varthabharthi


ನಿಮ್ಮ ಅಂಕಣ

ಆರ್‌ಟಿಒ ಕಚೇರಿಯಲ್ಲಿ ಬ್ರೋಕರ್‌ಗಳ ಹಾವಳಿ

ವಾರ್ತಾ ಭಾರತಿ : 17 Sep, 2019
-ವಿಜಯ್‌ಕುಮಾರ್ ಎಚ್. ಕೆ. ಶಕ್ತಿನಗರ, ರಾಯಚೂರು

ಮಾನ್ಯರೇ,

ಕೇಂದ್ರ ಸರಕಾರ ಹೊಸ ಮೋಟರ್ ವಾಹನ ಕಾಯ್ದೆ ಜಾರಿ ಮಾಡಿದೆ. ಆದರೆ ಸಾಮಾನ್ಯ ವ್ಯಕಿಯೋರ್ವ ನೇರವಾಗಿ ಆರ್‌ಟಿಒ ಕಚೇರಿಗೆ ಹೋಗಿ ಲೈಸನ್ಸ್ ಅಥವಾ ವಾಹನವನ್ನು ನೋಂದಾವಣೆ ಮಾಡುವುದು ರಾಜ್ಯದ ಕೆಲವೆಡೆ ಇನ್ನೂ ಕನಸಿನ ಮಾತು.

ಉದಾಹರಣೆಗೆ ಆರ್‌ಟಿಒ ಕಚೇರಿಗೆ ಸಾಮಾನ್ಯನೋರ್ವ ಹೋದರೆ ಅಲ್ಲಿನ ಸಿಬ್ಬಂದಿಯಾಗಲಿ, ಅಧಿಕಾರಿಗಳಾಗಲಿ ಕಣ್ಣೆತ್ತಿ ಕೂಡ ನೋಡಲಾರದ ಪರಿಸ್ಥಿತಿ ರಾಯಚೂರು ಆರ್‌ಟಿಒ ಕಚೇರಿಯಲ್ಲಿದೆ. ಹಾಗಾಗಿ ಹೆಚ್ಚಿನ ವಾಹನ ಸವಾರರು ಆ ಕಡೆ ತಲೆಯನ್ನೇ ಹಾಕದೆ ನೇರ ಬ್ರೋಕರ್‌ಗಳ ಮೊರೆ ಹೋಗಿ ತಮ್ಮ ವಾಹನದ ಪರವಾನಿಗೆ, ನೋಂದಾವಣೆ ಮಾಡಿಸಿಕೊಳ್ಳಬೇಕಾದ ಸ್ಥಿತಿಯಿದೆ.

ದ್ವಿಚಕ್ರ ವಾಹನ ಕಲಿಯಲು ನೀಡುವ ಅನುಜ್ಞಾ ಪತ್ರಕ್ಕೆ ಸರಕಾರಕ್ಕೆ ವಿಧಿಸಿರುವ ಶುಲ್ಕ ಕೇವಲ 150 ರೂಪಾಯಿ. ಚಾಲನಾ ಪರವಾನಿಗೆಯ ಪರೀಕ್ಷಾ ಶುಲ್ಕ ರೂ.50. ನಂತರ ನೀಡುವ ಚಾಲನಾ ಪತ್ರಕ್ಕೆ(ಲೈಸನ್ಸ್) 300 ರೂಪಾಯಿಗಳು. ಅಂದರೆ ದ್ವಿಚಕ್ರ ವಾಹನದ ಲೈಸನ್ಸ್ ಪಡೆಯಲು ಸರಕಾರಕ್ಕೆ ನೀಡುವ ಶುಲ್ಕ ಕೇವಲ 500 ರೂಪಾಯಿಗಳು. ಆದರೆ ನೇರವಾಗಿ ಇದನ್ನು ಮಾಡಬೇಕೆಂದು ಆರ್‌ಟಿಒ ಕಚೇರಿಗೆ ಹೋದರೆ ಕನಿಷ್ಠ 3 ವರ್ಷವಾದರೂ ಬೇಕು. ಆದರೆ ನೀವು ಬ್ರೋಕರ್ ಮುಖಾಂತರ ಹೋದರೆ ಕೇವಲ ಒಂದು ತಿಂಗಳಲ್ಲಿ ನಿಮ್ಮ ಲೈಸನ್ಸ್ ನಿಮ್ಮ ಕೈಗೆ ಸಿಗುತ್ತದೆ. ಈ ಡ್ರೈವಿಂಗ್ ಲೈಸನ್ಸ್‌ಗೆ ಬರೋಬ್ಬರಿ 3,500 ರೂಪಾಯಿ ತೆರಬೇಕಾಗುತ್ತದೆ. ಹೀಗೆಯೇ ರಾಯಚೂರಿನ ಆರ್‌ಟಿಒದಲ್ಲಿ ಬ್ರೋಕರ್‌ಗಳಿಲ್ಲದೆ ಯಾವುದೇ ಸಾಮಾನ್ಯ ಜನರ ಕೆಲಸವಾಗುತ್ತಿಲ್ಲ. ಬ್ರೋಕರ್‌ಗಳ ಈ ರೀತಿಯ ವಸೂಲಿ ಬಾಜಿಯಲ್ಲಿ ಹಲವರಿಗೆ ಪಾಲಿದೆ ಎನ್ನುವುದು ಕಟು ಸತ್ಯ. ಅಪರೂಪಕ್ಕೆಂಬಂತೆ ಲೋಕಾಯುಕ್ತ, ಎಸಿಬಿ ಅಧಿಕಾರಿಗಳು ದಾಳಿ ನಡೆಸುತ್ತಾರೆ. ಆದರೆ ಅವರಿಗೆ ಸತ್ಯದ ರೂಪ ದರ್ಶನವಾಗುವುದೇ ಇಲ್ಲ. ಇನ್ನಾದರೂ ಇವೆಲ್ಲವನ್ನು ಸಂಬಂಧ ಪಟ್ಟ ಅಧಿಕಾರಿಗಳು ಕಣ್ಣು ತೆರೆದು ನೋಡಬೇಕಾಗಿದೆ. ಸುಲಭ ರೀತಿಯಲ್ಲಿ ಜನರಿಗೆ ಚಾಲನಾ ಪರವಾನಿಗೆ, ವಾಹನ ನೋಂದಾವಣೆ, ಬದಲಾವಣೆಗಳನ್ನು ಅಧಿಕಾರಿಗಳು ಯಾವುದೇ ಸಮಸ್ಯೆಗಳಿಲ್ಲದೆ ಮಾಡಿಕೊಡುವಂತೆ ಸರಕಾರ ಕ್ರಮಕೈಗೊಳ್ಳಬೇಕೆಂದು ಜನರ ಆಗ್ರಹವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)