varthabharthiರಾಷ್ಟ್ರೀಯ

ಪ್ರಸಾರ ಭಾರತಿಯ ಮಾಜಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ

ಮುಂದೆ ಇನ್ನಷ್ಟು ಐಎಎಸ್ ಅಧಿಕಾರಿಗಳಿಂದ ರಾಜೀನಾಮೆ: ಜವಾಹರ್ ಸರ್ಕಾರ್

ವಾರ್ತಾ ಭಾರತಿ : 23 Sep, 2019

#“ಸಂವಿಧಾನದ ನಿಯಮ ಪಾಲಿಸದವರ ಆಡಳಿತದಲ್ಲಿ ಸೇವೆ ಸಲ್ಲಿಸುವುದು ಅಸಾಧ್ಯ”

ಕೋಲ್ಕತಾ, ಸೆ. 23: ಇತ್ತೀಚಿನ ದಿನಗಳಲ್ಲಿ ದೇಶಸೇವೆಯು ದಾಳಿಗೆ ಒಳಗಾಗುತ್ತಿದೆ. ಇದರಿಂದ ಐಎಎಸ್ ಅಧಿಕಾರಿಗಳ ರಾಜೀನಾಮೆಗಳು ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಪ್ರಸಾರ ಭಾರತಿಯ ಮಾಜಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಹಾಗೂ ಭಾರತ ಸರಕಾರದ ಮಾಜಿ ಸಾಂಸ್ಕೃತಿಕ ಕಾರ್ಯದರ್ಶಿ ಜವಾಹರ್ ಸರ್ಕಾರ್ ಹೇಳಿದ್ದಾರೆ.

ಹಣದ ಆಸೆಯಿಲ್ಲದೆ ಕೇವಲ ದೇಶಸೇವೆಯ ಉದ್ದೇಶದಿಂದ ಐಎಎಸ್ ಸೇರಲು ಬಯಸುವ ಇನ್ನಷ್ಟು ಅರ್ಹ ಅಭ್ಯರ್ಥಿಗಳು ಮುಂದಿನ ದಿನಗಳಲ್ಲಿ ತಮ್ಮ ನಿರ್ಧಾರ ಬದಲಿಸಲಿದ್ದಾರೆ. ದೇಶವು ಸರ್ವಾಧಿಕಾರದತ್ತ ಹೊರಳುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಸಂವಿಧಾನದ ನಿಯಮಗಳನ್ನು ಪಾಲಿಸದವರ ಕೈಯಡಿ ಸೇವೆ ಸಲ್ಲಿಸುವುದು ಅಸಾಧ್ಯ ಎಂದು ಅರ್ಥ ಮಾಡಿಕೊಂಡಿರುವ ಪ್ರತಿಭಾನ್ವಿತ ಅಧಿಕಾರಿಗಳು ಮುಂದಿನ ದಿನಗಳಲ್ಲಿ ತಮ್ಮ ಪದವಿಗೆ ರಾಜೀನಾಮೆ ನೀಡಲಿದ್ದಾರೆ ಎಂದವರು ಹೇಳಿದರು.

ಜಮ್ಮು ಕಾಶ್ಮೀರದ ಐಎಎಸ್ ಅಧಿಕಾರಿ ಶಾ ಫೈಸಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಕಳೆದ ಒಂದು ತಿಂಗಳಲ್ಲಿ ಐಎಎಸ್ ಅಧಿಕಾರಿಗಳಾದ ಕಣ್ಣನ್ ಗೋಪಿನಾಥನ್, ಸಸಿಕಾಂತ್ ಸೆಂಥಿಲ್, ಕಶಿಶ್ ಮುತ್ತಲ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಪ್ರಸಾರ ಭಾರತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದ ಸರ್ಕಾರ್ ಕೇಂದ್ರದ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಸರಕಾರದ ಧೋರಣೆ ಬಗ್ಗೆ ಮಾತನಾಡಿರುವ ಸರ್ಕಾರ್, ‘‘ನೀವು ಸರಕಾರದ ಮಾತನ್ನು ಕೇಳಿದರೆ, ರಾತ್ರಿ ಹಗಲಾಗುವುದರೊಳಗೆ 50 ಲಕ್ಷ ರೂಪಾಯಿಯಿಂದ 2 ಕೋಟಿ ರೂಪಾಯಿವರೆಗೆ ಸಂಪಾದಿಸಬಹುದು. ಇದಕ್ಕೆ ಉದಾಹರಣೆ ಮಾಜಿ ಮಹಾಲೇಖಪಾಲ ವಿನೋದ್ ರಾಯ್ ಮತ್ತು ಸೆಬಿಯ ಮಾಜಿ ಮುಖ್ಯಸ್ಥ ಎಂ. ದಾಮೋದರನ್. ಇದೇ ವೇಳೆ ಭಾರತದ 17ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸಿದ್ದ ಎಸ್.ವೈ. ಖುರೇಶಿ ಸರಕಾರದ ವಿರುದ್ಧ ಮಾತನಾಡಿದರೂ ಎಲ್ಲರಿಂದಲೂ ಶ್ಲಾಘನೆಗೆ ಒಳಗಾಗಿದ್ದರು. ಆದರೆ, ಅವರಿಗೆ ಅಧಿಕಾರಿಗಳಿಂದ ಒತ್ತಡ ಎದುರಾಗಿತ್ತು’’ ಎಂದಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)