varthabharthiವಿಶೇಷ-ವರದಿಗಳು

ನಿಮ್ಹಾನ್ಸ್ ನಲ್ಲಿ ಶ್ರೇಷ್ಟ ಸ್ನಾತಕೋತ್ತರ ವಿದ್ಯಾರ್ಥಿ ಪ್ರಶಸ್ತಿ ಪುರಸ್ಕೃತ ಡಾ.ಸಫ್ವಾನ್ ಅಹ್ಮದ್

ಹಣ ಮಾಡಲು ಅಲ್ಲ, ಸೇವೆಯ ಸಂಕಲ್ಪದಿಂದ ವೈದ್ಯಕೀಯ ವೃತ್ತಿಯನ್ನು ಆಯ್ದುಕೊಂಡೆ

ವಾರ್ತಾ ಭಾರತಿ : 21 Sep, 2019
ಸಂದರ್ಶನ: ಇಸ್ಮಾಯೀಲ್ ಝೌರೇಝ್

ಡಾ.ಸಫ್ವಾನ್ ಅಹ್ಮದ್

ಮಂಗಳೂರು ತಾಲೂಕಿನ ಕೈಕಂಬದ ಡಾ.ಸಫ್ವಾನ್ ಅಹ್ಮದ್ ಅವರು ಇತ್ತೀಚಿಗೆ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ನಡೆದ ಘಟಿಕೋತ್ಸವದಲ್ಲಿ ಬೆಸ್ಟ್ ಪೋಸ್ಟ್ ಗ್ರಾಜ್ಯುಯೇಟ್ ರೆಸಿಡೆಂಟ್ ಇನ್ ನ್ಯುರಾಲಜಿ-2019 ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಗುರುಪುರ ಕೈಕಂಬದ ದಿವಂಗತ ಅಹ್ಮದ್ ಹುಸೇನ್ ಮತ್ತು ತಸ್ಲೀಮ್ ದಂಪತಿಯ ಪುತ್ರ ಡಾ. ಸಫ್ವಾನ್  ಮಂಗಳೂರಿನ ಬಜ್ಪೆಯ ಪಾಪ್ಯುಲರ್ ಶಾಲೆ ಹಾಗು ಸಂತ ಜೋಸೆಫರ ಶಾಲೆಗಳಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದು, ಅಲೋಶಿಯಸ್ ಕಾಲೇಜಿನಲ್ಲಿ ಪಿಯು ಕಲಿತರು. ಬಳಿಕ ಮಂಗಳೂರಿನ ಕೆಎಂಸಿಯಲ್ಲಿ ಮೆರಿಟ್ ಸೀಟು ಗಳಿಸಿ ಎಂಬಿಬಿಎಸ್ ಪದವಿ ಪಡೆದರು. ನಂತರ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಜನರಲ್ ಮೆಡಿಸಿನ್‌ನಲ್ಲಿ ಎಂ.ಡಿ.ಯನ್ನು ಮಾಡಿದ್ದರು. ಆಗ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಗೆ ಆರನೇ ರ್ಯಾಂಕ್ ಹಾಗು ಬೆಂಗಳೂರು ಮೈಸೂರು ವಲಯಕ್ಕೆ ಪ್ರಥಮ ಸ್ಥಾನಿಯಾಗಿ ಚಿನ್ನದ ಪದಕ ಪಡೆದಿದ್ದರು. ಈಗ ಡಾ.ಸಫ್ವಾನ್ ನಿಮ್ಹಾನ್ಸ್‌ನಿಂದ ನ್ಯುರಾಲಜಿಯಲ್ಲಿ ಡಿಎಂ ಪದವಿಯನ್ನು ಅತ್ಯುನ್ನತ ಶ್ರೇಣಿಯಲ್ಲಿ ಪೂರ್ಣಗೊಳಿಸಿದ ಸಾಧನೆ ಮಾಡಿದ್ದಾರೆ. ಅವರ ಪತ್ನಿ ಡಾ.ಫಾತಿಮಾ ರಯೀಸಾ ಅವರು ಮಂಗಳೂರಿನ ಕೆಎಂಸಿಯಲ್ಲಿ ರೇಡಿಯಾಲಜಿಯಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸುತ್ತಿದ್ದಾರೆ.

