varthabharthi

ನಿಮ್ಮ ಅಂಕಣ

ಮತ್ತೆ ಕನ್ನಡ ಮಾಧ್ಯಮಕ್ಕೆ ಮೊರೆ

ವಾರ್ತಾ ಭಾರತಿ : 15 Sep, 2019

ಮಕ್ಕಳು ತಾಯಿ ನುಡಿಯಲ್ಲಿ ಕಲಿಯಲು, ಪ್ರದೇಶ ಭಾಷೆಗಳು ಭವಿಷ್ಯತ್ಕಾಲಕ್ಕೂ ಉಳಿದು, ಬೆಳೆಯಲು ಇರುವ ಏಕಮೇವ ಮಾರ್ಗವೆಂದರೆ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಕಡ್ಡಾಯವಾಗಿ ಶಿಕ್ಷಣ ಮಾಧ್ಯಮವಾಗಬೇಕು. ಸಂವಿಧಾನಕ್ಕೆ ತಿದ್ದುಪಡಿ ಮಾಡದೆ ಇದು ಸಾಧ್ಯವಿಲ್ಲ. ಸಂವಿಧಾನಕ್ಕೆ ತಿದ್ದುಪಡಿಮಾಡಿ ಮಕ್ಕಳಿಗೆ ತಮ್ಮ ತಾಯಿಯ ಭಾಷೆಯಲ್ಲೇ ಕಲಿಯುವ ಅವಕಾಶ ಮಾಡಿಕೊಡಿ, ಪ್ರದೇಶ ಭಾಷೆಗಳು ಅಳಿಯದಂತೆ, ಈ ದೇಶದ ಬಹುಭಾಷಾ ಸಂಸ್ಕೃತಿ ಅಳಿಯದಂತೆ ಕಾಪಾಡಿ ಎಂಬ ಮೊರೆ ಅರಣ್ಯರೋದನವಾಗಿದೆ.

ಕರ್ನಾಟಕ ಪಬ್ಲಿಕ್ ಸ್ಕೂಲ್

-ಇದು ಕನ್ನಡಿಗರಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ನೀಡಿದ ನಿರ್ಗಮನ ಪೂರ್ವ ಉಡುಗೊರೆ. ಪ್ರಾಥಮಿಕ ಹಂತದಿಂದ ಪ್ರೌಢ ಶಾಲಾ ಶಿಕ್ಷಣದ ಅವಧಿಯಲ್ಲಿ ವಿದ್ಯಾರ್ಥಿಗಳು ಸರಕಾರಿ ಶಾಲೆಗಳನ್ನು ತೊರೆದು ಹೋಗುತ್ತಿರುವುದನ್ನು ತಡೆಯುವ ಹಾಗೂ ಹಳ್ಳಿಗಾಡಿನ ಮಕ್ಕಳಿಗೂ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುವ ಅವಕಾಶ ಕಲ್ಪಿಸುವ ಉದ್ದೇಶದಿಂದ ಕುಮಾರಸ್ವಾಮಿಯವರ ಸರಕಾರ ಕೈಗೊಂಡ ನಿರ್ಧಾರ. ಫೆಬ್ರವರಿ ಮಾಹೆಯಲ್ಲಿ ಕೈಗೊಂಡ ಸರಕಾರದ ಈ ನಿರ್ಧಾರ ಜಾರಿಗೆ ಬಂದಿದ್ದು, ಕರ್ನಾಟಕದ ಒಂದು ಸಾವಿರ ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಹಂತದಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪ್ರಾರಂಭವಾಗಿದೆ. ಸಹಜವಾಗಿಯೇ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಆಗಬೇಕೆಂದು ಪ್ರತಿಪಾದಿಸುವವರಿಂದ ವಿರೋಧ ವ್ಯಕ್ತವಾಗಿದೆ.

