varthabharthi


ರಾಷ್ಟ್ರೀಯ

ಸಂತ ಪದವಿಯನ್ನು ಕಳೆದುಕೊಳ್ಳಲಿರುವ ಅತ್ಯಾಚಾರ ಆರೋಪಿ, ಬಿಜೆಪಿ ನಾಯಕ ಚಿನ್ಮಯಾನಂದ

ವಾರ್ತಾ ಭಾರತಿ : 22 Sep, 2019

ಹೊಸದಿಲ್ಲಿ,ಸೆ.22: ತನ್ನ ಟ್ರಸ್ಟ್ ನಡೆಸುತ್ತಿರುವ ಕಾನೂನು ಕಾಲೇಜಿನ ವಿದ್ಯಾರ್ಥಿನಿಗೆ ಬೆದರಿಕೆಯೊಡ್ಡಿದ ಮತ್ತು ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಶುಕ್ರವಾರ ಬಂಧಿಸಲ್ಪಟ್ಟಿರುವ ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಚಿನ್ಮಯಾನಂದನಿಗೆ ಈಗ ಇತರ ಸಾಧುಸಂತರಿಂದ ಇನ್ನಷ್ಟು ಸಂಕಷ್ಟ ಎದುರಾಗಿದೆ. ಸಾಧುಸಂತರ ಅತ್ಯುನ್ನತ ಮಂಡಳಿಯಾಗಿರುವ ಅಖಿಲ ಭಾರತ ಅಖಾಡಾ ಪರಿಷದ್ (ಎಬಿಎಪಿ) ಚಿನ್ಮಯಾನಂದನನ್ನು ಸಮುದಾಯದಿಂದ ಉಚ್ಚಾಟಿಸಲು ಸಜ್ಜಾಗಿದೆ.

ಚಿನ್ಮಯಾನಂದನನ್ನು ಸಂತ ಸಮುದಾಯದಿಂದ ಉಚ್ಚಾಟಿಸಲು ಶನಿವಾರ ನಡೆದ ಮಂಡಳಿಯ ಸಭೆಯಲ್ಲಿ ನಿರ್ಧರಿಸಲಾಗಿದೆ. ಅ.10ರಂದು ಹರಿದ್ವಾರದಲ್ಲಿ ನಡೆಯಲಿರುವ ಎಬಿಎಪಿಯ ವಿಧ್ಯುಕ್ತ ಸಭೆಯಲ್ಲಿ ಈ ನಿರ್ಧಾರಕ್ಕೆ ಅಂತಿಮ ಮುದ್ರೆ ಬೀಳಲಿದೆ ಎಂದು ಅಧ್ಯಕ್ಷ ಮಹಂತ ನರೇಂದ್ರ ಗಿರಿ ತಿಳಿಸಿದರು.

 ಚಿನ್ಮಯಾನಂದ ತನ್ನ ಅಕೃತ್ಯಗಳನ್ನು ಒಪ್ಪಿಕೊಂಡಿದ್ದಾನೆ ಮತ್ತು ಸಂತ ಸಮುದಾಯಕ್ಕೆ ಇದಕ್ಕಿಂತ ಹೆಚ್ಚು ನಾಚಿಕೆಗೇಡಿನ ವಿಷಯ ಇನ್ನೊಂದಿಲ್ಲ. ಆತ ನ್ಯಾಯಾಲಯದಿಂದ ದೋಷಮುಕ್ತಗೊಳ್ಳುವವರೆಗೂ ಸಂತ ಸಮುದಾಯದಿಂದ ಹೊರಗಿಡಲಾಗುವುದು ಎಂದೂ ಅವರು ಹೇಳಿದರು.

ಹಾಲಿ ಮಹಾ ನಿರ್ವಾಣಿ ಅಖಾಡಾದ ಮಹಾಮಂಡಲಾಧೀಶ್ವರನಾಗಿರುವ 73ರ ಹರೆಯದ ಚಿನ್ಮಯಾನಂದ ತನ್ನ ಸ್ಥಾನವನ್ನ್ನು ಕಳೆದುಕೊಳ್ಳುವ ಜೊತೆಗೆ ತನ್ನ ಹೆಸರಿಗೆ ಸಂತ ಅಥವಾ ಸ್ವಾಮಿ ವಿಶೇಷಣವನ್ನೂ ಹಚ್ಚಿಕೊಳ್ಳಲು ಸಾಧ್ಯವಾಗುವುದಿಲ್ಲ.

   ಅಯೋಧ್ಯೆ ಆಂದೋಲನದಲ್ಲಿ ಮುಖ್ಯ ಪಾತ್ರ ವಹಿಸಿದ್ದ ಚಿನ್ಮಯಾನಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥರ ಆಧ್ಯಾತ್ಮಿಕ ಗುರು ಮಹಂತ ಅವೈದ್ಯನಾಥರ ಜೊತೆಗೂಡಿ ರಾಮ ಮಂದಿರ ಮುಕ್ತಿ ಯಜ್ಞ ಸಮಿತಿಯನ್ನು ರೂಪಿಸಿದ್ದ. ರಾಮವಿಲಾಸ ವೇದಾಂತಿ ಮತ್ತು ರಾಮಚಂದ್ರ ಪರಮಹಂಸರಂತಹ ಇತರ ಸಂತರೂ ನಂತರ ಈ ಆಂದೋಲನಕ್ಕೆ ಸೇರ್ಪಡೆಗೊಂಡಿದ್ದರು.

ಚಿನ್ಮಯಾನಂದ 1986,ಜ.19ರಂದು ರಾಮ ಜನ್ಮಭೂಮಿ ಆಂದೋಲನ ಸಂಘರ್ಷ ಸಮಿತಿಯ ಸಂಚಾಲಕನಾಗಿಯೂ ನೇಮಕಗೊಂಡಿದ್ದ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)