varthabharthi

ಆರೋಗ್ಯ

ರೋಗಗಳನ್ನು ತಿಳಿಯಲು ಇಂಟರ್ ನೆಟ್ ಉಪಯೋಗಿಸುತ್ತೀರಾ?: ಇದು ಅಪಾಯಕಾರಿ!

ವಾರ್ತಾ ಭಾರತಿ : 16 Sep, 2019

ನಮ್ಮಲ್ಲಿ ಏನೋ ಅಸ್ವಸ್ಥತೆಯ ಲಕ್ಷಣ ಕಂಡು ಬರುತ್ತಿದೆ ಎಂದು ಅನಿಸುವುದು ಮತ್ತು ಸ್ವಯಂ ರೋಗವನ್ನು ನಿರ್ಧರಿಸಲು ಕಂಪ್ಯೂಟರ್‌ನ ಮೊರೆ ಹೋಗುವುದು ನಮಗೇನೂ ಹೊಸದಲ್ಲ. ಆದರೆ ನಾವು ಕಂಪ್ಯೂಟರ್ ಪರದೆಯ ಮೇಲೆ ಏನನ್ನು ವೀಕ್ಷಿಸುತ್ತೇವೆಯೋ ಅದು ಕೆಲವೊಮ್ಮೆ ನಮ್ಮಲ್ಲಿ ಸಾವಿನ ಭೀತಿಯನ್ನು ಮೂಡಿಸುತ್ತದೆ. ಇದನ್ನು ಸಾಮಾನ್ಯವಾಗಿ ಎಲ್ಲರೂ ಒಂದಲ್ಲ ಒಂದು ಸಲ ಅನುಭವಿಸಿರುತ್ತಾರೆ.  

ತಲೆನೋವು ಅಥವಾ ಮೈಕೈ ನೋವಿನಂತಹ ಸಣ್ಣಪುಟ್ಟ ಲಕ್ಷಣಗಳಿದ್ದರೂ ನಾವು ಅಂತರ್ಜಾಲದ ಮೊರೆ ಹೋಗುತ್ತೇವೆ ಮತ್ತು ಅಲ್ಲಿಂದ ಮರಳುವಾಗ ತೀವ್ರ ಕಾಯಿಲೆಯೊಂದನ್ನು ತಲೆಯಲ್ಲಿ ಹೊತ್ತುಕೊಂಡಿರುತ್ತೇವೆ ಮತ್ತು ನಿಜಕ್ಕೂ ಜೀವಾಪಾಯವಿದೆ ಎಂಬ ಗುಮ್ಮ ನಮ್ಮನ್ನು ಕಾಡುತ್ತಿರುತ್ತದೆ. ಈ ಭಾವನೆ ನಮ್ಮನ್ನು ಪೀಡಿಸುತ್ತಿರುವುದರಿಂದ ನಾವು ಅಗತ್ಯಕ್ಕಿಂತ ಹೆಚ್ಚು ಎಚ್ಚರಿಕೆ ವಹಿಸಲು ಆರಂಭಿಸುತ್ತೇವೆ. ವೈದ್ಯರನ್ನು ಒಮ್ಮೆ ಭೇಟಿಯಾದರೆ ಸುಲಭವಾಗಿ ನಿವಾರಣೆಯಾಗಬಹುದಾಗಿದ್ದ ಈ ಸ್ಥಿತಿ ಅಥವಾ ಇಂತಹ ಭಾವನೆ ಅಥವಾ ನಿಖರವಾಗಿ ಹೇಳಬೇಕೆಂದರೆ ನಮ್ಮ ಮನಃಸ್ಥಿತಿಯ ಮೇಲಿನ ದುಷ್ಪರಿಣಾಮವನ್ನು ‘ಸೈಬರ್‌ ಕಾಂಡ್ರಿಯಾ ’ಎಂದು ಕರೆಯಲಾಗುತ್ತದೆ.

