varthabharthi

ವೈವಿಧ್ಯ

ಕಬ್ಬು ಬೇಸಾಯ: ಬ್ರೆಝಿಲ್ ಹಾದಿಯಲ್ಲಿ ಭಾರತ ಸಾಗೀತೇ?

ವಾರ್ತಾ ಭಾರತಿ : 19 Sep, 2019
ವಡ್ಡೆ ಶೋಭನಾದ್ರೀಶ್ವರ ರಾವ್, ಕನ್ನಡಕ್ಕೆ: ಕಸ್ತೂರಿ

ಜಗತ್ತಿನಲ್ಲಿ ಕಬ್ಬು ಬೇಸಾಯ ಅತ್ಯಧಿಕವಾಗಿರುವುದು ಬ್ರೆಝಿಲ್‌ನಲ್ಲಿ. ಹಲವು ದಶಕಗಳ ಹಿಂದಿನಿಂದಲೂ ಬ್ರೆಝಿಲ್‌ನಲ್ಲಿ ಕಬ್ಬಿನ ರಸದಿಂದ ನೇರವಾಗಿ ಇಥೆನಾಲ್ ತಯಾರಿಸಲಾಗುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಸಕ್ಕರೆ ಉತ್ಪಾದನೆಗೆ ಬೇಡಿಕೆ ಹೆಚ್ಚಾಗಿದೆ ಅಂದುಕೊಳ್ಳುವುದಾದರೆ ಅರ್ಧಕ್ಕೂ ಹೆಚ್ಚಾಗಿ ಕಬ್ಬನ್ನು ಸಕ್ಕರೆ ಉತ್ಪಾದನೆಗೆ, ಉಳಿದಿದ್ದನ್ನು ಇಥೆನಾಲ್ ಉತ್ಪತ್ತಿಗೆ ಬ್ರೆಝಿಲ್‌ನಲ್ಲಿ ಉಪಯೋಗಿಸಲಾಗುತ್ತಿದೆ. ಸಕ್ಕರೆಗೆ ಬೇಡಿಕೆ ಕಡಿಮೆ ಇರುವಾಗ ಹೆಚ್ಚಿನ ಭಾಗವನ್ನು ಇಥೆನಾಲ್ ಉತ್ಪತ್ತಿಗೆ, ಕಡಿಮೆ ಭಾಗವನ್ನು ಸಕ್ಕರೆ ಉತ್ಪಾದನೆಗೆ ಬಳಸುತ್ತಾ ಬರುವುದರಿಂದ ಆ ದೇಶದಲ್ಲಿ ಎಂದೂ ಸಕ್ಕರೆ ರಂಗದಲ್ಲಿ ಸಂಕ್ಷೋಭೆ ತಲೆ ಎತ್ತದಿರುವುದಲ್ಲದೆ, ತೈಲ ಆಮದು ವೆಚ್ಚವನ್ನು ಗಣನೀಯವಾಗಿ ತಗ್ಗಿಸಿಕೊಂಡಿದೆ.

ನಮ್ಮ ದೇಶದಲ್ಲಿ ಸುಮಾರು 50ಲಕ್ಷ ಹೆಕ್ಟೇರ್ ಭೂಮಿಯಲ್ಲಿ 5ಕೋಟಿ ಮಂದಿ ರೈತರು ಕಬ್ಬು ಬೆಳೆಯುತ್ತಿದ್ದಾರೆ. ಗ್ರಾಮೀಣ ಪ್ರಜೆಗಳಲ್ಲಿ ಶೇ. 7.5 ಮಂದಿ ಪ್ರಜೆಗಳು ಕಬ್ಬು ಬೇಸಾಯ, ಸಕ್ಕರೆ ಕಾರ್ಖಾನೆಗಳಲ್ಲಿ ಜೀವನೋಪಾಯ ಕಂಡುಕೊಂಡಿದ್ದಾರೆ.