 ಕುಮಾರಸ್ವಾಮಿಯವರ ಸರಕಾರ ಈ ನಿರ್ಧಾರ ಕೈಗೊಂಡ ಶುರುವಿನಲ್ಲೇ ಸಾಹಿತಿಗಳು ಇದರ ವಿರುದ್ಧ ದನಿ ಎತ್ತಿದ್ದುಂಟು. ಈಗ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರಕಾರ ಬಂದ ನಂತರ ವಿರೋಧದ ದನಿ ಮತ್ತಷ್ಟು ಜೋರಾಗಿ ಕೇಳಿ ಬರುತ್ತಿದೆ. ಕರ್ನಾಟಕ ವಿಕಾಸ ರಂಗ ಮತ್ತು ಮೈಸೂರಿನ ಕನ್ನಡ ಕ್ರಿಯಾ ಸಮಿತಿ ಸೆ.11ರಂದು ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಸಮಾಲೋಚನಾ ಸಭೆಯಲ್ಲಿ-

‘‘ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಆಂಗ್ಲ ಮಾಧ್ಯಮದಲ್ಲಿ ನೀಡುವುದರಿಂದ ಶಾಲೆ ತೊರೆಯುವ ಮಕ್ಕಳ ಸಂಖ್ಯೆ ಮುಂದಿನ ದಿನಗಳಲ್ಲಿ ಹೆಚ್ಚಲಿದೆ. ಹಾಗಾಗಿ ಈಗಾಗಲೇ ಆರಂಭಿಸಿರುವ ಒಂದು ಸಾವಿರ ಪಬ್ಲಿಕ್ ಶಾಲೆಗಳನ್ನು ರದ್ದುಗೊಳಿಸಿ ಮಾತೃಭಾಷೆಯಲ್ಲೇ ಶಿಕ್ಷಣ ನೀಡುವಂತೆ ಸರಕಾರದ ಮೇಲೆ ಒತ್ತಡ ಹೇರಬೇಕು’’ ಎನ್ನುವ ನಿರ್ಣಯವನ್ನು ಅಂಗೀಕರಿಸಿದೆ.

‘‘ಮಾತೃಭಾಷೆಯಲ್ಲಿ ಶಿಕ್ಷಣ ಹೆಚ್ಚು ಪರಿಣಾಮಕಾರಿಯಾಗಿರಲಿದೆ. ಆಂಗ್ಲಭಾಷೆಯಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಬೇಡ’’ ಎನ್ನುವುದು ಸಾಹಿತಿಗಳು ಮತ್ತು ಶಿಕ್ಷಣ ತಜ್ಞರು ಭಾಗವಹಿಸಿದ್ದ ಈ ಸಭೆಯ ಒಕ್ಕೊರಲಿನ ಅಭಿಪ್ರಾಯವಾಗಿರುವಂತಿದೆ. ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸುವ ಮೂಲಕ ನಾಡಿನ ಭಾಷೆ, ಸಂಸ್ಕೃತಿ, ಜೀವನ ವಿಧಾನಕ್ಕೆ ಕೊಡಲಿ ಪೆಟ್ಟು ನೀಡುವ ಕೆಲಸವಾಗಿದೆ ಎಂದಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಕವಿ ಎಸ್. ಜಿ. ಸಿದ್ದರಾಮಯ್ಯನವರ ಮಾತಿನಲ್ಲಿ ಉತ್ಪ್ರೇಕ್ಷೆ ಏನಿಲ್ಲ. ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣ ಮಾಡಿ ಸಮಾನ ಶಿಕ್ಷಣ ನೀತಿ ಜಾರಿಗೆ ತರಬೇಕು. ಜಿಡಿಪಿಯಲ್ಲಿ ಶಿಕ್ಷಣಕ್ಕೆ ನೀಡುತ್ತಿರುವ ಪಾಲನ್ನು ಹೆಚ್ಚಿಸ ಬೇಕು ಎಂಬ ಸಲಹೆಯೂ ಕೇಳಿ ಬಂದಿದೆ.

ಕನ್ನಡ ಭಾಷೆ ಮತ್ತು ಕನ್ನಡ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ದೃಷ್ಟಿಯಿಂದ ಇವೆಲ್ಲ ಯೋಗ್ಯವಾದ ಸಲಹೆಗಳೇ. ಇಂತಹ ಮಾತುಗಳು ಕೇಳಿಬರುತ್ತಿರುವುದು ಇದೇ ಮೊದಲಲ್ಲ. ಮಕ್ಕಳ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಆಗಬೇಕೆಂಬ ಆಗ್ರಹವೂ ಬಹಳ ವರ್ಷಗಳಿಂದ ಕೇಳಿಬರುತ್ತಿರುವ ಬೇಡಿಕೆಯಾಗಿದೆ.

