varthabharthi

ರಾಷ್ಟ್ರೀಯ

ಅಯೋಧ್ಯೆ ವಿವಾದ; ಸುಪ್ರೀಂಕೋರ್ಟ್ ತೀರ್ಪನ್ನು ಪ್ರತಿಯೊಬ್ಬರೂ ಒಪ್ಪಿಕೊಳ್ಳಬೇಕು: ಅಮಿತ್ ಶಾ

ವಾರ್ತಾ ಭಾರತಿ : 19 Sep, 2019

ರಾಂಚಿ, ಸೆ.19: ರಾಮ ಜನ್ಮಭೂಮಿ- ಬಾಬರಿ ಮಸೀದಿಗೆ ಜಾಗ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡುವ ತೀರ್ಪನ್ನು ಪ್ರತಿಯೊಬ್ಬರೂ ಒಪ್ಪಿಕೊಳ್ಳಬೇಕು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಪ್ರಕರಣದ ಬಗ್ಗೆ ಇದೀಗ ಸುಪ್ರೀಂಕೋರ್ಟ್ ಪ್ರತಿದಿನ ವಿಚಾರಣೆ ನಡೆಸುತ್ತಿದ್ದು, ಅಕ್ಟೋಬರ್ 18ರಂದು ವಿಚಾರಣೆ ಪೂರ್ಣಗೊಳಿಸಿ, ನವೆಂಬರ್ 17ರಂದು ತೀರ್ಪು ನೀಡುವ ಸಾಧ್ಯತೆ ಇದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಅಮಿತ್ ಶಾ ಹೇಳಿಕೆ ವಿಶೇಷ ಮಹತ್ವ ಪಡೆದಿದೆ.

ರಾಮಮಂದಿರ ನಿರ್ಮಾಣಕ್ಕೆ ಸರ್ಕಾರ ಯಾವ ಸಿದ್ಧತೆ ಮಾಡಿಕೊಂಡಿದೆ ಮತ್ತು ಕಾನೂನು ಹಾಗೂ ಸುವ್ಯವಸ್ಥೆ ಪರಿಸ್ಥಿತಿ ಎದುರಿಸಲು ಹೇಗೆ ಸಜ್ಜಾಗಿದೆ ಎಂದು ಕೇಳಿದ ಪ್ರಶ್ನೆಗೆ, "ನಾನು ದೇವಸ್ಥಾನ ನಿರ್ಮಿಸಬೇಕಾಗುವುದಿಲ್ಲ. ಸುಪ್ರೀಂ ತೀರ್ಪನ್ನು ಆಧರಿಸಿ ಟ್ರಸ್ಟ್ ಆ ಕೆಲಸ ಮಾಡುತ್ತದೆ. ಯಾವುದೇ ವಿಚಾರ ನ್ಯಾಯಾಲಯದ ಕಟಕಡೆ ಏರುವುದು ವಿವಾದ ಇದ್ದಾಗ ಮಾತ್ರ; ತೀರ್ಪು ಬಂದಾಗ ಕೆಲವರು ಅದನ್ನು ಇಷ್ಟಪಡುತ್ತಾರೆ; ಕೆಲವರು ಇಷ್ಟಪಡುವುದಿಲ್ಲ. ಆದರೆ ಕೊನೆಗೆ ಪ್ರತಿಯೊಬ್ಬರೂ ತೀರ್ಪನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ" ಎಂದು ಸ್ಪಷ್ಟಪಡಿಸಿದರು.

ರಾಂಚಿಯಲ್ಲಿ ಭಾಷಾ ಪತ್ರಿಕೆಯೊಂದು ಏರ್ಪಡಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, "ಸುಪ್ರೀಂಕೋರ್ಟ್ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತದೆಯೇ ವಿನಃ ಯಾರ ಬೇಕು ಬೇಡಗಳಿಗೆ ಅನುಗುಣವಾಗಿ ಅಲ್ಲ. ಅಯೋಧ್ಯೆ ತೀರ್ಪು ಬಹಳಷ್ಟು ಹಿಂದೆಯೇ ಬರಬೇಕಿತ್ತು. ಆದರೆ ಸಾರ್ವತ್ರಿಕ ಚುನಾವಣೆ ಮುಗಿಯುವರೆಗೂ ವಿಚಾರಣೆ ಸ್ಥಗಿತಗೊಳಿಸುವಂತೆ ಕಾಂಗ್ರೆಸ್ ಪಕ್ಷ ಹಾಗೂ ಅದರ ನಾಯಕ ಕಪಿಲ್ ಸಿಬಲ್ ಕೋರಿದ್ದರು. ಇದೀಗ ನಿರಂತರ ವಿಚಾರಣೆ ನಡೆಯುತ್ತಿದ್ದು, ಶೀಘ್ರವೇ ಮುಗಿಯಲಿದೆ" ಎಂದು ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)