varthabharthi

ಸಂಪಾದಕೀಯ

ಕಾಶ್ಮೀರ: ಧೃತರಾಷ್ಟ್ರ ಆಲಿಂಗನವಾಗದಿರಲಿ!

ವಾರ್ತಾ ಭಾರತಿ : 21 Sep, 2019

‘ಪ್ರತಿಯೋರ್ವರು ಕಾಶ್ಮೀರಿಗಳನ್ನು ಆಲಂಗಿಸಬೇಕು. ಅಲ್ಲಿ ಹೊಸ ಸ್ವರ್ಗವನ್ನು ಸೃಷ್ಟಿಸಿ’ ಎಂದು ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಕರೆ ನೀಡಿದ್ದಾರೆ. ಆದರೆ ಈ ಕರೆ ಇನ್ನೂ ಕಾಶ್ಮೀರಿಗಳನ್ನು ತಲುಪಿರುವುದು ಅನುಮಾನ. ಯಾಕೆಂದರೆ, ಸದ್ಯಕ್ಕೆ ಅಲ್ಲಿ ಭಾಗಶಃ ಎಲ್ಲ ಮಾಧ್ಯಮಗಳಿಗೂ ನಿಯಂತ್ರಣ ಹೇರಲಾಗಿದೆ. ಕಾಶ್ಮೀರವನ್ನು ಸೇನೆಯ ಸರ್ಪಗಾವಲಿನಲ್ಲಿರಿಸಲಾಗಿದೆ. ಇಷ್ಟಕ್ಕೂ ಕಾಶ್ಮೀರದ ಹೊರಗಿರುವವರು ಕಾಶ್ಮೀರಿಗಳನ್ನು ಆಲಂಗಿಸಲು ಕಾಶ್ಮೀರ ತಲುಪುವ ಬಗೆಯಾದರೂ ಹೇಗೆ? ಕಾಶ್ಮೀರವನ್ನು ಕೋವಿಯ ತುದಿ ಆಳುತ್ತಿದೆ. ಕಾಶ್ಮೀರದ ಹೊರಗಿರುವ ಕಾಶ್ಮೀರಿಗಳೇ ತಮ್ಮ ತಾಯ್ನೆಲವನ್ನು ಪ್ರವೇಶಿಸುವ ಸ್ಥಿತಿಯಿಲ್ಲ. ಇನ್ನು ಉಳಿದವರು ಹೋಗಿ ಅವರನ್ನು ತಬ್ಬಿಕೊಳ್ಳುವ ಪ್ರಶ್ನೆ ಎಲ್ಲಿಂದ ಬಂತು? 370ರ ವಿಧಿ ರದ್ದಾಗುವ ಮೂಲಕ ಕಾಶ್ಮೀರ ಭಾರತದಲ್ಲಿ ಒಂದಾಗಿದೆ ಎನ್ನುವ ನರೇಂದ್ರ ಮೋದಿ, ಕಾಶ್ಮೀರದ ಜನರು ಸುದೀರ್ಘ ಕಾಲದ ಹಿಂಸಾಚಾರದಿಂದ ಹೊರಬರುವ ಮನಸ್ಸು ಮಾಡಿದ್ದಾರೆ ಎಂಬ ಶುಭವಾರ್ತೆಯನ್ನು ಕಾಶ್ಮೀರೇತರ ಭಾರತೀಯರಿಗೆ ತಿಳಿಸಿದ್ದಾರೆ. ಹಾಗಾದರೆ, ವಿಧಿ ರದ್ದು ಮಾಡುವ ಮೊದಲು ಇರುವ ಸೇನೆಗಿಂತ ಹಲವು ಪಟ್ಟುಹೆಚ್ಚು ಸೈನಿಕರನ್ನು ಯಾಕೆ ಆ ಭಾಗದಲ್ಲಿ ನಿಯೋಜಿಸಲಾಗಿದೆ?

