varthabharthiನಿಮ್ಮ ಅಂಕಣ

ಇವರು ಸಮಾಜಕ್ಕೆ ನೀಡುವ ಸಂದೇಶವಾದರೂ ಏನು?

ವಾರ್ತಾ ಭಾರತಿ : 19 Sep, 2019
ಗಿರಿಜಾಶಂಕರ್ ಜಿ. ಎಸ್., ನೇರಲಕೆರೆ

ಮಠಾಧೀಶರು ಎಂದರೆ ಎಲ್ಲಾ ಜನ ಸಮುದಾಯಗಳನ್ನು ಒಟ್ಟಿಗೆ ಕರೆದೊಯ್ಯುವ, ಎಲ್ಲರೊಂದಿಗೂ ಸಾಮರಸ್ಯ ಬಿತ್ತುವ ಶ್ರದ್ಧಾಕೇಂದ್ರಗಳೆಂದು ಜನ ಭಾವಿಸಿದ್ದಾರೆ. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ನಡೆಯುತ್ತಿರುವ ಹಲವು ರಾಜಕೀಯ ಸ್ಥಿತ್ಯಂತರಗಳ ನಡುವೆ ರಾಜಕಾರಣಿಗಳಿಗಿಂತ ವಿವಾದಗಳಿಗೆ ಸುದ್ದಿಯಾಗುವವರು ಕೆಲವು ಮಠಾಧೀಶರು. ರಾಜಕೀಯ ಪಕ್ಷಗಳು ಓಲೈಕೆ ರಾಜಕಾರಣ ಮಾಡುವುದು ಸಹಜ. ಆದರೆ ಮಠದ ಸ್ವಾಮಿಗಳೆನಿಸಿಕೊಂಡವರೂ ಸಹ ಓಲೈಕೆ ರಾಜಕಾರಣ ಮಾಡಲು ಹೊರಟಿರುವುದನ್ನು ನೋಡಿದರೆ ಖಾದಿಗೂ ಕಾವಿಗೂ ವ್ಯತಾಸ ಹುಡುಕುವುದೇ ಕಷ್ಟವಾಗಿದೆ.

