varthabharthi

ಅಂತಾರಾಷ್ಟ್ರೀಯ

ಇಸ್ರೇಲ್ ಚುನಾವಣೆ: ಪ್ರಧಾನಿ ಬೆಂಜಮಿನ್ ನೆತನ್ಯಾಹು ಭವಿಷ್ಯ ಡೋಲಾಯಮಾನ

ವಾರ್ತಾ ಭಾರತಿ : 19 Sep, 2019

ಜೆರುಸಲೆಂ, ಸೆ.19: ಸುಮಾರು ಒಂದು ದಶಕಗಳ ಕಾಲ ಇಸ್ರೇಲ್ ನ ಪ್ರಬಲ ರಾಜಕಾರಣಿಯಾಗಿದ್ದ, ತಮ್ಮ ಎದುರಾಳಿಗಳನ್ನು ಹತ್ತಿಕ್ಕಿದ್ದ ಹಾಗೂ ನಾಟಕೀಯ ಚುನಾವಣಾ ವಿಜಯಗಳನ್ನು ದಾಖಲಿಸಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ರಾಜಕೀಯ ಭವಿಷ್ಯ ಒಮ್ಮೆಗೇ ಡೋಲಾಯಮಾನವಾಗಿ ಬಿಟ್ಟಿದೆ.

ಐದು ತಿಂಗಳ ಅವಧಿಯಲ್ಲಿ ಇಸ್ರೇಲ್ ನಲ್ಲಿ ನಡೆದ ಎರಡನೇ ಸಾರ್ವತ್ರಿಕ ಚುನಾವಣೆಯ ಶೇ. 90ರಷ್ಟು ಮತ ಎಣಿಕೆ ಬುಧವಾರ ತಡ ರಾತ್ರಿಯ ಹೊತ್ತಿಗೆ ಪೂರ್ಣಗೊಂಡಿದ್ದು, ನೆತನ್ಯಾಹು ಅವರ ಕನ್ಸರ್ವೇಟಿವ್ ಲಿಕುಡ್  ಪಕ್ಷ 32 ಸ್ಥಾನಗಳನ್ನು ಗೆದ್ದಿದ್ದರೆ, ಪ್ರಮುಖ ಎದುರಾಳಿ ಬೆನ್ನಿ ಗಾಂಟ್ಝ್ ಅವರ ಬ್ಲೂ ಆ್ಯಂಡ್ ವೈಟ್ ಪಕ್ಷ 120 ಮಂದಿ ಸದಸ್ಯ ಬಲದ ಸಂಸತ್ತಿನಲ್ಲಿ 33 ಸ್ಥಾನಗಳನ್ನು ಗಳಿಸಿತ್ತು.

ಎರಡೂ ಪಕ್ಷಗಳು ತಮ್ಮ ಸಣ್ಣ ಮಿತ್ರ ಪಕ್ಷಗಳ ಜತೆ ಸೇರಿದರೂ ಬಹುಮತದ ಸಮ್ಮಿಶ್ರ ಸರಕಾರ ರಚಿಸುವ ಸಾಧ್ಯತೆ ಕಡಿಮೆಯೆನ್ನಲಾಗಿದ್ದು, ಯಿಸ್ರೇಲ್ ಬೀಟೆನು ಪಕ್ಷದ ಅವಿಗ್ಡೋರ್ ಲೀಬಮ್ರ್ಯಾನ್ ಅವರು ಕಿಂಗ್ ಮೇಕರ್ ಆಗುವ ಸಾಧ್ಯತೆಯಿದೆ. ಅವರ ಪಕ್ಷ 9 ಸ್ಥಾನಗಳನ್ನು ಗಳಿಸಿದೆ. ಅರಬ್-ಇಸ್ರೇಲಿ ಪಕ್ಷಗಳ ಮೈತ್ರಿ ಜಾಯಿಂಟ್ ಲಿಸ್ಟ್  13 ಸ್ಥಾನಗಳನ್ನು ಗಳಿಸಿದೆ.