ವ್ಯವಸಾಯರಂಗದಲ್ಲಿ ಉತ್ಪಾದನಾ ವೆಚ್ಚಗಳು ದಿನದಿನಕ್ಕೂ ಹೆಚ್ಚಾಗುತ್ತಾ, ಅದೇ ಪ್ರಮಾಣದಲ್ಲಿ ತಾವು ಬೆಳೆದ ಬೆಳೆಗಳಿಗೆ ಬೆಲೆಗಳು ಹೆಚ್ಚದೇ ಹೋಗುತ್ತಿರುವುದರಿಂದ ರೈತ ಸಮುದಾಯ ತೀವ್ರವಾಗಿ ನಷ್ಟ ಹೊಂದುತ್ತಿದೆ. ಒಂದು ಕಡೆ ನಮ್ಮ ಕಬ್ಬು ಬೆಳೆಗಾರ ನಷ್ಟ ಹೊಂದುತ್ತಾ ಇರುವಾಗ-ಆಸ್ಟ್ರೇಲಿಯಾ, ಬ್ರೆಝಿಲ್, ಗ್ವಾಟೆಮಾಲಾ ದೇಶಗಳು ಭಾರತದೇಶದಲ್ಲಿ ಕಬ್ಬು ಬೆಳೆಗಾರರಿಗೆ ನೀಡುತ್ತಾ ಇರುವ ಬೆಂಬಲಬೆಲೆ ಹೆಚ್ಚಿನ ಪ್ರಮಾಣದಲ್ಲಿದೆ ಎಂದೂ, ಡಬ್ಲುಟಿಒ ನಿಬಂಧನೆಗಳನ್ನು ಭಾರತ ಅತಿಕ್ರಮಿಸುತ್ತಾ ಇದೆ ಎಂದೂ, ಇದರ ಮೇಲೆ ವಿಚಾರಣಾ ಕಮಿಟಿ ಏರ್ಪಾಟು ಮಾಡಬೇಕು ಎಂದೂ ವಿಶ್ವ ವಾಣಿಜ್ಯ ಸಂಸ್ಥೆಯಲ್ಲಿ ಫಿರ್ಯಾದು ಮಾಡಿರುವುದು ಉರಿದ ಗಾಯಕ್ಕೆ ಉಪ್ಪು ಎರಚಿದಂತಾಗಿದೆ.

ಕಬ್ಬು ಬೇಸಾಯದಲ್ಲಿ ನಮ್ಮ ರೈತರು ಮತ್ತಷ್ಟು ಹೆಚ್ಚಾಗಿ ಕಷ್ಟ ನಷ್ಟಗಳಿಗೆ ಗುರಿಯಾಗುತ್ತಾ ಇದ್ದಾರೆ. ಕಬ್ಬು ಕತ್ತರಿಸಿ ಸುಲಿದು ಎತ್ತಿನ ಗಾಡಿ, ಟ್ರಾಕ್ಟರ್, ಲಾರಿಗಳಿಗೆ ತುಂಬಿಸುವ ಕೆಲಸಗಾರರ ಸಂಖ್ಯೆ ದಿನದಿನಕ್ಕೆ ತಗ್ಗಿ ಹೋಗುತ್ತಾ ಇದೆ. ಒಂದು ಟನ್ ಕಬ್ಬು ಕತ್ತರಿಸಿ ಫ್ಯಾಕ್ಟರಿಗೆ ತಲುಪಿಸುವುದಕ್ಕೆ ಸುಮಾರು 1,100ರೂ. ನಿಂದ 1,400ರೂ. ವರೆಗೆ ಖರ್ಚಾಗುತ್ತಾ ಇದೆ. ಈ ವರ್ಷ ಸಕ್ಕರೆ ಕಾರ್ಖಾನೆಗಳ ಬಳಿ ಸಕ್ಕರೆ ಸಂಗ್ರಹ ಅಧಿಕ ಪ್ರಮಾಣದಲ್ಲಿ ಇದ್ದಾಗ್ಯೂ, ಬ್ಯಾಂಕ್‌ಗಳು ಕಾರ್ಖಾನೆಗಳಿಗೆ ತಕ್ಕಷ್ಟು ಸಾಲಗಳನ್ನು ಮಂಜೂರು ಮಾಡದೆ ಹೋಗಿರುವುದರಿಂದ ರೈತರಿಗೆ ಸಕಾಲದಲ್ಲಿ ಪೂರ್ತಿಯಾಗಿ ಪೈಕಾ ಸಲ್ಲಿಸದೆ ಹೋಗುತ್ತಾ ಇರುವುದರಿಂದ ಹಿಂದೆಂದೂ ಇಲ್ಲದಷ್ಟು ಹೆಚ್ಚಾಗಿ ರೈತರು ಕಷ್ಟಕ್ಕೀಡಾಗಿದ್ದಾರೆ. ರಿಸರ್ವ್ ಬ್ಯಾಂಕ್‌ನಿಂದ ಸೂಕ್ತ ಆದೇಶಗಳು ವಾಣಿಜ್ಯ ಬ್ಯಾಂಕ್‌ಗಳಿಗೆ ಬಾರದಿರುವುದು ದುರದೃಷ್ಟಕರ. ಕೆಲವೇ ಭಾರೀ ವ್ಯಾಪಾರಿ ಸಂಸ್ಥೆಗಳಿಗೆ ಸರಿಯಾದ ಅಡಮಾನ ಇಲ್ಲದೇ ಹೋದರೂ ನೂರಾರು/ ಸಾವಿರಾರು ಕೋಟಿ ರೂಪಾಯಿಗಳ ಸಾಲವನ್ನು ಉದಾರವಾಗಿ ಒದಗಿಸುತ್ತಾ ಇರುವ ಬ್ಯಾಂಕ್‌ಗಳು ಸಕ್ಕರೆ ಉದ್ದಿಮೆಯತ್ತ ಗಾಜುಕಣ್ಣು ಹೊಂದಿರುವುದು ವಿಪರ್ಯಾಸ. ಉತ್ಪತ್ತಿಯಾದ ಸಕ್ಕರೆ ಸಂಗ್ರಹದ ಮೇಲೆ, ಬಿಡುಗಡೆಯ ಮೇಲೆ, ರಫ್ತುಗಳ ಮೇಲೆ ನಿರ್ಬಂಧಗಳ ವಿಧಿಸುತ್ತಾ ಇರುವ ಕೇಂದ್ರ ಸರಕಾರ, ಸಕ್ಕರೆ ಸಂಗ್ರಹದ ಆಶ್ವಾಸನೆ ಮೇಲೆ ಫ್ಯಾಕ್ಟರಿಗಳ ಅಗತ್ಯಗಳ ಮೇರೆಗೆ ಸಾಲ ಕೊಡುವುದರಲ್ಲಿ ವಿಫಲವಾಗುತ್ತಿರುವುದರಿಂದ ರೈತರ ಕಷ್ಟ ಹೇಳಲಸಾಧ್ಯವಾಗಿದೆ.

