varthabharthi

ಸಂಪಾದಕೀಯ

ದಲಿತರ ವಿರುದ್ಧ ದಲಿತರನ್ನೇ ಬಳಸಿಕೊಳ್ಳುತ್ತಿರುವ ಸಂಘಪರಿವಾರ

ವಾರ್ತಾ ಭಾರತಿ : 19 Sep, 2019

ಈ ದೇಶದಲ್ಲಿ ಜಾತಿ ತನ್ನ ಬೇರನ್ನು ಅದೆಷ್ಟು ಆಳವಾಗಿ ಇಳಿಸಿದೆಯೆಂದರೆ, ಪ್ರಜಾಸತ್ತಾತ್ಮಕ ವ್ಯವಸ್ಥೆ ಅದರ ಮುಂದೆ ಅಸಹಾಯಕವಾಗಿ ಬಿಡುತ್ತದೆ. ‘ಈ ದೇಶದಲ್ಲಿ ಜಾತಿ ಎಲ್ಲಿದೆ? ಮೀಸಲಾತಿಯ ಅಗತ್ಯ ಈಗ ಇಲ್ಲ’ ಎಂದೆಲ್ಲ ಹೇಳಿಕೆ ನೀಡುವವರ ಮುಖವನ್ನೇ ಪರಚುವಂತೆ ಚಿತ್ರದುರ್ಗದ ಪಾವಗಡದಲ್ಲಿ ಜಾತಿ ತನ್ನ ಉಗುರನ್ನು ಚಾಚಿದೆ. ಚಿತ್ರದುರ್ಗದ ಸಂಸದ ನಾರಾಯಣ ಸ್ವಾಮಿಯವರು ಸಾರ್ವಜನಿಕ ಕುಂದುಕೊರತೆಗಳನ್ನು ಆಲಿಸುವುದಕ್ಕಾಗಿ ಇಲ್ಲಿನ ಪಾವಗಡದ ನಿಡಗಲ್ಲು ಹೋಬಳಿಯ ಪೆಮ್ಮನ ಹಳ್ಳಿ ಗೊಲ್ಲರ ಹಟ್ಟಿಗೆ ಭೇಟಿ ನೀಡಲು ಮುಂದಾದಾಗ, ಅಲ್ಲಿನ ಮೇಲ್ಜಾತಿಯ ಗ್ರಾಮಸ್ಥರು ಅವರಿಗೆ ತಡೆಯೊಡ್ಡಿದ್ದಾರೆ. ಕಾರಣ ಇಷ್ಟೇ, ಸಂಸದರದು ಕೆಳ ಜಾತಿ. ಸಂಸದ ನಾರಾಯಣ ಸ್ವಾಮಿಯವರು ‘ನಾವೆಲ್ಲ ಹಿಂದೂ, ಒಂದು’ ಎಂದು ಹೇಳುವ ಬಿಜೆಪಿಗೆ ಸೇರಿದವರು ಎನ್ನುವುದು ಇನ್ನೊಂದು ವಿಶೇಷ. ಸಂಘಪರಿವಾರ ಪ್ರತಿಪಾದಿಸುವ ಹಿಂದುತ್ವವನ್ನು ಅಣಕಿಸುವಂತೆ ಈ ಘಟನೆ ನಡೆದಿದೆ. ಇಷ್ಟಕ್ಕೂ ಆತ ಯಾವುದೋ ದೇವಸ್ಥಾನಕ್ಕೋ, ಅಥವಾ ಇನ್ನಾವುದೋ ಧಾರ್ಮಿಕ ಸ್ಥಳಕ್ಕೆ ಪ್ರವೇಶಿಸಲು ಹೊರಟಿಲ್ಲ. ತನ್ನ ಕರ್ತವ್ಯದ ಭಾಗವಾಗಿ ಆ ಗ್ರಾಮಕ್ಕೆ ತೆರಳಿದ್ದರು. ಒಂದು ಊರಿಗೆ ಮಾದಿಗ ಸಮುದಾಯದ ನಾಯಕನೊಬ್ಬ ಕಾಲಿಟ್ಟಾಕ್ಷಣ ಆ ಊರೇ ಮೈಲಿಗೆಯಾಗುತ್ತದೆ ಎಂಬ ಮನಸ್ಥಿತಿ ಈ ದೇಶದ ಜಾತಿಯ ಕರಾಳತೆಯನ್ನು ಬಹಿರಂಗಪಡಿಸಿದೆ. ಒಬ್ಬ ಸಂಸದ ಇಂತಹದೊಂದು ಅವಮಾನವನ್ನು ಅನುಭವಿಸುತ್ತಾನೆ ಎಂದಾದರೆ, ಆ ಊರಲ್ಲಿ ಅಥವಾ ಆ ತಾಲೂಕಿನಲ್ಲಿರುವ ಮಾದಿಗ ಸಮುದಾಯದ ಇತರ ಶ್ರೀಸಾಮಾನ್ಯರ ಸ್ಥಿತಿಗತಿಗಳು ಹೇಗಿರಬಹುದು?

