varthabharthi

ವೈವಿಧ್ಯ

ಸಿಂಧೂ ಕಣಿವೆಯ ನಾಗರಿಕರು ಆಧುನಿಕ ತಮಿಳರ ಪೂರ್ವಿಕರೇ?

ವಾರ್ತಾ ಭಾರತಿ : 20 Sep, 2019
ಶ್ರುತಿಸಾಗರ್ ಯಮುನನ್, scroll.in

ಕೀಳಡಿ ಪ್ರದೇಶದ ಉತ್ಖನನವು ಪುರಾತನ ತಮಿಳು ಪ್ರದೇಶದ ಕುರಿತ ಸಂಶೋಧನೆಯಲ್ಲಿ ಕ್ರಾಂತಿಕಾರಿ ಫಲಿತಾಂಶಗಳನ್ನು ತಂದುಕೊಟ್ಟಿತು. ಸಿಂಧೂ ಕಣಿವೆ ಹಾಗೂ ಗಂಗಾ ನದಿ ದಂಡೆ ಪ್ರದೇಶದಲ್ಲಿ ಪತ್ತೆಯಾದ ಹಾಗೆ ಕೀಳಡಿ ಪ್ರದೇಶದಲ್ಲಿಯೂ ನಗರ ವಸಾಹತುಗಳು ಅಸ್ತಿತ್ವದಲ್ಲಿದ್ದುದನ್ನ್ನು ತೋರಿಸಿಕೊಟ್ಟಿತು. ಅಲ್ಲಿ ಪತ್ತೆಯಾದ ಪುರಾತನವಾದ ವಸ್ತುಗಳ ಕಾರ್ಬನ್ ಡೇಟಿಂಗ್ ಪರೀಕ್ಷೆ ನಡೆಸಿದಾಗ ಅವು ಕ್ರಿ.ಪೂ. 200ನೇ ಇಸವಿಯಷ್ಟು ಪುರಾತನವೆಂಬ ಅಂಶ ಬೆಳಕಿಗೆ ಬಂದಿತು. ಇವು ಸಂಗಮ ಯುಗಕ್ಕೆ ಸಂಬಂಧಿಸಿದ್ದಾಗಿದೆ.

ಸಿಂಧೂ ಕಣಿವೆಯ ನಾಗರಿಕತೆ ಇಂದಿಗೂ ಪುರಾತತ್ವ ವಿಜ್ಞಾನಿಗಳಿಗೆ ಇಂದಿಗೂ ಬಿಡಿಸಲಾಗದ ಒಗಟಿನಂತಾಗಿದೆ. ಸಿಂಧೂ ನಾಗರಿಕತೆಯ ಜನರು ಆರ್ಯರೇ, ಇಲ್ಲ ದ್ರಾವಿಡರೇ, ಅವರು ಯಾವ ಭಾಷೆ ಮಾತನಾಡುತ್ತಿದ್ದರು ಎಂಬ ಬಗ್ಗೆ ಸಾಕಷ್ಟು ವಾದ, ವಿಮರ್ಶೆಗಳು ನಡೆದಿವೆ. ಆದರೆ ಕ್ರಿ.ಪೂ. 5 ಸಾವಿರದಿಂದ ಕ್ರಿ.ಪೂ.1500 ವರ್ಷಗಳಷ್ಟು ಪುರಾತನವಾದ ಸಿಂಧೂ ಕಣಿವೆ ನಾಗರಿಕತೆಯನ್ನು ಅನ್ವೇಷಿಸಿದಷ್ಟು ಅದು ಹೆಚ್ಚು ಹೆಚ್ಚು ನಿಗೂಢವಾಗುತ್ತಾ ಬರುತ್ತಿದೆ.