ವಾರ್ತಾಭಾರತಿಗೆ ನೀಡಿರುವ ಸಂದರ್ಶನದಲ್ಲಿ ಡಾ.ಸಫ್ವಾನ್ ತನ್ನ ಶೈಕ್ಷಣಿಕ ಸಾಧನೆ ಹಾಗು ಬದುಕಿನ ಗುರಿ ಕುರಿತು ಮಾತನಾಡಿದ್ದಾರೆ: 

►ನೀವು ವೈದ್ಯಕೀಯ ವೃತ್ತಿಯನ್ನು ಆಯ್ದುಕೊಳ್ಳಲು ಪ್ರೇರೇಪಣೆ ಏನು?

- ಬಾಲ್ಯದಿಂದಲೇ ನಾನು ವೈದ್ಯಕೀಯ ವೃತ್ತಿಯಿಂದ ಆಕರ್ಷಿತನಾಗಿದ್ದೆ. ವೈದ್ಯರ ಬಳಿಗೆ ಹೋದಾಗೆಲ್ಲ ನಾನೂ ವೈದ್ಯನಾಗಬೇಕು ಎಂಬ ಕನಸನ್ನು ಅವರೊಂದಿಗೆ ಹೇಳಿಕೊಳ್ಳುತ್ತಿದ್ದೆ. ಅಲ್ಲದೆ ತಮ್ಮ ಮಕ್ಕಳ ಪೈಕಿ ಕನಿಷ್ಠ ಒಬ್ಬರಾದರೂ ಡಾಕ್ಟರ್ ಆಗಬೇಕು ಎನ್ನುವುದು ನನ್ನ ಹೆತ್ತವರ ಕನಸಾಗಿತ್ತು. ನಾನು ಮತ್ತು ನನ್ನ ತಂದೆ ಪ್ರತಿ ಬಾರಿಯೂ ಮಂಗಳೂರಿನ ಕಸ್ತೂರಬಾ ಮೆಡಿಕಲ್ ಕಾಲೇಜಿನ ಎದುರಿನಿಂದ ಹೋಗುವಾಗ ನೀನು  ಇಲ್ಲಿ ಕಲಿಯಬೇಕು ಎಂದು ತಂದೆ ಬಯಕೆ  ವ್ಯಕ್ತಪಡಿಸುತ್ತಿದ್ದರು. ಇವೆಲ್ಲ ಒಟ್ಟಿಗೆ ನನ್ನನ್ನು ವೈದ್ಯಕೀಯ ಕ್ಷೇತ್ರಕ್ಕೆ ತಂದಿದೆ.

►ನಿಮ್ಮ ಈ ಯಶಸ್ಸಿನ ಪಯಣದಲ್ಲಿ ನಿಮ್ಮ ಕುಟುಂಬದ ಬೆಂಬಲ ಹೇಗಿತ್ತು?

