varthabharthi

ನಿಮ್ಮ ಅಂಕಣ

ಭಾರತದ ಉಸಿರು ಕಟ್ಟಿಸುತ್ತಿದೆ ಪ್ಲಾಸ್ಟಿಕ್ ತ್ಯಾಜ್ಯ

ವಾರ್ತಾ ಭಾರತಿ : 22 Sep, 2019
ಬ್ರಹ್ಮ ಚೆಲ್ಲಾನಿ

ಪ್ಲಾಸ್ಟಿಕ್ ತ್ಯಾಜ್ಯ ಪಿಡುಗು ನಮ್ಮ ಶುದ್ಧ ನೀರು ಮತ್ತು ಆಹಾರ ಸರಪಳಿಯೂ (ಫುಡ್ ಚೈನ್) ಸೇರಿದಂತೆ ನಮ್ಮ ದೇಶದ ಪರಿಸರ ಆರೋಗ್ಯವನ್ನೇ ಗಂಡಾಂತರಕ್ಕೆ ಒಡ್ಡುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಲು ಸ್ಥಳೀಯವಾಗಿಯೂ, ಜಾಗತಿಕವಾಗಿಯೂ ಕೂಡಲೇ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ 2050ರ ವೇಳೆಗೆ ಸಾಗರಗಳಲ್ಲಿ ಒಟ್ಟು ಮೀನುಗಳ ಭಾರಕ್ಕಿಂತ ಹೆಚ್ಚು ಭಾರದ ಪ್ಲಾಸ್ಟಿಕ್ ತ್ಯಾಜ್ಯ ತುಂಬಿರುತ್ತದೆ.


ಸಾಗರ ಪಾಸ್ಟಿಕ್ ತ್ಯಾಜ್ಯ ಸಮಸ್ಯೆಗೆ ಪರಿಹಾರ ಹುಡುಕುವ ಕುರಿತು ಜೂನ್ 16ರಂದು ನಡೆದ ಜಿ20 ಪರಿಸರ ಸಭೆ ಮೂರ್ತ ಪರಿಹಾರ ಕ್ರಮಗಳ ಬಗ್ಗೆ ಒಮ್ಮತಕ್ಕೆ ಬರಲು ವಿಫಲವಾಯಿತು. ಮಾನವರ ಕ್ರಿಯೆಗಳಿಂದಾಗಿ ಪರಿಸರ ವ್ಯವಸ್ಥೆಗಳು ಬದಲಾಗುತ್ತಿವೆ ಹಾಗೂ ಸಸ್ಯ ಮತ್ತು ಪ್ರಾಣಿ ಸಂಕುಲಗಳನ್ನು ವಿನಾಶದತ್ತ ತಳ್ಳುತ್ತಿವೆ ಎಂಬುದಕ್ಕೆ ಪುರಾವೆಗಳು ಹೆಚ್ಚು ಹೆಚ್ಚಾಗಿ ಸಿಗುತ್ತಿವೆ. ಒಂದು ಹೊಸ ಮಹತ್ವಪೂರ್ಣ ವಿಶ್ವಸಂಸ್ಥೆ ಅಧ್ಯಯನದ ಪ್ರಕಾರ ಭೂಮಿಯ ಶೇ. 75 ಮೇಲ್ಭಾಗ ವ್ಯಾಪಕವಾಗಿ ಬದಲಾಗಿದೆ; ಶೇ. 85 ಒದ್ದೆ ಭೂಭಾಗಗಳು ನಷ್ಟವಾಗಿ ಹೋಗಿವೆ ಮತ್ತು ಸಾಗರಗಳ ಮೂರನೇ ಎರಡು ಭಾಗಗಳ ಮೇಲೆ ಸಂಚಯಿತ ಪರಿಣಾಮಗಳ ಹೊರೆ ಬೀಳುತ್ತಿದೆ. ಪರಿಣಾಮವಾಗಿ ವಿಶ್ವಾದ್ಯಂತ ಜೀವವೈವಿಧ್ಯ ಅವನತಿ ಹೊಂದುತ್ತಿದೆ. ಉದಾಹರಣೆಗೆ ಜಲಸಂಬಂಧಿ ಪರಿಸರ ವ್ಯವಸ್ಥೆಗಳು 1970ರ ದಶಕದ ಬಳಿಕ ತಮ್ಮ ಜೀವ ವೈವಿಧ್ಯದ ಶೇ. 50ರಷ್ಟನ್ನು ಕಳೆದುಕೊಂಡಿದೆ. ಇದಕ್ಕೆ ಒಂದು ಮುಖ್ಯ ಕಾರಣ ಪ್ಲಾಸ್ಟಿಕ್ ಮಾಲಿನ್ಯ.