ಮಾತೃಭಾಷಾ ಶಿಕ್ಷಣ ಮಾಧ್ಯಮದ ಬಗೆಗೆ ಬಹಳಷ್ಟು ಹೇಳಿಯಾಗಿದೆ. ಜಗತ್ತಿನಲ್ಲಿ ಶಿಕ್ಷಣ ತಜ್ಞರೆನಿಸಿಕೊಂಡವರು ಯಾರೂ ಇದರ ವಿರುದ್ಧವಾಗಿ ಈವರೆಗೆ ಸೊಲ್ಲೆತ್ತಿಲ್ಲ. ಯುನೆಸ್ಕೊ ಸೇರಿದಂತೆ ವಿವಿಧ ಸಂಘಸಂಸ್ಥೆಗಳು ವಿಶ್ವದಾದ್ಯಂತ ನಡೆಸಿರುವ ಅಧ್ಯಯನ ಮತ್ತು ಸಮೀಕ್ಷೆಗಳಲ್ಲಿ ಮಕ್ಕಳಿಗೆ ಮಾತೃ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಪ್ರಯೋಜನಕರವಾದುದು ಎನ್ನುವ ಅಭಿಪ್ರಾಯ ಸಾರ್ವತ್ರಿಕವಾಗಿ ವ್ಯಕ್ತವಾಗಿದೆ. ಇದಕ್ಕೆ ಮನಶ್ಶಾಸ್ತ್ರೀಯ ಆಧಾರವೂ ಇದೆ. ಅಭಿವೃದ್ಧಿ ಹೊಂದಿದ ಐರೋಪ್ಯ ರಾಷ್ಟ್ರಗಳಲ್ಲೂ ಪ್ರಾಥಮಿಕ ಶಿಕ್ಷಣದಲ್ಲಿ ಬೋಧನೆ ಮಾಧ್ಯಮ ಮಾತೃಭಾಷೆಯೇ ಅಗಿದೆ. ದಕ್ಷಿಣ ಏಶ್ಯದಲ್ಲೇ ಇಂಗ್ಲಿಷ್ ಮಾಧ್ಯಮದ ವ್ಯಾಮೋಹ ಹೆಚ್ಚಾಗಿರುವುದು.

ಇಂಗ್ಲಿಷ್‌ನಿಂದಲೇ ತಮ್ಮ ಮಕ್ಕಳ ಬೌದ್ಧಿಕ ಮತ್ತು ಆರ್ಥಿಕ ಉದ್ಧಾರ ಎಂದು ನಂಬಿರುವ ತಂದೆತಾಯಿಯರು ಇರುವಂತೆ ಇಂಗ್ಲಿಷ್ ಕೈಬಿಡುವುದರಿಂದ ನಮ್ಮ ದೇಶ ಇನ್ನೂ ಬಡವಾಗುತ್ತದೆ ಎಂದು ನಂಬಿರುವವರೂ ಇದ್ದಾರೆ. ಇವು ಯಾವುದೂ ಪೂರ್ತಿ ಸತ್ಯವಲ್ಲ. ‘‘ನಾವು ನಮ್ಮ ತಾಯಿನುಡಿಯ ಮೂಲಕ ಕಲಿತಿದ್ದರಿಂದಲೇ ನಮ್ಮ ಬುದ್ಧಿ ಚುರುಕಾಯಿತು’’ ಎಂಬುದು ಕವಿ ರವೀಂದ್ರನಾಥ ಟಾಗೂರರ ಮಾತು. ‘‘ನಾನು ಹನ್ನೆರಡನೆಯ ವಯಸ್ಸಿನ ತನಕ ನನ್ನ ಮಾತೃಭಾಷೆಯಾದ ಗುಜರಾತಿಯ ಮೂಲಕ ಜ್ಞಾನವನ್ನು ಗಳಿಸಿದೆ’’ ಎನ್ನುವುದು ಗಾಂಧೀಜಿಯವರ ಮಾತು. ಈ ಎರಡೂ ಅಭಿಪ್ರಾಯಗಳಲ್ಲಿರುವ ‘ಮೂಲಕ’ ಎಂಬ ಮಾತನ್ನು ನಾವು ವಿಶೇಷವಾಗಿ ಗಮನಿಸಬೇಕು. ‘ಮೂಲಕ’ ಎನ್ನುವುದೇ ಮಾಧ್ಯಮದ ಮಾತು. ಇಂಗ್ಲಿಷ್ ಕಲಿಯಲು ಯಾರ ವಿರೋಧವೂ ಇರಲಾರದು. ನಮ್ಮ ಮಕ್ಕಳು ಇಂಗ್ಲಿಷನ್ನು ಚೆನ್ನಾಗಿ ಕಲಿಯಲಿ. ಇತರ ದೇಶೀ-ವಿದೇಶೀ ಭಾಷೆಗಳನ್ನೂ ಕಲಿಯಲಿ. ಅದಕ್ಕೆ ಅವಕಾಶವನ್ನೂ ಕಲ್ಪಿಸಬೇಕು. ಆದರೆ ಪ್ರಾಥಮಿಕ ಹಂತದಲ್ಲಿ ನಮ್ಮ ಮಕ್ಕಳು ಚರಿತ್ರೆ, ಭೂಗೋಳ, ವಿಜ್ಞಾನಗಳನ್ನು ತಮ್ಮ ಮಾತೃ ಭಾಷೆಯಲ್ಲೇ ಕಲಿಯಬೇಕು. ಇಂಗ್ಲಿಷಿನಲ್ಲಲ್ಲ.

