varthabharthiಕರಾವಳಿ

ಮಂಗಳೂರು: ದೂರುದಾರರು ಉಲ್ಟಾ ಹೊಡೆದರೂ ಸುಲಿಗೆ ಆರೋಪಿಗೆ ಶಿಕ್ಷೆ ನೀಡಿದ ಕೋರ್ಟ್

ವಾರ್ತಾ ಭಾರತಿ : 23 Sep, 2019

ಮಂಗಳೂರು, ಸೆ.23: ತಡರಾತ್ರಿ ಮನೆಗೆ ನುಗ್ಗಿ ಮನೆಯವರನ್ನು ಬೆದರಿಸಿ ಚಿನ್ನಾಭರಣಗಳನ್ನು ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಂಗಳೂರು ತಾಲೂಕು ಕಿನ್ಯಾ ಗ್ರಾಮದ ಬೆಳರಿಂಗೆ ನಿವಾಸಿ ಅಹ್ಮದ್ ಬಾವ (48)ಗೆ 4ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ, ಮೂರು ಸಾವಿರ ರೂ. ದಂಡ ವಿಧಿಸಿದೆ.

ಪ್ರಕರಣ ವಿವರ: 2007ರ ಮಾರ್ಚ್ 28ರಂದು ರಾತ್ರಿ 2:45ರ ವೇಳೆಗೆ ಅಹ್ಮದ್ ತಮ್ಮ ಪರಿಚಯದವರೇ ಆದ ನಸೀಮಾ ಮತ್ತು ಆಕೆಯ ಅತ್ತೆ ಐಸಾಬಿ ಎಂಬವರ ಮನೆಯಲ್ಲಿ ಸುಲಿಗೆ ಮಾಡುವ ಉದ್ದೇಶದಿಂದ ಮಾಡಿನ ಹೆಂಚು ತೆಗೆದು ಒಳಗೆ ನುಗ್ಗಿದ್ದಾನೆ. ನಸೀಮಾ ಪತಿ ವಿದೇಶದಲ್ಲಿದ್ದು, ಮನೆಯಲ್ಲಿ ಮಹಿಳೆಯರು ಮಾತ್ರ ಇದ್ದಾರೆ ಎಂದು ತಿಳಿದೇ ಈ ಸಂಚು ರೂಪಿಸಿದ್ದ ಎಂದು ಆರೋಪಿಸಲಾಗಿತ್ತು.

ಮನೆಯ ಒಳನುಗ್ಗಿದ ಆತ ಚಾಕು ತೋರಿಸಿ ಬೆದರಿಸಿ, ಕಪಾಟಿನಲ್ಲಿದ್ದ ಹಣ-ಚಿನ್ನಾಭರಣ ಕೇಳಿದ್ದಾನೆ. ಮನೆಯವರು ಕಪಾಟಿನಲ್ಲಿ ಏನೂ ಇಲ್ಲ ಎಂದಾಗ, ಅಲ್ಲೇ ಇದ್ದ ಮಗುವನ್ನು ಎತ್ತಿಕೊಂಡು ಮೈಮೇಲಿನ ಚಿನ್ನಾಭರಣಗಳನ್ನು ಕೊಡಿ ಇಲ್ಲದಿದ್ದರೆ ಮಗುವನ್ನು ಕೊಲ್ಲುವುದಾಗಿ ಬೆದರಿಸಿ, ಚಿನ್ನದ ನೆಕ್ಲೇಸ್ ಹಾಗೂ ಎರಡು ಬಳೆಯನ್ನು ದರೋಡೆ ಮಾಡಿದ್ದಾನೆ. ಈ ವೇಳೆ ಆತ ಮುಖವಾಡ ಧರಿಸಿದ್ದು, ಸ್ವರದಿಂದ ಅಹ್ಮದ್ ಬಾವ ಎಂದು ಐಸಾಬಿಯವರಿಗೆ ಗೊತ್ತಾಗಿದೆ. ತಳ್ಳಾಟದಲ್ಲಿ ಐಸಾಬಿಯವರಿಗೆ ಗಾಯವಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಸ್ಥಳದಿಂದ ಪರಾರಿಯಾಗಿದ್ದಾನೆ.

ಈ ಕುರಿತು ನಸೀಮಾ ಅವರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಅಹ್ಮದ್ ವಿರುದ್ಧ ದೂರು ನೀಡಿದ್ದರು. ಈ ಮೊದಲು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ಅಹ್ಮದ್ ಆಭರಣವನ್ನು ತೆಗೆದುಕೊಂಡು ಅಲ್ಲಿಗೆ ತೆರಳಿ, ಪೂರ್ವ ಬಾಂದ್ರಾದ ಬಂಗಾರದ ಅಂಗಡಿಯಲ್ಲಿ ಮಾರಾಟ ಮಾಡಿ ತಲೆಮರೆಸಿಕೊಂಡಿದ್ದ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ಠಾಣಾ ನಿರೀಕ್ಷರಾಗಿದ್ದ ದಿ.ಕೆ.ಆರ್.ಮಂಜುನಾಥ್ ಆರೋಪಪಟ್ಟಿ ದಾಖಲಿಸಿದ್ದರು. ಬಳಿಕ ಜಯಂತ್ ಶೆಟ್ಟಿ ಹಾಗೂ ಎ.ಡಿ.ನಾಗರಾಜ್ ತನಿಖೆ ನಡೆಸಿ, ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

4ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಮಲಿಂಗೇಗೌಡ ಅವರು ಪ್ರಕರಣಕ್ಕೆ ಸಂಬಂಧಿಸಿ 13 ಸಾಕ್ಷಿದಾರರ ವಿಚಾರಣೆ ನಡೆಸಿದ್ದಾರೆ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಹ್ಮದ್ ಬಾವನಿಗೆ ಐಪಿಸಿ ಸೆಕ್ಷನ್ 394 ಮತ್ತು 458ರ ಅಡಿಯಲ್ಲಿ ಮೂರು ವರ್ಷ ಜೈಲು ಶಿಕ್ಷೆ ಮತ್ತು ಮೂರು ಸಾವಿರ ರೂ. ದಂಡ ವಿಧಿಸಿದ್ದಾರೆ.

ಪ್ರಕರಣದಲ್ಲಿ ಸರಕಾರಿ ಅಭಿಯೋಜಕ ಹರಿಶ್ಚಂದ್ರ ಉದ್ಯಾವರ ವಾದ ಮಂಡಿಸಿದ್ದರು.

ದೂರುದಾರರು ಉಲ್ಟಾ: ಪ್ರಕರಣದಲ್ಲಿ ದೂರುದಾರರು ಉಲ್ಟಾ ಹೊಡೆದು, ಅಹ್ಮದ್ ಬಾವ ಆರೋಪಿಯಲ್ಲ ಎಂದು ಕೋರ್ಟ್‌ನಲ್ಲಿ ಹೇಳಿಕೆ ನೀಡಿದ್ದರು. ಆದರೆ ಚಿನ್ನಾಭರಣವನ್ನು ಖರೀದಿಸಿದ್ದ ಮುಂಬೈನ ಬಂಗಾರದ ಅಂಗಡಿ ಮಾಲಕ ತಾನು ಆತನಿಂದಲೇ ಚಿನ್ನಾಭರಣಗಳನ್ನು ಪಡೆದಿರುವುದಾಗಿ ಗುರುತಿಸಿ ಹೇಳಿಕೆ ನೀಡಿದ್ದು, ಆರೋಪ ಸಾಬೀತು ಪಡಿಸುವಲ್ಲಿ ಸಹಕಾರಿಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)