varthabharthi

ಸಿನಿಮಾ

ಮಾಲಿವುಡ್‌ಗೆ ಮರಳಿದ ಆದಿತಿ

ವಾರ್ತಾ ಭಾರತಿ : 21 Sep, 2019

2006ರಲ್ಲಿ ತೆರೆಕಂಡ ಮಲಯಾಳಂ ಚಿತ್ರ ಪ್ರಜಾಪತಿಯಲ್ಲಿ ಆದಿತಿ ರಾವ್ ಹೈದರಿ ನಾಯಕಿಯಾಗಿದ್ದರೂ, ಪ್ರೇಕ್ಷಕರ ಗಮನಸೆಳೆದಿರಲಿಲ್ಲ. ಈಗ ಆದಿತಿ ರಾವ್ ಅವರು ಪದ್ಮಾವತ್,ಭೂಮಿ,ವಾಝೀರ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿ, ಬಾಲಿವುಡ್‌ನ ಜನಪ್ರಿಯ ನಟಿಯರ ಸಾಲಿನಲ್ಲಿ ಸೇರಿದ್ದಾರೆ. ಇದೀಗ ಸುಮಾರು 13 ವರ್ಷಗಳ ಬಳಿಕ ಆದಿತಿ ರಾವ್ ಹೈದರಿ ಮತ್ತೆ ಮಲಯಾಳಂ ಚಿತ್ರರಂಗಕ್ಕೆ ವಾಪಸಾಗಿದ್ದಾರೆ. ವಿಜಯ್ ಬಾಬು ಅವರು ಫ್ರೈಡೇ ಫಿಲಂ ಹೌಸ್ ಬ್ಯಾನರ್‌ನಲ್ಲಿ ನಿರ್ಮಿಸುತ್ತಿರುವ ‘ಸೂಫಿಯುಂ ಸುಜಾತಂ’ ಚಿತ್ರದಲ್ಲಿ ಅವರು ನಟಿಸಲಿದ್ದಾರೆ. 2015ರಲ್ಲಿ ಬಿಡುಗಡೆಯಾದ ಕರಿ ಮಲಯಾಳಂ ಚಿತ್ರದ ಮೂಲಕ ನಿರ್ದೇಶಕನ ಸ್ಥಾನ ಅಲಂಕರಿಸಿರುವ ನರನಿ ಪುಳ ಶ್ರೀನಿವಾಸ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

ಸೂಫಿಯುಂ ಸುಜಾತಂ ಒಂದು ಸಂಗೀತಮಯ ಪ್ರೇಮ ಕಥಾನಕವಾಗಿದೆ. ಇದೊಂದು ಮಹಾನ್ ಕಥೆಯಾಗಿದ್ದು ಚಿತ್ರದ ಪಾತ್ರಗಳಿಗೆ ಹೊಂದಿಕೊಳ್ಳುವಂತಹ ಸೂಕ್ತ ತಾರೆಯರನ್ನೇ ಆಯ್ಕೆ ಮಾಡಲಾಗಿದೆ. ಅತ್ಯಂತ ಪ್ರತಿಭಾವಂತ ನಿರ್ದೇಶರರನ್ನು ಮತ್ತು, ಛಾಯಾಗ್ರಾಹಕ (ಅಧೀರನ್ ಖ್ಯಾತಿಯ ಅನು ಮೂದೆಡಾತು), ಅದ್ಭುತವಾದ ಸಂಗೀತ ನಿರ್ದೇಶಕ (ಎಂ.ಜಯಚಂದ್ರನ್) ಹಾಗೂ ಉತ್ತಮ ಸಂಕಲನಕಾರ (ಜಲ್ಲಿಕಟ್ಟು ಖ್ಯಾತಿಯ ದೀಪು ಜೋಸೆಫ್) ಚಿತ್ರವು ಹೊಂದಿದ್ದು, ತಾನು ಈವರೆಗೆ ನಿರ್ಮಿಸಿರುವ ಚಿತ್ರಗಳಲ್ಲೇ ಅತ್ಯುತ್ತಮವೆನಿಸಲಿದೆಯೆಂದು ನಿರ್ಮಾಪಕ ವಿಜಯ್ ತಿಳಿಸಿದ್ದಾರೆ. ಮಮ್ಮುಟ್ಟಿ ಅಭಿನಯದ ಪ್ರಜಾಪತಿ ಮೂಲಕ ಆದಿತಿ ರಾವ್ ಹೈದರಿ ಚಿತ್ರರಂಗ ಪ್ರವೇಶಿಸಿದ್ದರೂ, ತಮಿಳು ಚಿತ್ರ ಶೃಂಗಾರಂನಲ್ಲಿ ಆಕೆ ನಾಯಕಿಯಾಗಿ ನಟಿಸಿದ ಚೊಚ್ಚಲ ಚಿತ್ರವಾಗಿದೆ.

ಆದಿತಿ ರಾವ್ ಮಣಿರತ್ನಂ ನಿರ್ದೇಶನದ ತಮಿಳು ಚಿತ್ರಗಳಾದ ಕಾಟ್ರು ವೆಲೆಯಾಡಿಲ್ ಹಾಗೂ ಚೆಕ್ಕ ಶಿವಂತ ವಾನಂನಲ್ಲಿಯೂ ನಟಿಸಿದ್ದಾರೆ. ಇದೀಗ ಚಿತ್ರೀಕರಣವಾಗುತ್ತಿರುವ ತಮಿಳು ಚಿತ್ರಗಳಾದ ಮಿಸ್ಕಿನ್ ನಿರ್ದೇಶನದ ಸೈಕೋ, ವಿಜಯ್ ಸೇತುಪತಿ ಅಭಿನಯದ ತುಗಲ್ ದರ್ಬಾರ್ ಹಾಗೂ ಧನುಷ್ ನಿರ್ದೇಶನದ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)