varthabharthi

ಸಿನಿಮಾ

ಬಾಲಿವುಡ್ ನಟ ಸ್ಯಾಂಡಲ್‌ವುಡ್‌ಗೆ

ವಾರ್ತಾ ಭಾರತಿ : 21 Sep, 2019

ಕಿರಿಕ್ ಪಾರ್ಟಿ, ಕಾಸರಗೋಡು ಹಿರಿಯ ಪ್ರಾಥಮಿಕ ಶಾಲೆ, ಬೆಲ್‌ಬಾಟಮ್ ಹೀಗೆ ಸಾಲುಸಾಲಾಗಿ ಸೂಪರ್‌ಹಿಟ್ ಚಿತ್ರಗಳನ್ನು ನೀಡಿರುವ ರಿಷಬ್ ಶೆಟ್ಟಿ ನಿರ್ದೇಶನದ ನೂತನ ಚಿತ್ರ ರುದ್ರಪ್ರಯಾಗ್, ಶೂಟಿಂಗ್ ಆರಂಭಿಸುವ ಮುನ್ನವೇ ಸಾಕಷ್ಟು ಸದ್ದು ಮಾಡುತ್ತಿದೆ. ಜಯಣ್ಣ ಕಂಬೈನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಅನಂತನಾಗ್ ಪ್ರಧಾನ ಪಾತ್ರದಲ್ಲಿದ್ದಾರೆ. ಚಿತ್ರದ ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ಆಯ್ಕೆಯಾಗುವುದು ಬಹುತೇಕ ಫೈನಲ್ ಆಗಿದೆ.

ಈ ಮಧ್ಯೆ ಈ ಪ್ರಾಜೆಕ್ಟ್ ಬಗ್ಗೆ ಇನ್ನೊಂದು ಹೊಸ ಕುತೂಹಲಕಾರಿ ಸುದ್ದಿ ಈಗ ಹೊರಬಿದ್ದಿದೆ. ಮೂಲತಃ ಬೆಂಗಳೂರಿನವರಾದ, ಹಂಟರ್... ಖ್ಯಾತಿಯ ಬಾಲಿವುಡ್ ನಟ ಗುಲ್ಶನ್ ದೇವಯ್ಯ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಬಗ್ಗೆ ರಿಷಬ್ ಅವರ ದೇವಯ್ಯ ಜೊತೆ ದೀರ್ಘ ಸಮಾಲೋಚನೆ ನಡೆಸಿದ್ದಾರೆ.

ಪುಣೆಯ ರಾಷ್ಟ್ರೀಯ ಚಲನಚಿತ್ರ ಮತ್ತು ತಂತ್ರಜ್ಞಾನ ಸಂಸ್ಥೆ (ಎನ್‌ಐಎಫ್‌ಟಿ) ಪದವೀಧರರಾದ ಗುಲ್ಶನ್ ದೇವಯ್ಯ ಬಾಲಿವುಡ್‌ನಲ್ಲಿ ಶೈತಾನ್, ಹೇಟ್ ಸ್ಟೋರಿ ಹಾಗೂ ಹಂಟರ್ ಚಿತ್ರಗಳ ಪಾತ್ರಗಳಿಂದ ಭಾರೀ ಹೆಸರು ಗಳಿಸಿದ್ದಾರೆ. ‘ಗರ್ಲ್ ಇನ್ ಯೆಲ್ಲೊ ಬೂಟ್ಸ್’ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಗುಲ್ಶನ್ ದೇವಯ್ಯ, ಮರ್ದ್ ಕೊ ದರ್ದ್ ನಹೀ ಹೋತಾ ಚಿತ್ರದಲ್ಲಿಯೂ ನಟಿಸಿದ್ದಾರೆ.

ಸದ್ಯ ಭರದಿಂದ ಚಿತ್ರೀಕರಣಗೊಳ್ಳುತ್ತಿರುವ ಬಾಲಿವುಡ್‌ನ ಅದ್ದೂರಿ ಪ್ರಾಜೆಕ್ಟ್‌ಗಳಾದ ‘ಎ ಡೆತ್ ಇನ್ ಗೂಂಜ್’ ಹಾಗೂ ‘ಕ್ಯಾಂಡಿ ಫ್ಲಿಪ್’ನಲ್ಲಿಯೂ ಗುಲ್ಶನ್ ಅಭಿನಯಿಸುತ್ತಿದ್ದಾರೆ.

‘ರುದ್ರಪ್ರಯಾಗ್’ ಚಿತ್ರದ ಕಥಾವಸ್ತು ಹಾಗೂ ತನಗೆ ನಿರ್ದೇಶಕರು ಕೊಡ ಮಾಡಿರುವ ಪಾತ್ರ ಇವೆರಡನ್ನೂ ಗುಲ್ಶನ್ ದೇವಯ್ಯ ತುಂಬಾನೆ ಮೆಚ್ಚಿಕೊಂಡಿದ್ದಾರಂತೆ. ಸದ್ಯ ಗುಲ್ಶನ್ ದೇವಯ್ಯ ಅವರು ರಿಷಬ್ ಜೊತೆ ಕಾಲ್‌ಶೀಟ್ ಡೇಟ್ಸ್ ಬಗ್ಗೆ ಚರ್ಚಿಸುತ್ತಿದ್ದಾರಂತೆ. ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ರುದ್ರಪ್ರಯಾಗ್ ಮೂಲಕ ಗುಲ್ಶನ್ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ.

ಅಂದ ಹಾಗೆ ಈ ಚಿತ್ರದಲ್ಲಿ 9 ಮಂದಿ ತಾರೆಯರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕ್ಳೊುತ್ತಿದ್ದಾರೆ. ಇದೀಗ ಚಿತ್ರದ ಉಳಿದ ತಾರಾಗಣದ ಆಯ್ಕೆಯಲ್ಲಿ ರಿಷಬ್ ನಿರತರಾಗಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)