varthabharthi


ಪ್ರಚಲಿತ

ಜನತಂತ್ರಕ್ಕೆ ಎಳ್ಳು ನೀರು ಬಿಡಲು ಹೊರಟವರು

ವಾರ್ತಾ ಭಾರತಿ : 23 Sep, 2019
ಸನತ್ ಕುಮಾರ್ ಬೆಳಗಲಿ

ಮೊದಲು ಕಾಂಗ್ರೆಸ್ ಮುಕ್ತ ಭಾರತದ ಬಗ್ಗೆ ಮಾತಾಡಿದರು. ನಾವು ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಕಾಂಗ್ರೆಸ್ ಮುಕ್ತ ಎಂಬುದು ಪ್ರತಿಪಕ್ಷ ಮುಕ್ತ ಭಾರತದ ಹುನ್ನಾರ ಎಂದು ನಮ್ಮಂಥವರು ಟೀಕಿಸಿದಾಗ ಯಾರೂ ಗಮನಿಸಲಿಲ್ಲ. ಈಗ ಅವರು ತಮ್ಮ ಗುರಿ ಸಾಧನೆಯ ದಿಕ್ಕಿನಲ್ಲಿ ದಾಪುಗಾಲಿಡುತ್ತಾ ಹೊರಟಿದ್ದಾರೆ. ನಾವಿನ್ನೂ ಪತ್ರಿಕಾ ಹೇಳಿಕೆಗಳಿಗೆ, ಸಾಮಾಜಿಕ ಜಾಲತಾಣದ ಸ್ಟೇಟಸ್‌ಗಳಿಗೆ ಸೀಮಿತರಾಗಿ ಉಳಿದಿದ್ದೇವೆ. ನಾವೆಂದರೆ, ದೇಶದ ಜನ. ಜನ ಅಂದರೆ ನಮ್ಮ ರಾಜಕೀಯ ಪಕ್ಷಗಳು. ಆಮೆ ವೇಗದಲ್ಲಿ ಸಾಗಿವೆ. ಎಡಪಂಥೀಯ ಪಕ್ಷಗಳಿಗೂ ಒಂದು ವಿಧದ ಮಂಪರು ಕವಿದಂತೆ ಕಾಣುತ್ತಿದೆ. ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಹೇರಿದಾಗ ವ್ಯಕ್ತವಾದ ಪ್ರತಿರೋಧದ ಅರ್ಧದಷ್ಟೂ ಈಗ ವಿರೋಧ ವ್ಯಕ್ತವಾಗುತ್ತಿಲ್ಲ. ಬದಲಾಗಿ ಇವೆಲ್ಲ ಅವಾಂತರಗಳಿಗೂ ಮೌನ ಬೆಂಬಲ ದೊರಕಿದಂತೆ ಕಾಣುತ್ತಿದೆ.

ನಾಗಪುರದ ಸಂವಿಧಾನೇತರ ಅಧಿಕಾರ ಕೇಂದ್ರದಲ್ಲಿ ಅತ್ಯಂತ ನಾಜೂಕಾಗಿ ಜಾಣತನದಿಂದ ರೂಪುಗೊಳ್ಳುವ ಕಾರ್ಯ ಸೂಚಿಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮೂಲಕ ಮಾತಿನ ಮೂಲಕ ಹೊರಬಿಡಲಾಗುತ್ತಿದೆ. ಇದಾವುದು ಆಕಸ್ಮಿಕವಲ್ಲ. ಇವರಾಡುವ ಪ್ರತಿ ಮಾತಿನ ಹಿಂದೆ ಅವರದ್ದೇ ಕುತರ್ಕವಿದೆ. ತಾವು ತರಲಿರುವ ವಿನಾಶಕಾರಿ ಬದಲಾವಣೆಗಳಿಗೆ ಜನರನ್ನು ಮಾನಸಿಕವಾಗಿ ಅಣಿಗೊಳಿಸುವ ಕಾರ್ಯ ಅತ್ಯಂತ ಚುರುಕಾಗಿ ನಡೆದಿದೆ. ಇದರ ಜೊತೆಗೆ ಕಟೀಲು, ಅನಂತಕುಮಾರ್ ಹೆಗಡೆ, ಈಶ್ವರಪ್ಪ ಇಂಥವರ ಮೂಲಕವೂ ಆಗಾಗ ಒಂದೊಂದೇ ದಾಳಗಳನ್ನು ಉರುಳಿಸಲಾಗುತ್ತಿದೆ. ದೇಶವನ್ನು ಬಾಧಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಜನರು ಚರ್ಚಿಸದಂತೆ ಮಾಡುವ ಮಸಲತ್ತು ಇದರಲ್ಲಿ ಅಡಗಿದೆ.