ಕಾಶ್ಮೀರದ ಜನರನ್ನು ಭಾರತ ಸ್ವೀಕರಿಸುವುದು ಮತ್ತು ಕಾಶ್ಮೀರಿಗಳು ಭಾರತೀಯರನ್ನು ಸ್ವೀಕರಿಸುವುದು ಜೊತೆ ಜೊತೆಯಾಗಿ ನಡೆಯಬೇಕಾದ ಕೆಲಸ ಮತ್ತು ಇದು ನಡೆಯಲೇ ಬೇಕಾದ ಕೆಲಸ ಕೂಡ. ಈ ಆಲಿಂಗನ ನಡೆಯದೆ, ಕಾಶ್ಮೀರದಲ್ಲಿ ಹೊಸ ಸ್ವರ್ಗವನ್ನು ಸೃಷ್ಟಿಸುವುದು ಅಸಾಧ್ಯ. ಈ ನಿಟ್ಟಿನಲ್ಲಿ ಪ್ರಧಾನಿಯ ಮಾತುಗಳು ಅಭಿನಂದನಾರ್ಹ. ಕಾಶ್ಮೀರ ಭಾರತದಲ್ಲಿ ಸಂಪೂರ್ಣ ಒಂದಾದಲ್ಲಿ ಖಂಡಿತ ಅದರ ಅಭಿವೃದ್ಧಿಯ ಹೆಬ್ಬಾಗಿಲು ತೆರೆಯಲಿದೆ. ಇದನ್ನು ನಾವು ಮೊತ್ತ ಮೊದಲು ಮನವರಿಕೆ ಮಾಡಿಕೊಡಬೇಕಾದುದು ಕಾಶ್ಮೀರಿಗಳಿಗೆ. ನಾಸಿಕ್‌ನಲ್ಲಿ ನಿಂತು, ಬಿಜೆಪಿ ಕಾರ್ಯಕರ್ತರಲ್ಲಿ ಈ ಮಾತನ್ನು ಹೇಳಿದರೆ ಕಾಶ್ಮೀರ ಸ್ವರ್ಗವಾಗುವುದಿಲ್ಲ. 370ನೇ ವಿಧಿ ರದ್ದಾಗುವ ಮೊದಲು ಕಾಶ್ಮೀರದ ಬಾಗಿಲು ಭಾರತಕ್ಕೆ ಮುಕ್ತವಾಗಿತ್ತು. ಆದರೆ ಇಂದು ಆ ಬಾಗಿಲನ್ನು ಮುಚ್ಚಿ, ನಾವು ಅವರೆಡೆಗೆ ಕೈ ಚಾಚುತ್ತಿದ್ದೇವೆ. ಇಷ್ಟಕ್ಕೂ ನಾವು ಕೈ ಚಾಚಿದಾಕ್ಷಣ ಅವರು ಬಂದು ಆಲಂಗಿಸಿಕೊಳ್ಳುವಂತಹ ಪರಿಸ್ಥಿತಿ ಅಲ್ಲಿಲ್ಲ ಎನ್ನುವುದು ಸ್ವತಃ ನರೇಂದ್ರ ಮೋದಿಗೂ ಗೊತ್ತಿದೆ. ಯಾಕೆಂದರೆ ಅವರು ಹಲವು ಜೈಲುಗಳು, ಹಲವು ಪೊಲೀಸ್ ಮತ್ತು ಸೇನೆಗಳ ಕೋಟೆಗಳನ್ನು ದಾಟಿ ನಮ್ಮೆಡೆಗೆ ಬರಬೇಕಾಗಿದೆ. ಯಾವುದೋ ಕಾಯ್ದೆಯನ್ನು ಕಿತ್ತು ಹಾಕಿದಾಕ್ಷಣ ಕಾಶ್ಮೀರಿಗಳಿಗೆ ಭಾರತ ತನ್ನದು ಅನ್ನಿಸಬೇಕಾಗಿಲ್ಲ. ಆಗಸ್ಟ್ ತಿಂಗಳಿನಿಂದ ಕಾಶ್ಮೀರದ ಜನರು ಮತ್ತು ಭಾರತದ ನಡುವೆ ಅಂತರ ಇನ್ನಷ್ಟು ಹೆಚ್ಚಿದೆಯೇ ಹೊರತು, ಕಮ್ಮಿಯಾಗಿಲ್ಲ. ಕಾಶ್ಮೀರದಲ್ಲಿ ತುರ್ತುಪರಿಸ್ಥಿತಿಯಂತಹ ಸ್ಥಿತಿ ನಿರ್ಮಾಣವಾಗಿದೆ.