ಕೆಲವು ಪುರಾತತ್ವ ತಜ್ಞರು ಹಾಗೂ ಭಾಷಾ ವಿದ್ವಾಂಸರು ಸಿಂಧೂ ಕಣಿವೆ ನಾಗರಿಕತೆಯ ಜನರು ಆಧುನಿಕ ದ್ರಾವಿಡ ಭಾಷೆ ತಮಿಳಿನ ಪೂರ್ವ ರೂಪದ್ದಾಗಿದೆಯೆಂದು ಪ್ರತಿಪಾದಿಸುತ್ತಾ ಬಂದಿದ್ದಾರೆ.
ಸಿಂಧೂ ಕಣಿವೆಯ ನಾಗರಿಕತೆಯ ಅವನತಿಯೊಂದಿಗೆ, ಅದರ ಜನತೆ ವಾಯವ್ಯ ಭಾರತದಿಂದ ಪೂರ್ವ ಹಾಗೂ ದಕ್ಷಿಣದೆಡೆಗೆ ವಲಸೆ ಹೋಗತೊಡಗಿದರು. ಕ್ರಿ.ಪೂ.2000 ಹಾಗೂ ಕ್ರಿಪೂ.1500ರ ನಡುವಿನ ಈ ಅವಧಿಯಲ್ಲಿ ಪೂರ್ವ ಯುರೋಪ್‌ನಿಂದ ಸ್ಟೆಪ್ಪ್ ಹುಲ್ಲುಗಾವಲು ಅಲೆಮಾರಿ ಜನಾಂಗದ ಅಗಮನ ಕೂಡಾ ಆಯಿತು. ಇದರಿಂದಾಗಿ ಇಂಡೋ-ಯುರೋಪಿಯನ್ ಭಾಷೆಗಳು ಕೂಡಾ ಭಾರತೀಯ ಉಪಖಂಡದಲ್ಲಿ ಆಡು ಭಾಷೆಗಳಾದವು.
ಈ ಅಧ್ಯಯನವು ಒಂದು ಮಹತ್ವದ ಪ್ರಶ್ನೆಯೊಂದನ್ನು ಮುಂದಿಟ್ಟಿದೆ. ಸಿಂಧೂ ಕಣಿವೆ ನಾಗರಿಕತೆಯ ಜನರು ವಾಯವ್ಯ ಭಾರತದಿಂದ ವಲಸೆ ಹೋದ ಬಳಿಕ ಎಲ್ಲಿಗೆ ಹೋಗಿ ನೆಲೆಸಿದ್ದಾರೆಂಬುದೇ ಆ ಪ್ರಶ್ನೆಯಾಗಿದೆ.
ದ್ರಾವಿಡ ಚಳವಳಿಯ ಜೊತೆ ನಂಟನ್ನು ಹೊಂದಿರುವ ತಮಿಳುನಾಡಿನ ಅನೇಕ ರಾಜಕಾರಣಿಗಳು, ಸಿಂಧೂ ಕಣಿವೆ ನಾಗರಿಕತೆಯ ಜನರು ದ್ರಾವಿಡ ಭಾಷೆಯನ್ನು ಆಡುತ್ತಿದ್ದರು ಹಾಗೂ ಅವರು ಆಧುನಿಕ ತಮಿಳರ ಪೂರ್ವಿಕರಿರಬಹುದೆಂದು ಬಹಳ ಸಮಯದಿಂದಲೂ ಪ್ರತಿಪಾದಿಸುತ್ತಲೇ ಬಂದಿದ್ದಾರೆ.