ಒಂದೇ ದೇಶ, ಒಂದೇ ಧರ್ಮ, ಒಂದೇ ಭಾಷೆ, ಒಂದೇ ಪಕ್ಷ ಮತ್ತು ಒಬ್ಬನೇ ನಾಯಕ ಹೀಗೆ ಬಹುಮುಖಿ ಭಾರತದ ಮೇಲೆ ಹಿಟ್ಲರ್ ಮಾದರಿ ಏಕಚಕ್ರಾಧಿಪತ್ಯ ಹೇರಲು ಹೊರಟವರು. ಹೀಗೆ ಒಂದೊಂದಾಗಿ ದಾಳ ಉರುಳಿಸುತ್ತಿದ್ದಾರೆ. ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ಈಗ ಬಹುಪಕ್ಷೀಯ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಚಟ್ಟ ಕಟ್ಟಲು ಹೊರಟಿದ್ದಾರೆ. ಭಾರತದ ಅಸ್ಮಿತೆಗಾಗಿ ಹಿಂದಿ ರಾಷ್ಟ್ರ ಭಾಷೆಯಾಗಬೇಕೆಂದು ಹೇಳಿಕೆ ನೀಡಿದ ಬೆನ್ನಲ್ಲೇ ಬಹುಪಕ್ಷೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಅಪಸ್ವರ ತೆಗೆದಿದ್ದಾರೆ.

ಭಾಷಾ ಪ್ರಶ್ನೆಯಾಗಲಿ, ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ವಿಷಯವಾಗಲಿ ಇವೆಲ್ಲ ಎಂದೋ ಇತ್ಯರ್ಥವಾಗಿವೆ. ದೇಶ ಸರ್ವ ಸಮ್ಮತವಾಗಿ ಒಪ್ಪಿಕೊಂಡಾಗಿದೆ. ಮತ್ತೆ ಅದನ್ನು ಕೆದಕಿ ರಾಡಿ ಮಾಡುವ ಹುನ್ನಾರದ ಹಿಂದೆ ಏನೋ ದುರುದ್ದೇಶವಿದೆ. ಕ್ರಮೇಣ ಈ ಬಹುಮುಖಿ ಸೆಕ್ಯುಲರ್ ಭಾರತವನ್ನು ಮನುವಾದಿ ಹಿಂದೂ ರಾಷ್ಟ್ರವನ್ನಾಗಿ ಮಾಡುವ ಒಳಸಂಚು ನಡೆದಂತೆ ಕಾಣುತ್ತದೆ.