ಅಲ್ಲಿನ ನಾಗರಿಕರನ್ನು ಯಾವುದೇ ಸೂಚನೆಗಳಿಲ್ಲದೆ ಬಂಧಿಸಲಾಗಿದೆ. ಅಲ್ಲಿ ನಾಯಕರೆಲ್ಲರೂ ಗೃಹ ಬಂಧನದಲ್ಲಿದ್ದಾರೆ. ನಾಗರಿಕರು ಪೆಲೆಟ್ ದಾಳಿಗೊಳಗಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂಗಡಿ ಮುಂಗ್ಗಟ್ಟುಗಳು, ಶಾಲೆಗಳು ಸಂಪೂರ್ಣ ಮುಚ್ಚಲ್ಪಟ್ಟಿವೆ. ‘ಇವೆಲ್ಲವೂ ಆಲಂಗಿಸುವ’ ಪ್ರಕ್ರಿಯೆಯ ಭಾಗ ಖಂಡಿತ ಅಲ್ಲ. ಇವುಗಳ ಮೂಲಕ ಕಾಶ್ಮೀರದಲ್ಲಿ ‘ನರಕ’ವನ್ನಷ್ಟೇ ಸೃಷ್ಟಿಸಲು ಸಾಧ್ಯ. ಮೊತ್ತ ಮೊದಲು ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರವನ್ನು ಆಲಂಗಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ ಅವರು ಕಾಶ್ಮೀರಕ್ಕೆ ಸರ್ವ ಪಕ್ಷದ ನಾಯಕರ ಜೊತೆಗೆ ಭೇಟಿ ನೀಡಬೇಕು ಮತ್ತು ಅಲ್ಲಿನ ಜನರನ್ನು ಮುಖಾಮುಖಿಯಾಗಬೇಕು. ಸೇನೆಯ ಮರೆಯಲ್ಲಿ ನಿಂತು ಆಡುವ ಮಾತುಗಳು, ಕಾಶ್ಮೀರದ ಜನರನ್ನು ತಲುಪುವ ಯಾವ ಸಾಧ್ಯತೆಗಳೂ ಇಲ್ಲ. ಕನಿಷ್ಠ ಅಲ್ಲಿನ ಜನಪ್ರತಿನಿಧಿಗಳು, ಜನನಾಯಕರ ಮನವೊಲಿಸಿದ ಬಳಿಕ ವಿಶೇಷಸ್ಥಾನಮಾನಗಳನ್ನು ಕಿತ್ತುಹಾಕಿದ್ದರೆ ಮೋದಿ ಇಂದು ಕಾಶ್ಮೀರದ ಕುರಿತಂತೆ ತಿಣುಕಾಡುವ ಅಗತ್ಯ ಬೀಳುತ್ತಿರಲಿಲ್ಲ. ಆದರೆ ಕಾಶ್ಮೀರದ ಜನರ, ಜನನಾಯಕರ ಯಾವುದೇ ನೈತಿಕ ಬೆಂಬಲವನ್ನು ಪಡೆಯದೇ ಸೇನೆಯ ಬಲದಿಂದ ಕಾಶ್ಮೀರವನ್ನು ನಮ್ಮದಾಗಿಸಲು ಹೊರಟಿರುವುದೇ ಎಲ್ಲ ಸಮಸ್ಯೆಗಳಿಗೆ ಕಾರಣ. ಈ ಕಾರಣದಿಂದಲೇ, ಪ್ರಧಾನಿಯವರು ಇಂದು ಕಾಶ್ಮೀರಕ್ಕೆ ತೆರಳಿ ಅಲ್ಲಿನ ಜನಸಾಮಾನ್ಯರ ಜೊತೆಗೆ ಮುಖಾಮುಖಿಯಾಗುವ ಸಾಧ್ಯತೆಗಳ ಬಾಗಿಲು ಮುಚ್ಚಲ್ಪಟ್ಟಿವೆ. ಬದಲಿಗೆ ಅವರು ನಾಸಿಕ್‌ನಲ್ಲಿ ನಿಂತು ತನ್ನ ಬಿಜೆಪಿ ಕಾರ್ಯಕರ್ತರಿಗೆ ಕಾಶ್ಮೀರದಲ್ಲಿ ಸ್ವರ್ಗ ಸೃಷ್ಟಿಸುವ ಭರವಸೆಯನ್ನು ನೀಡಬೇಕಾಗಿದೆ. ಇಂದು ಕಾಶ್ಮೀರದಲ್ಲಿ ಸ್ವರ್ಗ ನೆಲೆಸಬೇಕಾದುದು ಕಾಶ್ಮೀರದ ಜನರ ಅಗತ್ಯವೇ ಹೊರತು ನಾಸಿಕ್‌ನಲ್ಲಿರುವ ಜನರ ಅಗತ್ಯವಲ್ಲ. ಕಾಶ್ಮೀರವನ್ನು ಆಲಂಗಿಸಿಕೊಳ್ಳಲು ನಾಸಿಕ್‌ನ ಜನರು ಯಾವತ್ತೂ ಅಡ್ಡಿಯಾಗಿಲ್ಲ ಇಲ್ಲ.

ಕಾಶ್ಮೀರದ ಹೊರಗಡೆ ಕಾಶ್ಮೀರಿಗಳಿಗಾಗಿ ಏನಾದರೂ ಒಳಿತು ಮಾಡುವುದಕ್ಕಿದ್ದರೆ, ಮುಂಬಯಿ ಸೇರಿದಂತೆ ದೇಶಾದ್ಯಂತ ನೌಕರಿ, ಶಿಕ್ಷಣ ಇತ್ಯಾದಿ ಕಾರಣಗಳಿಗಾಗಿ ಬಂದಿರುವ ಕಾಶ್ಮೀರದ ಯುವಕರಿಗೆ ರಕ್ಷಣೆಯನ್ನು ನೀಡುವುದರ ಕಡೆಗೆ ಪ್ರಧಾನಿ ಮನಮಾಡಬೇಕಾಗಿದೆ. ವಿಶೇಷ ಸ್ಥಾನಮಾನ ರದ್ದುಗೊಳಿಸಿದ ದಿನಗಳಿಂದ ದೇಶದ ಇತರ ಕಡೆಗಳಲ್ಲಿರುವ ಕಾಶ್ಮೀರಿಗಳ ಮೇಲೆ ಹಲ್ಲೆಗಳು ನಡೆಯುತ್ತಿವೆ. ಪೊಲೀಸರು ಅಕ್ರಮವಾಗಿ ಕಾಶ್ಮೀರಿಗಳನ್ನು ಬಂಧಿಸುವಂತಹ ಕೃತ್ಯಕ್ಕೆ ಇಳಿದಿದ್ದಾರೆ. ಆಗಸ್ಟ್ 5ರ ಬಳಿಕ ಕಾಶ್ಮೀರ ಭಾರತಕ್ಕೆ ಹತ್ತಿರವಾಗಿರುವುದು ನಿಜವೇ ಆಗಿದ್ದರೆ ಭಾರತದೆಲ್ಲೆಡೆ ಕಾಶ್ಮೀರಿಗಳ ಮೇಲೆ ಹಲ್ಲೆಗಳು, ದೌರ್ಜನ್ಯಗಳು ಯಾಕೆ ಹೆಚ್ಚಿವೆ? ದೇಶದೆಲ್ಲೆಡೆಯಿರುವ ಕಾಶ್ಮೀರಿಗಳನ್ನು ಮೊದಲು ನಾವು ಆಲಂಗಿಸಿ ಅವರಲ್ಲಿ ಧೈರ್ಯ, ಆತ್ಮವಿಶ್ವಾಸ ತುಂಬಿಸಿ ಅವರನ್ನು ಕಾಶ್ಮೀರಕ್ಕೆ ಕಳುಹಿಸಿಕೊಡಬೇಕಾಗಿದೆ.