ಸ್ವಾಮಿಗಳು ತಮ್ಮ ಸಮಾಜದಲ್ಲಿ ಯಾರಾದರೂ ಉತ್ತಮ ಕೆಲಸ ಮಾಡಿದರೆ ಅಥವಾ ಸಾಧನೆ ಮಾಡಿದರೆ ಗೌರವಿಸುವುದು ಸಮಂಜಸವೇ. ತಮ್ಮ ಸಮುದಾಯದವರು ಉನ್ನತ ಹುದ್ದೆಗಳನ್ನು ಅಲಂಕರಿಸಿದಾಗ, ಸಮಾಜವೇ ಮೆಚ್ಚುವಂಥ ಕೆಲಸ ಮಾಡಿದಾಗ ಜಾತಿಯ ಸಂಘಟನೆಗಳಿಂದ ಅಥವಾ ತಮ್ಮ ಸಮುದಾಯದ ಮಠಗಳಿಂದ ಅಂತಹವರಿಗೆ ಸನ್ಮಾನ ಮಾಡಿ ಇನ್ನೂ ಇಂತಹ ಉತ್ತಮ ಕೆಲಸಗಳನ್ನು ಮಾಡಿ ಎಂದು ಪ್ರೋತ್ಸಾಹಿಸುವುದು ಸರಿಯಾದ ಬೆಳವಣಿಗೆ. ಇದು ಇತರರಿಗೆ ಪ್ರೇರಣೆಯೂ ಹೌದು. ಆದರೆ ಇದಕ್ಕೆ ವ್ಯತಿರಿಕ್ತವಾದ ಜಾತಿಯ ಸಂಕೋಲೆಯು ಕೆಲವು ಮಠಮಾನ್ಯಗಳಲ್ಲಿ ಹರಡಿಕೊಂಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಕುರುಬ ಸ್ವಾಮಿಗಳು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಒಕ್ಕಲಿಗ ಸ್ವಾಮಿಗಳು, ಮೊನ್ನೆ ತಾನೇ ಡಿ. ಕೆ. ಶಿವಕುಮಾರ್ ಬಂಧನವಾದಾಗ ಪ್ರತಿಭಟನೆಗೆ ಕುಳಿತ ಸ್ವಾಮಿಗಳು, ಈಗ ಮುಖ್ಯಮಂತ್ರಿ ಯಡಿಯೂರಪ್ಪನವರ ಪರ ಉತ್ತರ ಕರ್ನಾಟಕದ ಕೆಲವು ಲಿಂಗಾಯತ ಸ್ವಾಮಿಗಳು ಓಲೈಕೆಯ ಮಾತುಗಳನ್ನು ಆಡುತ್ತಿದ್ದಾರೆ. ಪ್ರಸ್ತುತ ದಿನಮಾನಗಳನ್ನು ಗಮನಿಸಿದರೆ ಸ್ವಾಮಿಗಳು ಆಗಿರುವುದೇ ತಮ್ಮ ತಮ್ಮ ಜಾತಿಯವರನ್ನು ಸಮರ್ಥಿಸಿಕೊಳ್ಳುವುದಕ್ಕೇನೋ ಎನ್ನುವ ಅನುಮಾನ ಮೂಡಿಸುವ ವ್ಯವಸ್ಥೆಗೆ ಬಂದಿದ್ದೇವೆ. ಮುಂದೊಂದು ದಿನ ಆಯಾ ಜಾತಿಯ ಸ್ವಾಮಿಗಳು ತಮ್ಮ ಜಾತಿಯ ರಾಜಕೀಯ ವ್ಯಕ್ತಿಗಳನ್ನು ರಕ್ಷಣೆ ಮಾಡುವುದಕ್ಕಾಗಿಯೇ ಮಠವನ್ನು ಕಟ್ಟಿಕೊಂಡಿದ್ದಾರೇನೋ ಎನ್ನುವ ಸಂದರ್ಭ ಬಂದರೆ ಅಚ್ಚರಿಪಡಬೇಕಾಗಿಲ್ಲ! ಇಂತಹ ಬೆಳವಣಿಗೆಗಳನ್ನು ಗಮನಿಸಿದರೆ ರಾಜಕೀಯ ವ್ಯಕ್ತಿಗಳನ್ನು ಮತ್ತು ಮಠಾಧೀಶರನ್ನು ಒಂದೇ ತಕ್ಕಡಿಯಲ್ಲಿ ತೂಗುವ ಕಾಲ ದೂರವಿಲ್ಲವೇನೋ?

