varthabharthiರಾಷ್ಟ್ರೀಯ

2018-19 ರಲ್ಲಿ ಏರ್ ಇಂಡಿಯಾಗೆ 4,600 ಕೋಟಿ ರೂ. ನಷ್ಟ

ವಾರ್ತಾ ಭಾರತಿ : 16 Sep, 2019

  ಹೊಸದಿಲ್ಲಿ, ಸೆ. 16: ಮುಖ್ಯವಾಗಿ ಅತ್ಯಧಿಕ ತೈಲಬೆಲೆ ಹಾಗೂ ವಿದೇಶಿ ವಿನಿಮಯ ನಷ್ಟದಿಂದಾಗಿ ಕಳೆದ ಹಣಕಾಸು ವರ್ಷದಲ್ಲಿ ಏರ್ ಇಂಡಿಯಾ ಸುಮಾರು 4,600 ಕೋಟಿ ರೂಪಾಯಿ ಕಾರ್ಯಾಚರಣೆ ನಷ್ಟ ದಾಖಲಿಸಿದೆ.

  ಆದರೆ, ಸಾಲದಲ್ಲಿ ಮುಳುಗಿರುವ ಏರ್ ಇಂಡಿಯಾ 2019-20ರಲ್ಲಿ ಕಾರ್ಯಾಚರಣೆ ಲಾಭದಾಯಕವಾಗಿ ಪರಿವರ್ತಿತವಾಗುವ ನಿರೀಕ್ಷೆ ಇದೆ ಎಂದು ಏರ್ ಇಂಡಿಯಾದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

 ಏರ್ ಇಂಡಿಯಾದ ನಿವ್ವಳ ನಷ್ಟ 8,400 ಕೋಟಿ ರೂಪಾಯಿ ಆಗಿದ್ದರೆ, 2018-19ರಲ್ಲಿ ಒಟ್ಟು ಆದಾಯ 26,400 ಕೋಟಿ ರೂಪಾಯಿ ತಲುಪಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತೈಲ ಬೆಲೆ ಗಮನಾರ್ಹವಾಗಿ ಏರಿಕೆಯಾಗದಿದ್ದಲ್ಲಿ ಹಾಗೂ ವಿದೇಶಿ ವಿನಿಮಯ ದರದಲ್ಲಿ ತೀವ್ರ ಏರಿಳಿತ ಇರದಿದ್ದಲ್ಲಿ, 2019-20ರಲ್ಲಿ ಏರ್ ಇಂಡಿಯಾ 700 ಕೋಟಿ ರೂಪಾಯಿಯಿಂದ 800 ಕೋಟಿ ರೂಪಾಯಿ ವರೆಗೆ ಕಾರ್ಯಾಚರಣೆ ಲಾಭ ದಾಖಲಿಸಲಿದೆ ಎಂದು ಇನ್ನೋರ್ವ ಅಧಿಕಾರಿ ತಿಳಿಸಿದ್ದಾರೆ.

ಆದರೆ, ಜೂನ್‌ಗೆ ಅಂತ್ಯಗೊಂಡ ಮೂರು ತಿಂಗಳಲ್ಲಿ ಏರ್ ಇಂಡಿಯಾ 175 ಕೋಟಿ ರೂಪಾಯಿಯಿಂದ 200 ಕೋಟಿ ರೂಪಾಯಿ ಕಾರ್ಯಾಚರಣೆ ನಷ್ಟ ದಾಖಲಿಸಿದೆ. ಭಾರತೀಯ ವಿಮಾನಗಳಿಗೆ ಪಾಕಿಸ್ತಾನ ತನ್ನ ವಾಯು ಪ್ರದೇಶವನ್ನು ಮುಚ್ಚಿರುವುದು ವೆಚ್ಚ ಹೆಚ್ಚಾಗಿ ನಷ್ಟ ಉಂಟಾಗಿದೆ. ವಾಯು ಹಾರಾಟ ನಿರ್ಬಂಧ ಜಾರಿಯಲ್ಲಿದ್ದಾಗ ವಿಮಾನಗಳ ಕಾರ್ಯಾಚರಣೆಗೆ ಪ್ರತಿದಿನ 3ರಿಂದ 4 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಬಾಲಕೋಟ್ ದಾಳಿಯ ಬಳಿಕ ಪಾಕಿಸ್ತಾನ ತನ್ನ ವಾಯು ಪ್ರದೇಶ ಮುಚ್ಚಿರುವುದರಿಂದ ನಾಲ್ಕು ತಿಂಗಳಲ್ಲಿ ಏರ್ ಇಂಡಿಯಾಕ್ಕೆ 430 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)