- ನನ್ನನ್ನು ಎಲ್ಲ ರೀತಿಯಿಂದಲೂ ಬೆಂಬಲಿಸುತ್ತಿದ್ದ ತಂದೆ ನಾನು ಪ್ರಥಮ ಪಿಯುಸಿ ಓದುತ್ತಿರುವಾಗ ನಿಧನರಾದರು. ಆದರೆ ಅವರ ನಿಧನದ ಬಳಿಕವೂ ನಾನು ನನ್ನ ಓದಿಗಾಗಿ ಯಾರದೇ ನೆರವು ಯಾಚಿಸುವ ಅಗತ್ಯ ಬೀಳಲಿಲ್ಲ . ಅವರು ನನ್ನ ಭವಿಷ್ಯದ ಓದಿಗಾಗಿ ಎಲ್ಲ ವ್ಯವಸ್ಥೆಗಳನ್ನೂ ಮಾಡಿಟ್ಟಿದ್ದರು. ನನ್ನ ಕಾಲೇಜು ಶುಲ್ಕಗಳು ಮತ್ತು ಇತರ ಅಗತ್ಯಗಳಿಗೆ ಎಂದೂ ತೊಡಕಾಗದಂತೆ ಅವರು ಮೊದಲೇ ಎಚ್ಚರಿಕೆ ವಹಿಸಿದ್ದರು. ನನ್ನ ತಾಯಿ,ಸೋದರ ಮತ್ತು ನನ್ನ ಕುಟುಂಬದ ಎಲ್ಲ ಸದಸ್ಯರೂ  ನನಗೆ ಎಲ್ಲ ರೀತಿಯಿಂದಲೂ ನೆರವಾಗಿದ್ದಾರೆ.

►ನೀವು ಶೈಕ್ಷಣಿಕ ಸವಾಲುಗಳನ್ನು ಹೇಗೆ ಎದುರಿಸಿದಿರಿ?

- ದೇವರ ದಯೆಯಿಂದ ನಾನೂ ಒಳ್ಳೆಯ ಜ್ಞಾಪಕ ಶಕ್ತಿಯನ್ನು ಹೊಂದಿದ್ದೇನೆ. ಅದು ನನ್ನ ವ್ಯಾಸಂಗದಲ್ಲಿ ನೆರವಾಯಿತು. ಸಮಾಜಶಾಸ್ತ್ರದಂತಹ ಕೆಲವು ವಿಷಯಗಳಲ್ಲಿ ನಾನು ಹಿಂದಿದ್ದೆ. ಅವುಗಳಲ್ಲಿ ನನಗೆ ಅಷ್ಟೊಂದು ಆಸಕ್ತಿಯಿರಲಿಲ್ಲ. ಅಂತಹ ವಿಷಯಗಳನ್ನು ಸಾಮಾನ್ಯವಾಗಿ ಓದಿಕೊಂಡಿರುತ್ತಿದೆ ಮತ್ತು ಅವುಗಳಲ್ಲಿ ತೇರ್ಗಡೆಗೊಳ್ಳುವಲ್ಲಿ ಸಫಲನಾಗುತ್ತಿದ್ದೆ. ಮೊದಲಿಂದಲೂ ನನಗೆ ಓದಿನಲ್ಲಿ ಹೆಚ್ಚು ಆಸಕ್ತಿ. ಹಾಗಾಗಿ ಸದಾ ಶೈಕ್ಷಣಿಕವಾಗಿ ಮುಂದಿರಲು ಸಾಧ್ಯವಾಯಿತು. 

►ನಿಮ್ಮ ಹವ್ಯಾಸಗಳೇನು? ಅವುಗಳಿಗೆ ನಿಮಗೆ ಸಮಯ ಸಿಗುತ್ತಿತ್ತೇ ? 

- ಪ್ರಾಮಾಣಿಕವಾಗಿ ಹೇಳಬೇಕೆಂದರೆ ಸಮಯ ತಿನ್ನುವ ಯಾವುದೇ ಹವ್ಯಾಸಗಳು ನನಗಿಲ್ಲ. ಎಂದಾದರೂ ನನಗೆ ಸ್ವಲ್ಪ ಸಮಯ ಸಿಕ್ಕಿದರೆ ಏನಾದರೂ ಕ್ರೀಡೆಯಲ್ಲಿ  ತೊಡಗಿಕೊಳ್ಳುತ್ತಿದ್ದೆ. ನಿಯಮಿತವಾಗಿ ಅಲ್ಲ. ಹೆಚ್ಚಿನ ಸಮಯವನ್ನು ಅಧ್ಯಯನಕ್ಕೆ ಮೀಸಲಿಡುತ್ತಿದ್ದೆ. 

►ನಿಮ್ಮ ಯಶಸ್ಸಿಗೆ ಕಾರಣಗಳೇನು ?