ಇಂಗ್ಲಿಷ್ ಮಾಧ್ಯಮವನ್ನು ಜನ ಬಯಸುತ್ತಿದ್ದಾರೆ ಎನ್ನುವುದು ಮೊದಲಿನಿಂದಲೂ ಹೆಚ್ಚಾಗಿ ಕೇಳಿಬರುತ್ತಿರುವ ಮಾತು. ಇಂಗ್ಲಿಷ್ ಮಾಧ್ಯಮದ ಖಾಸಗಿ ಶಾಲೆಗಳಲ್ಲಿ ಕಲಿಯಲಾಗದ ಹಳ್ಳಿಗಾಡಿನ ಸರಕಾರಿ ಶಾಲೆಯ ಮಕ್ಕಳು ಇಂಗ್ಲಿಷ್ ಮಾಧ್ಯಮದ ಮಕ್ಕಳ ಸಮ ನಿಲ್ಲಲು ಸಾಧ್ಯವಾಗದೆ ಹಿಂದುಳಿದಿದ್ದಾರೆ. ಈ ಹಿಂದುಳಿದಿರುವಿಕೆಯಿಂದ ಇವರನ್ನು ಪಾರುಮಾಡಲು ಸರಕಾರಿ ಶಾಲೆಗಳಲ್ಲೂ ಇಂಗ್ಲಿಷ್ ಪ್ರಾಥಮಿಕಪೂರ್ವ ಹಂತದಿಂದಲೇ ಶಿಕ್ಷಣದ ಮಾಧ್ಯಮವಾಗಬೇಕು ಎಂಬುದು ಇತ್ತೀಚಿನ ಬೇಡಿಕೆ. ಜನ ಬಯಸುವುದನ್ನೆಲ್ಲ ಕೊಡುವುದು ಯಾವ ಸರಕಾರದಿಂದಲೂ ಸಾಧ್ಯವಾಗದು. ಆದರೆ ಜನರ ಯೋಗಕ್ಷೇಮ ನೋಡಿಕೊಳ್ಳುವುದು ಸರಕಾರದ ಜವಾಬ್ದಾರಿ. ಯಾವುದೇ ವಿಷಯದಲ್ಲಿ ಜನ ಹಾದಿ ತಪ್ಪಿದಾಗ ಅವರನ್ನು ದಾರಿಗೆ ತರುವುದೂ ಸರಕಾರದ ಹೊಣೆ. ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿ ಮಾತೃಭಾಷಾ ಮಾಧ್ಯಮದಲ್ಲಾಗಲಿ, ಈ ಮಕ್ಕಳು ಇಂಗ್ಲಿಷನ್ನೂ ಕಲಿಯಲಿ ಎಂಬುದು ನಮ್ಮ ಸರಕಾರದ ಶಿಕ್ಷಣ ಧೋರಣೆಯಾಗಬೇಕು. ಕರ್ನಾಟಕ ಸರಕಾರದ ಧೋರಣೆಯೂ ಇದೇ ಅಗಿದೆ. 1983ರಲ್ಲೇ ಕರ್ನಾಟಕ ವಿಧಾನ ಮಂಡಲ ಕನ್ನಡವನ್ನು ರಾಜ್ಯದಲ್ಲಿ ಶಿಕ್ಷಣ ಮಾಧ್ಯಮವಾಗಿ ಜಾರಿಗೆ ತರುವ ಮಸೂದೆಯನ್ನು ಅಂಗೀಕರಿಸಿತು. 1995ರಲ್ಲಿ ರಾಷ್ಟ್ರಪತಿಗಳು ಅದಕ್ಕೆ ಅಂಕಿತ ಹಾಕಿದ ನಂತರ ಶಾಸನವಾಯಿತು. ಆದರೆ ಖಾಸಗಿ ಶಾಲೆಗಳ ಪಟ್ಟಭದ್ರಹಿತಾಸಕ್ತಿಗಳು ಇದನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದಾಗ, ಶಿಕ್ಷಣ ಮಾಧ್ಯಮದ ಆಯ್ಕೆಯನ್ನು ಪೋಷಕರಿಗೆ ಬಿಡಿ ಎಂಬ ತೀರ್ಪಿನಿಂದಾಗಿ ಆದ ಹಿನ್ನಡೆ ಈಗ ಇತಿಹಾಸ.