 ಈ ದೇಶದಲ್ಲಿ ಮೀಸಲಾತಿಯ ಅಗತ್ಯ ಇನ್ನೂ ಯಾಕಿದೆ? ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. ಭಾರತದಲ್ಲಿರುವ ಬಡವರಿಗೂ ಮೀಸಲಾತಿಯನ್ನು ಹಂಚಲು ಹೊರಟಿರುವವರು ‘ಜಾತಿ ಸಮಸ್ಯೆ ಬಡತನದ ಸಮಸ್ಯೆಗಿಂತ ಭಿನ್ನವಾದುದು’ ಎನ್ನುವುದನ್ನು ಈ ಪ್ರಕರಣದ ಮೂಲಕ ಕಂಡುಕೊಳ್ಳಬೇಕಾಗಿದೆ. ಒಬ್ಬ ದಲಿತ ಈ ದೇಶದಲ್ಲಿ ಶ್ರೀಮಂತನಾದಾಕ್ಷಣ ಅಥವಾ ಅತ್ಯುನ್ನತ ಸ್ಥಾನ ಪಡೆದಾಕ್ಷಣ ಸರ್ವರಿಗೆ ಮಾನ್ಯನಾಗುವುದಿಲ್ಲ. ಜಾತಿಯಿಂದ ಕಳಚಿಕೊಳ್ಳುವುದಕ್ಕೆ ಆತನಿಗೆ ಸಾಧ್ಯವಿಲ್ಲ. ಸಂಸದನಾದ ಬಳಿಕವೂ ಒಬ್ಬ ದಲಿತ ಈ ಪರಿಯ ಅವಮಾನವನ್ನು ಅನುಭವಿಸುತ್ತಾನೆ ಎಂದಾದರೆ, ಮೀಸಲಾತಿ ಇಲ್ಲದೇ ಇದ್ದರೆ ಅವರ ಸ್ಥಿತಿ ಅದೆಷ್ಟು ಹೀನಾಯವಾಗಿ ಬಿಡುತ್ತಿತ್ತು? ಸಂವಿಧಾನದ ಅನಿವಾರ್ಯತೆ ಇಲ್ಲದೇ ಇರುತ್ತಿದ್ದರೆ ಚಿತ್ರದುರ್ಗದ ಸಂಸದ ನಾರಾಯಣ ಸ್ವಾಮಿಯನ್ನು ಸ್ವತಃ ಬಿಜೆಪಿ ನಾಯಕರೇ ತಮ್ಮ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುತ್ತಿರಲಿಲ್ಲ. ಉಳಿದ ಮಾದಿಗ ಸಮುದಾಯ ತಮ್ಮ ಹಕ್ಕುಗಳನ್ನು ಈ ಮೇಲ್ಜಾತಿಗಳಿಂದ ಪಡೆದುಕೊಳ್ಳುವುದೂ ಸಾಧ್ಯವಾಗುತ್ತಿರಲಿಲ್ಲ. ಇದು ಕೇವಲ ಚಿತ್ರದುರ್ಗಕ್ಕೆ ಸೀಮಿತವಾದ ಅಸ್ಪಶ್ಯತೆ ಅಲ್ಲ. ಉತ್ತರ ಕರ್ನಾಟಕದ ಭಾಗವೂ ಸೇರಿದಂತೆ ಉತ್ತರ ಭಾರತದಲ್ಲಿ ಇಂದಿಗೂ ಕೆಳಜಾತಿಯ ಕುರಿತಂತೆ ಅತ್ಯಂತ ಹೀನಾಯ ಭಾವನೆಯಿದೆ.

ದಲಿತರ ಪರವಾಗಿ ಇಷ್ಟೆಲ್ಲ ಕಾನೂನುಗಳಿದ್ದರೂ ಅವರ ಮೇಲೆ ದೌರ್ಜನ್ಯ ಹೆಚ್ಚುತ್ತಲೇ ಇದೆ. ದುರಂತವೆಂದರೆ, ಈ ಪಾವಗಡದಲ್ಲಿ ಸಂಸದರ ವಿರುದ್ಧ ಅಸ್ಪಶ್ಯತೆಯನ್ನು ಆಚರಿಸಿದವರು ಬ್ರಾಹ್ಮಣರೋ, ಹಿಂದುಳಿದ ವರ್ಗಕ್ಕೆ ಸೇರಿದ ಬಲಾಢ್ಯರೋ ಅಲ್ಲ. ಇವರೂ ಬುಡಕಟ್ಟು ಸಮುದಾಯಕ್ಕೆ ಸೇರಿದ ಜನರು. ಸ್ವತಃ ಇತರರಿಂದ ಅಸ್ಪಶ್ಯತೆಯನ್ನು ಎದುರಿಸುತ್ತಿರುವವರು. ಆದರೆ ಮಾದಿಗ ಸಮುದಾಯ ತಮ್ಮ ಸಮುದಾಯಕ್ಕಿಂತಲೂ ಕೀಳು ಎನ್ನುವ ಕಾರಣಕ್ಕಾಗಿ ಸ್ವತಃ ಅಸ್ಪಶ್ಯತೆಯ ಸಂತ್ರಸ್ತರೇ ಅಸ್ಪಶ್ಯತೆಯನ್ನು ಆಚರಿಸುವ ಮೂಲಕ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಾರೆ. ಬಹುಶಃ ಈ ದೇಶದಲ್ಲಿ ಮೀಸಲಾತಿ ಮಾತ್ರವಲ್ಲ, ಒಳಮೀಸಲಾತಿಯ ಅಗತ್ಯ, ಅನಿವಾರ್ಯವನ್ನು ಕೂಡ ಈ ಪ್ರಕರಣ ಹೇಳಿದೆ. ದಲಿತರೆಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ಮೀಸಲಾತಿಯನ್ನು ಹಂಚುವುದು ಸಲ್ಲ. ದಲಿತರೊಳಗೂ ಶಕ್ತರು-ಅಶಕ್ತರನ್ನು ಗುರುತಿಸುವ ಕೆಲಸ ನಡೆಯಬೇಕಾಗಿದೆ. ದಲಿತರಿಂದಲೇ ಜಾತಿ ಅವಮಾನಗಳನ್ನು ಎದುರಿಸುತ್ತಿರುವ ದಲಿತ ಸಮುದಾಯದ ರಕ್ಷಣೆಯ ಬಗ್ಗೆಯೂ ಕ್ರಮ ತೆಗೆದುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಮೀಸಲಾತಿಯನ್ನು ತಳಸ್ತರದ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳುವ ಅಗತ್ಯವಿದೆ. ಇಷ್ಟಕ್ಕೂ ಮಾದಿಗ ಸಮುದಾಯದ ಸಂಸದನಿಗೆ ನಿಷೇಧ ಹೇರಿದವರನ್ನು ಮೇಲ್‌ವರ್ಣೀಯ ಸ್ಥಾನದಲ್ಲಿ ಇಟ್ಟು ಶಿಕ್ಷಿಸುವಂತಿಲ್ಲ. ಯಾಕೆಂದರೆ ಅನಕ್ಷರತೆ, ಬಡತನ, ಕಂದಾಚಾರ ಇವರಿಂದ ಇಂತಹ ಕೆಲಸವನ್ನು