varthabharthiಕರ್ನಾಟಕ

ಬಿಎಸ್ಪಿ ವತಿಯಿಂದ ಬಹುಜನರ ಐಕ್ಯತಾ ಸಮಾವೇಶ

ಬಹುಜನರು ಗುಲಾಮಗಿರಿಯನ್ನು ತೊರೆದು ಸ್ವಾಭಿಮಾನಿಗಳಾಗಬೇಕು: ರಾಜ್ಯ ಬಿಎಸ್ಪಿ ಉಸ್ತುವಾರಿ ಎಂ.ಎಲ್.ತೋಮರ್

ವಾರ್ತಾ ಭಾರತಿ : 22 Sep, 2019

ಮಂಡ್ಯ, ಸೆ.22: ಅಂಬೇಡ್ಕರ್ ಕರೆಕೊಟ್ಟಂತೆ ಬಹುಜನರು ಗುಲಾಮಗಿರಿಯನ್ನು ತೊರೆದು ಸ್ವಾಭಿಮಾನಿಗಳಾಗಬೇಕು ಎಂದು ಉತ್ತರಪ್ರದೇಶ ವಿಧಾನಪರಿಷತ್ ಸದಸ್ಯ ಹಾಗು ರಾಜ್ಯ ಬಿಎಸ್ಪಿ ಉಸ್ತುವಾರಿ ಎಂ.ಎಲ್.ತೋಮರ್ ಕರೆ ನೀಡಿದ್ದಾರೆ.

ನಗರದ ಅಂಬೇಡ್ಕರ್ ಭವನದಲ್ಲಿ ಬಹುಜನ ಸಮಾಜ ಪಕ್ಷದ ವತಿಯಿಂದ ರವಿವಾರ ನಡೆದ ಬಹುಜನರ ಐಕ್ಯತಾ ಸಮಾವೇಶ ಮತ್ತು ನೂತನ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಹಾಗು ರಾಜ್ಯ ಸಮಿತಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್, ಬಿಜೆಪಿ ಹಾಗು ಜೆಡಿಎಸ್ ಪಕ್ಷಗಳಲ್ಲಿ ಗುಲಾಮಗಿರಿ ಮಾಡುತ್ತಿರುವವರನ್ನು ನಮ್ಮ ಪಕ್ಷಕ್ಕೆ ಕರೆತರುವ ಮೂಲಕ ಹಿಂದುಳಿದ, ಅಲ್ಪಸಂಖ್ಯಾತ, ಶೋಷಿತರ, ದಲಿತರನ್ನು ಒಗ್ಗೂಡಿಸುವ ಹೊಸ ಭಾರತವನ್ನು ನಿರ್ಮಾಣ ಮಾಡಬೇಕು ಎಂದು ಅವರು ಹೇಳಿದರು.

ದೇಶದ ಬಹುಜನರನ್ನು ಗುಲಾಮಗಿರಿಯಿಂದ ಹೊರತರಲು ಅಂಬೇಡ್ಕರ್ ಅವರು ನಿರಂತರ ಹೋರಾಟ ನಡೆಸಿದರು. 1932ರ ಸೆಪ್ಟಂಬರ್ 24 ಡಾ.ಬಿ.ಆರ್.ಅಂಬೇಡ್ಕರ್ ಅವರು ಹಿಂದುಳಿದ, ಶೋಷಿತರು, ದೌರ್ಜನ್ಯಕ್ಕೊಳಗಾದವರನ್ನು ಗುಲಾಮಗಿರಿಯಿಂದ ವಿಮೋಚನೆ ಮಾಡಿದ ದಿನವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಬಹುಜನ ಸಮಾಜವೇ ಇಲ್ಲವೆಂದರೆ ನಾನು ತಂದಿರುವ ಹಕ್ಕು, ಹೋರಾಟಗಳೆಲ್ಲವೂ ವ್ಯರ್ಥ ಎಂದು ಭಾವಿಸಿದ ಅಂಬೇಡ್ಕರ್ ಅವರು 1932ರ ಸೆ.24ರಂದು ಪೂನಾ ಒಪ್ಪಂದ ಮಾಡಿಕೊಂಡ ಪರಿಣಾಮ ಇಂದು ಬಹುಜನರು ದೇಶದಲ್ಲಿ ತಲೆ ಎತ್ತಿ ಓಡಾಡುವಂತಾಗಿದೆ. ಆದರೆ, ಇನ್ನೂ ಆಳುವ ವರ್ಗವಾಗಲಿಲ್ಲ ಎಂದು ಅವರು ವಿಷಾದಿಸಿದರು.

