varthabharthiಕರಾವಳಿ

ಸಜಿಪನಡು ಗ್ರಾಮ ಪಂಚಾಯತ್‍ನ ಕೆಡಿಪಿ ಸಭೆ

ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳಿಗೆ ಪತ್ರ: ಅಧ್ಯಕ್ಷ ನಾಸಿರ್ ಸಜಿಪ

ವಾರ್ತಾ ಭಾರತಿ : 23 Sep, 2019

ಬಂಟ್ವಾಳ, ಸೆ. 23: ಬಂಟ್ವಾಳ ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಸಜಿಪನಡು ಗ್ರಾಮ ಪಂಚಾಯತ್‍ನ ಗ್ರಾಮ ಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶ ಕಾರ್ಯಕ್ರಮ) ಸೇರಿದಂತೆ ಮೊದಲ ಕೆಡಿಪಿ ಸಭೆಗೆ ಪ್ರಮುಖ ಇಲಾಖೆಗಳು ಗೈರು ಹಾಜರಿಯ ಬಗ್ಗೆ ಅಧ್ಯಕ್ಷ ಮುಹಮ್ಮದ್ ನಾಸೀರ್ ಸಜಿಪ ಅಸಮಧಾನ ವ್ಯಕ್ತಪಡಿಸಿ, ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ಪಿಡಿಒ ಅವರಿಗೆ ಸೂಚಿಸಿದರು.

ಸೋಮವಾರ ಸಜಿಪನಡು ಗ್ರಾಮ ಪಂಚಾಯತ್‍ನ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮ ಪಂಚಾಯತ್ ಸ್ಥಳೀಯವಾಗಿ ಸರಕಾರ ಇದ್ದಂತೆ, ಅಧಿಕಾರಿಗಳು ಗ್ರಾಪಂಯನ್ನು ನಿರ್ಲಕ್ಷ ಸಲ್ಲದು. ಸರಕಾರ ವಿವಿಧ ಯೋಜನೆ, ಸವಲತ್ತುಗಳ ಬಗ್ಗೆ ಗ್ರಾಪಂ ಹಾಗೂ ಜನರಿಗೆ ಮಾಹಿತಿ ನೀಡುವುದು ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಪಂಚಾಯತ್‍ರಾಜ್ ಕಾಯಿದೆಯಡಿ ಸರಕಾರವೇ ಸೂಚಿಸಿದಂತೆ ಗ್ರಾಮ ಮಟ್ಟದ ಅನುಷ್ಠಾನಗೊಂಡಿರುವ ವಿವಿಧ ಅಭಿವೃದ್ಧಿ ಕಾರ್ಯಗಳು,  ಜನರ ಸಮಸ್ಯೆಗಳ ಕುರಿತಾಗಿ ಆಲಿಸಲು ಹಾಗೂ ಅದಕ್ಕೆ ಪರಿಹಾರೋಪಾಯ ಕಂಡುಕೊಳ್ಳಲು ಈ ಸಭೆಯನ್ನು ಆಯೋಜಿಸಲಾಗಿದೆ. ಈ ಸಂಬಂಧ ಎಲ್ಲ ಇಲಾಖಾ ಅಧಿಕಾರಿಗಳಿಗೆ ಪಂಚಾಯತ್‍ನಿಂದಲೇ ನೋಟಿಸ್ ರವಾನಿಸುವುದರ ಜೊತೆಗೆ ದೂರವಾಣಿ ಕರೆ ಮಾಡಿ ಆಹ್ವಾನಿಸಿದ್ದರೂ ಕೇವಲ 9 ಇಲಾಖಾ ಅಧಿಕಾರಿಗಳು ಹಾಜರಾಗಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಅಭಿವೃದ್ಧಿ ಕಾರ್ಯಗಳು:
ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಒಟ್ಟು 17 ಕಾಮಗಾರಿಗಳ ಪೈಕಿ 13 ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದವು ಕಾಮಗಾರಿಗಳು ಪ್ರಗತಿಯಲ್ಲಿವೆ. ಕೇಂದ್ರ ಸರಕಾರದ 14ನೇ ಹಣಕಾಸು ಯೋಜನೆಯಡಿ 24 ಕಾಮಗಾರಿಗಳ ಪೈಕಿ 6 ಪೂರ್ಣಗೊಂಡಿದೆ. ವಸತಿ ಯೋಜನೆಯಡಿ 8 ಮನೆಗಳ ಪೈಕಿ 6 ಮನೆಗಳನ್ನು ಪೂರ್ಣಗೊಳಿಸಿದ್ದು, 2 ಪ್ರಗತಿಯಲ್ಲಿವೆ ಎಂದು ಅಧ್ಯಕ್ಷ ಮುಹಮ್ಮದ್ ನಾಸಿರ್ ಸಭೆಗೆ ಮಾಹಿತಿ ನೀಡಿದರು.