ನೀರಿನ ಪ್ಲಾಸ್ಟಿಕ್ ಬಾಟಲಿಗಳು ಪ್ಲಾಸ್ಟಿಕ್ ತ್ಯಾಜ್ಯದ ಒಂದು ಮುಖ್ಯ ಮೂಲವಾಗಿವೆ. ಒಂದು ಬಾರಿ ಬಳಸಿ ಎಸೆಯುವ ಸ್ಟ್ರಾಗಳು ಈ ಪಿಡುಗನ್ನು ಇನ್ನಷ್ಟು ತೀವ್ರವಾಗಿ ಮಾಡಿದೆ.
ಭಾರತದಲ್ಲಿ ಬಡವರು ನೀರಿಗಾಗಿ ಪರದಾಡುತ್ತಿರುವಾಗ, ಅನುಕೂಲಸ್ಥರು, ಉಳ್ಳವರು ಪ್ಲಾಸ್ಟಿಕ್ ಬಾಟಲಿಗಳಲ್ಲಿ ಸಿಗುವ ನೀರನ್ನೇ ಹೆಚ್ಚು ಹೆಚ್ಚಾಗಿ ಅವಲಂಬಿಸುತ್ತಿದ್ದಾರೆ. ಈ ಬಾಟಲಿ ನೀರಿಗೆ ಭಾರೀ ಸಂಪನ್ಮೂಲ ವ್ಯಯವಾಗುತ್ತದೆ. ಉದಾಹರಣೆಗೆ ಒಂದು ಲೀಟರ್ ಬಾಟಲಿ ನೀರು ತಯಾರಿಸಲು ಸರಾಸರಿ 1.6 ಲೀಟರ್ ನೀರನ್ನು ಬಳಸಲಾಗುತ್ತದೆ. ಅಲ್ಲದೆ ಈ ನೀರಿಗಾಗಿ ಹೆಚ್ಚು ಬಳಸುವುದು ಅಂತರ್ಜಲವನ್ನೇ.

ಒಂದು ಬಾರಿಗೆ ಬಳಸಿ ಎಸೆಯುವ ಬಾಟಲಿಗಳನ್ನು ಪಾಲಿಎತೈಲೀನ್ ಟೆರಫ್ತಾಲೆಟ್ (ಪಿಇಟಿ) ಎಂಬ ಎಂದರೆ ಪಾಲಿಸ್ಟರ್ ಪ್ಲಾಸ್ಟಿಕ್‌ನಿಂದ ತಯಾರಿಸಲಾಗುತ್ತದೆ. ಪರಿಸರಕ್ಕೆ ಹಾನಿ ಮಾಡುವ ಹಾಗೂ ಮಾನವನ ಆರೋಗ್ಯಕ್ಕೆ ಬೆದರಿಕೆಯೊಡ್ಡುವ ಪ್ಲಾಸ್ಟಿಕ್‌ಗಳಲ್ಲಿ ಪಿಇಟಿ ಕೇವಲ ಒಂದು ರೀತಿಯ ಪ್ಲಾಸ್ಟಿಕ್ ಮಾತ್ರ. ಇದು ಹಲವು ರೀತಿಯ ಜಲ ಜೀವರಾಶಿಗಳ ಪ್ರಾಣಕ್ಕೆ ಬೆದರಿಕೆ ಒಡ್ಡುತ್ತಿದೆ. ಇದು ಮಾನವನ ಆಹಾರ ಸರಪಳಿಗಳ ಮೇಲೆ ನೇತ್ಯಾತ್ಮಕ ಪರಿಣಾಮ ಬೀರುತ್ತದೆ. ಮೈಕ್ರೋ ಪ್ಲಾಸ್ಟಿಕ್ಸ್ ಅಥವಾ ಪ್ಲಾಸ್ಟಿಕ್ ಅಂತಿಮವಾಗಿ ತಾಳುವ ಅತಿ ಚಿಕ್ಕ ಕಣಗಳು ಹಲವಾರು ಮೀನುಗಳ ದೇಹದಲ್ಲಿ ಪತ್ತೆಯಾಗಿ ಇಂತಹ ತ್ಯಾಜ್ಯ ಪ್ಲಾಸ್ಟಿಕ್ ಗಳನ್ನು ರಿಸೈಕಲ್ ಮಾಡುವುದಕ್ಕಾಗಿ ಆಮದು ಮಾಡಿಕೊಳ್ಳುವುದನ್ನು ಚೀನಾ ಮತ್ತು ಭಾರತ ಈಗ ನಿಷೇಧಿಸಿರುವುದು ಜಾಗತಿಕ ಪ್ಲಾಸ್ಟಿಕ್ ತ್ಯಾಜ್ಯ ಬಿಕ್ಕಟ್ಟನ್ನು ಇನ್ನಷ್ಟು ತೀವ್ರವಾಗಿಸಿದೆ. ಭಾರತ ಪ್ರತಿದಿನ ಸ್ವತಃ 26,000 ಟನ್‌ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ಪಾದಿಸುತ್ತಿದೆಯಾದರೂ ಅದು ಇದುವರೆಗೆ ಪ್ಲಾಸ್ಟಿಕ್ ತ್ಯಾಜ್ಯದ ಒಂದು ಪ್ರಮುಖ ಆಮದುದಾರನಾಗಿತ್ತು. ಮೂರು ತಿಂಗಳ ಹಿಂದಷ್ಟೇ ಭಾರತ ಇಂತಹ ಎಲ್ಲ ಆಮದನ್ನು ನಿಷೇಧಿಸಿತ್ತು. ಅದೀಗ 2022ರ ವೇಳೆಗೆ ಒಂದು ಬಾರಿ ಬಳಸಿ ಎಸೆಯುವ ಪ್ಲಾಸ್ಟಿಕ್‌ಗಳನ್ನು ಸಂಪೂರ್ಣವಾಗಿ ತೊಡೆದು ಹಾಕುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕೈಗೊಂಡಿದೆ.
ಆದರೆ ತನ್ನ ಜಲ ಮತ್ತು ನೆಲವನ್ನು ಮಲಿನಗೊಳಿಸುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ವಿಲೇವಾರಿ ಮಾಡುವ ಸಮರ್ಪಕವಾದ ಮೂರ್ತ ರಾಷ್ಟ್ರೀಯ ತಂತ್ರ ಯೋಜನೆ ಇನ್ನೂ ಅದರ ಬಳಿ ಇಲ್ಲ. ಹೆಚ್ಚೆಂದರೆ ಅದು ಕೆಲವು ರಾಜ್ಯಗಳಲ್ಲಿ ಪ್ಲಾಸ್ಟಿಕ್ ಚೀಲಗಳ ಮೇಲೆ ಅರೆಮನಸ್ಸಿನ ನಿಷೇಧವನ್ನು ಹೇರಿದೆ ಅಷ್ಟೇ.