ರೈತರು, ಶೋಷಿತರು, ಹಿಂದುಳಿದ ವರ್ಗದವರಿಗೆ ಮತದಾನದ ಅರಿವು ಮೂಡಿಸಿ, ಕರ್ನಾಟಕದ ಎಲ್ಲ ಜಾತಿಗಳಲ್ಲಿ ಸಹೋದರತ್ವ ನಿರ್ಮಾಣ ಮಾಡುವ ಮೂಲಕ ಬಹುಜನ ಸಮಾಜ ಪಕ್ಷ ರಾಜ್ಯದಲ್ಲಿ ಸರಕಾರ ರಚಿಸುವಂತೆ ಸಂಘಟನೆ ಮಾಡಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು

ಕರ್ನಾಟಕ ಬೌದ್ಧ ಸಮಾಜದ ರಾಜ್ಯಾಧ್ಯಕ್ಷ ಹ.ರಾ.ಮಹೇಶ್ ಮಾತನಾಡಿ, ಅಂಬೇಡ್ಕರ್ ಅವರು ಕೇವಲ ಪರಿಶಿಷ್ಟ ಹಾಗೂ ವರ್ಗಕ್ಕೆ ಸೀಮಿತವಾಗಿ ಸಂವಿಧಾನ ರಚಿಸಲಿಲ್ಲ. ಎಲ್ಲ ಜಾತಿಗಳಿಗೆ, ಹಿಂದುಳಿದ, ಮಹಿಳೆಯರ, ಶೋಷಿತರ ಕಲ್ಯಾಣಕ್ಕಾಗಿ ಸಂವಿಧಾನ ರಚಿಸಿದರು. ಆದರೆ, ದೇಶದಲ್ಲಿ ಅಂಬೇಡ್ಕರ್ ತತ್ವಗಳನ್ನು ನಾಶ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.

ಬಹುಜನರೆಂದರೆ, ಹಿಂದುಳಿದ, ಶೋಷಿತ, ಅಲ್ಪಸಂಖ್ಯಾತರು, ದೌರ್ಜನ್ಯಕ್ಕೊಳಗಾದವರು, ದಲಿತರು ಎಲ್ಲರೂ ಒಳಗೊಂಡಿರುವುದು. ಈ ಬಹುಜನರು ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಗಂಡಾಂತರ ಕಾದಿದೆ ಎಂದು ಅವರು ಎಚ್ಚರಿಸಿದರು.

ಸಮಾರಂಭದಲ್ಲಿ ಬಿಎಸ್ಪಿ ನೂತನ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಹಾಗು ರಾಜ್ಯ ಸಮಿತಿಯ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ಬಿಎಸ್ಪಿ ಉಸ್ತುವಾರಿ ಮಾರಸಂದ್ರ ಮುನಿಯಪ್ಪ, ಸಂಯೋಜಕ ಶೆರಿಯಾರ್‍ಖಾನ್, ನಿವೃತ್ತ ಮುಖ್ಯ ಇಂಜಿನಿಯರ್ ಎಸ್.ಸಿ.ಜಯಚಂದ್ರ, ರಾಜ್ಯ ಉಪಾಧ್ಯಕ್ಷ ಕೆ.ಬಿ.ವಾಸು, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎಚ್.ಡಿ.ಬಸವರಾಜು, ಡಿ.ನಾರಾಯಣಸ್ವಾಮಿ, ಅರಕಲವಾಡಿ ನಾಗೇಂದ್ರ, ಗಂಗಾಧರ್ ಬಹುಜನ್, ಸೂರ್ಯಕಾಂತ್ ನಿಂಬಾಳ್ಕರ್, ಜಾಕೀರ್ ಹುಸೇನ್, ಪಂಚಾಕ್ಷರಿ, ನಂಜುಂಡಸ್ವಾಮಿ, ಪುರುಷೋತ್ತಮ್, ದೇವದತ್ತ, ಎಂ.ಎಸ್.ವೆಂಕಟೇಶ್, ವೆಂಕಟಗಿರಿಯಯ್ಯ, ಶಿವಮಾಧು, ಬಸವಣ್ಣ, ಶಿವಕುಮಾರ್ ಇತರರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)