varthabharthi

ಸುಗ್ಗಿ

ಅಧ್ಯಯನ ಮತ್ತು ಅರಿವು

ಸುಳ್ಳಿಗೆ ಮದ್ದು

ವಾರ್ತಾ ಭಾರತಿ : 14 Sep, 2019
ಬೆಳೆಯುವ ಪೈರು ಯೋಗೇಶ್ ಮಾಸ್ಟರ್

ಮಕ್ಕಳ ಸುಳ್ಳಿನ ಪ್ರಪಂಚ: ಭಾಗ 7


► ಚಿಕಿತ್ಸಕ ಪರಿಸರ

ಮಕ್ಕಳಿಗಾಗಲಿ, ದೊಡ್ಡವರಿಗಾಗಲಿ ಸುಳ್ಳಿನ ಗೀಳುರೋಗದಿಂದ ಮುಕ್ತರಾಗಲು ಸಾಧ್ಯವಿದೆಯೇ? ನಿಜ ಹೇಳಬೇಕೆಂದರೆ ಯಾವುದೇ ಮಾನಸಿಕ, ವರ್ತನೆಗಳ ಮತ್ತು ಭಾವುಕತೆಯ ಸಮಸ್ಯೆಗಳಿಗೆ ಪರಿಹಾರ ಇದೆ. ಆದರೆ, ಇದರಲ್ಲಿ ರೋಗಿ, ಪರಿಸರ ಮತ್ತು ರೋಗಿಯ ಸಹಜೀವಿಗಳೆಲ್ಲರ ಸಹಕಾರ ಬೇಕು. ನಮಗೆ ಅದೆಷ್ಟೇ ರೇಜಿಗೆ ಹುಟ್ಟಿಸಿದರೂ, ಅವರನ್ನು ರೋಗಮುಕ್ತರನ್ನಾಗಿಸಬೇಕೆಂದರೆ ರೋಗಿಯ ಜೊತೆಗೆ ಸೌಹಾರ್ದ ಸಂಬಂಧದ ಮತ್ತು ವಿಶ್ವಾಸಪೂರ್ಣವಾದ ಸಂಭಾಷಣೆಯನ್ನೇ ನಡೆಸಬೇಕು. ಅವರೊಂದಿಗೆ ಇರುವ ನಮ್ಮ ಸಂಬಂಧದ ಮತ್ತು ವಿಶ್ವಾಸದ ವೌಲ್ಯವು ಅವರು ಸುಳ್ಳು ಹೇಳುತ್ತಾರೆಂಬ ಕಾರಣಕ್ಕೆ ಶಿಥಿಲಗೊಳ್ಳಬಾರದು. ನಮ್ಮ ಸಹನೆಯು ಎಲ್ಲೆ ಇಲ್ಲದೆಯೇ ಅನಂತವಾಗಿರಬೇಕು. ಹಾಗೆಂದು ಅವರ ಸುಳ್ಳನ್ನು ಪೋಷಿಸುವಂತೆಯೋ ಅಥವಾ ಅವರನ್ನು ಓಲೈಸುವಂತೆಯೋ ವರ್ತಿಸಲೇಬಾರದು. ಬದಲಾಗಿ ದೃಢವಾಗಿಯೂ, ಶಿಸ್ತಿನಿಂದಲೂ ಇರಬೇಕು. ಅವರ ಸುಳ್ಳಿನ ಗೀಳುರೋಗದ ವಿಷಯವನ್ನು ಅವರ ಮುಂದೆ ಬೇರೊಬ್ಬರೊಂದಿಗೆ ಚರ್ಚಿಸಬಾರದು. ಅವರ ಗೈರುಹಾಜರಿಯಲ್ಲಿ ಬೇರೊಬ್ಬರೊಂದಿಗೆ ಚರ್ಚಿಸಬಹುದು. ಅಲ್ಲಿಯೂ ನಾವು ಪ್ರಾಮಾಣಿಕವಾಗಿ ರೋಗಿಗೆ ಚಿಕಿತ್ಸೆ ನೀಡುವ ತೆರದಲ್ಲಿ ಮಾತಾಡಬೇಕೇ ಹೊರತು, ಖಂಡಿಸುವ, ಚಾರಿತ್ರವನ್ನು ಪ್ರಶ್ನಿಸುವ, ನಡತೆಯನ್ನು ಅನುಮಾನಿಸುವ ರೀತಿಯಲ್ಲಿ ನೈತಿಕತೆಯಿಂದ ಹೊರತಾಗಿರುವಂತೆ ಮಾತಾಡಬಾರದು. ಸುಳ್ಳಿನ ರೋಗಿಯ ಸುಳ್ಳಿನ ಕುರಿತಾಗಿ ಅವರನ್ನು ಪ್ರಶ್ನಿಸಿದಾಗ ಅವರು ತಮ್ಮ ಸುಳ್ಳನ್ನು ಎಂದೂ ಖಂಡಿತ ಒಪ್ಪಿಕೊಳ್ಳುವುದಿಲ್ಲ. ಜೊತೆಗೆ ಅದನ್ನು ಸಮರ್ಥಿಸಲು ಯತ್ನಿಸುತ್ತಾರೆ. ಕೋಪಗೊಳ್ಳುತ್ತಾರೆ. ಸಿಡಿಮಿಡಿಗೊಳ್ಳುತ್ತಾರೆ. ಪ್ರತ್ಯಾರೋಪಗಳನ್ನು ಮಾಡಲು ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ಆ ಆರೋಪವೂ ಸುಳ್ಳಿನದ್ದಾಗಿರುತ್ತದೆ. ಇನ್ನೂ ಮುಂದುವರಿದು ಎಂದಿಗೂ ನೆನೆಸಿಕೊಳ್ಳಲಾಗದಂತಹ ಆರೋಪವನ್ನು ಮಾಡುತ್ತಾ ವಾಗ್ದಾಳಿ ನಡೆಸುತ್ತಾರೆ. ಒಂದು ವೇಳೆ ಅವರು ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲದಂತೆ ನೇರವಾಗಿಯೇ ಸಿಕ್ಕಿಕೊಂಡರೆ ವಿಪರೀತ ಮುಜುಗರ ಮತ್ತು ಅಪಮಾನವನ್ನು ಅನುಭವಿಸುತ್ತಾರೆ. ಜೊತೆಗೆ ಅವರ ಸುಳ್ಳನ್ನು ಕಂಡು ಹಿಡಿದ ವ್ಯಕ್ತಿಯನ್ನು ಮತ್ತೆ ಮುಖ ನೋಡಲು, ಮಾತಾಡಲು ಹಿಂಜರಿಯುತ್ತಾರೆ. ನಮ್ಮ ಉದ್ದೇಶ ಚಿಕಿತ್ಸೆಯೂ ಮತ್ತು ಆಶಯ ಅವರು ಗುಣಮುಖರಾಗುವುದಾದ್ದರಿಂದ, ಅವರನ್ನು ಖಂಡಿಸುವಂತಹ ಧೋರಣೆಗಳನ್ನು ತೋರಬಾರದು. ಹಾಗೆಯೇ ಒಂದು ವೇಳೆ ಕಹಿ ಪ್ರಸಂಗ ಎದುರಾದರೂ, ಅದನ್ನು ತಿಳಿಗೊಳಿಸುವಂತೆ ಮತ್ತೊಂದು ಸಂದರ್ಭದಲ್ಲಿ ಚೆನ್ನಾಗಿ ಮತ್ತು ಸಹಜವಾಗಿ ಮಾತಾಡಿಸಬೇಕು.