  ಆದರೆ ಪುರಾತತ್ವ ಹಾಗೂ ವಂಶವಾಹಿ ಸಂಶೋಧನೆಯ ಲಭ್ಯವಾದ ಪುರಾವೆಗಳು ಈ ನಂಟನ್ನು ಸಮರ್ಥಿಸಿಲ್ಲ. ಉದಾಹರಣೆಗೆೆ ತಮಿಳುನಾಡಿನಲ್ಲಿ ಪುರಾತನ ನಾಗರಿಕತೆಯು ಅಸ್ತಿತ್ವದಲ್ಲಿತ್ತೆಂಬ ಬಗ್ಗೆ ವ್ಯಾಪಕವಾದ ಸಾಹಿತ್ಯಿಕ ಪುರಾವೆಗಳು ಲಭ್ಯವಿರುವ ಹೊರತಾಗಿಯೂ 2013ನೇ ಇಸವಿಯಿಂದೀಚೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯು ತಮಿಳುನಾಡಿನಲ್ಲಿ ಕೇವಲ ಮೂರು ಪ್ರಮುಖ ಉತ್ಖನನಗಳನ್ನು ಮಾತ್ರವಷ್ಟೇ ನಡೆಸಿದೆ. 1947ರಲ್ಲಿ ಅರಿಕ್ಕಾಮೇಡು, 1965ರಲ್ಲಿ ಕಾವೇರಿಪೂಂಪಪಟ್ಟಿನಂ ಹಾಗೂ 2005ರಲ್ಲಿ ಅದಿಚಾನಲ್ಲಾರ್‌ನ ಪ್ರಾಚೀನ ಸಮಾಧಿ ಸ್ಥಳಗಳಲ್ಲಿ ಉತ್ಖನನಗಳನ್ನು ನಡೆಸಿತ್ತು.
ಆದರೆ ಈ ಮೂರು ಉತ್ಖನನಗಳಿಗೂ ತಮಿಳುನಾಡಿನಲ್ಲಿ ಪುರಾತನ ನಗರ ವಸಾಹತು ಅಸ್ತಿತ್ವದಲ್ಲಿತ್ತೆಂಬ ಬಗ್ಗೆ ಸಮಗ್ರವಾದ ಪುರಾವೆಯನ್ನು ಒದಗಿಸಲು ಸಾಧ್ಯವಾಗಿಲ್ಲ. ನಗರೀಕರಣವು ಸಿಂಧೂ ಕಣಿವೆಯ ನಾಗರಿಕತೆಯ ಮಹತ್ವದ ಲಕ್ಷಣವಾಗಿದೆ.
ನಗರ ವಸಾಹತು
  ಆದಾಗ್ಯೂ, 2015ರಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ಮಧುರೈನಿಂದ 12 ಕಿ.ಮೀ. ದೂರದಲ್ಲಿ ಹರಿಯುವ ವೈಗೆಯಿ ನದಿಯ ದಂಡೆಯಲ್ಲಿರುವ ಉತ್ಖನನವನ್ನು ಆರಂಭಿಸಿದಾಗ ಈ ಗ್ರಹಿಕೆ ಬದಲಾಯಿತು.
ಕೀಳಡಿ ಪ್ರದೇಶದ ಉತ್ಖನನವು ಪುರಾತನ ತಮಿಳು ಪ್ರದೇಶದ ಕುರಿತ ಸಂಶೋಧನೆಯಲ್ಲಿ ಕ್ರಾಂತಿಕಾರಿ ಫಲಿತಾಂಶಗಳನ್ನು ತಂದುಕೊಟ್ಟಿತು. ಸಿಂಧೂ ಕಣಿವೆ ಹಾಗೂ ಗಂಗಾ ನದಿ ದಂಡೆ ಪ್ರದೇಶದಲ್ಲಿ ಪತ್ತೆಯಾದ ಹಾಗೆ ಕೀಳಡಿ ಪ್ರದೇಶದಲ್ಲಿಯೂ ನಗರ ವಸಾಹತುಗಳು ಅಸ್ತಿತ್ವದಲ್ಲಿದ್ದುದನ್ನು ತೋರಿಸಿಕೊಟ್ಟಿತು. ಅಲ್ಲಿ ಪತ್ತೆಯಾದ ಪುರಾತನವಾದ ವಸ್ತುಗಳ ಕಾರ್ಬನ್ ಡೇಟಿಂಗ್ ಪರೀಕ್ಷೆ ನಡೆಸಿದಾಗ ಅವು ಕ್ರಿ.ಪೂ. 200ನೇ ಇಸವಿಯಷ್ಟು ಪುರಾತನವೆಂಬ ಅಂಶ ಬೆಳಕಿಗೆ ಬಂದಿತು. ಇವು ಸಂಗಮ ಯುಗಕ್ಕೆ ಸಂಬಂಧಿಸಿದ್ದಾಗಿದೆ. ಕ್ರಿ.ಪೂ. 4ನೇ ಶತಮಾನದಿಂದ ಕ್ರಿ.ಪೂ.2ನೇ ಶತಮಾನದವರೆಗೆ ಅಸ್ತಿತ್ವದಲ್ಲಿದ್ದ ಸಂಗಮ ಯುಗವನ್ನು ತಮಿಳು ಸಂಸ್ಕೃತಿಯ ಸುವರ್ಣ ಯುಗವೆಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ಹಲವಾರು ತಮಿಳು ಪುರಾಣಕಾವ್ಯಗಳನ್ನು ಸಂಯೋಜಿಸಲಾಗಿತ್ತು.
