varthabharthiಅಂತಾರಾಷ್ಟ್ರೀಯ

ವಿಡಿಯೋ ವೈರಲ್

77 ಜನರನ್ನು ಕೊಂದ ಉಗ್ರನಿಗೆ ಆರೆಸ್ಸೆಸ್ ಪ್ರೇರಣೆ: ಹ್ಯೂಸ್ಟನ್ ಸಿಟಿ ಕೌನ್ಸಿಲ್ ನಲ್ಲಿ ಅಮೆರಿಕದ ಲೇಖಕ

ವಾರ್ತಾ ಭಾರತಿ : 23 Sep, 2019

ಹತ್ಯಾಕಾಂಡ ನಡೆಸುವ ಉಗ್ರರಿಗೆ ಈವರೆಗೆ ಆರೆಸ್ಸೆಸ್ ಸೇರಿದಂತೆ ಹಲವು ತೀವ್ರವಾದಿ ಸಂಘಟನೆಗಳು ಪ್ರೇರಣೆಯಾಗಿವೆ ಎಂದು ಅಮೆರಿಕದ ಲೇಖಕ ಪೀಟರ್ ಫ್ರೆಡ್ರಿಕ್ ಹೇಳುತ್ತಿರುವ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.

ನಿನ್ನೆ ಅಮೆರಿಕದ ಹ್ಯೂಸ್ಟನ್ ನಗರದಲ್ಲಿ ನಡೆದ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ‘ಹೌಡಿ ಮೋದಿ’ ಕಾರ್ಯಕ್ರಮವನ್ನು ವಿರೋಧಿಸಿ ಫ್ರೆಡ್ರಿಕ್ ‘ಹೌಡಿ ಮೋದಿ’ ಕಾರ್ಯಕ್ರಮ ನಡೆದ ಹ್ಯೂಸ್ಟನ್ ನ ಸಿಟಿ ಕೌನ್ಸಿಲ್ ನಲ್ಲಿ ಮಾಡಿದ ಭಾಷಣ ಇದಾಗಿದೆ. ಫ್ರೆಡ್ರಿಕ್ ಅವರ ಭಾಷಣದ ಸಂಪೂರ್ಣ ಅನುವಾದ ಈ ಕೆಳಗಿದೆ.

“ಕಳೆದ ತಿಂಗಳು ಬಿಳಿ ಜನಾಂಗೀಯವಾದಿ ಉಗ್ರನೊಬ್ಬ ಟೆಕ್ಸಾಸ್ ನ ಎಲ್ ಪ್ಯಾಸೊದಲ್ಲಿ 22 ಜನರನ್ನು ಕೊಂದ. ಆತನ ಈ ರಾಕ್ಷಸೀಯ ಕೃತ್ಯಕ್ಕೆ ಪ್ರೇರಣೆಯಾಗಿದ್ದು ನ್ಯೂಝಿಲ್ಯಾಂಡ್ ನ ಕ್ರೈಸ್ಟ್ ಚರ್ಚ್ ನಲ್ಲಿ 51 ಜನರನ್ನು ಗುಂಡಿಕ್ಕಿ ಕೊಂದ ಘಟನೆ. ಆ ದುಷ್ಕೃತ್ಯ ಎಸಗಿದವನಿಗೆ ಪ್ರೇರಣೆ 2011ರಲ್ಲಿ ನಾರ್ವೆಯಲ್ಲಿ 77 ಜನರನ್ನು ಕೊಂದ ಭಯೋತ್ಪಾದಕ ಆ್ಯಂಡರ್ಸ್ ಬ್ರೀವಿಕ್ ನ ಕೃತ್ಯ. ಕೃತ್ಯ ಎಸಗಿದ ನಂತರ ಬಿಟ್ಟುಹೋಗಿದ್ದ ಪತ್ರವೊಂದು ಆತ ಹೇಗೆ ಜಗತ್ತಿನಾದ್ಯಂತ ಇರುವ ತೀವ್ರವಾದಿಗಳಿಂದ ಹೇಗೆ ಪ್ರೇರೇಪಿತನಾಗಿದ್ದ ಎನ್ನುವುದನ್ನು ವಿವರಿಸುತ್ತದೆ. ಈ ಪತ್ರದಲ್ಲಿ ಆ್ಯಂಡರ್ಸ್ ಭಾರತದ ಆರೆಸ್ಸೆಸ್ ಅನ್ನು ಉಲ್ಲೇಖಿಸಿದ್ದ. ಆತ ಆರೆಸ್ಸೆಸ್ ನ ಹಿಂದೂ ರಾಷ್ಟ್ರೀಯತೆ ಮತ್ತು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಅದರ ಗುರಿಯನ್ನು ಶ್ಲಾಘಿಸಿದ್ದ”.

