೇರಿಸಿ ಸೇವಿಸಬಹುದು. ಆದರೆ ಒಂದು ವರ್ಷದೊಳಗಿನ ಶಿಶುಗಳಿಗೆ ಜೇನುತುಪ್ಪವನ್ನು ಎಂದಿಗೂ ನೀಡಬಾರದೆನ್ನುತ್ತಾರೆ. ಬೊಟುಲಿಸಂ (ಜೀವಾಣುಗಳಿಂದ ಉಂಟಾಗುವ ಅಪರೂಪದ ವಿಷ) ಅಪಾಯ ಇದಕ್ಕೆ ಕಾರಣ.

►ದಾಲ್ಚಿನ್ನಿ (cinnamon)

ದಾಲ್ಚಿನ್ನಿ ನಾವು ಸಾವಿರಾರು ವರ್ಷಗಳಿಂದ ಬಳಸುತ್ತಿರುವ ಒಂದು ಮಸಾಲೆ ವಸ್ತು. ಪ್ರಾಚೀನ ಈಜಿಪ್ಟಿನವರು ಎಂಬಾಸಿಂಗ್ (ಶವವನ್ನು ಕೊಳೆಯದೆ ಇಡುವ) ಪ್ರಕ್ರಿಯೆಯಲ್ಲಿ ಮಸಾಲೆಗಳನ್ನು ಸುಗಂಧ ದ್ರವ್ಯವಾಗಿ ಬಳಸುತ್ತಿದ್ದರು ಎಂಬುದಕ್ಕೆ ಪುರಾವೆಗಳಿವೆ. ಕ್ರಿ.ಪೂ 2000ದಷ್ಟು ಹಿಂದೆಯೇ. ಇದನ್ನು ಬೈಬಲ್‌ನ ಹಳೆಯ ಒಡಂಬಡಿಕೆಯಲ್ಲಿ ಒಂದು ಘಟಕಾಂಶವಾಗಿ ಉಲ್ಲೇಖಿಸಲಾಗಿದೆ. ಅರಬ್ ವ್ಯಾಪಾರಿಗಳು ಅದನ್ನು ಯುರೋಪಿಗೆ ತಂದರು, ಅಲ್ಲಿ ಅದು ಬಹಳ ಜನಪ್ರಿಯವಾಯಿತು. ನಂತರದ ದಿನಗಳಲ್ಲಿ ವಿಶ್ವದೆಲ್ಲೆಡೆ ಅದರ ಉಪಯೋಗದ ಬಗ್ಗೆ ಅರಿವಾಯಿತು.

ದಾಲ್ಚಿನ್ನಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಜೇನುತುಪ್ಪದೊಂದಿಗೆ ಸಂಯೋಜಿಸಿದಾಗ ಅವು ಸೋಂಕಿನ ವಿರುದ್ಧ ಹೋರಾಡಲು ಇನ್ನಷ್ಟು ಶಕ್ತಿ ನೀಡುತ್ತದೆ. ಪ್ರತಿದಿನ ಇವೆರಡನ್ನೂ ಒಟ್ಟಾಗಿ ತೆಗೆದುಕೊಂಡರೆ, ಅವು ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಸೋಂಕಿನ ವಿರುದ್ಧ ಹೋರಾಡುವ ಬಿಳಿ ರಕ್ತ ಕಣಗಳನ್ನು ಬಲ ಪಡಿಸಲು ಇವು ಸಹಾಯ ಮಾಡುತ್ತವೆ. ದಾಲ್ಚಿನ್ನಿ ಮತ್ತು ಜೇನುತುಪ್ಪನೀರಿನೊಂದಿಗೆ ಬೆರೆಸಿ ಕುಡಿದರೆ ಕೆಮ್ಮು ಮತ್ತು ಶೀತಕ್ಕೆ ರಾಮಬಾಣ. ಹಾಗೆಯೇ ಮೂತ್ರಕೋಶದ ಸೋಂಕನ್ನು ಗುಣಪಡಿಸುತ್ತದೆ. ಪೇಸ್ಟ್ ಆಗಿ ತಯಾರಿಸಿದ ಈ ಎರಡು ಶಕ್ತಿ ಪದಾರ್ಥಗಳು ಹಲ್ಲು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಜೊತೆಗೆ ಅನೇಕ ಚರ್ಮದ ಸೋಂಕುಗಳಿಗೆ ಚಿಕಿತ್ಸೆ ಕಾರಕವಾಗಿದೆ. ಶಸ್ತ್ರಚಿಕಿತ್ಸಕರು ನಡೆಸಿದ ಅಧ್ಯಯನವು ದಾಲ್ಚಿನ್ನಿ ಎಣ್ಣೆಯು ಅನೇಕ ಸಾಮಾನ್ಯ ಸೋಂಕು ಉಂಟು ಮಾಡುವ ಜೀವಾಣುಗಳನ್ನು ಕೊಲ್ಲುತ್ತದೆ ಎಂದು ದೃಢಪಡಿಸಿದೆ ಹಾಗೂ ಸಂಶ್ಲೇಷಿತ ನಂಜುನಿರೋಧಕಗಳಾಗಿ ಕೆಲಸಮಾಡುತ್ತದೆ.

ಇಮೇಲ್: abbukarkala@gmail.com

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)