varthabharthi

ರಾಷ್ಟ್ರೀಯ

''ಗಾಂಧೀಜಿಯ ‘ಹೇ ರಾಮ್’ಗೆ ಇತರ ಧರ್ಮಗಳ ಜನರು ಭಯ ಪಡಲಿಲ್ಲ''

‘ಗೋಡ್ಸೆಯ ಕಾಲದಲ್ಲಿ ನಾನು ಗಾಂಧಿ ಜತೆ ನಿಲ್ಲುತ್ತೇನೆ’: 11ನೇ ತರಗತಿ ವಿದ್ಯಾರ್ಥಿಯ ಭಾಷಣದ ವೀಡಿಯೊ ವೈರಲ್

ವಾರ್ತಾ ಭಾರತಿ : 19 Sep, 2019

ಹೊಸದಿಲ್ಲಿ, ಸೆ.19: ‘‘ಯೇ ಕಿಸ್ನೇ ಕಹಾ ಆಪ್ಸೇ ಆಂಧೀ ಕೆ ಸಾಥ್ ಹೂ, ಮೈ ಗೋಡ್ಸೆ ಕೆ ದೌರ್ ಮೆ ಗಾಂಧಿ ಕೆ ಸಾಥ್ ಹೂ.’’ (ನಾನು ಬಿರುಗಾಳಿ ಜತೆ ಹಾರಿ ಹೋಗಿದ್ದೇನೆಂದು ನಿಮಗೆ ಯಾರು ಹೇಳಿದ್ದು, ಗೋಡ್ಸೆಯ ಕಾಲದಲ್ಲಿ ನಾನು ಗಾಂಧಿ ಜತೆ ನಿಲ್ಲುತ್ತೇನೆ).

ಸೆಪ್ಟೆಂಬರ್ 9ರಂದು ವಾರಣಾಸಿಯ ಸೆಂಟ್ರಲ್ ಹಿಂದು ಬಾಲಕರ ಶಾಲೆಯ 11ನೇ ತರಗತಿ ವಿದ್ಯಾರ್ಥಿ ಆಯುಷ್ ಚತುರ್ವೇದಿ ಮಹಾತ್ಮ ಗಾಂಧಿಯ ಕುರಿತಂತೆ ನೀಡಿದ ಆಶು ಭಾಷಣದಲ್ಲಿ ಹೇಳಿದ ಈ ಮಾತುಗಳು ಹಾಗೂ ಆತನ ಭಾಷಣದ ವೀಡಿಯೋ ಕ್ಲಿಪ್ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಹತ್ತು ಲಕ್ಷಕ್ಕೂ ಅಧಿಕ ಮಂದಿ ಈ ವೀಡಿಯೋ ನೋಡಿದ್ದಾರೆ ಹಾಗೂ ಈಗ ದೇಶಾದ್ಯಂತ ಆಯುಷ್ ಇಂಟರ್ನೆಟ್ ಸೆನ್ಸೇಶನ್ ಆಗಿಬಿಟ್ಟಿದ್ದಾನೆ.

‘‘ಹೆಚ್ಚಿನವರು ಹೇಳಲು ಧೈರ್ಯ ತೋರದ ಮಾತುಗಳನ್ನು ಈ ಬಾಲಕ ನುಡಿದಿದ್ದಾನೆ’’ ಎಂಬ ಅರ್ಥಗರ್ಭಿತ ಶೀರ್ಷಿಕೆಯೊಂದಿಗೆ ಈ ಬಾಲಕನ ಕುರಿತಾದ ವರದಿಯನ್ನು 'ದಿ ಟೆಲಿಗ್ರಾಫ್' ಇಂದು ಪ್ರಕಟಿಸಿದೆ.

ಮೊದಲು ಖ್ಯಾತ ಹಿಂದಿ ಹಾಸ್ಯ ಕವಿ ಕಾಕಾ ಹತ್ರಸಿ ಅವರ ಕುರಿತಂತೆ ಆಶು ಭಾಷಣ ನೀಡಲು ಬಾಲಕನಿಗೆ ಹೇಳಲಾಗಿತ್ತಾದರೂ ಕೊನೇ ಕ್ಷಣದಲ್ಲಿ ಅತನಿಗೆ ಮಹಾತ್ಮ ಗಾಂಧಿ ಕುರಿತಂತೆ ಭಾಷಣ ನೀಡಲು ಹೇಳಲಾಯಿತು. ಕವಿ ಇಮ್ರಾನ್ ಪ್ರತಾಪ್‌ ಗರ್ಹಿ ಅವರ ದ್ವಿಪದಿಯೊಂದಿಗೆ ಬಾಲಕ ಭಾಷಣ ಆರಂಭಿಸಿದ ನಂತರವಷ್ಟೇ ಶಿಕ್ಷಕಿಯೊಬ್ಬರು ಆತನ ಭಾಷಣದ ವೀಡಿಯೋ ತಯಾರಿಸಿದ್ದರಿಂದ ದೇಶಾದ್ಯಂತ ಇಂದು ಎಲ್ಲರ ಬಾಯಿಯಲ್ಲಿರುವ ಈ ವರದಿಯ ಆರಂಭದಲ್ಲಿ ಉಲ್ಲೇಖಿಸಿದ ಮಾತುಗಳು ಆ ವೀಡಿಯೋದಲ್ಲಿ ದಾಖಲಾಗಿಲ್ಲ.