ಒಂದು ಕಾಲದಲ್ಲಿ ಅಜೇಯರೆಂದೇ ಪರಿಗಣಿತರಾಗಿದ್ದ ನೆತನ್ಯಾಹು ಅವರಿಗೆ ಮುಂದಿನ ತಿಂಗಳು 70 ವರ್ಷ ತುಂಲಿದ್ದು  ಅವರು  ಕೈಗೊಂಡ ಕೆಲವೊಂದು ಪ್ರಶ್ನಾರ್ಹ  ನಿರ್ಧಾರಗಳೇ ಅವರಿಗೆ ಮುಳುವಾಗಿದೆ ಎಂದು ಹೇಳಲಾಗಿದೆ.

 ಭ್ರಷ್ಟಾಚಾರ, ವಂಚನೆ ಹಾಗೂ  ವಿಶ್ವಾಸದ್ರೋಹ ಆರೋಪಗಳನ್ನು ಎದುರಿಸುತ್ತಿರುವ ಅವರ ವಿರುದ್ಧ ಪ್ರಕರಣ ದಾಖಲಿಸಲು ಇಸ್ರೇಲ್ ಅಟಾರ್ನಿ ಜನರಲ್ ಈಗಾಗಲೇ  ಶಿಫಾರಸು ಮಾಡಿದ್ದು ಅಕ್ಟೋಬರ್ ತಿಂಗಳಲ್ಲಿ ವಿಚಾರಣೆ ನಡೆಯಲಿದೆ.

ಹೇಗಾದರೂ ಮಿತ್ರ ಪಕ್ಷಗಳ ಜತೆ ಅಧಿಕಾರ ಪಡೆದು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ಅವರ ನಿರೀಕ್ಷೆ ಬುಡಮೇಲಾಗಿದೆ. ಅವರು ಜನಾಂಗೀಯತೆಯನ್ನು ಉತ್ತೇಜಿಸಿದ್ದಾರೆ ಹಾಗೂ ಚುನಾವಣಾ ದಿನದಂದು ಅರಬ್ ಮತದಾರರು ಮನೆಯಲ್ಲಿಯೇ ಉಳಿಯುವಂತೆ ಬೆದರಿಸಿದ್ದಾರೆಂಬ ಆರೋಪಗಳನ್ನು ಅರಬ್ ನಾಯಕರು ಹೊರಿಸಿದ್ದಾರೆ.

ಎಪ್ರಿಲ್ ತಿಂಗಳಲ್ಲಿ ನೆತನ್ಯಾಹು ಅವರ ಪಕ್ಷ ಪಡೆದ ಮತಗಳಿಗೆ ಹೋಲಿಸಿದಾಗ ಈ ಬಾರಿ ಮತಗಳಿಕೆ ಇನ್ನೂ ಕಡಿಮೆಯಾಗಿದ್ದು, ಅವರ ಪಕ್ಷದ ಮತದಾರರು ಯಿಸ್ರೇಲ್ ಬೀಟೆನು  ಅವರ ಪಕ್ಷದತ್ತ ವಾಲಿರಬಹುದೆಂದು ಹೇಳಲಾಗುತ್ತಿದೆ.

ಮಾಜಿ ಮಿಲಿಟರಿ ಮುಖ್ಯಸ್ಥರಾಗಿರುವ ಗಾಂಟ್ಝ್ ಅವರ ಬ್ಲೂ ಆ್ಯಂಡ್ ವೈಟ್ ಪಾರ್ಟಿ ನೆತನ್ಯಾಹು ಜತೆ ಮೈತ್ರಿ ಸಾಧ್ಯತೆ ಅಲ್ಲಗಳೆದಿದೆ. ಒಂದು ವೇಳೆ ಅವರು ಅಧಿಕಾರದಲ್ಲಿ ಉಳಿಯಲು ಸಫಲವಾದರೂ ಅವರ ವಿರುದ್ಧದ ಆರೋಪಗಳಿಂದ ತಪ್ಪಿಸುವ ಹಾಗಿಲ್ಲ ಹಾಗೂ ಮುಂದೆ ಅಧಿಕಾರದಿಂದ ಕೆಳಗಿಳಿಯಲೇ ಬೇಕಾದ ಅನಿವಾರ್ಯತೆ ಎದುರಾಗಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)