varthabharthi


ಕರಾವಳಿ

ಉಪ್ಪಿನಂಗಡಿ: ತಲೆಮರೆಸಿಕೊಂಡಿದ್ದ ಅತ್ಯಾಚಾರ ಪ್ರಕರಣದ ಆರೋಪಿಯ ಬಂಧನ

ವಾರ್ತಾ ಭಾರತಿ : 23 Sep, 2019

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಇಳಂತಿಲ ನಿವಾಸಿ ಅಪ್ರಾಪ್ತ ವಯಸ್ಕ ಬಾಲಕಿಯನ್ನು ಮೈಸೂರಿಗೆ ಕರೆದೊಯ್ದು ಅತ್ಯಾಚಾರ ಎಸಗಿ ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಪೋಕ್ಸೋ ಆರೋಪಿಯೋರ್ವನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಜೀವಿನಗರ ನಿವಾಸಿ ಎಂ.ಕೆ. ಫಯಾಝ್ ಎಂಬವರ ಪುತ್ರ ಮುಹಮ್ಮದ್ ನವಾಝ್ ಅಲಿಯಾಸ್ ನವಾಝ್ ಬಂಧಿತ ಆರೋಪಿ. ಈತನನ್ನು ಉಪ್ಪಿನಂಗಡಿ ಪೊಲೀಸರು ಮೈಸೂರಿನಲ್ಲಿ ಪತ್ತೆ ಹಚ್ಚಿ ಬಂಧಿಸಿ ಕರೆ ತಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

16ರ ಹರೆಯದ ಸಂತ್ರಸ್ಥೆ ಬಾಲಕಿಯು ಶಾಲೆ ತೊರೆದು ಉಪ್ಪಿನಂಗಡಿಯ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸಕ್ಕಿದ್ದಳು. ಈ ಅಂಗಡಿಗೆ ಸಿಸಿಕ್ಯಾಮರಾ ಅಳವಡಿಸಲು ಬಂದಿದ್ದ ತಂಡದಲ್ಲಿದ್ದ ಆರೋಪಿ ನವಾಝ್ ಆಕೆಯೊಂದಿಗೆ ಸಲುಗೆ ಬೆಳೆಸಿ, ಪೇಟೆಗೆಂದು ಬಂದಿದ್ದ ಆಕೆಯನ್ನು 2018 ಆ.28ರಂದು ಉಪ್ಪಿನಂಗಡಿಯಿಂದ ಬೆಳ್ತಂಗಡಿಗೆ ಕರೆದೊಯ್ದು, ಅಲ್ಲಿಂದ ಹಾಸನಕ್ಕೆ ಕರೆದೊಯ್ದಿದ್ದ. ಬಳಿಕ ಆಕೆಯನ್ನು ಹಾಸನ, ಮೈಸೂರಿಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಿ, ತಲೆಮರೆಸಿಕೊಂಡಿದ್ದ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಆರೋಪಿ ಮೈಸೂರಿನ ಅಡ್ಡೆಯೊಂದರಲ್ಲಿ ಇರುವ ಬಗ್ಗೆ ಖಚಿತ ಪಡಿಸಿಕೊಂಡಿದ್ದ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ನೇತೃತ್ವದ ಪೊಲೀಸ್ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ನಂದ ಕುಮಾರ್, ಪ್ರೊಬೆಷನರಿ ಎಸೈ ಪವನ್ ನಾಯ್ಕ್, ಪೊಲೀಸ್ ಸಿಬ್ಬಂದಿ ಹರಿಶ್ಚಂದ್ರ, ಇರ್ಷಾದ್ ಭಾಗವಹಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)