► ರೋಗಿಯನ್ನು ಗೌರವಿಸಬೇಕು

ಕೆಲವೊಮ್ಮೆ ಪೋಷಕರು ಅಥವಾ ಶಿಕ್ಷಕರು ನಾನು ಹೊಡೆಯುವುದಿಲ್ಲ, ಬೈಯುವುದಿಲ್ಲ, ನಾನು ಚೆನ್ನಾಗಿ ನೋಡಿಕೊಳ್ಳುತ್ತೇನೆ, ಆದರೂ ನನ್ನೊಂದಿಗೇ ಮಗು ಸುಳ್ಳು ಹೇಳಿತಲ್ಲಾ ಎಂದು ನೋವುಣ್ಣುವರು. ಆದರೆ ಅವರಿಗೊಂದು ಕಿವಿಮಾತು. ಅವರು ಹೇಳುತ್ತಿರುವ ಸುಳ್ಳು ನೀವು ಎಂಬ ವ್ಯಕ್ತಿಯ ಕಾರಣಕ್ಕಲ್ಲ. ಅವರಿಗಿರುವ ಗೀಳು ರೋಗದಿಂದಾಗಿ. ಹಾಗಾಗಿ, ಗೀಳುರೋಗದ ಸುಳ್ಳುಗಾರರ ಇಂತಹ ಸುಳ್ಳುಗಳನ್ನು ನಾವು ವ್ಯಕ್ತಿಗತವಾಗಿ ತೆಗೆದುಕೊಂಡು ಸಂಕಟಪಡಬಾರದು.

ನಮ್ಮನ್ನು ಆಕರ್ಷಿಸಲು ಮಕ್ಕಳಾಗಲಿ ಅಥವಾ ದೊಡ್ಡವರಾಗಲಿ ಸುಳ್ಳು ಹೇಳಲುತೊಡಗುತ್ತಿದ್ದಂತೆ, ನೀನು ನನಗೇನೂ ಹೇಳಬೇಕಾಗಿಲ್ಲ, ನೀನೆಂದರೆ ನನಗೆ ಪ್ರೀತಿ ಇದೆ, ಗೌರವ ಇದೆ ಎಂದು ನಗುನಗುತ್ತಲೇ ಅವರ ಸುಳ್ಳಿಗೆ ತಡೆಯೊಡ್ಡಬಹುದು. ಅವರು ಹೇಗಿದ್ದಾರೋ ಹಾಗೆಯೇ ಅವರನ್ನು ಸ್ವೀಕರಿಸಿದ್ದೀರಿ ಎಂಬುದು ಅವರಿಗೆ ಸ್ಪಷ್ಟಗೊಳಿಸಬೇಕು. ಹಾಗೆಯೇ ಅವರು ಸುಳ್ಳು ಹೇಳುತ್ತಿದ್ದಾಗ ಅವರು ತಮ್ಮ ಸುಳ್ಳಿನ ಸರಮಾಲೆಯನ್ನು ಬೆಳೆಸಲು ಬಿಡಬಾರದು. ಯಾವುದೋ ಒಂದು ಅಂಶದಲ್ಲಿ ಪ್ರಶ್ನೆಯಿಂದಲೋ ಅಥವಾ ಬೇರೆಯೇ ವಿಷಯವನ್ನು ತಿರುಗಿಸುವುದರ ಮೂಲಕವೋ ಅವರು ಮಾತಾಡುವುದನ್ನು ನಿಲ್ಲಿಸುವಂತೆ, ಅಥವಾ ಸಹಜವಾದ ವಿಷಯವನ್ನು ಉತ್ತರವಾಗಿ ಹೇಳುವಂತೆಯೋ ಮಾಡಬೇಕು. ಉದಾಹರಣೆಗೆ ಮಗುವೊಂದು ಕಂಡಾಬಟ್ಟೆ ಸುಳ್ಳು ಹೇಳುವ ಸೂಚನೆ ದೊರಕುತ್ತಿದ್ದಂತೆ, ಇವತ್ತು ಯಾವ ಹೋಂವರ್ಕ್ ಕೊಟ್ಟಿದ್ದಾರೆ? ಏನು ತಿಂದೆ? ಅದು ಚೆನ್ನಾಗಿತ್ತಾ? ಇವತ್ತು ಕೊಟ್ಟಿರುವ ಹೋಂವರ್ಕ್ ಬೇಗ ಮಾಡಲು ಸಾಧ್ಯವಿದೆಯೇ ಅಥವಾ ಇಲ್ಲವೇ? ನೀನು ಚಿತ್ರ ಬರೆಯುತ್ತಿದ್ದೆಯಲ್ಲಾ, ಅದು ಎಲ್ಲಿ? ಹೀಗೆ. ಮಕ್ಕಳು ಯಾವಾಗಲಾದರೂ ಸುಳ್ಳು ಹೇಳಲು ಪ್ರಾರಂಭಿಸಿದರೆ ವಿಷಯಾಂತರ ಮಾಡುವುದು ಮತ್ತು ಅದರ ಬಗ್ಗೆ ಆಸಕ್ತಿ ತೋರದಿರುವುದು ಬಹಳ ಒಳ್ಳೆಯದು.