ಇದೇ ವೇಳೆ ಗ್ರಾಮಕರಣಿಕ ಪ್ರಕಾಶ್ ಅವರು ಕಂದಾಯ ಇಲಾಖೆಗೆ ಸಂಬಂಧಿಸಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸಂಭವಿಸಿದ ನೆರೆ ಹಾನಿಯಿಂದ 27 ಸಂತ್ರಸ್ತರಿಗೆ ಪರಿಹಾರ ನೀಡಲಾಗಿದ್ದು, 4 ಸಂತ್ರಸ್ತರ ಅರ್ಜಿಗಳು ವಿಲೇವಾರಿ ಬಾಕಿಯಿದ್ದು, ಈ ಬಗ್ಗೆ ತಹಶೀಲ್ದಾರ್ ಅವರಿಗೆ ವರದಿ ನೀಡಲಾಗಿದೆ. ಬೆಳೆ ನಷ್ಟಕ್ಕೆ ಸಂಬಂಧಿಸಿ ಸರಕಾರವೇ ನೇಮಕಾತಿಗೊಳಿಸಿದ ಅಧಿಕಾರಿಗಳ ತಂಡ ಸಮೀಕ್ಷೆ ಕಾರ್ಯ ನಡೆಸುತ್ತಿದೆ. ಈ ಸಂದರ್ಭದಲ್ಲಿ ಸಂತ್ರಸ್ತರು ಸಮೀಕ್ಷಾ ತಂಡಕ್ಕೆ ಪೂರ್ಣ ವಿವರ ನೀಡುವ ನಿಟ್ಟಿನಲ್ಲಿ ಪಂಚಾಯತ್ ಸಂಬಂಧಿಸಿದವರಿಗೆ ಸೂಚನೆ ನೀಡುವಂತೆ ಮನವಿ ಮಾಡಿದರು. ಬಂಟ್ವಾಳ ತಾಲೂಕಿನಲ್ಲಿ ಕೃಷಿ ದಾಸ್ತಾನು ಕೊಠಡಿಯಿಲ್ಲ ಎಂದು ಅಧ್ಯಕ್ಷ ನಾಸಿರ್ ಅವರ ಪ್ರಶ್ನೆಗೆ ಕೃಷಿ ಅಧಿಕಾರಿ ನೀಡಿದರು. 

ಸಜೀಪನಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 9, 10ನೇ ತರಗತಿಯಲ್ಲಿ 150 ವಿದ್ಯಾರ್ಥಿಗಳಿದ್ದು, ಈ ಪೈಕಿ 10ನೇ ತರಗತಿಯ ಮೂವರು ವಿದ್ಯಾರ್ಥಿಗಳು ಶಾಲೆಗೆ ನಿರಂತರ ಗೈರು ಹಾಜರಿಯಾಗುತ್ತಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾರು ಅಧ್ಯಕ್ಷರ ಗಮನಕ್ಕೆ ತಂದರು. ಈ ಬಗ್ಗೆ ಮಕ್ಕಳ ಮನೆಗೆ ಭೇಟಿ ನೀಡಿ ಮನವೋಲಿಸುವ ಕಾರ್ಯ ನಡೆಸಲಾಗಿದ್ದಾರೂ ಅದು ಫಲಕಾರಿಯಾಗಲಿಲ್ಲ. ಈ ನಿಟ್ಟಿನಲ್ಲಿ ಪಂಚಾಯತ್ ವತಿಯಿಂದ ಮನೆಯ ಪೋಷಕರೊಂದಿಗೆ ಮಾತುಕತೆ ನಡೆಸಿ ಮರಳಿ ಶಾಲೆಗೆ ಮುಂದಾಗುವಂತೆ ಅಧ್ಯಕ್ಷರಲ್ಲಿ ಮನವಿ ಮಾಡಿಕೊಂಡರು. ಹಾಗೇಯೇ ಶಾಲೆಗೆ ಸಾಮಾಗ್ರಿಗಳನ್ನು ದಾಸ್ತಾನು ಮಾಡುವ ನಿಟ್ಟಿನಲ್ಲಿ ದಾಸ್ತಾನು ಕೊಠಡಿಯ ಅವಶ್ಯಕತೆಯಿದೆ. ವಾರ್ಷಿಕೋತ್ಸವ ಹಾಗೂ ಕ್ರೀಡೋತ್ಸವವನ್ನು ಆಚರಿಸಬೇಕೆಂಬ ವಿದ್ಯಾರ್ಥಿಗಳು ಬೇಡಿಕೆಯನ್ನು ಮುಂದಿಟ್ಟಿದ್ದಾರೆ ಸಭೆಗೆ ತಿಳಿಸಿದಾಗ, ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಈ ಬಗ್ಗೆ ಎಸ್ಡಿಎಂಸಿಯಲ್ಲಿ ಚರ್ಚೆ ಮಾಡಲಾಗುವುದು. ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ನಿಮ್ಮಿಂದ ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು.

ಶೈಕ್ಷಣಿಕವಾಗಿ ಅರ್ಧವಾರ್ಷಿಕವಾದರೂ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ, ಸಾಕ್ಸ್ ವಿತರಣೆಯಾದಾಗ ಬಗ್ಗೆ ಅಧ್ಯಕ್ಷರು ಅತೃಪ್ತಿ ವ್ಯಕ್ತಪಡಿಸಿ, ಮುಂದಿನ ವರ್ಷ ನೀಡುವಂತೆ ಗರಂ ಆದರು. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಅವರು ಸೈಕಲ್ ವಿತರಣೆಯ ವೇಳೆ ಗುಣಮಟ್ಟವನ್ನು ಪರಿಶೀಲಿಸುವಂತೆ ಸೂಚಿಸಿದರು.

3 ಶಂಕಿತ ಡೆಂಗ್ ಪತ್ತೆ: ಸಜೀಪನಡು ಗ್ರಾಮದಲ್ಲಿ ಮೂರು ಶಂಕಿತ ಡೆಂಗ್ ಪ್ರಕರಣಗಳು (ಎಪ್ರಿಲ್-ಸೆಪ್ಟಂಬರ್) ಪತ್ತೆಯಾಗಿವೆ. ಈ ನಿಟ್ಟಿನಲ್ಲಿ ಮುಂಜಾಗೃತ ಕ್ರಮವಾಗಿ ಸ್ವಚ್ಛತಾ ಕಾರ್ಯ ಹಾಗೂ ಫಾಂಗಿಂಗ್ ಮಾಡಲಾಗಿದೆ. ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಬರುತ್ತಿದ್ದು, ಬೆರಳೆಣಿಕೆ ಕಡೆಗಳಲ್ಲಿ ತ್ಯಾಜ್ಯಗಳು ಅಸ್ವಚ್ಛತೆ ಕಂಡುಬರುತ್ತಿದೆ ಎಂದು ಪ್ರಾಥಮಿಕ ಆರೋಗ್ಯ ಇಲಾಖೆ ಆರೋಗ್ಯ ಸಹಾಯಕಿ ಮಾಹಿತಿ ನೀಡಿದರು. 

ಸಭೆಯಲ್ಲಿ ಹಾಜರಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಂಥಾಲಯ, ಮೆಸ್ಕಾಂ, ಪಶುಸಂಗೋಪಣೆ ಇಲಾಖಾ ಅಧಿಕಾರಿಗಳು ಇಲಾಖಾ ಅಭಿವೃದ್ಧಿ ಹಾಗೂ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷತೆ ಸುನಿತಾ ಶಾಂತಿ ಮೋರೆಸ್ ಹಾಜರಿದ್ದರು. ಪಿಡಿಒ ಶಿವಗೊಂಡಪ್ಪ ಬಿರಾದಾರ್ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿ ಮುಝಮ್ಮಿಲ್ ಸಹಕರಿಸಿದರು.

ವಿವಿಧ ಇಲಾಖೆಗಳು ಸಭೆಗೆ ಗೈರು: ಸಜಿಪನಡು ಗ್ರಾಪಂ ಕೆಡಿಪಿ ಸಭೆಗೆ ಪಂಚಾಯತ್‍ನಿಂದ ಆಹ್ವಾನಿಸಲಾದ ಇಲಾಖೆಗಳ ಪೈಕಿ ತೋಟಗಾರಿಕೆ, ಸಾಮಾಜಿಕ ಅರಣ್ಯ, ಮೀನುಗಾರಿಕೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಆಹಾರ ನಾಗರಿಕ ಸರಬರಾಜು ಪೂರೈಕಾ ಇಲಾಖೆ, ಸಣ್ಣ ನಿರಾವರಿ ಇಲಾಖೆ, ಸಮಾಜ ಕಲ್ಯಾಣ, ಪ್ರವಾಸೋದ್ಯಮ ಇಲಾಖೆಗಳು ಗೈರು ಹಾಜರಾಗಿದ್ದವು.

ಮುಗಿಯದ ಸರ್ವರ್ ಸಮಸ್ಯೆ: ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಚೀಟಿದಾರರು ಪಡಿತರ ಸಾಮಗ್ರಿಗಳನ್ನು ಪಡೆಯಲು ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಆಗ ಪಡಿತರದಾರರು ನಮ್ಮ ಮೇಲೆಯೇ ರೇಗಿ ಬೀಳುತ್ತಿದ್ದು, ಅವರಿಂದ ನಿಂದನೆಯ ಮಾತುಗಳನ್ನು ಕೇಳಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂದು ನ್ಯಾಯಬೆಲೆ ಅಂಗಡಿಗಳ ಮಾಲಿಕರು ಸಭೆಗೆ ದೂರಿಕೊಂಡರು. ತೂಕ ಹಾಗೂ ಸಮಯ ಪರಿಪಾಲನೆಯ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಈ ಬಗ್ಗೆ ತಾವು ಗಮನ ಹರಿಸುವಂತೆ ಅಧ್ಯಕ್ಷ ನಾಸಿರ್ ಸಜಿಪ ನ್ಯಾಯಬೆಲೆ ಅಂಗಡಿ ಮಾಲಿಕರಿಗೆ ಸೂಚಿಸಿದರು.

ಜಂತುಹುಳ ನಿವಾರಣಾ ಅಭಿಯಾನದ ಪ್ರಯುಕ್ತ ಪ್ರತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಜಂತುಹುಳ ನಿವಾರಣಾ ವಿತರಿಸಲಾಗುತ್ತಿದೆ. ಆದರೆ, ಮಾತ್ರೆ ವಿತರಣೆಯ ಬಗ್ಗೆ ಕೆಲ ಪೋಷಕರಿಗೆ ಅನುಮಾನಗಳಿವೆ. ಈ ಬಗ್ಗೆ ಯಾವುದೇ ಆತಂಕಗಳು ಬೇಡ. ಈ ಮಾತ್ರೆಯನ್ನು ಮಕ್ಕಳೂ ಖಡ್ಡಾಯ ಸೇವಿಸಬೇಕು. ಈ ನಿಟ್ಟಿನಲ್ಲಿ ಪಂಚಾಯುತ್ ವತಿಯೀಮದ ಜಾಗೃತಿ ಮೂಡಿಸುವ ಕಾರ್ಯವಾಗಬೇಕಾಗಿದೆ ಎಂದು ಆರೋಗ್ಯ ಸಹಾಯಕಿ ಅವರು ಅಧ್ಯಕ್ಷರಲ್ಲಿ ಕೋರಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)