ಈ ಉತ್ಖನನವು ರಾಜಕೀಯ ಬಿರುಗಾಳಿಯನ್ನು ಸೃಷ್ಟಿಸಿತು. ಹೀಗಾಗಿ ಕೇಂದ್ರ ಸರಕಾರವು 2017ರಲ್ಲಿ ಈ ಉತ್ಖನನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು. ಕೀಳಡಿ ನಾಗರಿಕತೆಯು ವೈದಿಕ ಯುಗದ ನಾಗರಿಕತೆಗಿಂತ ಸ್ವತಂತ್ರವಾದುದೆಂದು ಉತ್ಖನನವು ತೋರಿಸಿಕೊಟ್ಟಿದೆ. ಆದರೆ 2018ರಲ್ಲಿ ತಮಿಳುನಾಡಿನ ಪುರಾತತ್ವ ಇಲಾಖೆಯು ಉತ್ಖನನದ ಹೊಣೆಗಾರಿಕೆಯನ್ನು ವಹಿಸಿಕೊಂಡಿತು ಹಾಗೂ ಎರಡು ಹಂತದ ಉತ್ಖನನವನ್ನು ಆರಂಭಿಸಿತ್ತು. ಉತ್ಖನನದ ಸಂಶೋಧನೆಯ ವಿವರಗಳು ಸದ್ಯದಲ್ಲೇ ಬಿಡುಗಡೆಯಾಗುವ ಸಾಧ್ಯತೆಯಿದೆ.
ಕೀಳಡಿ ನಾಗರಿಕತೆಯು ಪುರಾತನ ತಮಿಳು ಜನ ಯಾರಾಗಿರಬಹುದು. ಅವರಿಗೂ ದಕ್ಷಿಣಕ್ಕೆ ವಲಸೆ ಹೋದ ಸಿಂಧೂ ಕಣಿವೆಯ ನಾಗರಿಕತೆಯ ಜನರಿಗೂ ಸಂಬಂಧವಿದೆಯೇ ಎಂಬ ಬಗ್ಗೆ ವಂಶವಾಹಿ ಅಧ್ಯಯನ ವರದಿಯು ಸುಳಿವನ್ನು ನೀಡುವ ಸಾಧ್ಯತೆಯಿದೆ.


ನೂತನ ಸಂಶೋಧನೆ
   ದ್ರಾವಿಡ ಹಾಗೂ ಸಿಂಧೂ ಕಣಿವೆ ನಾಗರಿಕತೆಗೂ ನಿಕಟವಾದ ನಂಟಿರುವ ಕುರಿತಾಗಿ ಭಾಷಾತಜ್ಞರು ಬಲವಾದ ಸಾಕ್ಷಾಧಾರಗಳನ್ನು ಒದಗಿಸಿದ್ದಾರೆ. ಸಿಂಧೂ ಕಣಿವೆಯ ಲಿಪಿಯು ದ್ರಾವಿಡ ಸಂಸ್ಕೃತಿಯದ್ದೆಂದು ರಶ್ಯ ಹಾಗೂ ಫಿನ್‌ಲ್ಯಾಂಡ್ ದೇಶಗಳ ಸಂಶೋಧಕರು 1964ರ ಸಮಯದಲ್ಲೇ ನಿರ್ಣಯಿಸಿದ್ದರು.