ಡಿ. ಕೆ. ಶಿವಕುಮಾರ್ ಅವರ ಬಂಧನ ವಿರೋಧಿಸಿ ‘‘ಹುಲಿ ಎಂದಿದ್ದರೂ ಹುಲಿಯೇ. ಅದನ್ನು ಪಂಜರದೊಳಗೆ ಇಟ್ಟರೂ, ಬೋನಿಗೆ ಹಾಕಿದರೂ, ಹೊರಗೆ ಬಿಟ್ಟರೂ ಹುಲಿಯೇ. ಇತ್ತೀಚಿನ ದಿನಗಳಲ್ಲಿ ಹುಲಿಗೆ ಸಂಸ್ಕಾರ ಬಂದು ಸೌಮ್ಯವಾಗಿತ್ತು. ಆದರೆ ಆ ಸೌಮ್ಯತೆಯನ್ನೇ ದೌರ್ಬಲ್ಯ ಎಂದು ತಿಳಿದುಕೊಂಡ ಪರಿಣಾಮ ಇಷ್ಟೆಲ್ಲಾ ರಾದ್ಧಾಂತಗಳಾದವು’’ ಎಂದು ಡಿಕೆಶಿಯನ್ನು ಪರೋಕ್ಷವಾಗಿ ಹುಲಿಗೆ ಹೋಲಿಸಿಕೊಂಡು ಹೊಗಳಿದ್ದು ಯಾರೋ ಒಬ್ಬ ರಾಜಕೀಯ ವ್ಯಕ್ತಿಯಾಗಿದ್ದರೆ ಸುಮ್ಮನಿರಬಹುದಿತ್ತು. ಆದರೆ ಒಬ್ಬ ಸ್ವಾಮಿಗಳು ಕೋಟಿ ಕೋಟಿ ಅಕ್ರಮ ಸಂಪಾದನೆಯ ಆರೋಪವಿರುವ ವ್ಯಕ್ತಿಯ ಬಗ್ಗೆ ಈ ರೀತಿ ಗುಣಗಾನ ಮಾಡುವುದು ಸ್ವಾಮಿತನಕ್ಕೆ ಸರಿಯಲ್ಲವೇನೋ? ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ನಂಜಾವಧೂತ ಸ್ವಾಮಿಗಳು ಹೇಳಿದ್ದು ಎಷ್ಟರಮಟ್ಟಿಗೆ ಸರಿ? ಯಾರಾದರೂ ತಮ್ಮ ಸಮುದಾಯವನ್ನು ಹತ್ತಿಕ್ಕುವ ಪ್ರಯತ್ನ ಮಾಡಿದರೆ ಮುಂದಿನ ದಿನಗಳಲ್ಲಿ ಸಮುದಾಯದ ಮಠಾಧೀಶರೆಲ್ಲಾ ಮತ್ತೆ ಪ್ರತಿಭಟನೆಗೆ ಕರೆ ನೀಡಬೇಕಾಗುತ್ತದೆ ಎನ್ನುವ ಸಂಕುಚಿತ ಭಾವ ಇವರಿಗೇಕೆ? ಒಕ್ಕಲಿಗ ಸಮುದಾಯವೆಂದರೆ ಕೇವಲ ಡಿಕೆಶಿ ಮಾತ್ರವಾ? ಡಿಕೆಶಿಯನ್ನು ಬಂಧಿಸಿದರೆ ಇಡೀ ಒಕ್ಕಲಿಗ ಸಮುದಾಯವನ್ನು ಹೇಗೆ ಹತ್ತಿಕ್ಕುವಂತಾಗುತ್ತದೆ.? ಇಡೀ ಸಮುದಾಯ ಡಿಕೆಶಿಯನ್ನು ಮಾತ್ರ ಅವಲಂಬಿಸಿದೆಯಾ? ಒಬ್ಬ ಸ್ವಾಮೀಜಿ ಈ ರೀತಿ ಅನರ್ಥ ಹೇಳಿಕೆಗಳನ್ನು ಕೊಡುವ ಮೂಲಕ ದೇಶಕ್ಕೆ ಯಾವ ಸಂದೇಶ ರವಾನಿಸುತ್ತಾರೆ? ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಲು ರಾಜಕೀಯ ನಾಯಕರು ಯಾರ್ಯಾರ ವಿರುದ್ಧ, ಯಾರ್ಯಾರ ಪರ ಪ್ರತಿಭಟನೆ, ಸತ್ಯಾಗ್ರಹ, ಚಳವಳಿ, ಹಾರಾಟ-ಚೀರಾಟ, ಹೋರಾಟ ಮಾಡುತ್ತಾರೆಂದರೆ ಆಶ್ಚರ್ಯಪಡ ಬೇಕಾಗಿಲ್ಲ.