ಗ್ರಾಮೀಣ ಪ್ರದೇಶದ ದಲಿತರು ಹಾಗೂ ಇನ್ನಿತರ ಹಿಂದುಳಿದ ವರ್ಗಗಳ ಮಕ್ಕಳಿಗೆ ಕಲಿಯಲು ಸಮಾನ ಅವಕಾಶಗಳಿರಬೇಕು, ಅವರು ನಗರ ಪ್ರದೇಶಗಳ ಮಕ್ಕಳಿಗೆ ಸರಿಸಮನಾಗಿ ಬೆಳೆದು ಎಲ್ಲ ರಂಗಗಳಲ್ಲೂ ಮುಂದೆ ಬರಬೇಕು ಎಂಬುದು ಎಲ್ಲರೂ ಒಪ್ಪಬೇಕಾದ ಮಾತು. ಆದರೆ ಪೂರ್ವ ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸುವುದರಿಂದ ಮಾತ್ರ ಇದು ಸಾಧ್ಯ ಎನ್ನುವ ಮಾತು ಚರ್ಚಾಸ್ಪದವಾದುದು. ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲೇ ಇದ್ದು, ಮೂರನೆಯ ತರಗತಿಯ ನಂತರ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸುವ ಪದ್ಧತಿಯಿಂದ ದಲಿತರು ಮತ್ತು ಇತರ ಹಿಂದುಳಿದ ವರ್ಗದವರು ಹಾಗೂ ಹಳ್ಳಿಗಾಡಿನ ಎಲ್ಲ ಮಕ್ಕಳು ಇತರರಿಗೆ ಸಮನಾಗಿ ಕಲಿತು ಶ್ರೇಯೋಭಿವೃದ್ಧಿ ಹೊಂದುವುದು ಸಾಧ್ಯವಿದೆ. ಎಲ್ಲ ಸರಕಾರಿ ಕನ್ನಡ ಶಾಲೆಗಳಲ್ಲೂ ಮೂರನೆಯ ತರಗತಿ ನಂತರ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸುವ ಶಿಕ್ಷಣ ಪದ್ಧತಿಯನ್ನು ಸರಕಾರ ಜಾರಿಗೆ ತರಬೇಕು. ಅದಕ್ಕೆ ತಕ್ಕಂತೆ ಇಂಗ್ಲಿಷ್ ಪಠ್ಯಗಳ ಸರಬರಾಜು, ಇಂಗ್ಲಿಷ್ ಕಲಿಸುವ ತರಬೇತಿ ಪಡೆದ ಶಿಕ್ಷಕರು ಮೊದಲಾದ ವಿಭಾಗಗಳಲ್ಲಿ ಸರಕಾರಿ ಶಾಲೆಗಳನ್ನು ಮೂಲಭೂತ ಸೌಕರ್ಯಗಳಿಂದ ಅಭಿವೃದ್ಧಿಪಡಿಸಬೇಕು. ಪ್ರತಿಯಾಗಿ ಒಂದು ಸಾವಿರ ಇಂಗ್ಲಿಷ್ ಕಲಿಸುವ ಪಬ್ಲಿಕ್ ಶಾಲೆಗಳನ್ನು ಆರಂಭಿಸಿರುವುದರಿಂದ ಕನ್ನಡ ಮಕ್ಕಳು ಮಾತೃಭಾಷಾ ಮಾಧ್ಯಮ ಶಿಕ್ಷಣದ ಸುಖ-ಸೌಲಭ್ಯದಿಂದ ವಂಚಿತರಾಗುತ್ತಾರೆ. ಅಲ್ಲದೆ ಇದು ಸರಕಾರದ ಕನ್ನಡಪರ ಧೋರಣೆಗೂ ವ್ಯತಿರಿಕ್ತವಾದುದು. ಸರಕಾರದ ಪಬ್ಲಿಕ್ ಶಾಲೆಗಳಿಂದ ಎಷ್ಟು ಸಹಸ್ರ ಬಾಲಕಬಾಲಕಿಯರಿಗೆ ಅನುಕೂಲವಾಗಿದೆಯೋ ತಿಳಿಯದು. ಆದರೆ ಸರಕಾರದ ಈ ನೀತಿಯಿಂದಾಗಿ, ಶಿಕ್ಷಣ ಹಕ್ಕು ಕಾಯ್ದೆಯನ್ವಯ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ದಲಿತರು ಹಾಗೂ ಹಿಂದುಳಿದ ವರ್ಗದವರು ಪಡಯುತ್ತಿರುವ ಉಚಿತ ಪ್ರವೇಶದ ಮೀಸಲಾತಿ ಸೌಲಭ್ಯದಿಂದಲೂ ವಂಚಿತರಾಗಿದ್ದಾರೆ. ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿ ಜಾರಿಗೆ ತರಬೇಕು. ಇಲ್ಲವಾದಲ್ಲಿ ಪ್ರದೇಶ ಭಾಷೆಗಳು ಅವಸಾನ ಹೊಂದುವ ಕಾಲ ದೂರವಿರಲಾರದು ಎಂಬ ಸತ್ಯ ರಾಷ್ಟ್ರವ್ಯಾಪಿ ಮನವರಿಕೆಯಾಗಿ ಚರ್ಚೆಸಂವಾದಗಳಾದುವು. ಇದರ ಫಲವಾಗಿ ಪ್ರಾಥಮಿಕ ಹಂತದಲ್ಲಿ ಮಾತೃಭಾಷೆ ಶಿಕ್ಷಣ ಮಾಧ್ಯಮವಾಗಬೇಕು ಎಂಬ ಆಗ್ರಹದಿಂದ ‘ಮಾತೃಭಾಷಾ ದಿವಸ’ ಆಚರಣೆ ಶುರುವಾಯಿತು. ಇದು ಮಾತೃಭಾಷೆಯ ಮಹತ್ವದ ಕುರಿತು ಸರಕಾರವನ್ನೂ ಜನರನ್ನೂ ತನ್ನತ್ತ ಒಲಿಸಿಕೊಳ್ಳುವುದರಲ್ಲಿ ಎಷ್ಟರಮಟ್ಟಿನ ಯಶಸ್ಸು ಕಂಡಿತೋ ತಿಳಿಯದು. ಕನ್ನಡದ ಮಟ್ಟಿಗೆ ಹೇಳುವುದಾದರೆ, ಮಾತೃಭಾಷೆಯನ್ನು ಕಡ್ಡಾಯವಾಗಿ ಪ್ರಾಥಮಿಕ ಶಿಕ್ಷಣ ಮಾಧ್ಯಮವನ್ನಾಗಿಸಲು ಅಗತ್ಯವಾದ ಸಂವಿಧಾನ ತಿದ್ದುಪಡಿ ಮಾಡುವಂತೆ ಒತ್ತಾಯಪಡಿಸಿ ಕವಿ ಚಂದ್ರಶೇಖರ ಕಂಬಾರರು ಸಾವಿರಾರು ಕನ್ನಡಿಗರ ಸಹಿಯುಳ್ಳ ಮನವಿ ಪತ್ರ ಒಂದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಸಲ್ಲಿಸಿ ವರ್ಷಗಳೇ ಕಳೆದಿವೆ. ‘ಸರ್ವಂ ಏಕಮಯಂ’ ಎನ್ನುವ ಅದ್ವೈತ ನೀತಿಯ ಮೋದಿ ಸರಕಾರದಿಂದ ಪ್ರದೇಶ ಭಾಷೆಗಳ ಹಿತರಕ್ಷಣೆ ಗಗನಕುಸುಮವೇ ಸರಿ. ಯಾವ ಕ್ಷಣದಲ್ಲಾದರೂ ಭಾಷಾವಾರು ರಾಜ್ಯಗಳು ತಮ್ಮ ಭಾಷೆ ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ಕಳೆದುಕೊಳ್ಳುವುದು ಸಂಭವನೀಯ ಎನ್ನುವ ಅಪಾಯಸ್ಥಿತಿಯಲ್ಲಿ ಇಂದು ನಾವಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಕನ್ನಡವನ್ನು ಮರೆಯಾಗಿಸುವ ಕೆಲಸ ಕನ್ನಡಿಗರಿಂದ ಚುನಾಯಿತವಾದ ಸರಕಾರದಿಂದ ಆಗಬಾರದು.

