varthabharthi


ರಾಷ್ಟ್ರೀಯ

ಗೋಹತ್ಯೆ ಆರೋಪ: ಗುಂಪಿನಿಂದ ವ್ಯಕ್ತಿಯ ಬರ್ಬರ ಹತ್ಯೆ

ವಾರ್ತಾ ಭಾರತಿ : 23 Sep, 2019

ರಾಂಚಿ, ಸೆ.23: ಗೋಹತ್ಯೆ ಮಾಡಿದ ಆರೋಪದಲ್ಲಿ ಉದ್ರಿಕ್ತರ ಗುಂಪು, ವ್ಯಕ್ತಿಯೊಬ್ಬನನ್ನು ಥಳಿಸಿ ಕೊಲೆ ಮಾಡಿದ ಘಟನೆ ಜಾರ್ಖಂಡ್ ರಾಜ್ಯದ ಜಲತಂಗ ಎಂಬ ಗ್ರಾಮದಲ್ಲಿ ರವಿವಾರ ನಡೆದಿದೆ. ಘಟನೆಯಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಗ್ರಾಮದಲ್ಲಿ ರವಿವಾರ ಅಕ್ರಮವಾಗಿ ಗೋಹತ್ಯೆ ನಡೆದಿದೆ ಎಂಬ ಮಾಹಿತಿ ಗ್ರಾಮಸ್ಥರಿಗೆ ಲಭಿಸಿತ್ತು. ಹತ್ಯೆ ನಡೆದಿದೆ ಎನ್ನಲಾದ ಸ್ಥಳಕ್ಕೆ ದೊಡ್ಡ ಗುಂಪು ಬಂದಾಗ ಮೂವರು ಹಸುವಿನ ಕಳೇಬರದ ಜತೆಗೆ ಇದ್ದರೆನ್ನಲಾಗಿದೆ. ಈ ವೇಳೆ ಉದ್ರಿಕ್ತ ಗುಂಪು ಮೂವರ ಮೇಲೂ ಹಲ್ಲೆ ಮಾಡಿತು ಎಂದು ಮೂಲಗಳು ಹೇಳಿವೆ.

ಪೊಲೀಸರು ಸ್ಥಳಕ್ಕೆ ಧಾವಿಸಿ ಮೂವರನ್ನೂ ಪಾರು ಮಾಡಿ ರಾಜೇಂದ್ರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಚಿಕಿತ್ಸೆಗೆ ಕರೆದೊಯ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಒಬ್ಬ ಮೃತಪಟ್ಟಿದ್ದಾನೆ. ಈ ಸಂಬಂಧ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಎ.ವಿ.ಹೋಮ್ಕರ್ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)