 ಸೈಬರ್‌ ಕಾಂಡ್ರಿಯಾ ಅಥವಾ ಕಂಪ್ಯುಕಾಂಡ್ರಿಯಾವು ಅಂತರ್ಜಾಲದಲ್ಲಿ ಅನಾರೋಗ್ಯದ ಲಕ್ಷಣಗಳ ಬಗ್ಗೆ ಹುಡುಕಾಟ ದಿಂದಾಗಿ ವ್ಯಕ್ತಿಯನ್ನು ಮಾನಸಿಕ ದುಷ್ಪರಿಣಾಮಕ್ಕೆ ಗುರಿಯಾಗಿಸುವ ವಿದ್ಯಮಾನವಾಗಿದೆ. ಯಾವುದೇ ವ್ಯಕ್ತಿ ತನ್ನ ಆರೋಗ್ಯದ ಬಗ್ಗೆ ಅಸಹಜವಾಗಿ ಆತಂಕಗೊಳ್ಳುತ್ತಿದ್ದರೆ ಅದನ್ನು ಹೈಪೊಕಾಂಡ್ರಿಯಾ ಎನ್ನಲಾಗುತ್ತದೆ ಮತ್ತು ಸೈಬರ್‌ಕಾಂಡ್ರಿಯಾ ಇದರ ಆನ್‌ಲೈನ್ ಆವೃತ್ತಿಯಾಗಿದೆ.

ನಿರ್ದಿಷ್ಟವಾದ ನಿಜವಾದ ಅಥವಾ ಕಪೋಲಕಲ್ಪಿತ ರೋಗಲಕ್ಷಣಗಳಿಗಾಗಿ ಕಡ್ಡಾಯವಾಗಿ ಅಂತರ್ಜಾಲವನ್ನು ಜಾಲಾಡುವ ಗೀಳನ್ನು ಹೊಂದಿರುವ ವ್ಯಕ್ತಿಯನ್ನು ಸೈಬರ್‌ ಕಾಂಡ್ರಿಯಾಕ್ ಎನ್ನಲಾಗುತ್ತದೆ.

ಕೆಲವರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರಬಹುದು,ಕೆಲವರ ಆಪ್ತರು ಗಂಭೀರ ಕಾಯಿಲೆಗಳಿಂದ ನರಳುತ್ತಿರಬಹುದು. ಸಾಮಾನ್ಯವಾಗಿ ಇಂತಹ ಅನುಭವಗಳನ್ನು ಹೊಂದಿರುವ ವ್ಯಕ್ತಿಗಳು ಸೈಬರ್‌ ಕಾಂಡ್ರಿಯಾಕ್ಕೆ ಸುಲಭವಾಗಿ ತುತ್ತಾಗುತ್ತಾರೆ. ಹೊಸದಾಗಿ ತಾಯ್ತನ ಅನುಭವಿಸುತ್ತಿರುವರು ತಮ್ಮ ನವಜಾತ ಶಿಶುವಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಂತರ್ಜಾಲವನ್ನು ಜಾಲಾಡುತ್ತಿದ್ದರೆ ಅವರೂ ಕೂಡ ಸೈಬರ್‌ ಕಾಂಡ್ರಿಯಾಕ್ಕೆ ತುತ್ತಾಗುವ ಸಾಧ್ಯತೆಗಳಿವೆ.

  ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಂದು ಮಾಹಿತಿಯು ನಮ್ಮ ಬೆರಳ ತುದಿಯಲ್ಲಿಯೇ ಸಿಗುತ್ತದೆ. ಮೌಸ್‌ನ ಒಂದು ಕ್ಲಿಕ್ ನಮಗೆ ಬೇಕಾಗಿರುವ ಮಾಹಿತಿಗಳನ್ನೆಲ್ಲ ನಮ್ಮೆದುರಿನ ಕಂಪ್ಯೂಟರ್‌ನ ಪರದೆಯಲ್ಲಿ ಹರಡುತ್ತದೆ,ಇದು ನಾವು ಮಿತಿಯಿಲ್ಲದ ಚಿಂತನೆಗಳು ಮತ್ತು ಪರಿಕಲ್ಪನೆಗಳಿಗೆ ಒಡ್ಡಿಕೊಳ್ಳುವಂತೆ ಮಾಡಿದೆ. ಅಂತರ್ಜಾಲದಲ್ಲಿ ಸಿಗುವ ಎಲ್ಲ ಮಾಹಿತಿಗಳೂ ನಿಜವೇನಲ್ಲ. ಅಂತರ್ಜಾಲದಲ್ಲಿರುವ ಎಲ್ಲ ಮಾಹಿತಿಗಳು ಮತ್ತು ಬರಹಗಳನ್ನು ವಿಷಯದ ಬಗ್ಗೆ ಜ್ಞಾನ ಹೊಂದಿದವರೇ ಮಾಡಿರುತ್ತಾರೆ ಎಂದೇನಿಲ್ಲ.

