varthabharthiಕರಾವಳಿ

ಉನ್ನತ ಸಾಧನೆಗೆ ಆತ್ಮವಿಶ್ವಾಸ ಮೂಡಿಸುವುದೇ ವಾರ್ಷಿಕ ಸಮ್ಮೇಳನದ ಉದ್ದೇಶ: ವೀರೇಂದ್ರ ಹೆಗ್ಗಡೆ

ವಾರ್ತಾ ಭಾರತಿ : 23 Sep, 2019

ಬೆಳ್ತಂಗಡಿ: ರುಡ್‍ಸೆಟ್ ಸಂಸ್ಥೆಗಳ ಮಾದರಿಯಲ್ಲೇ ಆರ್‍ಸೆಟಿಗಳು ಕೂಡಾ ಕಾರ್ಯನಿರ್ವಹಿಸುತ್ತಿದ್ದು ಉನ್ನತ ಸಾಧನೆಮಾಡುತ್ತಿರುವುದು ಶ್ಲಾಘನೀಯವಾಗಿದೆ. ಪ್ರಗತಿಯ ಅವಲೋಕನ ಮಾಡುವುದರೊಂದಿಗೆ ಮುಂದೆ ಇನ್ನೂ ಹೆಚ್ಚಿನ ಸಾಧನೆಗೆ ಆತ್ಮವಿಶ್ವಾಸ ತುಂಬುವುದೇ ನಿರ್ದೇಶಕರುಗಳ ವಾರ್ಷಿಕ ಸಮ್ಮೇಳನದ ಉದ್ದೇಶವಾಗಿದೆ ಎಂದು ರುಡ್‍ಸೆಟ್ ಸಂಸ್ಥೆಗಳ ಅಧ್ಯಕ್ಷರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ಧರ್ಮಸ್ಥಳದಲ್ಲಿ ಶ್ರೀ ಸನ್ನಿಧಿ ಅತಿಥಿಗೃಹದಲ್ಲಿ ರುಡ್‍ಸೆಟ್ ಸಂಸ್ಥೆಗಳು ಮತ್ತು ಆರ್‍ಸೆಟಿಗಳ ನಿರ್ದೇಶಕರುಗಳ ವಾರ್ಷಿಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಉಭಯ ಸಂಸ್ಥೆಗಳೂ ಇಂದು ರಾಷ್ಟ್ರ ಮಟ್ಟದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಮುಕ್ತ ಪ್ರಶಂಸೆಗೆ ಪಾತ್ರವಾಗಿದೆ. ಆರ್‍ಸೆಟಿಗಳಲ್ಲಿ ತರಬೇತಿ ಪಡೆದವರಲ್ಲಿ ಶೇ.70 ರಷ್ಟು ಮಂದಿ ಯಶಸ್ವಿಯಾಗಿ ಸ್ವ-ಉದ್ಯೋಗ ಪ್ರಾರಂಭಿಸಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

ನಿರ್ದೇಶಕರುಗಳು ಮತ್ತು ಸಿಬ್ಬಂದಿಯ ನಿಷ್ಠಾವಂತ ಸೇವೆಯನ್ನು ಶ್ಲಾಘಿಸಿ ಹೆಗ್ಗಡೆಯವರು ಅಭಿನಂದಿಸಿದರು. ಅಲ್ಪಾವಧಿ ತರಬೇತಿ ಸಂದರ್ಭ ನೀಡುತ್ತಿರುವ ಪರಿಣಾಮಕಾರಿ ಹಾಗೂ ಉಪಯುಕ್ತ ಮಾರ್ಗದರ್ಶನವೇ ಇದಕ್ಕೆ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ದೇಶದೆಲ್ಲೆಡೆ 567 ಆರ್‍ಸೆಟಿಗಳ ಸೇವೆ, ಸಾಧನೆಗೆ ಅವರು ಅಭಿನಂದಿಸಿದರು. ಪ್ರಧಾನಿ ನರೇಂದ್ರ ಮೋದಿ ಕೂಡಾ ಸಂಸ್ಥೆಯ ಸಾಧನೆಗೆ ಅಭಿನಂದಿಸಿದ್ದಾರೆ ಎಂದು ಹೇಳಿದರು.

ಗುರ್ಗಾಂವ್ ಸಂಸ್ಥೆಯ ನಿರ್ದೇಶಕ ಸಂಜಯ್‍ ಡಿಂಗ್ರಾ, ಧಾರವಾಡದ ರಾಜೇಂದ್ರ ಕಗ್ಗೋಡಿ ಮತ್ತು ಕಣ್ಣೂರು ಕೇಂದ್ರದ ಅಭಿಲಾಷ್‍ ಎನ್. ಸಮ್ಮೇಳನದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಬೆಂಗಳೂರಿನ ಸಿಂಡಿಕೇಟ್ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ನಾಗೇಶ್ವರ್ ರಾವ್, ಕೆನರಾ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಮಣಿಮೆಖ್ಖಲಾಯಿ ಶುಭಾಶಂಸನೆ ಮಾಡಿದರು.

ರುಡ್‍ಸೆಟ್ ಸಂಸ್ಥೆಗಳ ಕೇಂದ್ರೀಯ ಕಚೇರಿಯ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಜನಾರ್ಧನ್ ಸ್ವಾಗತಿಸಿದರು.

ಸೂರ್ಯನಾರಾಯಣ ಮೂರ್ತಿ ಧನ್ಯವಾದವಿತ್ತರು. ಉಜಿರೆ ರುಡ್‍ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕಿ ಅನಸೂಯ ಕಾರ್ಯಕ್ರಮ ನಿರ್ವಹಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)