varthabharthi

ಕರಾವಳಿ

ಉಡುಪಿ: ಬಾಬಾ ರಾಮದೇವ್‌ರಿಂದ 5ದಿನಗಳ ಯೋಗ ಶಿಬಿರ

ವಾರ್ತಾ ಭಾರತಿ : 23 Sep, 2019

ಉಡುಪಿ, ಸೆ.23:ಹರಿದ್ವಾರದ ಪತಂಜಲಿ ಯೋಗ ಪೀಠ ಹಾಗೂ ಉಡುಪಿ ಪರ್ಯಾಯ ಶ್ರೀಪಲಿಮಾರು ಮಠಗಳ ಜಂಟಿ ಆಶ್ರಯದಲ್ಲಿ  ಯೋಗಗುರು ಬಾಬಾ ರಾಮದೇವ್ ಅವರಿಂದ ಐದು ದಿನಗಳ ಯೋಗ ಶಿಬಿರವನ್ನು ಉಡುಪಿಯಲ್ಲಿ ಆಯೋಜಿಸಲಾಗಿದೆ ಎಂದು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಶ್ರೀಕೃಷ್ಣ ಮಠದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಮುಂದಿನ ಡಿ.3ರಿಂದ 7ರವರೆಗೆ ಶ್ರೀಕೃಷ್ಣ ಮಠದ ವಿಶಾಲವಾದ ಪಾರ್ಕಿಂಗ್ ಪ್ರದೇಶದಲ್ಲಿ ಪ್ರತಿದಿನ ಮುಂಜಾನೆ 5:00ರಿಂದ 7:00ರವರೆಗೆ ಈ ಯೋಗ ಶಿಬಿರ ನಡೆಯಲಿದ್ದು, ಸ್ವತಹ ಬಾಬಾ ರಾಮದೇವ್ ಅವರೇ ಈ ಶಿಬಿರವನ್ನು ನಡೆಸಿಕೊಡಲಿದ್ದಾರೆ ಎಂದು ಸ್ವಾಮೀಜಿ ತಿಳಿಸಿದರು.

ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ ನಡೆಯುವ ಈ ಶಿಬಿರ ಸಂಪೂರ್ಣ ಉಚಿತವಾಗಿರುತ್ತದೆ. ಪ್ರತಿದಿನ ಈ ಶಿಬಿರದಲ್ಲಿ 30,000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ. 2011ರಲ್ಲಿ ಬಾಬಾ ರಾಮದೇವ್, ಉಡುಪಿಯ ಎಂಜಿಎಂ ಕಾಲೇಜು ಮೈದಾನದಲ್ಲಿ ಒಂದು ದಿನದ ಯೋಗ ಶಿಬಿರವನ್ನು ನಡೆಸಿ ಕೊಟ್ಟಿದ್ದರು ಎಂದು ಪಲಿಮಾರುಶ್ರೀ ತಿಳಿಸಿದರು.

ಬಾಬಾ ರಾಮದೇವ್ ಅವರು ದಶಕಗಳಿಂದ ಪತಂಜಲಿ ಯೋಗ ಪೀಠದ ಮೂಲಕ ವಿಶ್ವದಲ್ಲಿ ಯೋಗ, ಪ್ರಾಣಾಯಾಮ ಹಾಗೂ ಸ್ವದೇಶಿ ಅಭಿಯಾನ ಕ್ರಾಂತಿಯನ್ನು ಮೂಡಿಸಿದ್ದಾರೆ. ಉಡುಪಿಯಲ್ಲಿ ಮೊದಲ ಬಾರಿ ಸತತ ಐದು ದಿನಗಳ ಕಾಲ ನಡೆಯುವ ಯೋಗ ಶಿಬಿರದ ಸಂದರ್ಭದಲ್ಲಿ ಬಾಬಾರನ್ನು ಸನ್ಮಾನಿಸಲಾಗುವುದು ಎಂದು ಅವರು ವಿವರಿಸಿದರು.

ಈ ಶಿಬಿರಕ್ಕೆ ಪೂರ್ವಭಾವಿಯಾಗಿ ಉಡುಪಿ ಜಿಲ್ಲೆಯ ಗ್ರಾಮಗ್ರಾಮಗಳಲ್ಲಿ ಯೋಗ ಜಾಗೃತಿ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು. ಜಿಲ್ಲೆಯಲ್ಲಿ ಒಟ್ಟು 101 ಇಂಥ ಯೋಗ ಶಿಬಿರಗಳು ಆಯೋಜನೆಗೊಳ್ಳುವ ನಿರೀಕ್ಷೆ ಇದೆ ಎಂದವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪತಂಜಲಿ ಯೋಗ ಪೀಠದ ರಾಜ್ಯ ಪ್ರಭಾರಿ ಯೋಗಾಚಾರ್ಯ ಭವರಲಾಲಾಜಿ ಆರ್ಯ, ಪತಂಜಲಿ ಯೋಗಪೀಠದ ಮಹಿಳಾ ರಾಜ್ಯ ಪ್ರಭಾರಿ ಸುಜಾತಾ ಮಾರ್ಲ, ರಾಜ್ಯ ಸಹಪ್ರಭಾರಿ ಡಾ. ಜ್ಞಾನೇಶ್ವರ ನಾಯಕ್, ಜಿಲ್ಲಾ ಸಂರಕ್ಷಕ ಬಾಲಾಜಿ ರಾಘವೇಂದ್ರ ಆಚಾರ್ಯ, ಪತಂಜಲಿ ಯೋಗಪೀಠದ ಜಿಲ್ಲಾಧ್ಯಕ್ಷ ಕರಂಬಳ್ಳಿ ಶಿವರಾಮ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಅಜಿತ್ ಶೆಟ್ಟಿ, ಶ್ರೀಮಠದ ಆಡಳಿತಾಧಿಕಾರಿ ಪಿ.ಆರ್.ಪ್ರಹ್ಲಾದ ಆಚಾರ್ಯ ಕಡೆಕಾರ್ ಶ್ರೀಶಭಟ್ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)