ಸದ್ಯದ ಭಾರತ ಸರಕಾರದ ನೀತಿ (ಅಥವಾ ನೀತಿಯ ಕೊರತೆ)ಯಿಂದಾಗಿ ಪಾನೀಯಗಳ ಉತ್ಪಾದಕರಿಗೆ ಪಿಇಟಿ ಬಳಸುವುದು ಪರಿಸರ ಸ್ನೇಹಿ ಸಾಮಗ್ರಿಯನ್ನು ಬಳಸುವುದಕ್ಕಿಂತ ಅಗ್ಗವಾಗಿದೆ, ಹೆಚ್ಚು ಲಾಭದಾಯಕವಾಗಿದೆ.

ವಿಶ್ವದ ರೀಸೈಕ್ಲಿಂಗ್ ಚಾಂಪಿಯನ್ ಆಗಿರುವ ಜರ್ಮನಿಯಿಂದ ಸರಿಯಾದ ನೀತಿಗಳು ಹಾಗೂ ನಿಯಂತ್ರಣಗಳು ಹೇಗೆ ರೀಸೈಕ್ಲಿಂಗ್ ಪ್ರಕ್ರಿಯೆಯನ್ನು ಪರಿವರ್ತಿಸಬಹುದು, ಹೆಚ್ಚಿಸಬಹುದು ಎಂಬುದನ್ನು ಭಾರತ ಕಲಿಯಬಹುದಾಗಿದೆ. ಜರ್ಮನಿ ಬಹುತೇಕ ಎಲ್ಲ ಪ್ಲಾಸ್ಟಿಕ್ ಬಾಟಲಿಗಳನ್ನು ರೀಸೈಕಲ್ ಮಾಡುತ್ತದೆ ಉದಾಹರಣೆಗೆ ಬರ್ಲಿನ್ ನಲ್ಲಿ ಸಾರ್ವಜನಿಕವಾಗಿ ಲಭಿಸುವ ಪ್ಲಾಸ್ಟಿಕ್ ಬಾಟಲಿಗಳನ್ನು ಬಡವರು ಸೂಪರ್ ಮಾರ್ಕೆಟ್ ಗಳಿಗೆ ಹಿಂದಿರುಗಿಸಿ ಒಂದು ನಿರ್ದಿಷ್ಟ ಮೊತ್ತದ ಹಣ ಪಡೆಯುತ್ತಾರೆ. ಆ ಮೂಲಕ ಅವರು ಪರಿಸರ ಸೇವೆ ಸಲ್ಲಿಸುತ್ತಾರೆ. ಇದೇ ರೀತಿಯಾಗಿ ಭಾರತದಲ್ಲಿ ಹಣದ ರೂಪದಲ್ಲಿ ಪ್ರೋತ್ಸಾಹ ನೀಡಿ ಬಡವರು ಪ್ಲಾಸ್ಟಿಕ್ ಬಾಟಲಿಗಳನ್ನು ಹಾಗೂ ಇತರ ಎಲ್ಲ ಪ್ಲಾಸ್ಟಿಕ್ ತ್ಯಾಜ್ಯವನ್ನು ಚಿಲ್ಲರೆ ವ್ಯಾಪಾರಿಗಳ ಅಂಗಡಿಗಳಲ್ಲಿ ಸಂಗ್ರಹಿಸಿ ಇಡುವಂತೆ ಮಾಡಬಹುದು. ಬಳಿಕ ಇದೆಲ್ಲವನ್ನು ರೀಸೈಕಲ್ ಮಾಡಿದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಕಸವನ್ನು ಗಣನೀಯವಾಗಿ ನಿಯಂತ್ರಿಸಬಹುದು.