ಈ ವರ್ಷ ವಿಶ್ವಾದ್ಯಂತ ಸಕ್ಕರೆ ಉತ್ಪತ್ತಿ 185 ಮಿಲಿಯನ್ ಟನ್‌ಗಳ ಮೀರಿಸಿದೆ ಎಂದು ಅಂದಾಜು. ಆದರೆ ಬಳಕೆ 177 ಮಿಲಿಯನ್ ಟನ್‌ಗಳು ಮಾತ್ರವೇ ಇರುತ್ತದೆ. ನಮ್ಮ ದೇಶದಲ್ಲಿ ಕೂಡಾ ಪ್ರಸ್ತುತ ಸಕ್ಕರೆ ಉದ್ದಿಮೆ ಘೋರವಾದ ಸ್ಥಿತಿಯಲ್ಲಿದೆ. 2017-18 ಸೀಜನ್‌ನಲ್ಲಿ ದಾಖಲೆ ಪ್ರಮಾಣದಲ್ಲಿ 31.5 ಮಿಲಿಯನ್ ಟನ್‌ಗಳ ಸಕ್ಕರೆ ಭಾರತದಲ್ಲಿ ಉತ್ಪಾದನೆಯಾಗಿತ್ತು. ಆದರೆ ಬಳಕೆಯಾಗಿದ್ದು 25 ಮಿಲಿಯನ್ ಟನ್‌ಗಳಷ್ಟೇ. ಉತ್ಪಾದನಾ ವೆಚ್ಚಕ್ಕಿಂತ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ತಗ್ಗಿದ್ದರಿಂದ ಫ್ಯಾಕ್ಟರಿಗಳು ನಷ್ಟದ ಪಾಲಾಗುತ್ತಿವೆ. ಈಗಾಗಲೇ ಖಾಸಗಿ ರಂಗದಲ್ಲೂ, ಸಹಕಾರಿ ರಂಗದಲ್ಲೂ ಹಲವು ಸಕ್ಕರೆ ಕಾರ್ಖಾನೆಗಳು ಮುಚ್ಚಲ್ಪಟ್ಟಿವೆ. ಪ್ರಸ್ತುತ ಸಕ್ಕರೆ ಉದ್ಯಮ ರಂಗದಲ್ಲಿ ನೆಲೆಗೊಂಡಿರುವ ಸಂಕ್ಷೋಭೆಯಿಂದ ಈಗ ಕೆಲಸ ಮಾಡುತ್ತಾ ಇರುವ ಫ್ಯಾಕ್ಟರಿಗಳಲ್ಲಿ ಸಹ ಮುಂಬರುವ ಸೀಸನ್‌ನಲ್ಲಿ ಎಷ್ಟು ಕೆಲಸ ಮಾಡುತ್ತವೆಯೋ ಹೇಳಲಾಗದ ಪರಿಸ್ಥಿತಿಗಳು ನೆಲೆಗೊಂಡಿವೆ. ಪರಿಣಾಮವಾಗಿ ಕಬ್ಬು ಬೆಳೆಗಾರರು ತೀವ್ರ ಆತಂಕದಲ್ಲಿದ್ದಾರೆ.