ಈ ದೇಶದ ನಿಜವಾದ ಪ್ರತಿನಿಧಿಗಳು ಅವರು. ಭಾರತವೆಂದರೆ ಏನು ಎನ್ನುವುದನ್ನು ಕಾಶ್ಮೀರಕ್ಕೆ ತೆರಳಿ ಅವರಿಗೆ ವಿವರಿಸಿ ಅವರಲ್ಲಿ ವಿಶ್ವಾಸ ತುಂಬಿಸಬೇಕಾದ ಕೆಲಸವನ್ನು ಈ ಕಾಶ್ಮೀರಿಗಳಿಗೆ ವಹಿಸಿಕೊಡಬೇಕು. ಆದುದರಿಂದ ದೇಶದ ಇತರೆಡೆಗಳಲ್ಲಿ ಹರಡಿರುವ ಕಾಶ್ಮೀರಿಗಳನ್ನು ವಿಶ್ವಾಸದಿಂದ, ಸ್ನೇಹದಿಂದ ಕಾಣುವ ಕೆಲಸ ಮೊದಲು ನಡೆಯಬೇಕಾಗಿದೆ. ಮಹಾಭಾರತದಲ್ಲಿ ‘ಧೃತರಾಷ್ಟ್ರ ಆಲಿಂಗನ’ ಎನ್ನುವ ಪದ ಬರುತ್ತದೆ. ಮಹಾಭಾರತ ಯುದ್ಧ ಮುಗಿದ ಬಳಿಕ ಪಾಂಡವರು ದುರ್ಯೋಧನನ ತಂದೆ ಧೃತರಾಷ್ಟ್ರನನ್ನು ಭೇಟಿ ಮಾಡಿ ಕ್ಷಮೆಯಾಚಿಸಲು ಹೋಗುತ್ತಾರೆ. ಆಗ ಧೃತರಾಷ್ಟ್ರ ‘ಮಗನೇ’ ಎಂದು ಭೀಮನನ್ನು ಆಲಂಗಿಸಲು ಹೊರಡುತ್ತಾನೆ. ಅಲ್ಲೇ ಇದ್ದ ಕೃಷ್ಣ ಭೀಮನ ಬದಲಿಗೆ ಕಲ್ಲಿನ ಪ್ರತಿಮೆಯೊಂದನ್ನು ಧೃತರಾಷ್ಟ್ರನ ಮುಂದಿಡುತ್ತಾನೆೆ. ಧೃತರಾಷ್ಟ್ರನ ಆಲಿಂಗನಕ್ಕೆ ಕಲ್ಲು ಪುಡಿ ಪುಡಿಯಾಗುತ್ತದೆಯಂತೆ. ಆಲಿಂಗನದ ಹೆಸರಿನಲ್ಲಿ ಧೃತರಾಷ್ಟ್ರ ಭೀಮನನ್ನು ಕೊಲ್ಲುವುದಕ್ಕೆ ಮುಂದಾಗಿದ್ದ. ನರೇಂದ್ರ ಮೋದಿಯ ಆಲಿಂಗನ ಕಾಶ್ಮೀರದ ಜನರ ಪಾಲಿಗೆ ‘ಧೃತರಾಷ್ಟ್ರ’ನ ಆಲಿಂಗನವಾಗದಿರಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)