varthabharthi

ಕರ್ನಾಟಕ

ಮುಸ್ಲಿಮರ ದೇಶಭಕ್ತಿ ಅನುಮಾನಿಸುವುದೇ ಕಾಂಗ್ರೆಸ್ ಚಾಳಿ: ಕೆ.ಎಸ್.ಈಶ್ವರಪ್ಪ

ವಾರ್ತಾ ಭಾರತಿ : 19 Sep, 2019

ದಾವಣಗೆರೆ, ಸೆ.19: ಸಂವಿಧಾನದ 370ನೇ ವಿಧಿ ರದ್ದುಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶಭಕ್ತರ ಬಹುದಿನದ ಕನಸನ್ನು ಸಾಕಾರಗೊಳಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ನಗರದ ಅಭಿನವ ರೇಣುಕಾ ಮಂದಿರದಲ್ಲಿ ಗುರುವಾರ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಏರ್ಪಡಿಸಿದ್ದ ಸಂವಿದಾನದ 370ನೇ ವಿಧಿ ರದ್ದತಿ ಕುರಿತು ಒಂದು ದೇಶ- ಒಂದು ಸಂವಿಧಾನ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರವು 370ನೇ ವಿಧಿ ಜಾರಿಗೆ ತರುವ ಮೂಲಕ ಜಮ್ಮು-ಕಾಶ್ಮೀರ ಹಾಗೂ ಭಾರತಕ್ಕೆ ಸಂಬಂಧವಿಲ್ಲದಂತೆ ಮಾಡಿದ್ದರು. ಅಲ್ಲಿಗೆ ಪ್ರತ್ಯೇಕ ಸಂವಿಧಾನ, ಧ್ವಜ ಹೊಂದಲು ಅವಕಾಶ ನೀಡಿದ್ದರು. ಇದನ್ನು ವಿರೋಧಿಸಿ ಜನಸಂಘದ ಸಂಸ್ಥಾಪಕ ಶಾಮಪ್ರಸಾದ್ ಮುಖರ್ಜಿ ದೊಡ್ಡ ಹೋರಾಟವನ್ನೇ ಕೈಗೊಂಡಿದ್ದರು. ಅಲ್ಲಿಂದ ಇಲ್ಲಿವರೆಗೆ ಅನೇಕ ಪ್ರಧಾನಿಗಳು ಬಂದರೂ 370ನೇ ವಿಧಿ ಮುಟ್ಟುವ ಸಾಹಸ ಮಾಡಿರಲಿಲ್ಲ. ಆದರೆ ನಮ್ಮ ಗಂಡುಗಲಿ ಪ್ರಧಾನಿ ನರೇಂದ್ರ ಮೋದಿಯವರು 370ನೇ ವಿಧಿ ರದ್ದು ಪಡಿಸುವ ಮೂಲಕ ಇಡೀ ದೇಶವನ್ನು ನಿಜಾರ್ಥದಲ್ಲಿ ಒಂದಾಗಿಸಿದ್ದಾರೆ ಎಂದು ಅವರು ಬಣ್ಣಿಸಿದರು.

ಭಗತ್ ಸಿಂಗ್, ಚಂದ್ರಶೇಖರ್ ಆಝಾದ್, ವೀರ ಸಾವರ್ಕರ್ ರಂತಹ ಸ್ವಾತಂತ್ರ್ಯ ಹೋರಾಟಗಾರರು ಸಮಗ್ರ ದೇಶದ ದೃಷ್ಟಿಯನ್ನಿಟ್ಟುಕೊಂಡು ಕೆಲಸ ಮಾಡಿದ್ದರು. ಅವರ ಆತ್ಮಕ್ಕೆ 370ನೇ ವಿಧಿ ರದ್ದತಿಯಿಂದ ಸ್ವಲ್ಪವಾದರೂ ಸಮಾಧಾನ ಸಿಕ್ಕಿದೆ. ಪೂರ್ಣ ತೃಪ್ತಿ ಸಿಗಬೇಕಾದರೆ ಕೇವಲ ಪಾಕ್ ಆಕ್ರಮಿತ ಕಾಶ್ಮೀರವನ್ನು ಮಾತ್ರವಲ್ಲದೆ, ಇಡೀ ಪಾಕಿಸ್ತಾನವನ್ನೇ ಭಾರತದೊಂದಿಗೆ ವಿಲೀನಗೊಳಿಸಬೇಕಿದೆ. ಅಖಂಡ ಭಾರತ ನಿರ್ಮಾಣವಾದಾಗ ಮಾತ್ರ ದೇಶಭಕ್ತರ ಮನಸ್ಸಿಗೆ ಪೂರ್ಣ ಶಾಂತಿ ಸಿಗಲು ಸಾಧ್ಯ ಎಂದರು.

ತ್ರಿವಳಿ ತಲಾಕ್ ತೆಗೆದು ಹಾಕುವ ಮೂಲಕ ನರೇಂದ್ರ ಮೋದಿಯವರು ಮುಸ್ಲಿಂ ಮಹಿಳೆಯರಿಗೆ ಗೌರವ ತಂದುಕೊಟ್ಟಿದ್ದಾರೆ. ಈ ಬಗ್ಗೆ ಯಾವುದೇ ಮುಸ್ಲಿಮರದ್ದೂ ತಕರಾರಿಲ್ಲ. ಆದರೆ ತ್ರಿವಳಿ ತಲಾಕ್ ಪರವಾಗಿ ಕಾಂಗ್ರೆಸ್ ನವರು ಬೊಬ್ಬೆ ಹೊಡೆಯುತ್ತಾರೆ. 370ನೇ ವಿಧಿ ರದ್ದು ಮಾಡಿದ್ದರಿಂದ ಮುಸ್ಲಿಮರಿಗೆ ಬೇಜಾರಾಗಿದೆ ಎನ್ನುತ್ತಾರೆ. ಸದಾಕಾಲ ಹಿಂದೂ, ಮುಸ್ಲಿಮರನ್ನು ವಿಭಜಿಸಿಕೊಂಡೇ ಕಾಂಗ್ರೆಸ್ ರಾಜಕೀಯ ಮಾಡಿದೆ. ಮುಸ್ಲಿಮರ ದೇಶಭಕ್ತಿ ಅನುಮಾನಿಸುವುದೇ ಕಾಂಗ್ರೆಸ್ ಚಾಳಿಯಾಗಿದೆ ಎಂದು ಅವರು ಟೀಕಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರದ ಮಾಜಿ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸಂವಾದ ನಡೆಸಿಕೊಟ್ಟರು.

ಸಂಸದ ಜಿ.ಎಂ.ಸಿದ್ದೇಶ್ವರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಶಾಸಕರಾದ ಎಸ್.ಎ.ರವೀಂದ್ರನಾಥ್, ಎಸ್.ವಿ.ರಾಮಚಂದ್ರ, ಪ್ರೊ.ಲಿಂಗಣ್ಣ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಬಸವರಾಜ್, ಉಪಾಧ್ಯಕ್ಷ ಸುರೇಂದ್ರ ನಾಯ್ಕ, ಡಾ.ರಮೇಶ್ ಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಹನಾ ಮಂಜುನಾಥ್ ಪ್ರಾರ್ಥಿಸಿದರು. ವಾಗೀಶ ಸ್ವಾಮಿ ಸ್ವಾಗತಿಸಿ, ಬಿ.ಎಂ.ಸತೀಶ್ ಕಾರ್ಯಕ್ರಮ ನಿರೂಪಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)