ಸಕ್ಕರೆ ಉದ್ದಿಮೆ ರಂಗದಲ್ಲಿ ಹಲವು ಪರ್ಯಾಯಗಳು ಪ್ರಕ್ಷುಬ್ಧ ಪರಿಸ್ಥಿತಿಗಳು ಎದುರಾಗುತ್ತಲೇ ಇವೆ. ಕೆಲ ವರ್ಷಗಳಲ್ಲಿ ಅಧಿಕ ಉತ್ಪಾದನೆ, ಮತ್ತೆ ಕೆಲವು ವರ್ಷಗಳಲ್ಲಿ ಉತ್ಪಾದನೆಯಲ್ಲಿ ಕುಸಿತ ಸಂಭವಿಸುತ್ತಲೇ ಇದೆ. ಈ ಪರಿಸ್ಥಿತಿಯನ್ನು ದಾಟಬೇಕೆಂದರೆ ಕಬ್ಬು ಬೇಸಾಯವನ್ನು ಮುಂದುವರಿಸುತ್ತಲೇ ಸಕ್ಕರೆ ಉತ್ಪಾದನೆಯನ್ನು ನಿಯಂತ್ರಿಸಿಕೊಳ್ಳಬೇಕಾದ ಅಗತ್ಯ ಎಷ್ಟೋ ಇದೆ. ಜಗತ್ತಿನಲ್ಲಿ ಕಬ್ಬು ಬೇಸಾಯ ಅತ್ಯಧಿಕವಾಗಿರುವುದು ಬ್ರೆಝಿಲ್‌ನಲ್ಲಿ. ಹಲವು ದಶಕಗಳ ಹಿಂದಿನಿಂದಲೂ ಬ್ರೆಝಿಲ್‌ನಲ್ಲಿ ಕಬ್ಬಿನ ರಸದಿಂದ ನೇರವಾಗಿ ಇಥೆನಾಲ್ ತಯಾರಿಸಲಾಗುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಸಕ್ಕರೆ ಉತ್ಪಾದನೆಗೆ ಬೇಡಿಕೆ ಹೆಚ್ಚಾಗಿದೆ ಅಂದುಕೊಳ್ಳುವುದಾದರೆ ಅರ್ಧಕ್ಕೂ ಹೆಚ್ಚಾಗಿ ಕಬ್ಬನ್ನು ಸಕ್ಕರೆ ಉತ್ಪಾದನೆಗೆ, ಉಳಿದಿದ್ದನ್ನು ಇಥೆನಾಲ್ ಉತ್ಪತ್ತಿಗೆ ಬ್ರೆಝಿಲ್‌ನಲ್ಲಿ ಉಪಯೋಗಿಸಲಾಗುತ್ತಿದೆ. ಸಕ್ಕರೆಗೆ ಬೇಡಿಕೆ ಕಡಿಮೆ ಇರುವಾಗ ಹೆಚ್ಚಿನ ಭಾಗವನ್ನು ಇಥೆನಾಲ್ ಉತ್ಪತ್ತಿಗೆ, ಕಡಿಮೆ ಭಾಗವನ್ನು ಸಕ್ಕರೆ ಉತ್ಪಾದನೆಗೆ ಬಳಸುತ್ತಾ ಬರುವುದರಿಂದ ಆ ದೇಶದಲ್ಲಿ ಎಂದೂ ಸಕ್ಕರೆ ರಂಗದಲ್ಲಿ ಸಂಕ್ಷೋಭೆ ತಲೆ ಎತ್ತದಿರುವುದಲ್ಲದೆ, ತೈಲ ಆಮದು ವೆಚ್ಚವನ್ನು ಗಣನೀಯವಾಗಿ ತಗ್ಗಿಸಿಕೊಂಡಿದೆ.