ಈ ರೋಗಿಗಳು ಮಕ್ಕಳಾದರೆ, ಅವರನ್ನು ಉತ್ತಮ ಸಮಾಲೋಚಕರ ಕಡೆಗೆ ಕಳುಹಿಸಬೇಕು. ಅವರೊಂದಿಗೆ ಮಾತಾಡಿಸುವ ವ್ಯವಸ್ಥೆ ಮಾಡಬೇಕು. ಅದೇ ರೀತಿ ಮಕ್ಕಳಿಗಾದರೂ ಸರಿಯೇ, ದೊಡ್ಡವರಿಗಾದರೂ ಸರಿಯೇ, ಈ ಗೀಳಿನ ರೋಗವಿರುವವರಿಗೆ ಈ ಗೀಳಿನ ಬಗ್ಗೆ ಇರುವ ಲೇಖನವನ್ನು ಓದಲು ಕೊಡುವುದೋ ಅಥವಾ ಅದಕ್ಕೆ ಸಂಬಂಧ ಪಟ್ಟಂತಹ ವೀಡಿಯೊಗಳನ್ನು ತೋರಿಸಬೇಕು. ಇದರಿಂದ ಅವರಿಗೆ ಆತ್ಮವಿಮರ್ಶೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ನಮಗೆ ಅವರ ಸುಳ್ಳಿನ ಗೀಳಿನ ಬಗ್ಗೆ ಅರಿವಿರುವುದು ಮತ್ತು ಅದನ್ನು ನಾವು ನೈತಿಕವಾಗಿ ಖಂಡಿಸದೇ, ರೋಗವೆಂದು ಪರಿಗಣಿಸಿ, ಅದರಿಂದ ಗುಣಮುಖರಾಗುವುದರ ಬಗ್ಗೆ ಕಾಳಜಿ ಇದೆ ಎಂದೂ ತೋರ್ಪಡಿಸಿದಂತಾಗುತ್ತದೆ. ಇದರಿಂದ ಅವರು ನಮ್ಮ ಮುಂದೆ ಅಪರಾಧ ಪ್ರಜ್ಞೆಯಿಂದ ತಲೆ ತಗ್ಗಿಸುವುದು ತಪ್ಪುತ್ತದೆ. ನಮಗೆ ಅವರ ಬಗ್ಗೆ ಇರುವುದು ಖಂಡನೆಯಲ್ಲ, ಕಾಳಜಿ ಎಂದು ತಿಳಿಯುತ್ತದೆ. ಜಾಗೃತಿಯನ್ನು ಮೂಡಿಸಿ