ನಮ್ಮಂತಹ ಸಾಮಾನ್ಯ ಜನರೂ ಬರಹಗಳನ್ನು ಪೋಸ್ಟ್ ಮಾಡುತ್ತಾರೆ. ಹೀಗಾಗಿ ಅಂತರ್ಜಾಲದಲ್ಲಿಯ ಮಾಹಿತಿಗಳು ಕೆಲವೊವ್ಮೆು ದಾರಿ ತಪ್ಪಿಸುತ್ತವೆ. ಕಳೆದ ವರ್ಷ ವಿಶ್ವಾದ್ಯಂತ ಕನಿಷ್ಠ 55ರಷ್ಟು ಜನರು ಆರೋಗ್ಯ ಮಾಹಿತಿಗಾಗಿ ಆನ್‌ಲೈನ್‌ನಲ್ಲಿ ತಡಕಾಡಿದ್ದಾರೆ ಮತ್ತು ಈ ಪೈಕಿ ಹೆಚ್ಚಿನವರು ಸ್ವಯಂ ರೋಗ ನಿರ್ಧಾರಕ್ಕಾಗಿ ಮಾಹಿತಿಗಳನ್ನು ಹುಡುಕಾಡಿದ್ದರು ಎನ್ನುವುದು ಅಧ್ಯಯನಗಳಿಂದ ತಿಳಿದು ಬಂದಿದೆ. ಈ ಶೇ.55ರಲ್ಲಿ ಕನಿಷ್ಠ ಶೇ.10ರಷ್ಟು ಜನರು ತಾವು ಕಂಡುಕೊಂಡಿದ್ದ ಫಲಿತಾಂಶಗಳಿಂದ ಚಿಂತಗೊಳಗಾಗಿದ್ದರು ಮತ್ತು ಇದು ಅವರಲ್ಲಿ ಆತಂಕ ಮತ್ತು ಭೀತಿಯನ್ನು ಸೃಷ್ಟಿಸಿತ್ತು ಎನ್ನುವುದನ್ನು ಪ್ರತ್ಯೇಕ ಅಧ್ಯಯನವೊಂದು ಬೆಟ್ಟು ಮಾಡಿದೆ. ಆತಂಕವು ಅಪಾಯಕಾರಿ ಮಟ್ಟಕ್ಕೆ ತಲುಪುವುದರೊಂದಿಗೆ ಇದು ತೀವ್ರ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಲ್ಲದು.

ಅಂತರ್ಜಾಲ ಮತ್ತು ಮಾಹಿತಿ ವಿನಿಮಯದ ಈ ಯುಗವು ನಿಜಕ್ಕೂ ನಮ್ಮೆಲ್ಲರಿಗೆ ವರದಾನವಾಗಿದೆ. ವಿಶ್ವದ ಎಲ್ಲ ಮೂಲೆಗಳಿಂಲೂ ಮಾಹಿತಿಗಳು ನಮಗೆ ಸುಲಭವಾಗಿ ಸಿಗುತ್ತವೆ. ಅಲ್ಲದೆ ನಮ್ಮ ಮಿದುಳು ಧನಾತ್ಮಕ ಅಂಶಗಳಿಗಿಂತ ನಕಾರಾತ್ಮಕ ಅಂಶಗಳನ್ನೇ ಹೆಚ್ಚಾಗಿ ತನ್ನ ಗಮನಕ್ಕೆ ತೆಗೆದುಕೊಳ್ಳುತ್ತಿರುತ್ತದೆ. ತನ್ನ ರಚನಾತ್ಮಕ ಸ್ವರೂಪದಿಂದಾಗಿ ಅದು ಅಹಿತಕರ ಸುದ್ದಿಗಳಿಗೆ ಹೆಚ್ಚಿನ ಸಂವೇದನೆಯನ್ನು ಹೊಂದಿರುತ್ತದೆ.