ಆನಂತರ ಫಿನ್‌ಲ್ಯಾಂಡ್‌ನ ಹೆಲ್ಸಿಂಕಿ ವಿವಿಯ ಭಾರತೀಯ ಸಂಸ್ಕೃತಿ ತಜ್ಞ ಅಸ್ಕೊ ಪೊಪೊಲಾ ಅವರು ಈ ಸಂಶೋಧನೆಯನ್ನು ವಿಸ್ತೃತಗೊಳಿಸಿದರು ಹಾಗೂ ಸಿಂಧೂ ನಾಗರಿಕತೆ ಲಿಪಿಯ ಬಗ್ಗೆ ಅವರು ಅತ್ಯಂತ ಅಧಿಕಾರವಾಣಿ ಮಾತನಾಡುವವರಾಗಿದ್ದಾರೆ. ಸಿಂಧೂ ನಾಗರಿಕತೆಯು ದ್ರಾವಿಡ ಮೂಲದ್ದೆಂದು ಅವರು ಪ್ರತಿಪಾದಿಸುತ್ತಾರೆ.
 ಭಾರತೀಯ ಉತ್ಖನನ ಇಲಾಖೆಯು 2013ರಲ್ಲಿ ವೈಗೆಯಿ ನದಿಯ ದಂಡೆಯಲ್ಲಿ ಉತ್ಖನನ ತಾಣಗಳಿರುವ ಸಾಧ್ಯತೆಯ ಬಗ್ಗೆ ಸಮೀಕ್ಷೆ ನಡೆಸಿದಾಗ, ಕೀಳಡಿ ನಗರ ವಸಾಹತಿನಿಂದ ಕೇವಲ 1 ಕಿ.ಮೀ. ದೂರದಲ್ಲಿ ಮೃತರನ್ನು ಹೂಳುವ ಸ್ಥಳವನ್ನು ಪತ್ತೆ ಹಚ್ಚತ್ತು.
ಡಿಎನ್‌ಎ ವಿಶ್ಲೇಷಣೆ
ಆದಾಗ್ಯೂ ತಮಿಳುನಾಡಿನ ಉತ್ಖನನ ಇಲಾಖೆಯು 2020ರ ಆರಂಭದ ವೇಳೆಗೆ ಮುಂದಿನ ಹಂತದ ಕಾರ್ಯಾಚರಣೆಯನ್ನು ಆರಂಭಿಸುವ ಸಾಧ್ಯತೆಯಿದೆ. ಉತ್ಖನನ ಕಾರ್ಯದಲ್ಲಿ ತಮಿಳುನಾಡು ಸರಕಾರವು ಮಧುರೈನ ಕಾಮರಾಜ ವಿಶ್ವವಿದ್ಯಾನಿಲಯದ ಜೈವಿಕ ವಿಜ್ಞಾನ ವಿಭಾಗವನ್ನು ಕೂಡಾ ಒಳಪಡಿಸಲಿದೆ. ಅಸ್ಥಿಪಂಜರದ ಪುರಾತನ ಅವಶೇಷಗಳ ವಂಶವಾಹಿ ವಿವರಗಳನ್ನು ಅನ್ವೇಷಿಸುವ ಈ ಯೋಜನೆಯ ಭಾಗವಾಗಿದೆ.
ಈ ಪ್ರದೇಶದಲ್ಲಿ ಆಳವಾದ ಉತ್ಖನನವನ್ನು ನಡೆಸುವ ಮೂಲಕ ಪುರಾತನ ತಮಿಳರ ಡಿಎನ್‌ಎ ವಿವರಗಳ ಬಗ್ಗೆ ಆಮೂಲಾಗ್ರ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಕೀಳಡಿ ಉತ್ಖನನ ಯೋಜನೆಯಲ್ಲಿ ಒಳಗೊಂಡಿರುವ ಭಾರತೀಯ ಸರ್ವೇಕ್ಷಣಾ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೃಪೆ: scroll.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)