ಬ್ರೆಝಿಲ್‌ನಲ್ಲಿ ಕಳೆದ ವರ್ಷ 3,075 ಕೋಟಿ ಲೀಟರ್‌ಗಳ ಇಥೆನಾಲ್ ಉತ್ಪತ್ತಿ ಆಗಿದೆ. ಪೆಟ್ರೋಲ್‌ನಲ್ಲಿ ಶೇ. 18ರಿಂದ 25ರವರೆಗೆ ಇಥೆನಾಲ್ ಬೆರೆಸುವ ವಿಧಾನ ಜಾರಿಯಲ್ಲಿದೆ. ಬ್ರೆಝಿಲ್‌ನಲ್ಲಿನ ಮೋಟರ್ ಕಾರು ತಯಾರಿಕಾ ಸಂಸ್ಥೆಗಳು ಇದಕ್ಕೆ ತಕ್ಕಂತೆ ಕಾರ್ ಇಂಜಿನ್ ನಿರ್ಮಾಣ ಮಾಡಿ ಯಶಸ್ವಿಯಾಗಿ ನಡೆಸುತ್ತಿವೆೆ. ಈಗಾಗಲೇ ಇಥೆನಾಲ್+ ಪಟ್ರೋಲ್ (ಫ್ಲೆಕ್ಸ್ ಫ್ಯೂಯೆಲ್)ನಿಂದ ನಡೆದ ವಾಹನಗಳ ಸಂಖ್ಯೆ 2.55 ಕೋಟಿಗೆ ತಲುಪಿದೆ. ಮೋಟರ್ ಸೈಕಲ್‌ಗಳ ಸಂಖ್ಯೆ 40 ಲಕ್ಷಕ್ಕೆ ಏರಿದೆ.

ಬ್ರೆಝಿಲ್ ನಂತರ ವಿಶ್ವದಲ್ಲಿ ಅತ್ಯಧಿಕವಾಗಿ ಕಬ್ಬು ಬೇಸಾಯ ಮಾಡುತ್ತಾ ಇರುವ ಭಾರತದಲ್ಲಿ ಮಾತ್ರ ಸರಕಾರಗಳು ಈ ವಿಷಯವನ್ನು ಲಕ್ಷಿಸುತ್ತಲೇ ಇಲ್ಲ. ಪ್ರತಿವರ್ಷ ಸಾವಿರಾರು ಕೋಟಿ ರೂ.ಗಳ ವಿದೇಶಿ ವಿನಿಮಯವನ್ನು ಸಲ್ಲಿಸಿ, ಲಕ್ಷಾಂತರ ಟನ್‌ಗಳ ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಬೇಕಾದ ಅಗತ್ಯ ಎಷ್ಟೋ ಇದೆ. ಬ್ರೆಝಿಲ್ ವಿಧಾನವನ್ನು ನಮ್ಮ ದೇಶದಲ್ಲಿ ಸಹ ಜಾರಿಗೊಳಿಸಿದರೆ ಪದೇ ಪದೇ ಸಂಭವಿಸುವ ಸಕ್ಕರೆ ಸಂಕ್ಷೋಭೆ ನಿವಾರಣೆಗೆ ಅಲ್ಲದೆ ವಿದೇಶಗಳಿಂದ ತೈಲ ಆಮದು ವೆಚ್ಚ ತಗ್ಗಿಸುವುದಕ್ಕೆ ಕೂಡಾ ಉಪಯೋಗವಾಗುತ್ತದೆ ಎಂಬ ಆಲೋಚನೆ ನಮ್ಮನ್ನು ಆಳುವವರು ಮಾಡದಿರುವುದು ಖಂಡನೀಯ. ಇದಕ್ಕೆ ನಮ್ಮ ದೇಶದಲ್ಲಿರುವ ಭಾರೀ ತೈಲ ಕಂಪೆನಿಗಳಿಂದ, ಮದ್ಯ ತಯಾರಿಕಾ ಕಂಪೆನಿಗಳ ಒತ್ತಡ ಕಾರಣ.