 -ನನ್ನ ಈ ಪಯಣದುದ್ದಕ್ಕೂ ನನಗೆ ಬೆಂಬಲವಾಗಿ ನಿಂತಿದ್ದ ನನ್ನ ತಾಯಿ,ತಂದೆ,ಸೋದರ ಮತ್ತು ನನ್ನ ಪತ್ನಿ ಹೀಗೆ ನನ್ನ ಕುಟುಂಬದ ಎಲ್ಲ ಸದಸ್ಯರಿಂದಾಗಿ ಯಶಸ್ಸು ಸಾಧ್ಯವಾಗಿದೆ. ಕಳೆದ ವರ್ಷವಷ್ಟೇ ನಾನು ವಿವಾಹವಾಗಿದ್ದು,ನನ್ನ ಪತ್ನಿ ನನಗೆ ಪೂರ್ಣ ಬೆಂಬಲ ನೀಡುತ್ತಿದ್ದಾರೆ. 

►ವೈದ್ಯಕೀಯ ಕ್ಷೇತ್ರ ಪ್ರವೇಶಿಸ ಬಯಸಿರುವ ಯುವಜನರಿಗೆ ನಿಮ್ಮ ಸಂದೇಶ/ಸಲಹೆ ಏನು?

 - ವೈದ್ಯಕೀಯ ಕ್ಷೇತ್ರವನ್ನು ಪ್ರವೇಶಿಸಲು ಆಸಕ್ತರಾಗಿರುವವರು ಮೊದಲು ಅದರ ಗಾಂಭೀರ್ಯವನ್ನು ತಿಳಿದುಕೊಳ್ಳಬೇಕು. ಅವರು ತಮ್ಮನ್ನು ಅದಕ್ಕೆ ಬದ್ಧರಾಗಿಸಿಕೊಳ್ಳಬೇಕು ಮತ್ತು ದೃಢ ಸಂಕಲ್ಪವನ್ನು ಹೊಂದಿರಬೇಕು. ಏಕೆಂದರೆ ನೀವು ವೈದ್ಯಕೀಯ ಪ್ರವೇಶಿಸಿದಿರಿ ಎಂದರೆ ನಿಮ್ಮ ಮೇಲೆ ಭಾರೀ ಶೈಕ್ಷಣಿಕ ಒತ್ತಡ ಬೀಳುತ್ತದೆ. ಅದು ಎಣಿಸಿದಷ್ಟು ಸುಲಭವಲ್ಲ. ಈ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಬೇಕಿದ್ದರೆ ಅದಕ್ಕಾಗಿ ಕಠಿಣ ಪರಿಶ್ರಮ ಅಗತ್ಯವಿದೆ, ಕೇವಲ ಸೀಟು ಗಳಿಸಿದರೆ ಸಾಲದು. ಏಕಾಗ್ರತೆಯಿಂದ  ಕನಿಷ್ಠ  12 ವರ್ಷ ವ್ಯಾಸಂಗ ನಡೆಸುವ ತಾಳ್ಮೆಯಿರಬೇಕು . ನಾನು 2005ರಲ್ಲಿ ವೈದ್ಯಕೀಯ ಶಿಕ್ಷಣ  ಆರಂಭಿಸಿದೆ  ಮತ್ತು ವೃತ್ತಿಯನ್ನು ಆರಂಭಿಸುವ ಮುನ್ನ 14 ವರ್ಷ ನಿರಂತರ ವ್ಯಾಸಂಗ ಮಾಡಿದ್ದೇನೆ. ನಾವು ಹಣ ಗಳಿಸಲು ಈ ಕ್ಷೇತ್ರದಲ್ಲಿರಬಾರದು. ಜನರಿಗೆ ನೆರವಾಗುವುದು ಮತ್ತು ಅಗತ್ಯವುಳ್ಳವರಿಗೆ ಸೇವೆಯನ್ನು ಒದಗಿಸುವುದು ನಮ್ಮ ಗುರಿಯಾಗಿರಬೇಕು. ಅದು ಬಹಳ ಮುಖ್ಯ. 