ವೈರಲ್ ಆಗಿರುವ ಆತನ ಭಾಷಣದ ಕೆಲ ತುಣುಕುಗಳು ಹೀಗಿವೆ- ‘‘ಗಾಂಧಿಗಿಂತ ದೊಡ್ಡ ಹಿಂದು ಬೇರೆ ಯಾರೂ ಇಲ್ಲ ಎಂದು ನಾನು ಹೇಳುತ್ತೇನೆ. ಆದರೆ ಇತರ ಧರ್ಮಗಳ ಜನರು ಅವರ ‘ಹೇ ರಾಮ್’ಗೆ ಭಯ ಪಡಲಿಲ್ಲ. ಏಕೆಂದರೆ ಗಾಂಧೀಜಿ ಭಾರತದ ಜಾತ್ಯತೀತತೆಯ ದ್ಯೋತಕವಾಗಿದ್ದರು.’’

ಪ್ರಧಾನಿಯ ಲೋಕಸಭಾ ಕ್ಷೇತ್ರದ ನಿವಾಸಿಯಾಗಿರುವ ಈ ಬಾಲಕ, ತಾನು ತನ್ನ ಭಾಷಣದಲ್ಲಿ ಉರ್ದು ಕವಿ ಇಮ್ರಾನ್ ಪ್ರತಾಪಗರ್ಹಿ ಅವರ ದ್ವಿಪದಿಯನ್ನು ಏಕೆ ಆಯ್ದುಕೊಂಡೆ ಎಂಬುದನ್ನು ವಿವರಿಸುತ್ತಾ ‘‘ಕ್ಯೋಂಕಿ ಕುಛ್ ತಾಕತ್ವರ್ ಲೋಗ್ ಆಜ್ ಕಲ್ ಗೋಡ್ಸೆ ಕಿ ಪೂಜಾ ಕರ್ ರಹೇ ಹೈ (ಏಕೆಂದರೆ ಇಂದಿನ ದಿನಗಳಲ್ಲಿ ಕೆಲ ಪ್ರಬಲ ವ್ಯಕ್ತಿಗಳು ಗೋಡ್ಸೆಯನ್ನು ಪೂಜಿಸುತ್ತಿದ್ದಾರೆ) ಎಂದಿದ್ದಾನೆ.

ಕೆಲ ಪ್ರಬಲ ಜನರನ್ನೂ ಮಹಾತ್ಮ ಗಾಂಧಿ ಜತೆ ಹೋಲಿಕೆ ಮಾಡಲಾಗುತ್ತಿದೆಯಲ್ಲವೇ ಎಂದು ಕೇಳಿದಾಗ ‘‘ನೀವು ಏನನ್ನು ಹೇಳುತ್ತಿದ್ದೀರಿ ಎಂದು ನನಗೆ ಗೊತ್ತು. ಗಾಂಧಿಯನ್ನು ತಿರಸ್ಕರಿಸುವುದು ಅಷ್ಟು ಸುಲಭವಲ್ಲ ಎಂದು ಅವರಿಗೆ ಗೊತ್ತು ಅದಕ್ಕೆ ಅವರು ತಮ್ಮನ್ನೇ ರಾಷ್ಟ್ರಪಿತನೊಂದಿಗೆ ಹೋಲಿಕೆ ಮಾಡುತ್ತಾರೆ. ಮುಹ್ ಮೇ ರಾಮ್, ಬಗಲ್ ಮೇ ಚೂರಿ (ಬಾಯಿಯಲ್ಲಿ ರಾಮ, ಬಗಲಲ್ಲಿ ಕತ್ತಿ)

ಆ್ಯನಿ ಬೆಸೆಂಟ್ ಅವರಿಂದ 1898ರಲ್ಲಿ ಸ್ಥಾಪಿತ ತನ್ನ ಶಾಲೆಯಲ್ಲಿ ಭಾಷಣ ನೀಡುವಾಗ ತಾನು ಅಲೆಯ ವಿರುದ್ಧ ಮಾತನಾಡುತ್ತಿದ್ದೇನೆಂಬುದು ಆಯುಷ್ ಗೆ ಚೆನ್ನಾಗಿ ಅರಿವಿತ್ತು. ಟೀಕೆಗೆ ಹೆದರುವುದಿಲ್ಲವೇ ಎಂಬ ಪ್ರಶ್ನೆಗೆ ‘‘ನೀವು ಗಾಂಧಿಯ ಬಗ್ಗೆ ಮಾತನಾಡಬೇಕಿದ್ದರೆ, ಪರಿಣಾಮ ಬೀರುವ ರೀತಿಯಲ್ಲಿ ಮಾತನಾಡಬೇಕು’’ ಎಂದು ಆತ ಹೇಳಿರುವುದು 'ದಿ ಟೆಲಿಗ್ರಾಫ್' ಪತ್ರಿಕೆ ವರದಿಯಲ್ಲಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)