ದೇಶಕ್ಕೆ ಸ್ವಾತಂತ್ರ ಸಿಕ್ಕಾಗ ಭಾರತದ ಆಡಳಿತ ವ್ಯವಸ್ಥೆ ಯಾವ ಸ್ವರೂಪದಲ್ಲಿರಬೇಕೆಂಬ ಬಗ್ಗೆ ನಮ್ಮ ಸಂವಿಧಾನ ರಚನಾ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆದಿದೆ. ಈ ಬಗ್ಗೆ ವ್ಯಕ್ತವಾದ ಸಂದೇಹಗಳಿಗೆಲ್ಲ. ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರು ಸೂಕ್ತ ಉತ್ತರಗಳನ್ನೂ ನೀಡಿದ್ದಾರೆ. ಹಿಂದೂ ರಾಷ್ಟ್ರದ ಪ್ರಸ್ತಾಪ ಬಂದಾಗ, ಅದನ್ನು ಸ್ಪಷ್ಟವಾಗಿ ತಳ್ಳಿ ಹಾಕಲಾಗಿದೆ. ಎಲ್ಲ ಧರ್ಮ, ಜಾತಿ, ಭಾಷೆ, ಪ್ರದೇಶಗಳ ಜನರು ಹೆಗಲಿಗೆ ಹೆಗಲು ಕೊಟ್ಟು ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡಿದ್ದಾರೆ. ಅನೇಕ ಶತಮಾನಗಳ ಕಾಲ ಅನೇಕ ಧರ್ಮಗಳ ಜನರು ಭಾರತದಲ್ಲಿ ಒಟ್ಟಿಗೆ ಬಾಳುತ್ತ ಬಂದಿದ್ದಾರೆ. ಎಲ್ಲರೂ ಕೂಡಿ ಭಾರತವೆಂಬ ದೇಶವನ್ನು ಕಟ್ಟಿದ್ದಾರೆ. ಹೀಗಾಗಿ ನಮಗೆ ಹಿಂದೂ ರಾಷ್ಟ್ರ, ಇಸ್ಲಾಂ ರಾಷ್ಟ್ರ, ಕ್ರೈಸ್ತ ರಾಷ್ಟ್ರ, ಸಿಖ್ ರಾಷ್ಟ್ರ ಯಾವುದೂ ಬೇಡ ನಮಗೆ ಧರ್ಮ ನಿರಪೇಕ್ಷ ರಾಷ್ಟ್ರ ಸೂಕ್ತ ಎಂಬ ಒಮ್ಮತ ಸಂವಿಧಾನ ರಚನಾ ಸಮಿತಿಯ ಸಭೆಯಲ್ಲಿ ಮೂಡಿದೆ.

ಭಾರತಕ್ಕೆ ಸಂಸದೀಯ ಮಾದರಿ ಪ್ರಜಾಪ್ರಭುತ್ವ ವ್ಯವಸ್ಥೆ ಸೂಕ್ತವೋ ಅಥವಾ ಅಧ್ಯಕ್ಷ ಮಾದರಿಯ ಪ್ರಜಾಪ್ರಭುತ್ವ ವ್ಯವಸ್ಥೆ ಸೂಕ್ತವೋ ಎಂಬ ಪ್ರಶ್ನೆ ಸಂವಿಧಾನ ರಚನಾ ಸಮಿತಿಯ ಸಭೆಯಲ್ಲಿ ಎದುರಾದಾಗ ನಮ್ಮ ದೇಶದ ಬಹುತ್ವದ ಸ್ವರೂಪಕ್ಕೆ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯೇ ಹೆಚ್ಚು ಸೂಕ್ತ ಎಂದು ಒಮ್ಮತದ ನಿರ್ಧಾರಕ್ಕೆ ಬರಲಾಯಿತು. ಈ ಸಂದರ್ಭದಲ್ಲಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಹೇಳಿದ ಮಾತು ಗಮನಾರ್ಹವಾಗಿದೆ. ‘ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮ ಪರಂಪರೆಗೆ ಪೂರಕವಾಗಿದೆ. ಜಗತ್ತಿನ ಅನೇಕ ದೇಶಗಳಲ್ಲಿ ಅದು ಯಶಸ್ವಿಯಾಗಿದೆ. ಭಾರತದ ಸಂದರ್ಭಕ್ಕೆ ಸೂಕ್ತವಾಗಿ ಮಾರ್ಪಾಡು ಮಾಡಿಕೊಂಡು ಅದನ್ನು ಒಪ್ಪಿಕೊಂಡೆವು’ ಎಂದು ನೆಹರೂ ಹೇಳಿದರು.

