varthabharthiರಾಷ್ಟ್ರೀಯ

ಡಿಕೆಶಿಯನ್ನು ಭೇಟಿಯಾಗದ ಕಾಂಗ್ರೆಸ್ ಅಧಿನಾಯಕಿ, ಮಾಜಿ ಪಿಎಂ ಡಾ. ಸಿಂಗ್

ವಾರ್ತಾ ಭಾರತಿ : 23 Sep, 2019

ಹೊಸದಿಲ್ಲಿ, ಸೆ.23: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ತಿಹಾರ್ ಜೈಲಿಗೆ ಸೋಮವಾರ ತೆರಳಿ ಮಾಜಿ ಸಚಿವ  ಪಿ. ಚಿದಂಬರಂ ಅವರನ್ನು ಭೇಟಿಯಾದರು.  ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರು ನ್ಯಾಯಾಂಗ ಬಂಧನದಲ್ಲಿದ್ದ ತಿಹಾರ್ ಜೈಲಿನಲ್ಲಿದ್ದಾರೆ. ಇದೇ ಜೈಲಿನಲ್ಲಿರುವ  ಕರ್ನಾಟಕದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ.

ಜೈಲಿನಲ್ಲಿ ಒಬ್ಬರನ್ನು ಭೇಟಿಯಾಗಲು ಮಾತ್ರ  ಅವಕಾಶ ಇದೆ. ಈ ಕಾರಣದಿಂದಾಗಿ ಚಿದಂಬರಂ ಅವರನ್ನು ಮಾತ್ರ ಸೋನಿಯಾ ಗಾಂಧಿ ಮತ್ತು ಡಾ .ಸಿಂಗ್ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಲು ಜೈಲು ಅಧಿಕಾರಿಗಳು ಅವಕಾಶ ನೀಡಲಿಲ್ಲ.

ಐಎನ್‌ಎಕ್ಸ್ ಮೀಡಿಯಾ ಅವ್ಯವಹಾರ  ಪ್ರಕರಣದಲ್ಲಿ ಚಿದಂಬರಂ ಅವರನ್ನು ಆಗಸ್ಟ್ 21 ರಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿತ್ತು. ಚಿದಂಬರಂ ಅವರ ಪುತ್ರ ಕಾರ್ತಿ ಕೂಡ ಸೋಮವಾರ ಅವರನ್ನು ಜೈಲಿನಲ್ಲಿ ಭೇಟಿ ಮಾಡಿದರು.

 ಪಿ ಚಿದಂಬರಂ ಅವರ ವಕೀಲರು ದಿಲ್ಲಿ  ಹೈಕೋರ್ಟ್‌ಗೆ ಜಾಮೀನು ನೀಡುವಂತೆ  ಅರ್ಜಿ ಸಲ್ಲಿಸಿದ್ದಾರೆ. ಆದಾಗ್ಯೂ, ಸಿಬಿಐ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂಗೆ ಜಾಮೀನು ನೀಡುವುದನ್ನು ವಿರೋಧಿಸಿದೆ. ಈ ವಿಚಾರ ಇಂದು ವಿಚಾರಣೆಗೆ ಬರಲಿದೆ. ಐಎನ್‌ಎಕ್ಸ್ ಮೀಡಿಯಾ ಅವ್ಯವಹಾರ   ಪ್ರಕರಣದಲ್ಲಿ ಚಿದಂಬರಂ ಅವರನ್ನು ಸಿಬಿಐ ಮತ್ತು ಈ.ಡಿ  ಅಧಿಕಾರಿಗಳು  ತನಿಖೆ ನಡೆಸುತ್ತಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)