varthabharthiಕರಾವಳಿ

ಶೀಘ್ರವೇ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ಪ್ರಾರಂಭ

ಉಡುಪಿ: ಜಿಲ್ಲೆಯಲ್ಲಿ ಎಂಟು ಮರಳು ದಿಬ್ಬಗಳ ತೆರವಿಗೆ ಅನುಮತಿ

ವಾರ್ತಾ ಭಾರತಿ : 23 Sep, 2019

ಉಡುಪಿ, ಸೆ.23: ಸುರತ್ಕಲ್‌ನ ಎನ್‌ಐಟಿಕೆಯ ತಜ್ಞರು ನೀಡಿರುವ ವರದಿಯನ್ನಾಧರಿಸಿ ಉಡುಪಿ ತಾಲೂಕಿನಲ್ಲಿರುವ ಕರಾವಳಿ ನಿಯಂತ್ರಣ ವಲಯ ವ್ಯಾಪ್ತಿಯ ಒಟ್ಟು ಎಂಟು ಮರಳು ದಿಬ್ಬಗಳ ತೆರವಿಗೆ ಈಗ ಅನುಮತಿ ಸಿಕ್ಕಿದ್ದು, ಇಲ್ಲಿ ಒಟ್ಟು 7,96,522.71 ಮೆಟ್ರಿಕ್ ಟನ್ ಮರಳು ಲಭ್ಯವಿರುವುದಾಗಿ ತಜ್ಞರು ಅಂದಾಜಿಸಿದ್ದಾರೆ ಎಂದು ಉಡುಪಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮರಳುಗಾರಿಕೆಯ ಕುರಿತಂತೆ ಸದ್ಯ ಜಿಲ್ಲೆಯಲ್ಲಿ ನಡೆದಿರುವ ಬೆಳವಣಿಗೆ ಕುರಿತಂತೆ ವಿವರಿಸಿದರು.

ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಇತ್ತೀಚೆಗೆ ಸಭೆ ನಡೆಸಿ, ರಾಜ್ಯ ಅರಣ್ಯ ಮತ್ತು ಪರಿಸರ ಸಮಿತಿಯಿಂದ ಅನುಮೋದನೆಗೊಂಡು ಬಂದ ಎಂಟು ಮರಳುದಿಬ್ಬಗಳನ್ನು ಗುರುತಿಸಿ ಅಲ್ಲಿ ಜಿಯೋ ಫೆನ್ಸಿಂಗ್ ನಡೆಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸೂಚಿಸಿದೆ ಎಂದರು.

ಈ ಎಂಟು ಮರಳುದಿಬ್ಬಗಳಲ್ಲಿ ನಾಲ್ಕು ಉದ್ಯಾವರದ ಪಾಪನಾಶಿನಿ ಹೊಳೆ ಪರಿಸರದ ಉದ್ಯಾವರ, ಏಣಗುಡ್ಡೆ ಹಾಗೂ ಪಡುಕೆರೆಯಲ್ಲಿದೆ. ಇನ್ನೊಂದು ಸ್ವರ್ಣ ನದಿಯ ಉಪ್ಪೂರು-ಶಿವಳ್ಳಿಯಲ್ಲಿದೆ. ಇನ್ನು ಮೂರು ಮರಳು ದಿಬ್ಬಗಳನ್ನು ಸೀತಾನದಿಯ ಮೂಡುತೋನ್ಸೆ, ಬೈಕಾಡಿ, ಹಾರಾಡಿಗಳಲ್ಲಿ ಗುರುತಿಸಲಾಗಿದೆ. ಇಲ್ಲಿ ಜಿಯೋಫೆನ್ಸಿಂಗ್ (ಗಡಿಗುರುತು) ಮಾಡುವ ಕೆಲಸ ಮುಗಿದಿದೆ ಎಂದರು.

ಮರಳು ದಿಬ್ಬಗಳ ತೆರವಿಗೆ ಈ ಹಿಂದೆ ಹಸಿರು ಪೀಠದಿಂದ ಅನುಮತಿ ಪಡೆದಿದ್ದ 170 ಮಂದಿಯಲ್ಲಿ ವಿವಿಧ ಕಾರಣಗಳಿಂದ ಅನರ್ಹಗೊಂಡ 12 ಮಂದಿಯನ್ನು ಹೊರತು ಪಡಿಸಿ 158 ಮಂದಿ ಅರ್ಹತೆ ಪಡೆದಿದ್ದು, ಅವರೆಲ್ಲರ ಅರ್ಜಿಗಳು ಈ ಬಾರಿಯೂ ಬಂದಿವೆ. ಈ ಅರ್ಜಿಗಳ ಪರಿಶೀಲನೆ ಕಾರ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ನಡೆಯುತ್ತಿದೆ.