“ಆತ ಆರೆಸ್ಸೆಸ್ ನ ದಬ್ಬಾಳಿಕೆ, ಗಲಭೆ ಸೃಷ್ಟಿ ಮತ್ತು ಮುಸ್ಲಿಮರ ಮೇಲಿನ ಹಲ್ಲೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ. ಬಿಳಿ ಜನಾಂಗೀಯವಾದಿಗಳು ಮತ್ತು ಆರೆಸ್ಸೆಸ್ ನ ಗುರಿ ಒಂದೇ ತರಹದ್ದು ಮತ್ತು ಪರಸ್ಪರರಿಂದ ಕಲಿಯಬೇಕು ಎಂದು ಹೇಳಿದ್ದ. 1925ರಲ್ಲಿ ಸ್ಥಾಪನೆಗೊಂಡ ಫ್ಯಾಶಿಸ್ಟ್ ಸಂಘಟನೆಯಾಗಿದೆ ಆರೆಸ್ಸೆಸ್. ಇದೇ ವರ್ಷ ಹಿಟ್ಲರ್ ‘ಮೈನ್ ಕೆಂಫ್’ನ್ನು ಪ್ರಕಟಿಸಿದ್ದ. ಆರೆಸ್ಸೆಸ್ ನಾಝಿಗಳಿಂದ ಪ್ರೇರೇಪಣೆ ಪಡೆದ ಸಂಘಟನೆಯಾಗಿದ್ದು, ಅದು ನರೇಂದ್ರ ಮೋದಿಯನ್ನು ಮುನ್ನೆಲೆಗೆ ತಂದಿತು. 2002ರಲ್ಲಿ 2000 ಮುಸ್ಲಿಮರ ನರಮೇಧ ನಡೆಸಿದ ಆರೆಸ್ಸೆಸ್ ಕಾರ್ಯಕರ್ತರ ನೇತೃತ್ವವನ್ನು ಮೋದಿ ವಹಿಸಿದರು. ಆರೆಸ್ಸೆಸ್ ಕಾರ್ಯಕರ್ತರು ಮಹಿಳೆಯರ ಸಾಮೂಹಿಕ ಅತ್ಯಾಚಾರಗೈದರು, ಜನರನ್ನು ಕೊಂದರು ಮತ್ತು ಹಲವರನ್ನು ಜೀವಂತವಾಗಿ ದಹಿಸಿದರು. ಮೋದಿಯೇ ಈ ಹಿಂಸಾಚಾರಕ್ಕೆ ಕರೆ ನೀಡಿದ್ದರು ಎಂದು ಕೃತ್ಯದಲ್ಲಿ ಭಾಗಿಯಾಗಿದ್ದ ನಾಯಕರು ನಂತರ ಕ್ಯಾಮರಾಗಳ ಮುಂದೆ ಒಪ್ಪಿಕೊಂಡಿದ್ದರು. ಇದೇ ಕಾರಣಕ್ಕಾಗಿ 10 ವರ್ಷಗಳ ಕಾಲ ಅಮೆರಿಕ ಪ್ರವೇಶಿಸದಂತೆ ಮೋದಿಗೆ ನಿರ್ಬಂಧ ಹೇರಲಾಗಿತ್ತು. ಇಂದು ಮೋದಿ ಆಡಳಿತದಲ್ಲಿ ಭಾರತದಲ್ಲಿ ಕ್ರೈಸ್ತರು, ದಲಿತರು, ಮುಸ್ಲಿಮರು, ಸಿಖ್ಖರು ಮತ್ತು ದ್ವೇಷ, ಹಿಂಸಾಚಾರ ಮತ್ತು ಆರೆಸ್ಸೆಸ್ಸನ್ನು ವಿರೋಧಿಸುವ ಪ್ರತಿಯೊಬ್ಬ ಹಿಂದೂ ಕೂಡ ಪ್ರಾಣಭಯದಲ್ಲಿ ಬದುಕುತ್ತಿದ್ದಾರೆ”.

“ಮೋದಿಯ ಕೈಗಳು ರಕ್ತಸಿಕ್ತವಾಗಿವೆ. ‘ಅನ್ಯಾಯದ ಸಂದರ್ಭಗಳಲ್ಲಿ ನೀವು ನಿರ್ಲಿಪ್ತರಾಗಿದ್ದರೆ ನೀವು ದಬ್ಬಾಳಿಕೆ ನಡೆಸುವವರ ಪರ ನಿಂತಿದ್ದೀರಿ ಎಂದರ್ಥ’ ಎಂದು ಒಂದು ಬಾರಿ ಬಿಷಪ್ ಡೆಸ್ಮೋಂಡ್ ಟುಟು ಒಂದು ಬಾರಿ ಹೇಳಿದ್ದರು. ಹಾಗಾದರೆ ನೀವು ದಬ್ಬಾಳಿಕೆ ನಡೆಸುವ ವ್ಯಕ್ತಿಗೆ ರೆಡ್ ಕಾರ್ಪೆಟ್ ಹಾಸುವುದಾದರೆ ಅದರ ಅರ್ಥವೇನು?, ‘ಮೌನವೆಂದರೆ ಒಪ್ಪಿಗೆ’ ಎಂದು ಪ್ಲೇಟೋ ಹೇಳಿದ್ದರು. ಹಾಗಾದರೆ ನೀವು ದಬ್ಬಾಳಿಕೆ ನಡೆಸುವವನಿಗಾಗಿ ಧ್ವನಿ ಎತ್ತಿದ್ದರೆ ಅದರರ್ಥವೇನು?” ಎಂದು ಫ್ರೆಡ್ರಿಕ್ ಪ್ರಶ್ನಿಸಿದರು.

ಇದೇ ಸಂದರ್ಭ ಅವರು ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಹ್ಯೂಸ್ಟನ್ ಸಿಟಿ ಕೌನ್ಸಿಲ್ ಅಧಿಕಾರಿಗಳಲ್ಲಿ ಮನವಿ ಮಾಡಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)