ಆದರೆ ಇಡೀ ಸಮಾಜಕ್ಕೆ ಮಾರ್ಗದರ್ಶನ ನೀಡುವ ಮಠಾಧೀಶರು ಪ್ರತಿಭಟನೆಯ ನೇತೃತ್ವ ವಹಿಸುತ್ತಾರೆಂದರೆ ನಮ್ಮ ಸಮಾಜ ಎಂತಹ ವ್ಯವಸ್ಥೆಗೆ ಬಂದು ನಿಂತಿದೆ ಎನ್ನುವುದು ತಿಳಿಯುತ್ತದೆ. ತಮ್ಮ ಭಕ್ತರು ತಪ್ಪುಮಾಡಿದಾಗ ಸರಿ ದಾರಿಗೆ ತರುವ ಸ್ವಾಮಿಗಳೇ ಪ್ರತಿಭಟನೆಗೆ ಕುಳಿತರೆ ಸಾಮಾನ್ಯ ಜನರ ಮನಸ್ಸಿನಲ್ಲಿ ಇವರ ಬಗ್ಗೆ ಎಂತಹ ಭಾವನೆ ಮೂಡಬಹುದು! ಹಿಂದೆಲ್ಲಾ ಸ್ವಾಮಿಗಳೆಂದರೆ ಎಲ್ಲರಿಗೂ ಮೌಲ್ಯವನ್ನು ತಿಳಿಸುವಂಥವರು, ಯಾವುದು ಸರಿ, ಯಾವುದು ತಪ್ಪುಎಂದು ತಿಳಿಹೇಳುವಂಥ ಶಕ್ತಿಯಾಗಿದ್ದರು. ಸ್ವಾಮಿಗಳು ಒಂದು ಮಾತನಾಡಿದರೆ ಪ್ರತಿಯೊಬ್ಬರೂ ಶಿರಬಾಗಿ ಗೌರವಿಸುತ್ತಿದ್ದರು. ಆದರೆ ಈಗ ಅನ್ಯಾಯದ ವಿರುದ್ಧ, ಅಸಮಾನತೆಯ ವಿರುದ್ಧ, ಅನೀತಿಯ ವಿರುದ್ಧ, ಭ್ರಷ್ಟಾಚಾರದ ವಿರುದ್ಧ ಮಾತನಾಡಬೇಕಿದ್ದ ಸ್ವಾಮಿಗಳಲ್ಲಿ ಕೆಲವರು ಈಗ ತಮ್ಮ ಜಾತಿ ಸಮುದಾಯದ ವ್ಯಕ್ತಿಗಳ ಪರ ಮಾತನಾಡುತ್ತಿದ್ದಾರೆ. ಇದು ಸರಿಯೇ? ಮುಂದಿನ ದಿನಗಳಲ್ಲಿ ಬೇರೆ ಬೇರೆ ಜಾತಿಯ ಮುಖಂಡನನ್ನು ಬಂಧಿಸುವ ಸಂದರ್ಭ ಬಂದರೆ ಆಯಾ ಜಾತಿಯವರು ಬೀದಿಗೆ ಇಳಿದರೆ ಸಮಾಜಕ್ಕೆ ಯಾವ ಸಂದೇಶ ಹೋಗುತ್ತದೆ? ತಮ್ಮಿಂದ ಯುವ ಪೀಳಿಗೆಗೆ ಯಾವ ನೈತಿಕತೆಯನ್ನು ಬೆಳೆಸಲು ಹೊರಟಿದ್ದೀರಾ? ಯಾರೇ ಆಗಲಿ ಎಲ್ಲಾ ಸಮಾಜದ ಶ್ರೇಯೋಭಿವೃದ್ಧಿಗೆ ದುಡಿದ ಪ್ರಾಮಾಣಿಕ ವ್ಯಕ್ತಿಗೆ ಅನ್ಯಾಯವಾದರೆ ಅದನ್ನು ಖಂಡತುಂಡವಾಗಿ ಖಂಡಿಸಲಿ.