ಇತ್ತೀಚಿನವರೆಗೆ ಸಕ್ಕರೆ ಫ್ಯಾಕ್ಟರಿಗಳಲ್ಲಿ ಸಕ್ಕರೆಯೊಂದಿಗೆ ಉಪ-ಉತ್ಪನ್ನವಾಗಿ ಲಭಿಸುವ ಮೊಲಾಸಿಸ್‌ನಿಂದ ಇಥೆನಾಲ್‌ನ್ನು, ರೆಕ್ಟಿಫೈಡ್ ಸ್ಪಿರಿಟ್‌ನ್ನು ಮದ್ಯ ತಯಾರಿಕಾ ಉದ್ಯಮದಲ್ಲೂ, ಫಾರ್ಮಾಸ್ಯೂಟಿಕಲ್ ಉದ್ಯಮ ರಂಗದಲ್ಲೂ ಬಳಸುತ್ತಿದ್ದೇವೆ. ಈ ವಿಧಾನದಿಂದ ಸಕ್ಕರೆ ಉತ್ಪತ್ತಿ ಹೆಚ್ಚುತ್ತಲೇ ಇದೆ. ಸಂಕ್ಷೋಭೆಗೆ ಕಾರಣ ಆಗುತ್ತಲೇ ಇದೆ. ಕಬ್ಬಿನ ರಸದಿಂದ ನೇರವಾಗಿ ಇಥೆನಾಲ್ ಉತ್ಪತ್ತಿ ಮಾಡುವ ಪ್ರಕ್ರಿಯೆ ಮೂಲಕ ಅಗತ್ಯದ ಮೇರೆಗೆ ಸಕ್ಕರೆಯನ್ನು ನಿಯಂತ್ರಿಸಿ ಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ಕಳೆದ ವರ್ಷ ಕಬ್ಬಿನ ರಸದಿಂದ ಇಥೆನಾಲ್ ತಯಾರು ಮಾಡುವುದಕ್ಕೆ ಅನುಮತಿಸಲು ಕೇಂದ್ರ ಸರಕಾರ ತೀರ್ಮಾನ ತೆಗೆದುಕೊಂಡಿತು. ಕಬ್ಬಿನಿಂದ ಬರುವ ಬಿ-ಮೊಲಾಸಿಸ್‌ನಿಂದ ತಯಾರಾಗುವ ಇಥೆನಾಲ್‌ಗೆ ಬೆಲೆಯನ್ನು ರೂ. 43.70 ಎಂದು ನಿರ್ಣಯಿಸಿದೆ. ನೇರವಾಗಿ ಕಬ್ಬಿನ ರಸದಿಂದ ಉತ್ಪತ್ತಿ ಮಾಡುವ ಇಥೆನಾಲ್ ಲೀಟರ್ ಬೆಲೆಯನ್ನು ಕೇಂದ್ರ ಸರಕಾರ ರೂ. 47.13 ರಿಂದ ರೂ. 59.13 ಕ್ಕೆ ಹೆಚ್ಚಿಸಿದೆ. ಆದರೆ ಈ ಪ್ರಕ್ರಿಯೆ ಸಕ್ಕರೆ ಕಾರ್ಖಾನೆಗಳಿಗೆ ಲಾಭದಾಯಕವಾಗಿ ಇರಬೇಕೆಂದರೆ ಮತ್ತೆ ಸ್ವಲ್ಪ ಅಧಿಕ ದರ ಕೊಡುವುದು ಅಗತ್ಯ.

‘‘ರಾಷ್ಟ್ರೀಯ ಬಯೋ ಫ್ಯೂಯಲ್ ಪಾಲಿಸಿ’ಯಲ್ಲಿ 2017ರಲ್ಲಿ ಪೆಟ್ರೋಲ್‌ನಲ್ಲಿ ಶೇ. 20 ಇಥೆನಾಲ್‌ನ ಬೆರೆಸುವುದು ಗುರಿ ಎಂದು ಹೇಳಲ್ಪಟ್ಟಿದ್ದರೂ ಅದಕ್ಕೆ ತಕ್ಕದಾದ ಕ್ರಮಗಳನ್ನು ಕೇಂದ್ರ ಸರಕಾರ ಕೈಗೊಳ್ಳಲಿಲ್ಲ. ತೈಲ ಆಮದು ವೆಚ್ಚವನ್ನು ತಗ್ಗಿಸುವುದಕ್ಕಾಗಿ 2020-22 ಕಾಲಕ್ಕೆ ಕಡ್ಡಾಯವಾಗಿ ಕನಿಷ್ಠ ಶೇ. 10 ಇಥೆನಾಲ್‌ನ ಪೆಟ್ರೋಲ್‌ನಲ್ಲಿ ಮಿಶ್ರಗೊಳಿಸಬೇಕೆಂದು ಭಾರತ ಸರಕಾರ ತೀರ್ಮಾನ ತೆಗೆದುಕೊಂಡಿದೆ. ಇದಕ್ಕೋಸ್ಕರ 313 ಕೋಟಿ ಲೀಟರ್‌ಗಳ ಇಥೆನಾಲ್ ಅಗತ್ಯವಾಗುತ್ತದೆ ಎಂದು ಅಂದಾಜು ಮಾಡಲ್ಪಟ್ಟಿದೆ. 2003ರಲ್ಲೇ ‘ಇಥೆನಾಲ್ ಬ್ಲೆಂಡಿಂಗ್ ಪ್ರೋಗ್ರಾಂ’ ಪ್ರಾರಂಭಿಸಲ್ಪಟ್ಟು ಶೇ. 5ರ ಮೇರೆಗೆ ಗುರಿ ಸಾಧಿಸಬೇಕೆಂದು ಕೊಂಡಿದ್ದರೂ ಪ್ರಸ್ತುತ ಶೇ. 3.5 ಮಾತ್ರವೇ ತಲುಪಿದೆ.