ಸುಳ್ಳಿನ ಗೀಳಿನ ರೋಗಿಗಳಿಗೆ ಅದರ ಬಗ್ಗೆ ಅವರು ಜಾಗೃತವಾಗುವಂತೆ ಮಾಡುವುದು ಚಿಕಿತ್ಸೆಯ ಮೊದಲ ಹಂತ ಎಂದೇ ಕರೆಯಬಹುದು. ಹೀಗೆ ಒಮ್ಮೆ ಅವರು ಜಾಗೃತವಾದರೆ, ಅದನ್ನು ನಿವಾರಿಸಿಕೊಳ್ಳಲು ಬೇಕಾದ ಪ್ರಯತ್ನ ಮಾಡುವುದರ ಬಗ್ಗೆ ಜಾಗ್ರತೆ ವಹಿಸುತ್ತಾರೆ. ಬಹಳಷ್ಟು ಜನ ಈ ಬಗೆಯ ರೋಗಿಯ ಕುರಿತಾಗಿ ಹಾಸ್ಯ ಮಾಡುತ್ತಾರೆ. ಕೆಲವೊಮ್ಮೆ ಬೇಕೆಂದೇ ತಾವು ಅವರ ಸುಳ್ಳನ್ನು ತಿಳಿದಿಲ್ಲ ಎಂಬಂತೆ ತೋರ್ಪಡಿಸುತ್ತಾ, ತಾವು ಎಲ್ಲವನ್ನೂ ನಂಬುತ್ತಿರುವಂತೆ ನಟಿಸುತ್ತಾ ಅವರಿಂದ ಕತೆ ಕೇಳುತ್ತಾ ಮಜ ಮಾಡುತ್ತಾರೆ. ಇದು ಖಂಡಿತ ತಪ್ಪು. ಜೊತೆಗೆ ಅವರು ಹೇಗೆ ಸುಳ್ಳು ಹೇಳುತ್ತಾರೆ ಎಂದು ಬೇರೆಯವರ ಬಗ್ಗೆ ತಮಾಷೆ ಮಾಡು ತ್ತಾ, ಆ ಮಗುವಿನ ಅಥವಾ ದೊಡ್ಡವರ ನೈತಿಕ ಚಾರಿತ್ರದ ಬಗ್ಗೆ ಉಡಾಫೆಯಾಗಿ ಮಾತಾಡುತ್ತಾರೆ. ಇದೂ ಕೂಡಾ ಖಂಡಿತ ತಪ್ಪು. ಎಷ್ಟೋ ಬಾರಿ ಸುಳ್ಳಿನ ಗೀಳಿನ ರೋಗಿಗಳು ಸುಳ್ಳು ಹೇಳುವಾಗ ಸುಳ್ಳು ಶೋಧಕ ಯಂತ್ರ ಅಥವಾ ಲೈ ಡಿಟೆಕ್ಟರ್ ಟೆಸ್ಟ್ ಅಥವಾ ಪಾಲಿಗ್ರಾಪ್ ಕೂಡಾ ಗುರುತಿಸಲಾಗದು. ಏಕೆಂದರೆ, ಸುಳ್ಳು ಹೇಳುವವರು ಅದನ್ನು ನಿಜವೆಂದು ನಂಬಿರುತ್ತಾರೆ. ಸುಳ್ಳಿನ ಗೀಳಿನ ರೋಗದ ಮಕ್ಕಳನ್ನಾಗಲಿ, ವ್ಯಕ್ತಿಗಳನ್ನಾಗಲಿ ಚಿಕಿತ್ಸೆಗೆ ಒಳಪಡಿಸಬೇಕೆಂದರೆ ಕೆಲವೊಮ್ಮೆ ಕುಟುಂಬ ಸದಸ್ಯರನ್ನು ಮತ್ತು ಹತ್ತಿರದ ಗೆಳೆಯ ಅಥವಾ ಗೆಳತಿಯರನ್ನೂ ಸಂದರ್ಶಿಸಬೇಕಾಗುತ್ತದೆ ಮತ್ತು ಸಮಾಲೋಚನೆ ಮಾಡಬೇಕಾಗುತ್ತದೆ. ಅಂತಹ ಸಂದರ್ಭಗಳು ಒದಗಿದಾಗ ತಪ್ಪಿಸಿಕೊಳ್ಳಬಾರದು.

ಸಲ್ಮಾತು

ಐಎಎಸ್ ಪರೀಕ್ಷೆಯ

ಪ್ರಶ್ನೆಗಳಿಗೆ ಲೀಲಾಜಾಲವಾಗಿ

ಉತ್ತರಿಸಿ ಬಂದ ನಾನು

ವಧು ಪರೀಕ್ಷೆಯಲ್ಲಿ ಎದುರಾದ

ಪ್ರಶ್ನೆಗಳಿಗೆ ಉತ್ತರವಿಲ್ಲದೆ ಕಂಗಾಲಾಗಿದ್ದೇನೆ!

-ಸಲ್ಮಾ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)