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು 1950ರಲ್ಲಿ ನಾವು ಒಪ್ಪಿಕೊಂಡ ನಂತರ ಈ ದೇಶದಲ್ಲಿ ಯಾವುದೇ ಗಲಾಟೆ, ಹಿಂಸಾಚಾರವಿಲ್ಲದೇ ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಆಗಾಗ ಚುನಾವಣೆಗಳು ನಡೆದಿವೆ. ವಿವಿಧ ಸೈದ್ಧಾಂತಿಕ ಹಿನ್ನೆಲೆಯ ಪಕ್ಷಗಳು ಅಧಿಕಾರಕ್ಕೆ ಬಂದಿವೆ, ಹೋಗಿವೆ. ಅಧಿಕಾರ ಹಸ್ತಾಂತರವೂ ಸುಗಮವಾಗಿ ನಡೆದಿದೆ. ನಮ್ಮ ಅಕ್ಕಪಕ್ಕದ ರಾಷ್ಟ್ರಗಳಲ್ಲಿ ಮಾತ್ರವಲ್ಲ ಜಗತ್ತಿನ ಅನೇಕ ಹೊಸದಾಗಿ ಸ್ವಾತಂತ್ರ ಪಡೆದ ದೇಶಗಳಲ್ಲಿ ಪ್ರಜಾಪ್ರಭುತ್ವದ ಪ್ರಯೋಗ ವಿಫಲವಾಗಿದೆ. ಆದರೆ ಹಲವಾರು ಧರ್ಮಗಳು, ಭಾಷೆಗಳು, ಜನಾಂಗಗಳು ಮತ್ತು ಸಂಸ್ಕೃತಿಗಳು ಇರುವ ಈ ದೇಶದಲ್ಲಿ ಅದು ಯಶಸ್ವಿಯಾಗಿರುವುದಕ್ಕೆ ನಾವು ಹೆಮ್ಮೆ ಪಡಬೇಕಿದೆ.

ಭಾರತಕ್ಕೆ ಪ್ರಜಾಪ್ರಭುತ್ವ ಪದ್ಧತಿ ಹೊಸದಾಗಿ ಬಂದರೂ ಅದೇ ಮಾದರಿಯ ಪ್ರಯೋಗಗಳು ಈ ದೇಶದಲ್ಲಿ ನಡೆದಿವೆ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಹಾಗೂ ಶರಣರು ನಿರ್ಮಿಸಿದ ಅನುಭವ ಮಂಟಪ ಕೂಡ ಪ್ರಜಾಪ್ರಭುತ್ವದ ಇನ್ನೊಂದು ರೂಪವಲ್ಲದೇ ಬೇರೇನೂ ಅಲ್ಲ. ಈಗ ನಮ್ಮ ಶಾಸನ ಸಭೆಗಳಂತೆ ಅನುಭವ ಮಂಟಪದಲ್ಲೂ ಜಾತಿಭೇದ, ಲಿಂಗ ಭೇದವಿರಲಿಲ್ಲ. ಅಕ್ಕಮಹಾದೇವಿ, ಮಾದಾರ ಚೆನ್ನಯ್ಯ, ಅಲ್ಲಮಪ್ರಭು, ಹಡಪದ ಅಪ್ಪಣ್ಣ, ಬಸವಣ್ಣ ಒಟ್ಟಿಗೆ ಕೂತು ಚರ್ಚಿಸುತ್ತಿದ್ದರು. ಅಂತಲೇ ನಮ್ಮ ಪರಂಪರೆಯ ಭಾಗವಾದ ಸಂಸದೀಯ ಜನತಂತ್ರ ವ್ಯವಸ್ಥೆಯನ್ನು ದೇಶ ಒಪ್ಪಿಕೊಂಡಿದೆ