ಬೀದಿಗೆ ಬಂದು ದೊಡ್ಡ ಹೋರಾಟವನ್ನೇ ಮಾಡಲಿ. ಅದರ ಬಗ್ಗೆ ಯಾವ ನಾಗರಿಕನೂ ಚಕಾರವೆತ್ತಲು ಸಾಧ್ಯವಿಲ್ಲ. ಮೊನ್ನೆಯ ಪ್ರತಿಭಟನೆ ಗಮನಿಸಿದರೆ ಈ.ಡಿ. ತನಿಖಾ ಸಂಸ್ಥೆಯವರು ಡಿಕೆಶಿಯನ್ನು ಬಿಟ್ಟು ಬೇರೆ ಯಾರನ್ನೂ ಬಂಧಿಸಿಯೇ ಇಲ್ಲವೇನೋ ಎಂಬಂತೆ ಧಮಕಿ ಹಾಕುವುದು ಕಂಡುಬಂತು. ಇದು ಈ ನೆಲದ ನ್ಯಾಯಾಂಗವನ್ನು ಗೌರವಿಸುವ ಭಾರತೀಯ ನಾಗರಿಕನ ಲಕ್ಷಣವಲ್ಲ. ತನಿಖಾ ಸಂಸ್ಥೆಗಳು ಈ ಹಿಂದೆಯೂ ಹಲವು ಬಾರಿ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರನ್ನು ಬಂಧಿಸಿರುವುದು ದೇಶದ ಪ್ರತಿಯೊಬ್ಬ ಪ್ರಜೆಗೂ ಗೊತ್ತಿರುವ ಸಂಗತಿಯೇ. ಹಾಗಿದ್ದೂ ನಮ್ಮ ನಾಗರಿಕ ಬಂಧುಗಳು ಈ ರೀತಿ ಹೋರಾಟಕ್ಕಿಳಿಯುವುದು ಎಷ್ಟರ ಮಟ್ಟಿಗೆ ಸರಿ? ಡಿಕೆಶಿ ಮೇಲೆ ಕೋಟಿ ಕೋಟಿ ಅಕ್ರಮ ಸಂಪಾದನೆಯ ಆರೋಪವಿದೆ. ಇದನ್ನು ತನಿಖೆ ಮಾಡಲು ಜಾರಿ ನಿರ್ದೇಶನಾಲಯ ಬಂಧಿಸಿದೆ. ಇಲ್ಲಿ ಜಾತಿಯ ಪ್ರಶ್ನೆ ಎಲ್ಲಿ ಬಂತು? ಅಷ್ಟಕ್ಕೂ ಡಿಕೆಶಿಯವರು ತಮ್ಮ ವ್ಯವಹಾರದಲ್ಲಿ ಯಾವುದೇ ಅಕ್ರಮವೆಸಗಿಲ್ಲ ಎನ್ನುವ ಆತ್ಮವಿಶ್ವಾಸವಿದ್ದರೆ ಧೈರ್ಯವಾಗಿ ಎದುರಿಸಿ ಆರೋಪಮುಕ್ತರಾಗಲಿ. ತಮ್ಮ ಪರಿಶುದ್ಧ ವ್ಯವಹಾರದ ಬಗ್ಗೆ ಸ್ಪಷ್ಟಮಾಹಿತಿ ನೀಡಿ ಅದರಲ್ಲಿ ಗೆದ್ದು ಬರಲಿ. ಆದರೆ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ಪ್ರತಿಭಟನಾ ರ್ಯಾಲಿಯಲ್ಲಿ ಭಾಗಿಯಾದುದು ಸ್ವಾಮಿಗಳ ಘನತೆಗೆ ಶೋಭೆತರುವುದಿಲ್ಲ.