ಮಾಡಿಸಿದೆಯೇ ಹೊರತು, ತಮ್ಮ ಜಾತಿಯ ಮೇಲರಿಮೆ ಅಲ್ಲ. ಈ ಅಸ್ಪಶ್ಯತೆಯನ್ನು ಆಚರಿಸಿದ ಗ್ರಾಮದ ಜನರನ್ನು ಕಾನೂನಿನ ಮೂಲಕ ಶಿಕ್ಷಿಸದೆ, ಅವರಲ್ಲಿ ಜಾಗೃತಿ ಬಿತ್ತುವ ಕೆಲಸವಾಗಬೇಕು. ಹಾಗೆಯೇ, ಒಬ್ಬರನ್ನು ಜಾತಿಯ ಹೆಸರಲ್ಲಿ ದೂರವಿಡುವುದು, ಪರೋಕ್ಷವಾಗಿ ತಮ್ಮ ಮೇಲೆ ನಡೆಯುವ ಜಾತೀಯ ದೌರ್ಜನ್ಯಕ್ಕೆ ಸಮರ್ಥಿನೆಯಾಗುತ್ತದೆ ಎನ್ನುವ ಸತ್ಯವನ್ನು ಅವರಿಗೆ ವಿವರಿಸಬೇಕಾಗಿದೆ. ಹಾಗೆಯೇ ಬಿಜೆಪಿಯ ಸಂಸದರಿಗೂ ಇದರಿಂದ ಪಾಠವಿದೆ. ಇಂದು ಯಾವ ಪಕ್ಷದಿಂದ ಅವರು ಆಯ್ಕೆಯಾಗಿದ್ದಾರೆಯೋ ಆ ಪಕ್ಷವೇ ಮೀಸಲಾತಿಯ ವಿರುದ್ಧ ನಿಲುವನ್ನು ಹೊಂದಿದೆ. ಇಂದು ಅವರು ಸಂಸದರಾಗಿದ್ದರೆ ಅದು ಅಂಬೇಡ್ಕರ್ ಕಾರಣದಿಂದ.

ದಲಿತರೆನ್ನುವ ಕಾರಣಕ್ಕಾಗಿ ಅವಮಾನಿತರಾಗಿರುವ ಸಂಸದರಲ್ಲಿ ನಾರಾಯಣ ಸ್ವಾಮಿ ಮೊದಲಿಗರೇನೂ ಅಲ್ಲ. ಬಿಜೆಪಿಯ ದಲಿತ ಸಂಸದರೊಬ್ಬರು ದೇವಸ್ಥಾನದೊಳಗೆ ಪ್ರವೇಶಿಸದೆ, ಹೊರಗೆ ನಿಂತು ಅರ್ಚಕರಿಂದ ಪ್ರಸಾದ ಸ್ವೀಕರಿಸಿದ್ದು ಕೆಲವು ವರ್ಷಗಳ ಹಿಂದೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಅದನ್ನು ಸ್ವತಃ ಸಂಸದರೇ ಒಪ್ಪಿಕೊಂಡಿದ್ದರು ‘‘ಇನ್ನೊಬ್ಬರ ಭಾವನೆಗಳಿಗೆ ನಾನು ಧಕ್ಕೆ ತರುವುದಿಲ್ಲ. ಆ ಕಾರಣದಿಂದ ದೇವಸ್ಥಾನದ ಒಳಗೆ ಪ್ರವೇಶಿಸುವುದಿಲ್ಲ’’ ಎಂಬ ಹೇಳಿಕೆ ನೀಡಿದ್ದರು. ‘ಯಾವ ದೇವಸ್ಥಾನದೊಳಗೆ ಪ್ರವೇಶವಿಲ್ಲವೋ ಅಂತಹ ದೇವಸ್ಥಾನಗಳನ್ನೇ ತಿರಸ್ಕರಿಸಿ’ ಎಂಬ ಅಂಬೇಡ್ಕರ್ ವಿಚಾರವನ್ನು ಅವರು ತಮ್ಮದಾಗಿಸಿಕೊಂಡಿದ್ದಿದ್ದರೆ ಅಂತಹ ಹೇಳಿಕೆಯನ್ನು ನೀಡುತ್ತಿರಲಿಲ್ಲ. ದೇವಸ್ಥಾನದೊಳಗೆ ಪ್ರವೇಶಿಸಿದರೆ ಒಂದು ಜಾತಿಯ ಭಾವನೆಗಳಿಗೆ ಧಕ್ಕೆಯಾದರೆ, ಪ್ರವೇಶ ನೀಡದ ಕಾರಣ ತಮ್ಮ ಜಾತಿಯ ಜನರ ಭಾವನೆಗಳಿಗೂ ಧಕ್ಕೆಯಾಗುತ್ತದೆ ಎನ್ನುವ ವಾಸ್ತವವನ್ನು ಅರಿಯಬೇಕಾಗಿತ್ತು. ಮೇಲ್ಜಾತಿಗಳಿಗೆ ಮಾತ್ರವಲ್ಲ, ದಲಿತರಿಗೂ ಈ ದೇಶದಲ್ಲಿ ಭಾವನೆಗಳಿವೆ. ತಮ್ಮ ಆತ್ಮಗೌರವವನ್ನು ಬಲಿಕೊಟ್ಟು ಜಾತೀಯತೆಗೆ ಶರಣಾಗುವುದೆಂದರೆ ಅಂಬೇಡ್ಕರ್ ಅವರ ಸುದೀರ್ಘ ಹೋರಾಟಕ್ಕೆ ಅವಮಾನ ಮಾಡಿದಂತೆ. ಇತ್ತೀಚೆಗೆ ಈ ದೇಶದ ರಾಷ್ಟ್ರಪತಿಯೇ ದೇವಸ್ಥಾನವೊಂದರಲ್ಲಿ ಅವಮಾನಿತರಾಗಿದ್ದರು ಎಂದ ಮೇಲೆ, ಈ ಬಗ್ಗೆ ಚರ್ಚಿಸುವುದಕ್ಕೆ ಏನು ಉಳಿದಿದೆ?

ಇಂದು ಸಂಘಪರಿವಾರ ಮತ್ತು ಬಿಜೆಪಿಯು ಸಂವಿಧಾನದ ನಿರ್ದೇಶನದ ಮೇರೆಗೆ ದಲಿತರಿಗೆ ಅವಕಾಶ ನೀಡುತ್ತಿದೆ ಮತ್ತು ದಲಿತರನ್ನು ತಮ್ಮ ಕಡೆಗೆ ಸೆಳೆದು ತಮ್ಮ ವಿಚಾರಧಾರೆಗಳನ್ನು ನಾಜೂಕಿನಿಂದ ಅವರ ತಲೆಗೆ ಸುರಿದು ದಲಿತರ ವಿರುದ್ಧ ದಲಿತರನ್ನೇ ಬಳಸಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ದಲಿತ ರಾಷ್ಟ್ರಪತಿಯನ್ನೇ ಬಳಸಿಕೊಂಡು ಮೀಸಲಾತಿಯನ್ನು ರದ್ದುಗೊಳಿಸಿದರೂ ಅಚ್ಚರಿಯಿಲ್ಲ. ಯಾವುದೇ ಪಕ್ಷವನ್ನು ಪ್ರತಿನಿಧಿಸಿದರೂ, ದಲಿತರು ತಮ್ಮ ಹಿತಾಸಕ್ತಿಯ ಪ್ರಶ್ನೆ ಬಂದಾಗ ಅಂಬೇಡ್ಕರ್ ವಿಚಾರಧಾರೆಯ ಜೊತೆಗೆ ಗಟ್ಟಿಯಾಗಿ ನಿಲ್ಲುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ವ ಪಕ್ಷಗಳಲ್ಲಿರುವ ದಲಿತರು ಆಗಾಗ ಒಂದು ವೇದಿಕೆಯಲ್ಲಿ ಸೇರುವ ಸನ್ನಿವೇಶ ನಿರ್ಮಾಣವಾಗಬೇಕು. ಹಾಗಾದಲ್ಲಿ ಮಾತ್ರ, ಪಾವಗಡದಂತಹ ಪ್ರಕರಣ ಮರುಕಳಿಸದಂತೆ ತಡೆಯಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)