►ನಿಮ್ಮ ಶೈಕ್ಷಣಿಕ ಸಾಧನೆಗಳಿಗೆ ನಿಮಗೆ ಸುಲಭವಾಗಿ ವಿದೇಶಗಳಲ್ಲಿ ಅತ್ಯುತ್ತಮ ಉದ್ಯೋಗ ಸಿಗುತ್ತಿತ್ತು. ಆದರೆ  ನೀವು ಈಗ ಕನ್ಸಲ್ಟಂಟ್ ನ್ಯೂರಾಲಜಿಸ್ಟ್ ಆಗಿ ಮಂಗಳೂರಿನ ಫಾ.ಮುಲ್ಲರ್ಸ್ ಆಸ್ಪತ್ರೆಗೆ ಸೇರಿದ್ದೀರಿ.  ನಿಮ್ಮ ಮುಂದಿನ ಯೋಜನೆಗಳೇನು?

 - ಕಾಗ್ನಿಟಿವ್ ನ್ಯುರೋಸೈನ್ಸ್‌ಸ್ ಘಟಕವೊಂದನ್ನು ಸ್ಥಾಪಿಸಲು ನಾನು ಬಯಸಿದ್ದೇನೆ. ಅಲ್ಲಿ ನಾವು ಡಿಮೆನ್ಶಿಯಾದಿಂದ ನರಳುತ್ತಿರುವ ಜನರನ್ನು ಸರಿಯಾಗಿ ತಿಳಿದುಕೊಂಡು ಅವರಿಗೆ ಸೂಕ್ತ ಚಿಕಿತ್ಸೆಯನ್ನು ನೀಡಬಹುದಾಗಿದೆ . ಕಾಗ್ನಿಟಿವ್ ನ್ಯುರೋಸೈನ್ಸಸ್ ರೋಗಿಗಳು ಮತ್ತು ಅವರ ಕುಟುಂಬದೊಂದಿಗೆ ಸಮಯವನ್ನು ಕಳೆದು ಅವರನ್ನು ತಿಳಿದುಕೊಳ್ಳುವ ವಿಷಯವಾಗಿದೆ. ನಾವು ಕುಟುಂಬದ ಸದಸ್ಯರೊಡನೆ ಸಮಾಲೋಚನೆ ನಡೆಸಿ, ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ  ರೋಗಿಯನ್ನು ಚೆನ್ನಾಗಿ ನೋಡಿಕೊಳ್ಳುವ ಅಗತ್ಯವಿರುತ್ತದೆ. ಇಲ್ಲಿ ಈ ಘಟಕವನ್ನು ಆರಂಭಿಸುವ ಯೋಜನೆಯನ್ನು ನಾನು ಹೊಂದಿದ್ದೇನೆ. ಆಸ್ಪತ್ರೆ ಆಡಳಿತ ಹಾಗು ಹಿರಿಯ ವೈದ್ಯರು ನನಗೆ ಪೂರ್ಣ ಪ್ರೋತ್ಸಾಹ ನೀಡುತ್ತಿದ್ದಾರೆ. 

(ಸುದ್ದಿ ಸಂಪಾದಕ ಬಿ.ಎಂ ಬಶೀರ್ ಮತ್ತು ಮಂಗಳೂರು ಬ್ಯೂರೋ ಮುಖ್ಯಸ್ಥ ಪುಷ್ಪರಾಜ್ ಬಿ.ಎನ್ ಅವರು ಡಾ.ಸಫ್ವಾನ್ ಅಹ್ಮದ್ ರಿಗೆ ವಾರ್ತಾಭಾರತಿ ಕಚೇರಿಯಲ್ಲಿ ಸ್ಮರಣಿಕೆ ನೀಡಿದರು.)

(ತಾಯಿ ಹಾಗೂ ಪತ್ನಿಯೊಂದಿಗೆ ಡಾ. ಸಫ್ವಾನ್)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)