ನಮ್ಮ ದೇಶದಲ್ಲಿ ಸಕ್ಕರೆ ಕಾರ್ಖಾನೆಗಳಿಂದ ಉತ್ಪತ್ತಿಯಾಗುತ್ತಿರುವ ಸಕ್ಕರೆ ಮೇಲೆ ಶೇ. 5 ಜಿಎಸ್‌ಟಿ, ಮೊಲಾಸಿಸ್ ಮೇಲೆ ಶೇ. 28 ಜಿಎಸ್‌ಟಿಗಳ ಮೂಲಕ ಕೇಂದ್ರ ಸರಕಾರಕ್ಕೆ ಸುಮಾರು ರೂ. 8,400 ಕೋಟಿಗಳ ಆದಾಯ ಒದಗುತ್ತದೆ. ಒಂದು ಟನ್ ಕಬ್ಬು ಬೆಳೆಯಿಂದ ಬರುವ ವಿವಿಧ ಉತ್ಪತ್ತಿಗಳ ಮೇಲೆ ಕೇಂದ್ರ, ರಾಜ್ಯ ಸರಕಾರಗಳಿಗೆ ಜಮೆಯಾಗುತ್ತಿರುವ ಮೊತ್ತವನ್ನು ಲೆಕ್ಕ ಹಾಕಿದರೆ 1 ಟನ್ ಕಬ್ಬು ಬೆಳೆಯ ಮೇಲೆ ಸುಮಾರು ರೂ.2,500 ಆದಾಯ ಸರಕಾರಗಳಿಗೆ ಲಭಿಸುತ್ತಾ ಇದೆ.

ಗ್ರಾಮೀಣ ಭಾರತದಲ್ಲಿ ಅಧಿಕ ಮಂದಿಗೆ ಉದ್ಯೋಗ ಕಲ್ಪಿಸುತ್ತಾ ಇರುವ ಸಕ್ಕರೆ ಉದ್ಯಮ ರಂಗದಲ್ಲಿ 5 ಲಕ್ಷ ಮಂದಿ ಕಾರ್ಮಿಕರಿಗೆ ಪ್ರತ್ಯಕ್ಷವಾಗಿಯೂ 10 ಲಕ್ಷ ಮಂದಿಗೆ ಪರೋಕ್ಷವಾಗಿಯೂ ಉದ್ಯೋಗ ಕಲ್ಪಿಸಲ್ಪಡುತ್ತದೆ. ಪ್ರತಿ ವರ್ಷ ಸಕ್ಕರೆ ಉದ್ಯಮಗಳು ತಮ್ಮ ಕಾರ್ಮಿಕರಿಗೆ ಸುಮಾರು ರೂ. 9,000 ಕೋಟಿ ವೇತನದ ರೂಪದಲ್ಲಿ ಸಲ್ಲಿಸುತ್ತವೆ ಅಲ್ಲದೆ, ಕಬ್ಬು ಬೇಸಾಯ, ಕತ್ತರಿಸುವುದು, ಸೀಳುವುದು ಇತ್ಯಾದಿ ಕೆಲಸಗಳಿಗೆ ವ್ಯವಸಾಯ ಕಾರ್ಮಿಕರಿಗೆ ಕಬ್ಬು ರೈತರು ಸುಮಾರು ರೂ. 13,000 ಕೋಟಿಗಳ ಖರ್ಚು ಮಾಡುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.