  ಮಕ್ಕಳು ತಾಯಿ ನುಡಿಯಲ್ಲಿ ಕಲಿಯಲು, ಪ್ರದೇಶ ಭಾಷೆಗಳು ಭವಿಷ್ಯತ್ಕಾಲಕ್ಕೂ ಉಳಿದು, ಬೆಳೆಯಲು ಇರುವ ಏಕಮೇವ ಮಾರ್ಗವೆಂದರೆ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಕಡ್ಡಾಯವಾಗಿ ಶಿಕ್ಷಣ ಮಾಧ್ಯಮವಾಗಬೇಕು. ಸಂವಿಧಾನಕ್ಕೆ ತಿದ್ದುಪಡಿ ಮಾಡದೆ ಇದು ಸಾಧ್ಯವಿಲ್ಲ. ಸಂವಿಧಾನಕ್ಕೆ ತಿದ್ದುಪಡಿಮಾಡಿ ಮಕ್ಕಳಿಗೆ ತಮ್ಮ ತಾಯಿಯ ಭಾಷೆಯಲ್ಲೇ ಕಲಿಯುವ ಅವಕಾಶ ಮಾಡಿಕೊಡಿ, ಪ್ರದೇಶ ಭಾಷೆಗಳು ಅಳಿಯದಂತೆ, ಈ ದೇಶದ ಬಹುಭಾಷಾ ಸಂಸ್ಕೃತಿ ಅಳಿಯದಂತೆ ಕಾಪಾಡಿ ಎಂಬ ಮೊರೆ ಅರಣ್ಯರೋದನವಾಗಿದೆ. ಭಾರತ ಒಂದೇ ಎನ್ನುವ ಭಾವನಾತ್ಮಕ ಅಂಶವನ್ನು ಮುಖ್ಯ ಕಾರ್ಯಸೂಚಿಯಾಗುಳ್ಳ ನರೇಂದ್ರ ಮೋದಿಯವರ ಸರಕಾರ ಈ ಮನವಿಗೆ ಕಿವುಡಾಗಿ ಹಿಂದಿಯನ್ನು ಹೇರುವ ಸನ್ನಾಹ ನಡೆಸುತ್ತಿದೆ. ಕನ್ನಡ ತಾಯಿಯ ಮೊಲೆಹಾಲು ಕುಡಿದ ನಮ್ಮ ಶಾಸಕರು/ಸಂಸದರೂ ಏಕತೆಯ ನೆಪದ ಹಿಂದಿನ ಹುನ್ನಾರಗಳಿಗೆ ಸ್ವಾರ್ಥಲಾಲಸೆಯಿಂದ ಶಾಮೀಲಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಈಗ ನಮ್ಮದೇ ಸರಕಾರದ ಪಬ್ಲಿಕ್ ಶಾಲೆ ನೀತಿಯಿಂದಾಗಿ ಪೂರ್ವಪ್ರಾಥಮಿಕ ಹಂತದಿಂದ ಕನ್ನಡವೇ ಶಿಕ್ಷಣ ಮಾಧ್ಯಮವಾಗಬೇಕೆಂಬ ಕೂಗು ಮತ್ತೆ ಎದ್ದಿದೆ. ಇದಕ್ಕೆ ಯಡಿಯೂರಪ್ಪನವರ ಸರಕಾರದ ಪ್ರತಿಕ್ರಿಯೆ ಏನೆಂಬುದು ಅಧಿಕೃತವಾಗಿ ತಿಳಿದುಬಂದಿಲ್ಲ. ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಪೋಷಕರು ಏಕೆ ಹಿಂಜರಿಯುತ್ತಾರೆ ಎಂಬುದಕ್ಕೆ ಅಲ್ಲಿನ ಮೂಲಭೂತ ಸೌಕರ್ಯಗಳ ಕೊರತೆಯೂ ಒಂದು ಮುಖ್ಯ ಕಾರಣ. ಶಿಕ್ಷಣ ತಜ್ಞರ ಪ್ರಕಾರ 2010-11ನೇ ಸಾಲಿನಲ್ಲಿ ಸರಕಾರಿ ಶಾಲೆಗಳಲ್ಲಿ 54 ಲಕ್ಷ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು. ಇವರ ಸಂಖ್ಯೆ 2018-19ರಲ್ಲಿ 43 ಲಕ್ಷಕ್ಕೆ ಇಳಿದಿದೆ. ಇದೇ ಅವಧಿಯಲ್ಲಿ ಖಾಸಗಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 28 ಲಕ್ಷದಿಂದ 44 ಲಕ್ಷಕ್ಕೆ ಏರಿದೆ. ಇದು ಕಳವಳಕಾರಿಯಾದುದು. ಸದ್ಯ ಸರಕಾರ ಶಿಕ್ಷಣಕ್ಕಾಗಿ ಜಿಡಿಪಿಯಲ್ಲಿ ಶೇ. 1ಕ್ಕಿಂತ ಕಡಿಮೆ ಖರ್ಚುಮಾಡುತ್ತಿದೆ.ಶೇ. 5ರಷ್ಟಾದರೂ ಖರ್ಚುಮಾಡಿದರೆ ಸರಕಾರಿ ಶಾಲೆಗಳ ಸ್ಥಿತಿಗತಿ ಸುಧಾರಿಸಬಹುದು ಎಂಬ ತಜ್ಞರ ಮಾತು ಮನನೀಯವಾದುದು. ಯಡಿಯೂರಪ್ಪನವರ ಸರಕಾರ ಪೂರ್ವಪ್ರಾಥಮಿಕ ಹಂತದಿಂದ ಕನ್ನಡವನ್ನು ಶಿಕ್ಷಣ ಮಾಧ್ಯಮವಾಗಿ ಕಡ್ಡಾಯವಾಗಿ ಜಾರಿಗೆ ತರುವುದರ ಜೊತೆಗೆ ಸರಕಾರಿ ಶಾಲೆಗಳಿಗೆ ಹೆಚ್ಚಿನ ಹಣ ನೀಡಿ ಅವುಗಳ ಸ್ಥಿತಿಗತಿ ಸುಧಾರಿಸುವುದರತ್ತ ಆದ್ಯತೆಯಿಂದ ಗಮನಕೊಡಬೇಕು. ಇದು ಕನ್ನಡಿಗರಿಂದ ಚುನಾಯಿತವಾದ ಸರಕಾರವೊಂದು ಕನ್ನಡ ಭಾಷೆಗೆ ಸಲ್ಲಿಸಬೇಕಾಗಿರುವ ಋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)