ಮರಳು ದಿಬ್ಬಗಳ ತೆರವಿಗೆ ಪರವಾನಿಗೆ ನೀಡುವಾಗ ಕಟ್ಟುನಿಟ್ಟಿನ, ಕಠಿಣ ನಿಬಂಧನೆಗಳನ್ನು ಹಾಕಲಾಗುತ್ತದೆ. ಇವರು ಜಿಯೋ ಫೆನ್ಸಿಂಗ್ ಮಾಡಲಾದ ಪ್ರದೇಶದಿಂದ ಹೊರಗೆ ಮರಳು ತೆಗೆಯುವಂತಿಲ್ಲ. ಸಾಂಪ್ರದಾಯಿಕ ರೀತಿಯಲ್ಲಿ ಮಾನವರನ್ನು ಬಳಸಿ ಮರಳುಗಾರಿಕೆ ಮಾಡಬೇಕು. ದೋಣಿಗಳಿಗೂ ಜಿಪಿಎಸ್ ಕಡ್ಡಾಯವಾಗಿ ಅಳವಡಿಸಿರಬೇಕು. ಮರಳು ಸಾಗಿಸುವ ಲಾರಿಗಳಿಗೂ ಜಿಪಿಎಸ್‌ನ್ನು ಅಳವಡಿಸುವ ಕಾರ್ಯ ನಡೆಯಬೇಕಾಗಿದೆ ಎಂದರು.

ಮರಳು ಸಾಗಾಟಗಾರರ ಸಭೆಯು ಕಳೆದ ವಾರದ ಕೊನೆಗೆ ನಡೆದಿದ್ದು, ಅವರಿಗೂ ಎಲ್ಲಾ ಮಾಹಿತಿಗಳನ್ನು ನೀಡಲಾಗಿದೆ. ಮರಳನ್ನು ಜಿಲ್ಲೆಯೊಳಗೆ ಅಗತ್ಯವುಳ್ಳವರಿಗೆ ಮಾತ್ರ ನೀಡಬೇಕು. ಜಿಲ್ಲೆಯ ಹೊರಗೆ ಮರಳನ್ನು ಸಾಗಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ವಿವರಿಸಿದರು.

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸದ್ಯಕ್ಕೆ ಮೂರು ಯುನಿಟ್ (ಸುಮಾರು 10 ಟನ್) ಮರಳಿನ ದರವನ್ನು 5,500 ರೂ.ಗಳಿಗೆ ನಿಗದಿಪಡಿಸಿದೆ. ಸಣ್ಣ ಗಾಡಿಗೆ ಸಾಗಾಟ ವೆಚ್ಚ 20ಕಿ.ಮೀಗೆ 1500 ರೂ. ಹಾಗೂ ನಂತರದ ಪ್ರತಿ ಕಿ.ಮೀ. 35ರೂ.ನಿಗದಿಯಾಗಿದೆ. ಅದೇ ರೀತಿ ದೊಡ್ಡ ಗಾಡಿಗೆ ಸಾಗಾಟ ವೆಚ್ಚ 20ಕಿ.ಮೀ.ಗೆ 2,500ರೂ. ಆಗಿದ್ದು, ನಂತರದ ಪ್ರತಿ ಕಿ.ಮೀ.ಗೆ 50ರೂ.ಆಗಿರುತ್ತದೆ.

ಮರಳು ತೆರವಿನ ಗುತ್ತಿಗೆ ಪಡೆಯುವವರು ತಮ್ಮ ಮರಳನ್ನು ಸಂಗ್ರಹಿಸುವ ಧಕ್ಕೆಯನ್ನು ಇಲಾಖೆಗೆ ತಿಳಿಸಬೇಕಿದ್ದು, ಅದು ಅಂತಿಮಗೊಂಡ ನಂತರ ಅಲ್ಲಿಯೂ ಜಿಪಿಎಸ್ ಮ್ಯಾಪಿಂಗ್ ನಡೆಯಲಿದೆ. ಈವರೆಗೆ 35 ಧಕ್ಕೆಗಳನ್ನು ಗುರುತಿಸಲಾಗಿದೆ. ಮರಳಿಗೆ ಸಂಬಂಧಿಸಿದಂತೆ ಎಲ್ಲರಿಗೂ ಮೂರು ತಿಂಗಳ ಕಾಲಾವಕಾಶ ನೀಡಲಾಗಿದ್ದು, ಆ ಬಳಿಕ ಅವರು ಕಡ್ಡಾಯವಾಗಿ ಮರಳಿನ ಆ್ಯಪ್‌ನ ಮೂಲಕವೇ ತಮ್ಮೆಲ್ಲಾ ವ್ಯವಹಾರಗಳನ್ನು ನಡೆಸಬೇಕಾಗಿದೆ ಎಂದು ಪ್ರಭು ನುಡಿದರು. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಗೌತಮ್ ಶಾಸ್ತ್ರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)