 ಹೆಚ್ಚಿನ ಜಾಲತಾಣಗಳು ವ್ಯಕ್ತಿಯ ಮಾನಸಿಕ ಸ್ವಾಸ್ಥ್ಯದ ಮೇಲೆ ಬೀರಬಹುದಾದ ಪರಿಣಾಮಗಳನ್ನು ಪರಿಗಣಿಸದೆ ತಮ್ಮ ಲಾಭಗಳಿಗೋಸ್ಕರ ಭೀಕರ ಚಿತ್ರಣವನ್ನು ನೀಡುವ ಆರೋಗ್ಯ ಮಾಹಿತಿಗಳನ್ನು ಹೊಂದಿರುತ್ತವೆ. ಸೈಬರ್‌ ಕಾಂಡ್ರಿಯಾದ ಲಕ್ಷಣಗಳು ಇಲ್ಲಿವೆ:

ಪ್ರತಿದಿನ ಒಂದರಿಂದ ಮೂರು ಗಂಟೆಗಳ ಕಾಲ ಅಂತರ್ಜಾಲದಲ್ಲಿ ಕಾಯಿಲೆಗಳ ಲಕ್ಷಣಗಳು ಮತ್ತು ಇತರ ಮಾಹಿತಿಗಳನ್ನು ಹುಡುಕಾಡುವುದು. ಸ್ಥಿತಿ ಹದಗೆಟ್ಟ ದಿನಗಳಲ್ಲಂತೂ ಇನ್ನಷ್ಟು ಹೆಚ್ಚು ಸಮಯ ರೋಗಗಳ ಬಗ್ಗೆ ಮಾಹಿತಿಗಳನ್ನು ಓದುತ್ತ ಕಂಪ್ಯೂಟರ್ ಮುಂದೆ ಕುಳಿತಿರುವುದು. ಯಾವುದಾದರೂ ದೊಡ್ಡ ರೋಗಕ್ಕೆ ತಾನು ಗುರಿಯಾಗುತ್ತಿದ್ದೇನೆ ಎಂಬ ಭೀತಿಯನ್ನು ಬೆಳೆಸಿಕೊಳ್ಳುವುದು ಇವೆಲ್ಲ ಸೈಬರ್‌ ಕಾಂಡ್ರಿಯಾವನ್ನು ಸೂಚಿಸುವ ಲಕ್ಷಣಗಳಾಗಿವೆ.

ಹೆಚ್ಚಿನವರು ತಮ್ಮ ಆರೋಗ್ಯದ ಬಗ್ಗೆ ಅತಿಯಾದ ಕಾಳಜಿಯನ್ನು ಹೊಂದಿರುತ್ತಾರೆ. ಇದು ಎಷ್ಟರ ಮಟ್ಟಿಗಿರುತ್ತದೆ ಎಂದರೆ ಉದ್ವಿಗ್ನತೆ ಮತ್ತು ಒತ್ತಡಗಳಿಂದಾಗಿ ಅವರ ಆರೋಗ್ಯಕ್ಕೆ ನಿಜಕ್ಕೂ ಹಾನಿಯುಂಟಾಗುತ್ತದೆ. ಆರೋಗ್ಯದ ಕುರಿತ ಈ ಮೋಹ ವ್ಯಕ್ತಿಯಲ್ಲಿ ಆತಂಕವನ್ನು ಹೆಚ್ಚಿಸುತ್ತದೆ ಮತ್ತು ಅಂತಹವರು ಆರೋಗ್ಯ ತಜ್ಞರಿಂದ ಸಲಹೆಯನ್ನು ಪಡೆದುಕೊಳ್ಳುವುದು ಅಗತ್ಯವಾಗುತ್ತದೆ. ಜನರು ಹೆಚ್ಚಿನ ಪ್ರಕರಣಗಳಲ್ಲಿ ಅಂತರ್ಜಾಲದಲ್ಲಿ ಲಭ್ಯವಿರುವ ಔಷಧಿಗಳು ಮತ್ತು ಚಿಕಿತ್ಸೆಯ ಕುರಿತು ಮಾಹಿತಿಗಳನ್ನು ಹುಡುಕಾಡುತ್ತ ತಮ್ಮಲ್ಲಿ ಇಲ್ಲದ ರೋಗವನ್ನು ತಮ್ಮ ಮೇಲೆ ಆರೋಪಿಸಿಕೊಳ್ಳುತ್ತಾರೆ.