ಐದು ವರ್ಷ ಅಧಿಕಾರ ನಡೆಸಲು ಶೇ.50ರಷ್ಟು ಜನರಿಂದ ಜನಾದೇಶ ಪಡೆದವರು ಜನಸಾಮಾನ್ಯರ ದೈನಂದಿನ ನೋವು ಸಂಕಟಗಳಿಗೆ ಸ್ಪಂದಿಸದೆ ಭಾರತ ಒಮ್ಮತದಿಂದ ಒಪ್ಪಿಕೊಂಡ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಬದಲಾವಣೆ ಮಾತಾಡುವ ಕುಚೇಷ್ಟೆಗೆ ಕೈ ಹಾಕಬಾರದು.

ಪ್ರಜಾಪ್ರಭುತ್ವದ ಮೇಲಿನ ಇವರ ದ್ವೇಷ ಹೊಸದಲ್ಲ. ಅದಕ್ಕೆ ಏಳೆಂಟು ದಶಕಗಳ ಇತಿಹಾಸವಿದೆ. ಆರೆಸ್ಸೆಸ್‌ನ ಎರಡನೇ ಸರ ಸಂಘಚಾಲಕರಾಗಿದ್ದ ಮಾಧವ ಸದಾಶಿವ ಗೋಳ್ವಾಲ್ಕರ್ ಅವರು ತಮ್ಮ ಒಂದು ಪುಸ್ತಕದಲ್ಲಿ ‘ಪ್ರಜಾಪ್ರಭುತ್ವ ಭಾರತದ ನೆಲದ್ದಲ್ಲ, ಅದು ಭಾರತದ ಸಂಸ್ಕೃತಿಗೆ ಹೊಂದಿಕೊಳ್ಳುವುದಿಲ್ಲ’ ಎಂದು ಟೀಕಿಸಿದ್ದಾರೆ. ಈಗ ಅವರದ್ದೇ ಪಕ್ಷದ ಶಿಷ್ಯರು ಅಧಿಕಾರದಲ್ಲಿ ಇರುವುದರಿಂದ ಪ್ರಜಾಪ್ರಭುತ್ವ ಮುಗಿಸಲು ಹೊರಟಿದ್ದಾರೆ

ಈ ಫ್ಯಾಶಿಸ್ಟ್ ಹುನ್ನಾರವನ್ನು ತಡೆಯಬೇಕಿದ್ದರೆ ಎಲ್ಲ ಪ್ರಜಾಪ್ರಭುತ್ವವಾದಿ ಶಕ್ತಿಗಳು ಒಂದಾಗಬೇಕು. ಎಡಪಂಥೀಯ ಪಕ್ಷಗಳು ತಮ್ಮ ಪ್ರತ್ಯೇಕತೆಯ ಬಿಲಗಳಿಂದ ಹೊರಬಂದು ಒಂದಾಗಬೇಕು. ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಂಘಟನೆಗಳು ಮಾತ್ರವಲ್ಲ ಕೋಮುವಾದ, ಮನುವಾದವನ್ನು ವಿರೋಧಿಸುವ ಎಲ್ಲ ಜಾತಿ, ಧರ್ಮಗಳ ಜನ ಒಂದಾಗಬೇಕು. ತಾವು ಹೊರಟ ದಾರಿಯೇ ಸರಿಯಾದದ್ದು ಎಂಬ ಶ್ರೇಷ್ಠತೆಯ ವ್ಯಸನದಿಂದ ಹೊರಗೆ ಬರಬೇಕು. ಆಗ ಮಾತ್ರ ದೇಶದ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ವ್ಯವಸ್ಥೆ ಕಾಪಾಡಿಕೊಳ್ಳಲು ಸಾಧ್ಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)