ಹೈದರಾಬಾದ್ ಕರ್ನಾಟಕಕ್ಕೆ ‘ಕಲ್ಯಾಣ ಕರ್ನಾಟಕ’ ಎಂದು ನಾಮಕರಣ ಮಾಡಿದ ಕಾರಣಕ್ಕಾಗಿ ಯಡಿಯೂರಪ್ಪನವರು ‘ಆಧುನಿಕ ಬಸವಣ್ಣ’ನವರಾಗಿ ಹೊರಹೊಮ್ಮಿದ್ದಾರೆ. ಅಂತಹವರನ್ನು ಕೆಣಕಿದರೆ ಸುಮ್ಮನಿರುವುದಿಲ್ಲ ಎನ್ನುವ ಮಾತುಗಳನ್ನು ದೇವಾಪುರದ ಶಿವಮೂರ್ತಿ ಶಿವಾಚಾರ್ಯರು ಹೇಳಿದ್ದಾರೆ. ಬಸವಣ್ಣರಾಗುವುದು ಅಂತರಂಗದಿಂದಲೇ ಹೊರತು ಬಹಿರಂಗದ ಕಾರ್ಯದಿಂದಲ್ಲ ಎನ್ನುವುದನ್ನು ಸ್ವಾಮಿಗಳು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಇದೇ ಸಂದರ್ಭದಲ್ಲಿ ಸಾರಂಗಧರ ದೇಶೀಕೇಂದ್ರ ಸ್ವಾಮಿಗಳು: ‘‘ಈ ಸರಕಾರದ ಅವಧಿ ಮುಗಿಯುವವರೆಗೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿರಬೇಕು. ಪದಚ್ಯುತಿಗೊಳಿಸಿದರೆ ಎಲ್ಲಾ ಮಠಾಧೀಶರು ದಿಲ್ಲಿಯಲ್ಲಿ ಧರಣಿ ನಡೆಸುತ್ತೇವೆ’’ ಎಂದು ಥೇಟ್ ರಾಜಕೀಯ ವ್ಯಕ್ತಿಗಳ ಹಾಗೆ ಮಾತನಾಡಿದ್ದಾರೆ.

ರಾಜಕೀಯ ಕಾರಣಗಳಿಗಾಗಿ ಇಂತಹ ಹೇಳಿಕೆಗಳನ್ನು ಕೊಡುವ ಬದಲು ಉತ್ತರ ಕರ್ನಾಟಕದ ಜನ ಪ್ರವಾಹಕ್ಕೆ ತುತ್ತಾಗಿ ಮನೆಗಳನ್ನು ಕಳೆದುಕೊಂಡು ಬೀದಿಯಲ್ಲಿ ನಿಂತಿದ್ದಾರೆ. ಮೊದಲು ಅವರಿಗೆ ಒಂದು ಸೂರು ಕಲ್ಪಿಸುವ ಕಾರಣಕ್ಕಾಗಿ ದಿಲ್ಲಿಯಲ್ಲಿ ಧರಣಿ ಕುಳಿತರೆ ಜನ ಗೌರವಭಾವದಿಂದ ನೋಡಿಯಾರು! ಅದನ್ನು ಬಿಟ್ಟು ಇಂತಹ ಹೇಳಿಕೆಗಳನ್ನು ಮತ್ತೆ ಮತ್ತೆ ಕೊಡುತ್ತಾ ಹೋದರೆ ಪ್ರಜ್ಞಾವಂಥ ಜನ ಮಠಗಳ ಕಡೆ ತಿರುಗಿ ನೋಡದಂಥ ಪರಿಸ್ಥಿತಿ ಬರಬಹುದು. ಕಾವಿಧಾರಿಗಳು ತಮ್ಮ ಜಾತಿಯ ಕವಚವನ್ನು ತೆಗೆದು ತಾವು ಮಾಡುವ ಒಂದೊಂದು ಕಾರ್ಯವೂ ಅನುಕರಣೀಯವಾಗಿರಬೇಕೇ ವಿನಾ ಐಕ್ಯತೆಗೆ ದಕ್ಕೆ ತರುವಂತಿರಬಾರದು. ಕಮಲವು ಕೆಸರಲ್ಲಿ ಹುಟ್ಟಿದರೂ ಎಂದಿಗೂ ಕೆಸರನ್ನು ತನಗೆ ಅಂಟಿಸಿಕೊಳ್ಳದೆ ಸುಂದರವಾಗಿ ಕಾಣುತ್ತದೆ. ಹಾಗೆಯೇ ಸ್ವಾಮಿಗಳಾದವರು ಜಾತಿಯನ್ನು ಅಂಟಿಸಿಕೊಳ್ಳದೆ ಸಮಾಜಕ್ಕೆ ಸಂದೇಶ ನೀಡಿದರೆ ಎಲ್ಲರೂ ಸ್ವೀಕರಿಸುತ್ತಾರೆ, ಪುರಸ್ಕರಿಸುತ್ತಾರೆ.

ಇಮೇಲ್: girijashankar.gs23@gmail.com

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)