ತ್ಯಾಜ್ಯ ಹೆಕ್ಕುವವರು ಪರಿಣಾಮಕಾರಿಯಾದ ತ್ಯಾಜ್ಯ ನಿರ್ವಹಣೆಯಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸುತ್ತಾರೆ ಎಂಬುದನ್ನು ಭಾರತ ಮರೆಯ ಕೂಡದು. ಆದರೆ ಹೀಗೆ ತ್ಯಾಜ್ಯ ಹೆಕ್ಕುವವರಿಗೆ ಜೀವನ ನಿರ್ವಹಣೆಗೆ ಸಾಕಾಗುವಷ್ಟು ಕೂಲಿ, ಪ್ರತಿಫಲ ಸಿಗುವಂತೆ ನೋಡಿಕೊಳ್ಳಬೇಕು. ಪ್ಲಾಸಿಕ್‌ಗಳ ಮೇಲೆ ಒಂದು ಪರಿಸರ ತೆರಿಗೆ ವಿಧಿಸುವ ಮೂಲಕ ಎಲ್ಲ ಪ್ಲಾಸ್ಟಿಕ್ ತ್ಯಾಜ್ಯಗಳ ಸಂಗ್ರಹಣೆಗೆ ಬೇಕಾಗುವ ಸಂಪನ್ಮೂಲವನ್ನು ಸಂಗ್ರಹಿಸಬಹುದು. ಗ್ರಾಹಕರಿಗೆ ಬೇಕಾಗುವ ವಸ್ತುಗಳನ್ನು ಉತ್ಪಾದಿಸುವ ಕಂಪೆನಿಗಳು ಕೂಡ ಈ ನಿರ್ವಹಣೆಗೆ ತಗಲುವ ವೆಚ್ಚದ ಒಂದು ಪಾಲನ್ನು ಕೊಡುವಂತೆ ಮಾಡಬೇಕು.

ಪ್ಲಾಸ್ಟಿಕ್ ತ್ಯಾಜ್ಯ ಪಿಡುಗು ನಮ್ಮ ಶುದ್ಧ ನೀರು ಮತ್ತು ಆಹಾರ ಸರಪಳಿಯೂ (ಫುಡ್ ಚೈನ್) ಸೇರಿದಂತೆ ನಮ್ಮ ದೇಶದ ಪರಿಸರ ಆರೋಗ್ಯವನ್ನೇ ಗಂಡಾಂತರಕ್ಕೆ ಒಡ್ಡುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಲು ಸ್ಥಳೀಯವಾಗಿಯೂ, ಜಾಗತಿಕವಾಗಿಯೂ ಕೂಡಲೇ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ 2050ರ ವೇಳೆಗೆ ಸಾಗರಗಳಲ್ಲಿ ಒಟ್ಟು ಮೀನುಗಳ ಭಾರಕ್ಕಿಂತ ಹೆಚ್ಚು ಭಾರದ ಪ್ಲಾಸ್ಟಿಕ್ ತ್ಯಾಜ್ಯ ತುಂಬಿರುತ್ತದೆ. ಸಂಶೋಧನೆಯೊಂದು ಈ ಭಯಾನಕ ಸತ್ಯವನ್ನು ಹೊರಗೆಡಹಿದೆ. ಅಲ್ಲದೆ, ಆ ವೇಳೆಗೆ ಇನ್ನಷ್ಟು ಹೆಚ್ಚು ಜನರು ಕ್ಯಾನ್ಸರ್ ಮತ್ತು ಇತರ ಪರಿಸರ ಕಾಯಿಲೆಗಳಿಂದ ಸಾಯಬಹುದು.

(ಲೇಖಕರು ಓರ್ವ ಭೂಗೋಳ ಶಾಸ್ತ್ರಜ್ಞರು)
ಕೃಪೆ: ದಿ ಟೈಮ್ಸ್ ಆಫ್ ಇಂಡಿಯಾ 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)