ಇಷ್ಟು ಪ್ರಾಮುಖ್ಯತೆ ಇರುವ ಸಕ್ಕರೆ ಉದ್ಯಮವನ್ನು, ಕಬ್ಬು ಬೇಸಾಯವನ್ನು ರಕ್ಷಿಸಿ ಕೊಳ್ಳಬೇಕೆಂದರೆ ಇದುವರೆಗೆ ಮೊಲಾಸಿಸ್‌ನಿಂದ ಆಲ್ಕೋಹಾಲ್/ಇಥೆನಾಲ್ ತಯಾರು ಮಾಡುವ ತಾಂತ್ರಿಕತೆ ಅಳವಡಿಸದ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ರಸದಿಂದ ನೇರವಾಗಿ ಇಥೆನಾಲ್ ತಯಾರು ಮಾಡುವ ಯಂತ್ರಗಳನ್ನು ಅಳವಡಿಸಲು ಶೇ. 7 ಬಡ್ಡಿಯ ದರದೊಂದಿಗೆ ಸಾಲದ ಸೌಕರ್ಯ ಕಲ್ಪಿಸಬೇಕು. ಇದರೊಂದಿಗೆ ಕನಿಷ್ಠ ರೂ. 80 ಕೋಟಿ ವೆಚ್ಚವಾಗಬಲ್ಲ ಈ ತಾಂತ್ರಿಕತೆಯ ವ್ಯವಸ್ಥ್ಥೆಗೋಸ್ಕರ ಕೇಂದ್ರ ಸರಕಾರ ರೂ. 20 ಕೋಟಿ ಕ್ಯಾಪಿಟಲ್ ಸಬ್ಸಿಡಿಯನ್ನು ಒದಗಿಸಬೇಕು. ಈಗಾಗಲೇ ಡಿಸ್ಟಿಲರಿಗಳು ಏರ್ಪಾಟಾಗಿರುವ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನರಸದಲ್ಲಿನ ಕೊಂಚ ಭಾಗವನ್ನು ಫಿಲ್ಟರ್ ಮಾಡಿ ಫರ್ಮೆಂಟೇಶನ್ ಪ್ರಕ್ರಿಯೆ ಮಾರ್ಗದಲ್ಲಿ ಇಥೆನಾಲ್ ತಯಾರು ಮಾಡುವ ವಿಧಾನವನ್ನು ಅನುಸರಿಸಿದರೆ ಭಾರತದಲ್ಲಿ ಸಕ್ಕರೆ ಉತ್ಪತ್ತಿ ನಿಯಂತ್ರಿಸಲ್ಪಟ್ಟು ಮುಂಬರುವ ದಿನಗಳಲ್ಲಿ ಶಾಶ್ವತವಾಗಿ, ಅಚ್ಚುಕಟ್ಟಾಗಿ ದೇಶೀ ಅಗತ್ಯಗಳು, ರಫ್ತಿಗೋಸ್ಕರ ಅಗತ್ಯವಾದ ಸಕ್ಕರೆಯನ್ನು ಉತ್ಪಾದಿಸಿಕೊಳ್ಳುತ್ತಲೇ, ಇಥೆನಾಲ್ ಉತ್ಪತ್ತಿಯನ್ನು ಹೆಚ್ಚಿಸಿ ಕೊಂಡು ತೈಲ ಆಮದು ವೆಚ್ಚವನ್ನು ಗಣನೀಯವಾಗಿ ತಗ್ಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ಕೇಂದ್ರ ವಾರ್ಷಿಕ ಬಜೆಟ್‌ನಲ್ಲಿ ಸುಮಾರು ರೂ. 4 ಲಕ್ಷ ಕೋಟಿಗಳಷ್ಟು ಕೈಗಾರಿಕಾ ಸಬ್ಸಿಡಿ ಪ್ರಕಟಿಸುತ್ತಾ ಇರುವ ಹಿನ್ನೆಲೆಯಲ್ಲಿ ಕೋಟ್ಯಂತರ ರೈತರು, ಲಕ್ಷಾಂತರ ಕಾರ್ಮಿಕರೊಂದಿಗೆ ಬೆಸೆದುಕೊಂಡಿರುವ ಈ ಅಂಶದ ಮೇಲೆ ಕೇಂದ್ರ ಸರಕಾರ ತಕ್ಷಣವೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಬ್ಬು ಬೆಳೆಗಾರರು ನಿರೀಕ್ಷಿಸುತ್ತಾರೆ.

 ಕೃಪೆ: ಆಂಧ್ರಜ್ಯೋತಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)