varthabharthi


ನಿಮ್ಮ ಅಂಕಣ

ರಾಜ್ಯ ಬಾವುಟ ಸಂವಿಧಾನ ವಿರೋಧಿಯೇ?

ವಾರ್ತಾ ಭಾರತಿ : 19 Sep, 2019
-ಕೆ. ಎಸ್. ನಾಗರಾಜ್, ಹನುಮಂತನಗರ, ಬೆಂಗಳೂರು

ಮಾನ್ಯರೇ,

ರಾಷ್ಟ್ರಕವಿ ಕುವೆಂಪುರವರು ತಮ್ಮ ನಾಡಗೀತೆಯಲ್ಲಿಯೇ ಜಯಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ! ಎಂದು ಕನ್ನಡಿಗರ ಹೃದಯದಲ್ಲಿ ಭಾರತೀಯತೆ ಎಂದೋ ತುಂಬಿದ್ದಾರೆ. ಕರ್ನಾಟಕದ ಜನರಿಗೆ ಸಂವಿಧಾನವನ್ನು ಗೌರವಿಸುವ ವಿಚಾರದಲ್ಲಿ, ರಾಷ್ಟ್ರಧ್ವಜವನ್ನು ಗೌರವಿಸುವ ವಿಚಾರದಲ್ಲಿ ಯಾರ ಉಪದೇಶದ ಅವಶ್ಯಕತೆಗಳಿಲ್ಲ. ದೇಶಕ್ಕೆ ಒಂದು ಬಾವುಟ, ಒಂದು ರಾಷ್ಟ್ರಗೀತೆ ಇರುವ ರೀತಿಯಲ್ಲಿ ರಾಜ್ಯಗಳು ಭಾಷಾವಾರು ಪ್ರಾಂತಗಳ ಮೇಲೆ ರಚನೆಯಾದ ಮೇಲೆ ನಾಡಗೀತೆ, ರಾಜ್ಯದ ಲಾಂಛನ ಎಲ್ಲವೂ ಇದೆ. ಕನ್ನಡದ ಬಾವುಟ ಕನ್ನಡಿಗರ ಹೃದಯಗಳಲ್ಲಿ ಪೂಜ್ಯವಾದ ಭಾವನೆಯನ್ನು ಹೊಂದಿದೆ.

ನವೆಂಬರ್ 1ರಂದು ರಾಜ್ಯೋತ್ಸವವನ್ನು ಆಚರಿಸುವ ಸಂದರ್ಭಗಳಲ್ಲಿ ನಾಡಧ್ವಜಕ್ಕೆ ಮಾನ್ಯತೆ ಇಲ್ಲದ ಕಾರಣದಿಂದ ಜಿಲ್ಲಾ ಕೇಂದ್ರಗಳಲ್ಲಿ ಆಚರಿಸುವ ರಾಜ್ಯೋತ್ಸವದ ಕಾರ್ಯಕ್ರಮಗಳಲ್ಲಿ ರಾಷ್ಟ್ರಧ್ವಜವನ್ನು ಮಾತ್ರ ಹಾರಿಸಲಾಗುತ್ತಿದೆ. ನಮ್ಮ ನಾಡಧ್ವಜಕ್ಕೆ ಮಾನ್ಯತೆ ದೊರೆತರೆ, ರಾಷ್ಟ್ರಧ್ವಜಕ್ಕಿಂತ ಸ್ವಲ್ಪಕಡಿಮೆ ಎತ್ತರದಲ್ಲಿ ನಾಡಧ್ವಜವನ್ನು ಸಹ ಹಾರಿಸಬಹುದು. ಇದಕ್ಕೆ ಹೆಚ್ಚಿನ ಗೌರವವೂ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸರಕಾರದ ಅವಧಿಯಲ್ಲಿ ಶಿಫಾರಸು ಮಾಡಿರುವ ನಾಡಧ್ವಜಕ್ಕೆ ಮಾನ್ಯತೆ ನೀಡುವಂತೆ ನಾಡಿನ ಸಮಸ್ತ ಕನ್ನಡಿಗರು ಈಗಿನ ಸರಕಾರಕ್ಕೆ ಒತ್ತಡವನ್ನು ಹಾಕಬೇಕು. ಕನ್ನಡದ ಬಾವುಟ ನಮ್ಮೆಲ್ಲರ ಸ್ವಾಭಿಮಾನದ ಸಂಕೇತ, ಕನ್ನಡಿಗರ ಭಾವನೆಗಳ ಸಂಕೇತ. ಈ ನಿಟ್ಟಿನಲ್ಲಿ ಯಾರನ್ನೋ ಮೆಚ್ಚಿಸಲು ಅಪಸ್ವರ ತೆಗೆಯುವ ವ್ಯಕ್ತಿಗಳು ಎಷ್ಟೇ ದೊಡ್ಡವರಾಗಿದ್ದರೂ ಸಹ, ಅವರ ಮಾತುಗಳನ್ನು ಧಿಕ್ಕರಿಸಿ ಕನ್ನಡಿಗರು ಮುನ್ನಡೆಯಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)