ವ್ಯಕ್ತಿಯು ಅಂತರ್ಜಾಲದಲ್ಲಿ ಹುಡುಕುವ ಲಕ್ಷಣಗಳು ಬೇರೊಂದು ರೋಗದ ಲಕ್ಷಣಗಳೂ ಆಗಿರಬಹುದು. ಹೀಗಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವೈದ್ಯರ ಭೇಟಿಯು ಅತ್ಯುತ್ತಮ ಮಾರ್ಗವಾಗಿದೆ.

ನಾವು ಅನಾರೋಗ್ಯದಿಂದಿದ್ದಾಗ ವೈದ್ಯರು ನೀಡುವ ಚಿಕಿತ್ಸೆಗೆ ಯಾವುದೇ ಪರ್ಯಾಯವಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದೇ ಸೈಬರ್‌ ಕಾಂಡ್ರಿಯಾಕ್ಕೆ ಅತ್ಯುತ್ತಮ ಚಿಕಿತ್ಸೆಯಾಗಿದೆ. ನಿಮಗೆ ನಿಮ್ಮ ಆರೋಗ್ಯದ ಬಗ್ಗೆ ಅತಿಯಾದ ಕಾಳಜಿಯಿದ್ದರೆ ಅಂತರ್ಜಾಲವನ್ನು ಜಾಲಾಡಿ ಸ್ವಯಂ ರೋಗವನ್ನು ನಿರ್ಧರಿಸಿಕೊಳ್ಳುವ ಬದಲು ವೈದ್ಯರನ್ನು ಭೇಟಿಯಾಗುವುದೇ ಉತ್ತಮ.

 ಸೈಬರ್‌ಕಾಂಡ್ರಿಯಾದಿಂದ ಬಳಲುತ್ತಿರುವ ವ್ಯಕ್ತಿಗೆ ಕಾಗ್ನಿಟಿವ್ ಬಿಹೇವಿಯರಲ್ ಥೇರಪಿ ಅಥವಾ ಅರಿವಿನ ವರ್ತನೆಯ ಚಿಕಿತ್ಸೆ ಅಗತ್ಯವಾಗುತ್ತದ. ಈ ವಿಧದ ಮನೋಚಿಕಿತ್ಸೆಯಲ್ಲಿ ವ್ಯಕ್ತಿಯು ತನ್ನ ಬಗ್ಗೆ ಮತ್ತು ಜಗತ್ತಿನ ಬಗ್ಗೆ ಹೊಂದಿರುವ ನಕಾರಾತ್ಮಕ ಚಿಂತನೆಯನ್ನು ಹೋಗಲಾಡಿಸಿ ಆತನ ವರ್ತನೆಯಲ್ಲಿ ಸೂಕ್ತ ಬದಲಾವಣೆಗಳನ್ನು ತರಲಾಗುತ್ತದೆ.

ಆರೋಗ್ಯ ಮಾಹಿತಿಗಳನ್ನು ತಿಳಿದುಕೊಳ್ಳಬೇಕಿದ್ದರೆ ಅಧಿಕೃತ ಜಾಲತಾಣಗಳಿಗೆ ಮಾತ್ರ ಭೇಟಿ ನೀಡಬೇಕು. ನೀವು ಏನನ್ನೇ ಓದಿರಲಿ,ಯಾವುದೇ ಮಾಹಿತಿ ಪಡೆದಿರಲಿ...ಅದನ್ನು ಕುರುಡಾಗಿ ನಂಬಬೇಡಿ ಅಥವಾ ತಜ್ಞರ ಸಲಹೆ ಪಡೆದುಕೊಳ್ಳದೆ ಅದನ್ನು ತಕ್ಷಣವೇ ಅನುಸರಿಸಬೇಡಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)